Showing posts with label ಮಕ್ಕಳ ಪಧ್ಯ. Show all posts
Showing posts with label ಮಕ್ಕಳ ಪಧ್ಯ. Show all posts

Friday, December 31, 2010

ವನ ಮಹೋತ್ಸವ

ವನ ಮಹೋತ್ಸವ


ಶಾಲೆಯಲ್ಲಿ ಮಾಡಿದೆವು ವನ ಮಹೋತ್ಸವ
ಸಸಿಯ ನೆಡಲು ನಮಗೆ ಕೊಟ್ಟಿತು ಉತ್ಸಾಹ

ಅಂದು ಶಾಲೆಯಲಿ ಇತ್ತು ಪುಟ್ಟ ಸಮಾರಂಭ
ನಂತರ ಮಾಡಿದೆವು ಗಿಡ ನೆಡಲು ಆರಂಭ

ಪುಟ್ಟ ಸಲಾಖೆಯ ಹೊತ್ತು ತಂದೆವು ನಾವು
ಕೆತ್ತಿ ಆವರಣದಲಿ ಚಿಕ್ಕ ಪಾತಿಯ ಮಾಡಿದೆವು

ಬಗೆ ಬಗೆಯ ಸಸಿ ನೆಟ್ಟು ಅದಕ್ಕೆ ನೀರೆರೆದೆವು
ಆ ಸಸಿಗಳಿಗೆ ಗೊಬ್ಬರ ನೀಡಿ ಪೋಷಿಸಿದೆವು

ಪುಟ್ಟ ಸಸಿಗಳ ತೋಟವಾಯ್ತು ಶಾಲೆ ಅಂಗಳ
ಮುಂದಿನ ಪೀಳಿಗೆಗೆ ಹಾಡುವುದಿದು ಮಂಗಳ

ಪ್ರತಿ ವರ್ಷ ಆಚರಿಸುವೆವು ವನ ಮಹೋತ್ಸವ
ಹಸಿರು ಹೆಚ್ಚಿಸಲು ಕೊಡುವೆವು ಪ್ರೋತ್ಸಾಹ

- ತೇಜಸ್ವಿ.ಎ.ಸಿ

Sunday, August 1, 2010

ಹಬ್ಬಗಳ ಸಂಭ್ರಮಿಸಿದ ಪುಟ್ಟ

  ಹಬ್ಬಗಳ ಸಂಭ್ರಮಿಸಿದ ಪುಟ್ಟ


  ಪುಟ್ಟ ಅನುಭವಿಸಿದ ದಸರ ರಜಾದ ಮಜಾನ
  ಹಬ್ಬಕ್ಕೆ ಹೋಗಿದ್ದ ತಿರುಗಲು ಅಜ್ಜಿಯ ಊರನ್ನ

  ಅಜ್ಜಿಯ ಮನೆಯಲ್ಲಿ ಕೂಡಿಸಿದ್ದರು ಬೊಂಬೆಗಳ
  ಬೊಂಬೆಯ ಕೂರಿಸಿ ಆಹ್ವಾನಿಸಿದ್ದರು ಜನಗಳ

  ಹಬ್ಬದಿ ಹೊಸ ಬಟ್ಟೆ ಧರಿಸಿ ಕುಣಿದ ಅಣ್ಣನೊಡನೆ
  ದೊಡ್ಡ ಬೊಂಬೆಗಾಗಿ ಜಗಳಕ್ಕಿಳಿದ ಎಲ್ಲರೊಡನೆ

  ಕೊನೆಗೆ ದಸರೆಯ ರಜವು ಮುಗಿಯುತ ಬಂದಿತು
  ಅಜ್ಜಿಗೆ ಪುಟ್ಟನ ತರಲೆಗಳಿಂದ ಬಿಡುಗಡೆ ಸಿಕ್ಕಿತು

  ಬಸ್ಸನು ಹತ್ತಲು ಗಂಟು ಮೂಟೆ ಕಟ್ಟಿದ ಪುಟ್ಟ
  ಅಜ್ಜಿಯು ಕೊಟ್ಟ ಉಂಡೆಗಳ ಹೊತ್ತು ಹೊರಟ

  ಶಾಲೆಯಲ್ಲಿ ಶುರುವಾದವು ಪಾಠ ಪ್ರವಚನ
  ಅಪ್ಪನೂ ಕೂರಿಸಿ ಹೇಳಿದರು ಓದುವ ಬುದ್ದಿನ

  ಕೇಳಬೇಕಲ್ಲ ತರಲೆ ಮಾಡುವ ಚಿಕ್ಕ ವಯಸ್ಸು
  ಹೇಳಿದಕ್ಕೆಲ್ಲ ತಲೆಯಾಡಿಸಿತು ಎಳೆಯ ಮನಸ್ಸು

  ಕೆಲವೇ ದಿನಗಳಲ್ಲಿ ದೀಪಾವಳಿ ಹತ್ತಿರ ಬಂದಿತು
  ಪಟಾಕಿಗಳ ಹೊಡೆಯಲು ಅವಕಾಶವ ತಂದಿತು

  ಪಟಾಕಿ ಕೊಡಿಸಲು ಪುಟ್ಟನು ಹತ್ತಿದ ಅಪ್ಪನ ಬೆನ್ನು
  ಪಟಾಕಿ ಹಚ್ಚಲು ಅಜ್ಜಿ ಮನೆಗೆ ಕಳಿಸಿದರು ಅವನನ್ನು

  ಸಿಕ್ಕಿತು ಅವಕಾಶ ಅಣ್ಣನೊಂದಿಗೆ ಹಚ್ಚಲು ಪಟಾಕಿ
  ಅಜ್ಜಿಗೆ ಮತ್ತೆ ಸಿಕ್ಕಿದ ತರಲೆಗಳ ಮಾಡುವ ಗಿರಾಕಿ

  ಸಂಭ್ರಮವಾಗಿದೆ ಪುಟ್ಟನಿಗೆ ಹಬ್ಬದ ರಜಾ ದಿನಗಳು
  ಹೀಗೆ ಸಾಗಿದೆ ತುಂಟ ಪುಟ್ಟನ ಬಾಲ್ಯದ ಆಟಗಳು

  - ತೇಜಸ್ವಿ.ಎ.ಸಿ

Saturday, July 17, 2010

ತಪ್ಪಿಸಿಕೊಂಡ ಪುಟ್ಟ

ತಪ್ಪಿಸಿಕೊಂಡ ಪುಟ್ಟ


ಶನಿವಾರ ಶಾಲೆಗೆ ಬಂದ ಪುಟ್ಟ
ಸ್ನೇಹಿತರನ್ನು ಕರೆದ ಆಡಲು ಆಟ

ಅಷ್ಟರಲ್ಲೇ ಕೇಳಿತು ಘಂಟೆಯ ಸದ್ದು
ಕೊಠಡಿಗೆ ನಡೆದರು ಎಲ್ಲರೂ ಎದ್ದು

ಪಾಠವ ಮುಗಿಸಿದರು ಲೆಕ್ಕದ ಮೇಷ್ಟ್ರು
ಮನೆಯಲಿ ಮಾಡಲು ಲೆಕ್ಕಗಳ ಕೊಟ್ರು

ಹುಡುಗರೆಲ್ಲ ಸೇರಿದರು ಆಡಲು ಆಟ
ಆಟದೊಂದಿಗೆ ಶನಿವಾರ ಕಳೆದ ಪುಟ್ಟ

ಭಾನುವಾರ ಪೇಟೆಗೆ ಹೊರಟ ಪುಟ್ಟ
ಸರ್ಕಸ್ಸು ತೋರಿಸಲು ಬೇಡಿಕೆ ಇಟ್ಟ

ಸರ್ಕಸ್ಸು ನೋಡಿ ಕುಣಿದು ಕುಪ್ಪಳಿಸಿದ
ಅಪ್ಪನೊಂದಿಗೆ ಸಂಜೆ ಮನೆಗೆ ನಡೆದ

ರಾತ್ರಿಯಿತ್ತು ಅಮ್ಮನ ವಿಶೇಷ ಭೋಜನ
ಭಾನುವಾರ ಪೂರ್ತಿ ಮಾಡಿದ ಮಜಾನ

ಸೋಮವಾರ ಬೆಳಿಗ್ಗೆ ಶಾಲೆಗೆ ಹೋದ
ಮೇಷ್ಟರು ಕೊಟ್ಟಿದ್ದ ಲೆಕ್ಕಗಳ ಮರೆತ್ತಿದ್ದ

ಒಬ್ಬಬ್ಬರಿಗೆ ಲೆಕ್ಕವ ಕೇಳುತ ಬಂದರು
ಕೈಯಲ್ಲೇ ಬೆತ್ತವನ್ನು ಹಿಡಿದು ತಂದರು

ಅಷ್ಟರಲ್ಲೇ ಬಂದಿತು ನೋಟಿಸು ಕೊಠಡಿಗೆ
ರಜೆ ಸಿಕ್ಕಿತು ಗಣ್ಯರ ಸಾವಿನಿಂದ ಶಾಲೆಗೆ

ಪುಟ್ಟ ತಪ್ಪಿಸಿಕೊಂಡ ಲೆಕ್ಕದ ಮೇಷ್ಟರ ಏಟ
ರಜೆ ಘೋಷಿಸುತ್ತಲೇ ಮನೆಗೆ ಓಡಿದ ಓಟ

- ತೇಜಸ್ವಿ.ಎ.ಸಿ

Thursday, April 29, 2010

ಹ್ಯಾಪಿ ಬರ್ತಡೆ

ಹ್ಯಾಪಿ ಬರ್ತಡೆ

ಚಿಂಟು ಕೇಳಿದ ಕೇಕು
ನನಗೆ ಬೇಕೇ ಬೇಕು

ಮಾಡೋಣ ನಿನ್ನ ಬರ್ತಡೆ
ಮುಂದಿನ ತಿಂಗಳು ಬರ್ತದೆ

ತರೋಣ ದೊಡ್ಡ ಕೇಕು
ಈಗ ಮಿಠಾಯಿ ಸಾಕು

ಇವತ್ತೇ ಬರ್ತಡೆ ಯಾಕಿಲ್ಲ
ಈಗಲೇ ಕೇಕು ಬೇಕಲ್ಲ

ಚಿಂಟುವಿನ ಹಠ ನಿಲ್ಲಲಿಲ್ಲ
ಕೊನೆಗೂ ಕೇಕು ಸಿಕ್ಕಿತಲ್ಲ

ಚಿಂಟು ಕುಣಿದು ಕೇಕು ತಿಂದ
ದಿನಾ ಬರ್ತಡೆ ಬರಲಿ ಎಂದ

- ತೇಜಸ್ವಿ. ಎ.ಸಿ

Thursday, April 22, 2010

ಮೋಜಿನ ಬೇಸಿಗೆ ರಜೆ

ಮೋಜಿನ ಬೇಸಿಗೆ ರಜೆ


ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ
ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ

ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ
ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ

ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರಿಕೆಟ್ಟು
ಆಟವೆಂದರೆ ಓಡುವರಿವರು ಊಟ ತಿಂಡಿ ಬಿಟ್ಟು

ಊರಿನ ಕೆರೆ, ಕೊಳದಲ್ಲಿ ಮಕ್ಕಳಾಡುವರು ಈಜು
ರಜೆಯಲ್ಲಿ ಯಾರು ತಡೆಯರು ಇವರುಗಳ ಮೋಜು

ರಜೆಯಲ್ಲಿ ಓಡುವರು ತಾತ ಅಜ್ಜಿಗಳ ಊರಿಗೆ
ತಡೆ ಹಾಕಲಾದೀತೇ ಇವರುಗಳ ಓಟದ ದಾರಿಗೆ

ಮಳೆ ಬಂದರೆ ಮನೆಯಲ್ಲಿ ನಿಲ್ಲುವರೇ ಇವರು
ಅದರಲ್ಲೂ ಸೇರಿ ನೆನೆವ ಹೊಸ ಆಟ ಆಡುವರು

ಬೇಸಿಗೆ ಶಿಬಿರಕ್ಕೆ ಸೇರುವರು ನಗರದ ಮಕ್ಕಳು
ಪ್ರಕೃತಿಯನ್ನೇ ಶಿಬಿರ ಮಾಡುವರು ಹಳ್ಳಿಯ ಹೈಕಳು

ಕುಂಟಾಪಿಲ್ಲೆ, ಕಬಡ್ಡಿ, ಕೊ ಕೋ, ಮರಕೋತಿ, ಬುಗುರಿ
ಗೋಲಿ, ಕ್ರಿಕೆಟ್ಟು, ಚಿನ್ನಿದಾಂಡು, ಚೌಕಬಾರಾ, ಲಗೋರಿ

ಚಿತ್ರ, ಸೈಕಲ್, ಈಜು ಕಲಿಯಲು ಒಳ್ಳೆಯ ಅವಕಾಶ
ಎಲ್ಲಾ ಕಲಿತು ನಲಿಯುವರು, ಗಳಿಸಿ ಆಸೆಯಲ್ಲಿ ಯಶ

ಈ ದಿನಗಳು ಬರುವುದಿಲ್ಲ ಮುಂದೆ ದೊಡ್ಡವರಾದಾಗ
ಕಲಿತು, ಕುಣಿದು ಕುಪ್ಪಳಿಸಿ ನೀವುಗಳು ಚಿಕ್ಕವರಿದ್ದಾಗ

- ತೇಜಸ್ವಿ .ಎ. ಸಿ