Wednesday, February 21, 2024

ಹಣದ ಜಾಡು ಹಿಡಿಯುವುದು

 ಹಣದ ಜಾಡು ಹಿಡಿಯುವುದು


ಚಿತ್ರ ಕೃಪೆ:  ಅಂತರ್ಜಾಲ

 ನಾವು ಸಂಪಾದಿಸಿದ ಹಣ  ಎಲ್ಲಿ ಹೋಗುತ್ತದೆ,  ಯಾವುದಕ್ಕಾಗಿ ಬಳಸಲಾಗುತ್ತದೆ, ಎಲ್ಲಾದರೂ ಹಣದ ಸೋರಿಕೆ ಆಗುತ್ತಿದೆಯಾ  ಹಾಗೂ  ಇದರ ಮೂಲಕ ನಮ್ಮ ಸ್ವಭಾವವನ್ನು  ಅರಿತುಕೊಳ್ಳಲು  ಹಣದ ಜಾಡನ್ನು ಹಿಡಿಯಬೇಕಾಗುತ್ತದೆ.  ಇದಕ್ಕಾಗಿ  ನಾವು ಮಾಡುವ  ಖರ್ಚು ವೆಚ್ಚಗಳನ್ನು  ಬರೆಯಬೇಕು.   ಅದು  ನಿರ್ದಿಷ್ಟವಾಗಿರಲಿ  ಅಂದರೆ  ಈ  ದಿನಾಂಕದಂದು,  ಇಂತಿಷ್ಟು ಮೊತ್ತದ ಹಣವನ್ನು ಈ ಉದ್ದೇಶಕ್ಕಾಗಿ  ಖರ್ಚು ಮಾಡಲಾಗಿದೆ ಎಂದು ನಿರ್ದಿಷ್ಟವಾಗಿ ನಮೂದಿಸಬೇಕು.  ಇದನ್ನು  ಒಂದು ಪುಸ್ತಕದಲ್ಲಿ ಬರೆಯುವುದರ ಮೂಲಕ  ಅಥವಾ   ನಿಮ್ಮ ಮೊಬೈಲ್ ನಲ್ಲಿ   ಖರ್ಚುಗಳಿಗೆ ಸಂಬಂಧಪಟ್ಟ  ಮೊಬೈಲ್ ಅಪ್ಲಿಕೇಶನ್ ನಲ್ಲಿ  ಸೇರಿಸುವುದರ ಮೂಲಕವಾದರೂ ಮಾಡಬಹುದು.  ನಿಮ್ಮ ಖರ್ಚು ವೆಚ್ಚಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ   ಕನಿಷ್ಠಪಕ್ಷ  ಮೂರು ತಿಂಗಳಾದರೂ ಬರೆಯಬೇಕು. ಆದರೆ  ವರ್ಷಪೂರ್ತಿ ಪ್ರತಿನಿತ್ಯ ಬರೆಯುವ ಅಗತ್ಯವಿರುವುದಿಲ್ಲ.  ಖರ್ಚು ವೆಚ್ಚಗಳನ್ನು ಬರೆದಾಗ ಅವುಗಳ ವರ್ಗೀಕರಣ ಮಾಡಬೇಕು. ಈ ವರ್ಗೀಕರಣದಿಂದ ನಾವು ಯಾವ ಉದ್ದೇಶಕ್ಕಾಗಿ ಖರ್ಚುಗಳನ್ನು ಮಾಡುತ್ತೇವೆ ಎಂದು ತಿಳಿದು ಬರುತ್ತದೆ.


 ಇಂದಿನ ದಿನಗಳಲ್ಲಿ  ಖರ್ಚಿನ ಲೆಕ್ಕ ಬರೆಯುವುದು ತಂತ್ರಜ್ಞಾನದ ಸಹಾಯದಿಂದ ಇನ್ನೂ ಸುಲಭವಾಗಿದೆ.    ನೀವು  ಡಿಜಿಟಲ್ ಪಾವತಿ ಮೂಲಕ  ಆಗುವ ವೆಚ್ಚಗಳು  ನೆಟ್ ಬ್ಯಾಂಕಿಂಗ್  ನಲ್ಲಿ   ಸುಲಭವಾಗಿ  ನೋಡಿ  ಲೆಕ್ಕವನ್ನು ಬರೆಯುವುದು.   ಮೊಬೈಲ್ ಅಪ್ಲಿಕೇಶನ್ ನಲ್ಲಿ   ಖರ್ಚು ಆದ ತಕ್ಷಣ   ಖರ್ಚನ್ನು ದಾಖಲಿಸಬಹುದು.   ಇದಲ್ಲದೆ   ಖರ್ಚಿನ  ಸಮಗ್ರ ವರದಿಯನ್ನು  ಅದೇ ಅಪ್ಲಿಕೇಶನ್  ಸಿದ್ಧ ಮಾಡಿಕೊಡುತ್ತದೆ.  ಇದರಿಂದ   ನಿಮಗೆ   ಏತಕ್ಕಾಗಿ,   ಎಷ್ಟು,   ಎಲ್ಲಿ,   ಯಾವತ್ತು   ಖರ್ಚುಗಳನ್ನು ಮಾಡಿದ್ದೇವೆ   ಎಂಬ ವರದಿ  ನಿಮ್ಮ ಮುಂದೆ ಬರುತ್ತದೆ.    ಈ ವರದಿಯಿಂದ   ನೀವು   ವಿಷಯಗಳನ್ನು ಅರ್ಥೈಸಿಕೊಂಡು  ಮುಂದೆ  ಯಾವ ಕ್ರಮವನ್ನು ಕೈಗೊಳ್ಳಬೇಕೆಂದು  ನಿರ್ಧರಿಸಬಹುದು.

 ವರ್ಗಿಕರಣವನ್ನು ಕ್ಲಿಷ್ಟಗೊಳಿಸದೆ ಸರಳವಾಗಿ ಕೇವಲ ಕೆಳಕಂಡಂತೆ  ಪ್ರಮುಖ ಎರಡು ವರ್ಗಗಳಾಗಿ ವಿಂಗಡಿಸಬಹುದು.

1. ಉಪಭೋಗ್ಯಗಳು / ಮಾಸಿಕ ಖರ್ಚು

2.  ಉತ್ಪನ್ನಗಳ ಖರೀದಿ / ದುರಸ್ತಿ / ಸ್ವಚ್ಛತೆ.

 ನೀವು ಮಾಡುವ ಖರ್ಚುಗಳನ್ನು ಈ ಕೆಳಕಂಡಂತೆ ವರ್ಗಗಳಲ್ಲಿ ಸೇರಿಸುತ್ತಾ ಹೋದರೆ ಖರ್ಚುಗಳ   ಜಾಡು ಹಿಡಿಯಬಹುದು.  ಇದು ಕೇವಲ ಉದಾರಣೆಯಾಗಿದ್ದು ನೀವು ನಿಮ್ಮದೇ ಪಟ್ಟಿಗಳನ್ನು ಅಥವಾ ವರ್ಗಗಳನ್ನು ಸೃಷ್ಟಿ ಮಾಡಿಕೊಂಡು ನಿಮ್ಮ ಖರ್ಚುಗಳನ್ನು  ದಾಖಲಿಸುತ್ತ ಹೋಗಬಹುದು.


1. ಉಪಭೋಗ್ಯಗಳು / ಮಾಸಿಕ ಖರ್ಚು

 ಈ ವರ್ಗೀಕರಣದಲ್ಲಿ ಉಪಭೋಗ್ಯಗಳು (Consumables) ಅಂದರೆ ನೀವು ಬಳಸಿ ಮುಗಿಸುವ ಸೇವೆಗಳು ಅಂದರೆ ಇವುಗಳು ಒಮ್ಮೆ ಖರೀದಿಸಿ ಪುನಃ ಪುನಃ ಉಪಯೋಗಿಸಬಲ್ಲ ಉತ್ಪನ್ನಗಳಾಗಿರುವುದಿಲ್ಲ,  ಆದರೆ ಒಮ್ಮೆ ಬಳಸಿದರೆ ಮುಗಿದು ಹೋಗುವ ಸೇವೆಗಳು. ಉದಾಹರಣೆಗೆ ದಿನಸಿ ಸಾಮಗ್ರಿಗಳು, ಹಾಲು, ತರಕಾರಿ, ಮನೆ ಬಾಡಿಗೆ, ಔಷಧಿಗಳು, ವಿದ್ಯುತ್ ಬಿಲ್, ಅಂತರ್ಜಾಲದ ಬಿಲ್ ಹಾಗು ಇತರೆ ಈ ತೆರನಾದ ಸೇವೆಗಳು.  ಇವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.      



  2.  ಉತ್ಪನ್ನಗಳ ಖರೀದಿ / ದುರಸ್ತಿ / ಸ್ವಚ್ಛತೆ.   

ಈ ಎರಡನೆಯ ವರ್ಗೀಕರಣದಲ್ಲಿ ಉತ್ಪನ್ನಗಳ ಖರೀದಿ, ಅವುಗಳ ದುರಸ್ತಿ(Repair) ಹಾಗೂ ಅವುಗಳ ಸ್ವಚ್ಛತೆ, ಇವುಗಳ ಖರ್ಚನ್ನು ಬರೆಯುತ್ತಾ ಹೋಗಬೇಕು. ಅಂದರೆ ಉತ್ಪನ್ನಗಳನ್ನು ನಾವು ಒಮ್ಮೆ ಹಣ ಪಾವತಿ ಮಾಡಿ ಖರೀದಿ ಮಾಡಿರುತ್ತೇವೆ ಅವುಗಳು ನಮ್ಮ ಮಾಲೀಕತ್ವದಲ್ಲಿ ಇರುತ್ತವೆ, ಇವುಗಳು ಯಂತ್ರಗಳು ಆಗಿರಬಹುದು ಉಪಕರಣ, ಸಲಕರಣೆಗಳು ಆಗಿರಬಹುದು. ಇವುಗಳನ್ನು ಅದರ ಆಯುಷ್ಯ ಇರುವ ತನಕ ನಾವು ಪುನರ್ ಬಳಕೆ ಮಾಡಬಹುದು. ಆದುದರಿಂದ ನಾವು ಅದನ್ನು ಕಾಪಾಡಿಕೊಳ್ಳಲು ದುರಸ್ತಿಯ ಖರ್ಚು ಮಾಡಬೇಕಾಗುತ್ತದೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗುತ್ತದೆ  ಇವುಗಳಿಂದ  ಅದರದ್ದೆ ಆದ ಖರ್ಚುಗಳು ಸೃಷ್ಟಿ ಆಗಿರುತ್ತವೆ. ಉದಾಹರಣೆಗೆ ಆ ಉತ್ಪನ್ನಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.      




      ಎಲ್ಲಾ ಸೇವೆಗಳಿಗೆ ಹಾಗೂ ಉತ್ಪನ್ನಗಳಿಗೆ ತನ್ನದೇ ಆದಂತ ಜೀವಮಾನವಿರುತ್ತದೆ ಅಂದರೆ ಬಾಳಿಕೆಯ ಅವಧಿ. ಉದಾಹರಣೆಗೆ ಒಂದು ಮನೆಯು ನೂರು ವರ್ಷ ಬಾಳುತ್ತದೆ, ಒಂದು ದ್ವಿಚಕ್ರ ಹಾಗೂ ಚತುರ್ಚಕ್ರ ವಾಹನ  ಹದಿನೈದರಿಂದ ಇಪ್ಪತ್ತು ವರ್ಷ ಬಾಳುತ್ತದೆ, ಒಂದು ಮೊಬೈಲ್ ಫೋನ್ ಐದರಿಂದ ಏಳು ವರ್ಷ ಬಾಳುತ್ತದೆ, ಹೀಗೆ ತನ್ನ ಆಯಸ್ಸು ಮುಗಿದ ಉತ್ಪನ್ನಗಳ ಪುನರ್ ಖರೀದಿ ಮಾಡಬೇಕಾಗುತ್ತದೆ, ಅದು ಬಾಳುವ ತನಕ ಅದರ ದುರಸ್ತಿ ಖರ್ಚು, ಸ್ವಚ್ಛತೆಯ ಖರ್ಚು ಮಾಡಬೇಕಾಗುತ್ತದೆ. ನಾವು ಗಮನಿಸಿದರೆ ಎಷ್ಟೋ ಸೇವೆಗಳು ಅಲ್ಪ ಕಲಿಕಾ ಉದಾಹರಣೆಗೆ ಆಹಾರ ಪದಾರ್ಥಗಳು, ಗ್ರಂಥಿಗೆ ಸಾಮಾನುಗಳು, ಹೂಗಳು, ಅನಿಲದ ಸಿಲಿಂಡರ್ ಗಳು, ಆಟೋದಲ್ಲಿ ಪ್ರಯಾಣ,   ವಿದ್ಯುತ್ ಬಿಲ್, ನೀರಿನ ಬಿಲ್  ಇತ್ಯಾದಿ.  ಹೀಗೆ ನಾವು ಬಳಸುವ ಸೇವೆಗಳ ಹಾಗೂ ಉತ್ಪನ್ನಗಳ ಆಯಸ್ಸನ್ನು, ಬಾಳಿಕೆ ಅವಧಿಯನ್ನು ಅರ್ಥಮಾಡಿಕೊಳ್ಳಬೇಕು. ಇದು ಮುಂದಿನ ದಿನಗಳಲ್ಲಿ  ನಿರ್ಧಾರಗಳನ್ನು ಕೈಗೊಳ್ಳಲು  ಸಹಾಯಕಾರಿಯಾಗುತ್ತದೆ.  ಉದಾಹರಣೆಗೆ ನೀವು ನಿಮ್ಮ 30ನೇ ವಯಸ್ಸಿನಲ್ಲಿ ಮೊದಲ ಕಾರು ಕೊಂಡಿದ್ದರೆ, ನಿಮಗೆ ನಿಮ್ಮ ಜೀವಮಾನದಲ್ಲಿ ಮೂರು ಅಥವಾ ನಾಲ್ಕು ಕಾರುಗಳನ್ನು ಕೊಳ್ಳಬೇಕಾಗುತ್ತದೆ. ಇದೇ ರೀತಿಯಲ್ಲಿ ಎಂಟರಿಂದ ಹತ್ತು ಮೊಬೈಲ್ ಫೋನ್ ಗಳನ್ನು ಖರೀದಿ ಮಾಡಬೇಕಾಗುತ್ತದೆ. ಒಂದು ಮನೆಯ ನೂರು ವರ್ಷ ಬಾಳುವುದರಿಂದ ನಮ್ಮ ಜೀವನದಲ್ಲಿ ಒಂದು ಮನೆ  ಕಟ್ಟಿದರೆ  ಸಾಕಾಗುತ್ತದೆ. ಹೀಗೆ ನೀವು ಕೊಳ್ಳುವ ಉತ್ಪನ್ನಗಳ ಆಯಸ್ಸಿನ ಮೇಲೆ ಭವಿಷ್ಯದಲ್ಲಿ ಇದೇ ಉತ್ಪನ್ನಗಳನ್ನು ಎಷ್ಟು ಬಾರಿ ಕೊಳ್ಳಬೇಕಾಗುತ್ತದೆ ಎಂಬ ಅಂದಾಜು ನಮಗೆ ಸಿಗುತ್ತಿದೆ. 

ಅನುಸರಣೆಯ  ಉದ್ದೇಶ (Tracking)

 ಇಷ್ಟು ಶ್ರಮವಹಿಸಿ ಖರ್ಚುಗಳನ್ನೆಲ್ಲಾ ಬರೆದು ಪಟ್ಟಿ ಮಾಡಿ, ಅವುಗಳನ್ನು ವರ್ಗೀಕರಿಸಿ, ದತ್ತಾಂಶವನ್ನು ರಚನಾತ್ಮಕ ಸ್ವರೂಪದಲ್ಲಿ ರಚಿಸಿ, ಸಂಗ್ರಹಿಸಲು  ಉದ್ದೇಶಗಳು ಇರಬೇಕಲ್ಲವೇ.  ಹಾಗಿದ್ದಲ್ಲಿ ಆ ಉದ್ದೇಶಗಳು ಏನೆಂದು ತಿಳಿಯೋಣ.  

1.  ಖರ್ಚು ವೆಚ್ಚಗಳ ವಿಶ್ಲೇಷಣೆ  ಮಾಡಲು.
2.  ಬೇಡಿಕೆ ಹಾಗೂ ಪೂರೈಕೆಯನ್ನು ಅರ್ಥ ಮಾಡಿಕೊಳ್ಳಲು.
3.  ಎಲ್ಲಾದರೂ ಅನಗತ್ಯ ದುಂದು ವೆಚ್ಚವಿದೆಯೇ ಎಂದು ಗುರುತಿಸಲು.
4.  ನಮ್ಮ ಹಾಗೂ ಕುಟುಂಬದವರ  ಹಣಕಾಸಿನ ಸ್ವಭಾವವನ್ನು  ಅರಿಯಲು.
5.  ಆರ್ಥಿಕ ಸುಧಾರಣೆ ಮಾಡುವ ಅವಕಾಶಗಳನ್ನು ಗುರುತಿಸಲು. 
6.  ಆರ್ಥಿಕ ಸಂಕಷ್ಟದ ಪೂರ್ವಸಿದ್ಧತೆಗಾಗಿ.
7.  ನಿವೃತ್ತಿ ಜೀವನದ  ಪೂರ್ವಸಿದ್ಧತೆಯ ಭಾಗವಾಗಿ.
8.  ಭವಿಷ್ಯದ ಗುರಿಗಳನ್ನು ಹಮ್ಮಿಕೊಳ್ಳಲು.


            ಹೀಗೆ ಖರ್ಚುಗಳ ಅನುಸರಣೆಯಿಂದ ನಮಗೆ ನಮ್ಮ ಹಣ ಖರ್ಚಾಗುವ ಕಾರಣಗಳು   ಮಾತ್ರವಲ್ಲದೆ ಭವಿಷ್ಯದ ಜೀವನದ ಸಿದ್ಧತೆಗೆ ಹಾಗೂ ವಿವಿಧ ಸಂದರ್ಭಗಳನ್ನುಎದುರಿಸಲು ಸಹಾಯವಾಗುತ್ತದೆ. ಇದಲ್ಲದೆ ನಾವು ಮಾಡುವ ಖರ್ಚುಗಳು ಎಷ್ಟು ಅವಶ್ಯಕತೆಗೆ ಮಾಡುವ ಖರ್ಚುಗಳಾಗಿವೆ, ಎಷ್ಟು ಹಣವನ್ನು ನಮ್ಮ ಆಸೆಯ ಈಡೇರಿಕೆಗಾಗಿ ಮಾಡುವ ಖರ್ಚುಗಳಾಗಿವೆ ಎಂದು ತಿಳಿದು ಬರುತ್ತದೆ. ಹೀಗೆ ಅನುಸರಣೆ ಮಾಡಿದ್ದ ದತ್ತಾಂಶದಿಂದ  ಹಲವಾರು ವಿಷಯಗಳು ತಿಳಿದು ಬರುತ್ತದೆ ಹಾಗೂ ಭವಿಷ್ಯದ  ಜೀವನವನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ.
          ವಿಶ್ಲೇಷಣೆಯಿಂದ ಎಲ್ಲಿಯಾದರೂ ಸುಧಾರಣೆಗೆ ಅವಕಾಶಗಳಿವೆಯಾ ಎಂದು ಗುರುತಿಸಬೇಕು. ಇದ್ದಲ್ಲಿ ಅವುಗಳನ್ನು ಒಂದು ಅಥವಾ ಎರಡು ಚಟುವಟಿಕೆಯಾಗಿ ಅಥವಾ  ಒಂದು ಯೋಜನೆಯಾಗಿ ಕೈಗೆತ್ತಿಕೊಳ್ಳಬೇಕು.   ಉದಾಹರಣೆಗೆ ಸೌರ ಫಲಕಗಳ ಸಹಾಯದಿಂದ ವಿದ್ಯುತ್ ಉತ್ಪಾದಿಸಬಹುದೇ ಅದರ ಮೂಲಕ ಮನೆಯ ವಿದ್ಯುತ್ ಬಿಲ್ಲನ್ನು ಕಡಿತಗೊಳಿಸಬಹುದು ಎಂಬುದೊಂದು ಯೋಜನೆಯನ್ನು ಹಾಕಿಕೊಳ್ಳಬಹುದು. ಉತ್ಪಾದಿಸಿದ ವಿದ್ಯುತ್ತನ್ನು  ವಿದ್ಯುತ್ ಪ್ರಸರಣ ಸಂಸ್ಥೆಗೆ ಮಾರಬಹುದು. 
       ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು, ಚತುರ್ಚಕ್ರ ವಾಹನಗಳನ್ನು ಕೊಂಡು ಅದರ ಮೂಲಕ ವಾಹನಗಳ ಇಂಧನದ ಖರ್ಚನ್ನು ಉಳಿಸಬಹುದು, ಅದು ಅಲ್ಲದೆ ವಿದ್ಯುತ್ತನ್ನು ನಾವೇ ಉತ್ಪಾದಿಸುವುದರಿಂದ ವಾಹನಗಳ ಚಾರ್ಜ್ ಮಾಡುವ ಚಿಕ್ಕ ಖರ್ಚನ್ನು ಉಳಿಸಿ ಸಂಪೂರ್ಣವಾಗಿ ಉಚಿತವಾಗಿ  ಮಾಡಿಕೊಳ್ಳಬಹುದಾಗಿದೆ.  
           ಹಾಗೆಯೇ ದಿನಪತ್ರಿಕೆಗಳು ಬೇಕೆ? ಏಕೆಂದರೆ ದೂರದರ್ಶನದಲ್ಲಿ, ಅಂತರ್ಜಾಲಗಳಲ್ಲಿ ಸಾಕಷ್ಟು ಸುದ್ದಿಗಳು ಲಭ್ಯವಿರುವುದರಿಂದ ಅಲ್ಲಿಯೇ ಸುದ್ದಿಯನ್ನು ತಿಳಿದು ದಿನಪತ್ರಿಕೆಯ  ಬಿಲ್ಲನ್ನು  ಉಳಿಸಬಹುದು. 

    ಜೀವ ವಿಮೆಯ ಪಾಲಿಸಿ ಇದ್ದಲ್ಲಿ ಅದರ ಅವಶ್ಯಕತೆ ಇದೆಯೇ ಅದರ ಬದಲಿ ಉತ್ತಮವಾದ ಟರ್ಮ್ ವಿಮೆಯನ್ನು ಕೊಳ್ಳಬಹುದಲ್ಲವೇ.

ನಿಮ್ಮ ಮಾಸಿಕ ಔಷಧಿಗಳ ಬಿಲ್ ಹೆಚ್ಚಾಗಿದ್ದಲ್ಲಿ ನಿಮ್ಮ ಆರೋಗ್ಯವನ್ನು ಹೇಗೆ ಸುಧಾರಿಸಬಹುದು ಎಂಬುದರ ಕಡೆಗೆ ಗಮನ ಹರಿಸಿ ಆರೋಗ್ಯವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಬಹುದು. 

 ಯಾವುದಾದರೂ ಸೇವೆಗಳು ಅಥವಾ ಉತ್ಪನ್ನಗಳು ಅನಗತ್ಯವೆನಿಸಿದರೆ ಅವುಗಳನ್ನು ನಿಲ್ಲಿಸಬಹುದು ಅಥವಾ ನಿವೃತ್ತಗೊಳಿಸಬಹುದು, ಈ ಮೂಲಕ ಕೇವಲ ಬೇಕಾಗಿರುವ ಸೇವೆ ಹಾಗೂ ಸಾಮಗ್ರಿಗಳಿಂದ ಜೀವನವನ್ನು ಸರಳ ಹಾಗೂ ಸ್ವಚ್ಛವಾಗಿರಿಸಬಹುದು. 

 ಹೀಗೆ ಇದೇ ರೀತಿಯಲ್ಲಿ ನೀವು ಬಳಸುವ ಎಲ್ಲಾ ಸೇವೆಗಳು ಹಾಗೂ ಉತ್ಪನ್ನಗಳ ಸುಧಾರಣಾ ಸಾಧ್ಯತೆಗಳನ್ನು ವಿಶ್ಲೇಷಿಸಿ ಕ್ರಮಗಳನ್ನು ಕೈಗೊಳ್ಳಬಹುದು.

  ಹಣದ ಜಾಡು ಹಿಡಿಯುವ ಹಾಗೂ ಅನುಸರಿಸುವ ಚಟುವಟಿಕೆ ಈ ರೀತಿಯಲ್ಲಿ ನಮ್ಮ ವೈಯಕ್ತಿಕ ಜೀವನದ ಸುಧಾರಣೆಗೆ ಸಹಾಯಕಾರಿಯಾಗುತ್ತದೆ.  ಜೀವನವನ್ನು ಸರಳಗೊಳಿಸುವ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳಬಹುದು.  

   ಕಳೆದ ಅಧ್ಯಾಯದಲ್ಲಿ ತಿಳಿಸಿದಂತೆ ಈ ಸುಧಾರಣಾ ಕೆಲಸಗಳನ್ನು ಗಂಡ ಹೆಂಡತಿ ಇಬ್ಬರೂ ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಇದಕ್ಕಾಗಿ  ಇಬ್ಬರೂ ಪ್ರಗತಿಪರ  ಚಿಂತನೆಯ ಮನಸ್ಥಿತಿಯನ್ನು ಹೊಂದಿರಬೇಕು. ಇದರ ಮೂಲಕ ಜೀವನವನ್ನು ಅರ್ಥೈಸಿ,  ಸರಳಿಕರಣಗೊಳಿಸಿ , ನೆಮ್ಮದಿಯ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. 

No comments:

Post a Comment