Sunday, March 22, 2015

"ನೆರಳ ಹೆಜ್ಜೆ" ಕೃತಿ ಲೋಕಾರ್ಪಣೆ

                                       
ಪ್ರಿಯ ಸಾಹಿತ್ಯ ಪ್ರಿಯರೆ,

ನಾ ಬರೆದ ಮೊದಲ ಕೃತಿ ನೆರಳ ಹೆಜ್ಜೆ ಯನ್ನು ಭಾನುವಾರ ದಿ: 15-ಮಾರ್ಚ್ -2015ರಂದು ಲೋಕಾರ್ಪಣೆ ಮಾಡಲಾಯಿತು
ಖ್ಯಾತ ಕವಿ ಹಾಗು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ  ಡಾ. ಸಿದ್ಧಲಿಂಗಯ್ಯ  ನವರು  ಕೃತಿ  ಬಿಡುಗಡೆ  ಮಾಡಿದರು. ಖ್ಯಾತ ರಂಗಭೂಮಿ ಹಾಗು ಚಲನ ಚಿತ್ರ ಕಲಾವಿದರಾದ  ಶ್ರೀ ಯಶವಂತ ಸರದೇಶಪಾಂಡೆ ಯವರು ಅಧ್ಯಕ್ಷತೆ  ವಹಿಸಿದ್ದರು ಹಾಗು ಕವಯಿತ್ರಿ  ಅರುಂಧತಿ ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
                                         
                                           ಪುಸ್ತಕ:              ನೆರಳ ಹೆಜ್ಜೆ
                                           ಕವಿ/ಲೇಖಕ :      ತೇಜಸ್ವಿ ಎ. ಸಿ
                                           ಸಾಹಿತ್ಯ ಪ್ರಕಾರ: ಕವನ ಸಂಕಲನ
                                           ಪ್ರಕಾಶಕರು:       ನಿರೂಪ್ ಪಬ್ಲಿಕೇಷನ್ಸ್
                                           ಪುಸ್ತಕದ ಬೆಲೆ:      ರೂ. 70
                                         



 

Friday, December 26, 2014

ಉದ್ಯಾನ


                      ಉದ್ಯಾನ

     ಮುಂಜಾವಿನ ಸಮಯದ ತಂಗಾಳಿಗೆ
     ಹೊಸ ಜೀವ ಕೊಡುವ ತಾಜಾತನಕೆ 
     ಬಂದು ಕುಳಿತಿಹರು ಉದ್ಯಾನವನದಲಿ

     ದೃಷ್ಟಿ ಆಯಿಸಿದಷ್ಟು ಸುಂದರ ಹಸಿರು
     ಸುಸಜ್ಜಿತ ನಡೆವ ಪಥ, ಪಕ್ಕದಲ್ಲೇ
     ಸಾಲಾಗಿ ನೆಟ್ಟಿರುವ ಕಲ್ಲಿನಾಸನಗಳು
  
     ಆಸೀನರಾಗಿ ಹರಟುತ್ತ ಕುಳಿತ ವೃದ್ಧರ 
     ಗುಂಪು, ಅವರದು ಅದೇ ರಾಜಕೀಯ,
     ಪತ್ರಿಕಾ ಸುದ್ದಿಗಳು ಚರ್ಚೆಯ ವಿಷಯ

     ಅಲ್ಲಿಯೇ ಪಕ್ಕದಲಿ ಕುಳಿತ ಜೋಡಿಗಳ
     ಪಿಸುಮಾತಿನೊಡನೆ ಕಿಸಕ್ಕನೆಯ ನಗೆ
     ಅವರಿಗೂ ಬೇಕು ಉದ್ಯಾನದ ಪರಿಸರ 

     ಇವೆಲ್ಲವೂ ನಮಗೇಕೆಂಬಂತೆ ಮಕ್ಕಳ
     ನಲಿದಾಟದಲಿ ಕೇಳಬರುತ್ತಿದೆ ಕಲರವ
     ತಂದಿಟ್ಟಿದೆ ಉದ್ಯಾನಕೆ ನವೋತ್ಸಾಹ
 
     ತಾಜಾತನಕ್ಕೆ ವೇಗದಿ ಹೆಜ್ಜೆ ಹಾಕುತ್ತಿಹ 
     ಜನರು ಹತೋಟಿಯಲ್ಲಿಡಲು, ಹೃದಯ 
     ಮಧುಮೇಹ ಹಾಗು ಅಧಿಕ ರಕ್ತದೊತ್ತಡ

     ಹೀಗೆ ಕಾಣುವುದು ವಿವಿಧ ಲೋಕಗಳು
     ಉದ್ಯಾನದೊಳು, ಎಲ್ಲರಿಗು ಬೇಕಾಗಿ 
     ಎಲ್ಲ ಬಡವಾಣೆಯ ಜನರ ಅಗತ್ಯವಾಗಿ
     
    - ತೇಜಸ್ವಿ ಎ ಸಿ

Wednesday, December 3, 2014

ಬಸ್ ನಿಲ್ದಾಣ

             

                 ಬಸ್ ನಿಲ್ದಾಣ

    ನಾನು ಹೊರ ಹೊರಟೆ ನನ್ನ ಕಾರ್ಯಕೆ
    ಹೆಜ್ಜೆ ಹಾಕ ತೊಡಗಿದೆ ಬಸ್ ನಿಲ್ದಾಣಕೆ

    ತಲುಪಿದೆ ಮನೆ ಹತ್ತಿರದ ಬಸ್ ನಿಲ್ದಾಣವ
    ಅಲ್ಲಿ ಕಂಡೆ ಬಸ್ಸಿಗೆ ಕಾದು ಸುಸ್ತಾದ ಮುಖವ

    ನಾನು ಅರಿತೆ ಬಸ್ಸು ಬಾರದೆ ಆಗಿದೆ ಹೊತ್ತು
    ನನಗೂ ಬರಬಹುದೇನೋ ಕಾಯುವ ಆಪತ್ತು

    ಬಸ್ಸುಗಳು ಬಂದವು ಒಂದರ ಹಿಂದೆ ಒಂದು
    ಬೇರೆ ಊರಿಗೆ ಹೊರಟ್ಟಿದ್ದವು ಪ್ರತಿಯೊಂದು

    ನಮ್ಮ ಊರಿನದೇಕೆ ಬರುತ್ತಿಲ್ಲವೆಂಬ ಚಿಂತೆ
    ಪಕ್ಕದಲ್ಲಿದ್ದವನ ತಲೆಗೂ ಅದೇ ಪ್ರಶ್ನೆಯಂತೆ

    ಕಾದು ಕಾದು ನಮ್ಮ ಬಸ್ಸು ಬಂತು ಕೊನೆಗೂ
    ಹತ್ತಿದರೆ ಆಸನದ ಅಲಭ್ಯತೆ ಕಾಡಿತು ನಮಗೂ

    ಬಸ್ಸಿನಲ್ಲಿ ಶುರುವಾಯಿತು ಸ್ಪರ್ಧೆ ಆಸನಕೆ
    ಮೈಯೆಲ್ಲಾ ಕಣ್ಣಾಯಿತು ಒಳಗಿನ ಸ್ಪರ್ಧೆಗೆ

    ಅರ್ಧ ದಾರಿ ಸವೆಸಿದೆ ನಿಂತಲ್ಲೇ ಕುಲುಕುತ
    ಕೊನೆಗೂ ಸಿಕ್ಕತು ಆಸನ ಸ್ಪರ್ಧೆಯ ಗೆಲ್ಲುತ

    ಕೊನೆಗೂ ಮುಗಿಸಿದೆ ಪ್ರಯಾಸದ ಪ್ರಯಾಣ
    ಇಳಿಯುತ್ತಲೇ ಅನುಭವಿಸಿದೆ ನೆಮ್ಮದಿಯ ಕ್ಷಣ

     - ತೇಜಸ್ವಿ.ಎ.ಸಿ

Sunday, November 30, 2014

ಕನಸು

                     ಕನಸು

  ನೆರಳು ಬೆನ್ನತ್ತುವದ ನಿಲ್ಲಬಹುದೇನೋ
  ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು
  ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ
  ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ 

  ಎಲ್ಲ ವಾಸ್ತವ ಒಮ್ಮೆಲೇ ಮರೆಸಿ, ಸದಾ
  ಬಂದು ನನ್ನ ಹೊತ್ತೊಯ್ಯುವ ನಿನಗೆ
  ನನ್ನ ಮೈ ಮನಗಳಿಗೆ ರಸದೌತಣ
  ಉಣಬಡಿಸದೆ ಮನದ ತಣಿವಾರದೇ 

  ನೀ ನಿತ್ಯವೂ ತೋರುವ ಲೋಕದ
  ಸೌಂದರ್ಯವು ನಿನ್ನ ಕೈಗಳ ಸೃಷ್ಟಿಯೇ 
  ಅಥವಾ ಇಂದ್ರನ ಆಸ್ಥಾನದಿಂದ
  ನನಗಾಗಿ ಎರವಲು ತಂದಿರಿವೆಯೋ

  ದಿನ ನಿತ್ಯ ನೋಡುವ ವಿಭಿನ್ನ ಕಥಾನಕ
  ಆ ಕಥೆಯ ವಿವಿಧ ಪಾತ್ರಗಳು ನನ್ನ
  ಕುತೂಹಲವ ಮೀರಿ ಸಂತಸವ 
  ಹೊತ್ತು ತಂದು ಮನದುಂಬಿವೆ

  ನೀ ನನಗಾಗಿ ತರುವ ಸುಖಾನುಭವ 
  ಸಂತಸವಿತ್ತಿದೆ, ಎನ್ನುವುದರ ಜೊತೆಗೆ
  ವಾಸ್ತವವ ಮರೆಮಾಚಿ ನನ್ನ ಕೆಲಸ
  ಕಾರ್ಯಗಳ ತಡ ಮಾಡಿರುವುದೂ ಸತ್ಯ

  ನೀ ಒಯ್ಯುವ ಸುಂದರ ಲೋಕದ
  ಪಯಣಕೆ  ಶಿಸ್ತಿನ ಅಲ್ಪವಿರಾಮವನಿತ್ತಿ
  ವಾಸ್ತವ ಜೀವನಕು ಪ್ರಾಶಸ್ತ್ಯ ಕೊಟ್ಟು
  ಎರಡನು ಸಮತೋಲನಗೊಳಿಸುವಾಸೆ

   - ತೇಜಸ್ವಿ.ಎ.ಸಿ

Friday, November 28, 2014

ನಿಷ್ಟುರ


                         ನಿಷ್ಟುರ


ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು
ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ
ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ
ನನ್ನ ಬಗ್ಗೆಯೇ ಇರುವ ಕೀಳು ಆತ್ಮ ಗೌರವದಿಂದೋ
ಎಂದು ತಪ್ಪು ತಿಳಿಯ ಬೇಡ ನನ್ನ ಬಂಧು ಮಿತ್ರನೇ

ನನ್ನ ತಾಳ್ಮೆ, ಸಹನೆಯ ತಪ್ಪು ತಿಳಿದು ನನ್ನ ಲಘುವಾಗಿ
ತೆಗೆದು ಕೊಳ್ಳಬೇಡ ನನ್ನ ಬಂಧು ಮಿತ್ರನೇ
ನಾ ತೋರುವ ಸಹಿಷ್ಣುತೆಗೆ ಇರುವ ಕಾರಣವೆಂದರೆ
ನಾ ನಮ್ಮ ಸಂಬಂಧಕ್ಕೆ ಕೊಡುವ ಬೆಲೆ ಹಾಗು ಅದನ್ನು
ಉಳಿಸಿಕೊಳ್ಳುಲು ನಾ ಮಾಡುತ್ತಿರುವ ತ್ಯಾಗ, ತಾಳ್ಮೆ

ನಾ ನಮ್ಮಗಳ ಸಂಬಂಧಕ್ಕೆ ಬೆಲೆ ಕೊಡುವ ಬದಲು
ತಿರುಗಿ ಸಿಡಿದೆದ್ದಿ ನಿಂತರೆ, ನಿಷ್ಟುರ ಕಟ್ಟಿಕೊಂಡು,
ನಮ್ಮೀ ಧೀರ್ಘ ಕಾಲದ ಸಂಬಂಧ ಕ್ಷಣ ಮಾತ್ರಕೆ
ಮುರಿದು ಬಿದ್ದು, ಜೀವನ ಪೂರ್ತಿ ಒಬ್ಬರನೊಬ್ಬರ
ಮುಖ ನೋಡದೆ, ಸಂಬಂಧ ಹಳಸೀತು ಎಚ್ಚರ.

ಕೋಪದಲ್ಲಿ ಕೊಯ್ದ ಮೂಗ, ಕೋಪವಿಳಿದ ಮೇಲೆ
ಬರಲಾರದೆಂಬಂತೆ, ನಮ್ಮ ಸಂಬಂಧ ಉಳಿಸಲು
ನಮ್ಮಿಬ್ಬರಲ್ಲಿಯೂ ಇರಲಿ ಸಹನೆ, ತಾಳ್ಮೆ, ತ್ಯಾಗ
ಇವೇ ನಮ್ಮ ದೀರ್ಘ ಕಾಲದ ಬಂಧುತ್ವ, ಸ್ನೇಹ
ಉಳಿಸಲು ಇರುವ ಅತ್ಯುತ್ತಮ ರಾಜ ಮಾರ್ಗಗಳು.

- ತೇಜಸ್ವಿ ಎ ಸಿ

Saturday, September 27, 2014

ಹಬ್ಬಗಳು

                       ಹಬ್ಬಗಳು

    ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ
   ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ

   ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ
   ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ

   ಹಬ್ಬದ ದಿನ ಹತ್ತಿರ ಬರುತ್ತಲೇ ನಡೆವುದು ತಯಾರಿ
   ಮನೆಯವರಿಗೆಲ್ಲ ಹೊಸ ಬಟ್ಟೆಗಳು ಬೇಕು ತರಾವರಿ

   ಮನೆಯ ಮುಂದೆ ಸುಂದರ ರಂಗೋಲಿಯ ಚಿತ್ತಾರ
   ಮನೆಯ ಬಾಗಿಲಿಗೆ ಮಾವಿನ ತೋರಣದ ಸಿಂಗಾರ

   ಮುಂಜಾನೆಯೇ ಮಾಡುವರು ಅಭ್ಯಂಜನ ಸ್ನಾನ
   ಮಡಿಯುಟ್ಟು ಆರಂಭಿಸುವರು ದೇವರ ಪೂಜೆಯನ

   ಹೊಸ ಬಟ್ಟೆಯುಟ್ಟು ನಲಿವರು ಮಕ್ಕಳು-ಮುದುಕರು
   ಹಬ್ಬಕೆ ನೆಂಟರು ಬಂದು ಸಂತೋಷ ತಂದಿಹರು

   ಮಧ್ಯಾಹ್ನ ಭೋಜನಕೆ ಉಂಟು ಒಬ್ಬಟ್ಟಿನ ಊಟ
   ಊರ ಬೀದಿ ಬೀದಿಗಳಲ್ಲೆಲ್ಲಾ ಸಂಭ್ರಮದ ನೋಟ

   ಹಬ್ಬಗಳ ಆಚರಿಸುವರು ಜನ ವಿಭಿನ್ನ ಕಾರಣಗಳಿಗೆ
   ಎಲ್ಲಾ ಹಬ್ಬಗಳು ಕೊಡುವುದು ಸಂತಸದ ಘಳಿಗೆ

   ಹಬ್ಬಗಳು ನಾಡಿನ ಅಖಂಡತೆ, ಏಕತೆಗೆ ದ್ಯೋತಕ
   ಇವುಗಳು ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕ

   - ತೇಜಸ್ವಿ. ಎ. ಸಿ

Tuesday, August 19, 2014

ಧಾರಾವಾಹಿ

                      ಧಾರಾವಾಹಿ
 
  ವಾಹಿನಿಯಲಿ ಹೊಸ ಧಾರಾವಾಹಿ ಆರಂಭಿಸಿದಾಗ
  ವಾಹಿನಿ ನೋಡುಗರಿಗೆ ಕುತೂಹಲ, ಹೊಸ ಆಶಯ
  ನೂತನ ಕಲ್ಪನೆಯ ಹೊಸತನ, ಭಿನ್ನತೆಯ ಸೊಗಸು
  ಹೊಸ ಮುಖಗಳ ತಾಜಾತನ ತರುವುದು ಆಹ್ಲಾದತೆ
 
  ದಿನಗಳೆದಂತೆ ತಾಜಾತನವು ಅಲ್ಲಿಯೇ ನಿಂತ 
  ನೀರಿನಂತಾಗಿ ನಿಧಾನಕೆ ಹುಳು ಉಪ್ಪಟೆಗಳ ತಾಣ 
  ನಿಂತಲ್ಲೇ ನಿಲ್ಲುವ ಧಾರಾವಾಹಿಯು ನಾರಲು ಶುರು 
  ಕ್ರಮೇಣವೆ ತಾಳ್ಮೆಯ ಕದ ತಟ್ಟುತಿದೆ ಹಳೆಯ ಚಾಳಿ
 
  ಸರಳ ಸಮಸ್ಯೆಯನು ಪರಿಹರಿಸದ ಕಥೆಗಾರನಿಗೆ 
  ಧಾರಾವಾಹಿ ಅಂತ್ಯದ ಭಯ ಮೂಡಿ, ತನ್ನ ಸೃಜನತೆಗೆ 
  ತಾನೇ ಬೇಲಿ ಕಟ್ಟುತ, ಪ್ರಭುದ್ದವಾಗಬೇಕಾದ ಕಥೆಗೆ    
  ಮೊದ್ದುತನ ಪೇರಿಸಿ ಅದನ್ನೇ ನೀರಸಗೊಳಿಸುತಿಹನು
 
 ಇಷ್ಟೆಲ್ಲಾ ನಡೆಯುತಿಹಲು ಮನೆಯಲ್ಲಿನ ಮಾನಿನಿಯರ
 ತಾಳ್ಮೆ, ಸಹನೆಯ ಕಟ್ಟೆಯ ಒಡೆಯದೆ, ಅದೇ ನಿಂತ 
 ಕಥೆಯ ಒಳ್ಳೆಯ ಭವಿಷ್ಯದ ಸದಾಶಯದಿಂದ ವೀಕ್ಷಿಸಿ
 ತಮ್ಮ ಸಹನಾಮಯತೆಯ ಪ್ರದರ್ಶನ ನೀಡುತಿಹರು    
 
 ಏಕಮುಖ ಮಾಧ್ಯಮದಿ ಪ್ರೇಕ್ಷಕ ಏನು ಮಾಡಿಯಾನು
 ಎಂದರಿತು ನಿರ್ದೇಶಕ ಭೀಗಿದಂತೆ, ಜನರ ತಾಳ್ಮೆಯ 
 ಸಮಯವ ಹಾಳುಗೆಡಹುತ, ಸರಣಿ ನಿರಾಸೆಗಳ ಜನಕೆ 
 ನೀಡುತ ತಾನು ಮಾತ್ರ ಕಾಂಚಣವ ಪೇರಿಸುತಿಹನು 
 
 - ತೇಜಸ್ವಿ .ಎ.ಸಿ