Thursday, August 5, 2010

ಮುಸಲಧಾರೆ

ಮುಸಲಧಾರೆ

ಮಧ್ಯಾಹ್ನದ ಸಮಯದಲಿ ಮುಸುಕ ಮಬ್ಬು ಇಣುಕುತಿರಲು
ಅನಿರೀಕ್ಷಿತ ತಂಗಾಳಿಯು ಎಲ್ಲಡೆಯೂ ತಂಪೆರಿಯುತಿರಲು
ಏನೀ ಬೆಳಕಿನಾಟವಿದೆಂದು ಕುತೂಹಲಕೆ ನಾ ಹೊರ ಬಂದೆ

ಕಪ್ಪು ಕಾರ್ಮೋಡವು ತಂಗಾಳಿಯ ಹೊತ್ತು ತನ್ನ ರಾಜ್ಯವನು
ವಿಸ್ತರಿಸುತ್ತ, ನಿಧಾನವಾಗಿ ತನ್ನ ಬಲಿಷ್ಠ ಬಾಹುಗಳ ಚಾಚಿ
ಸಿಡಿಲಬ್ಬರದಿ ಸದ್ದ ಮೊಳಗಿಸುತ ತನ್ನಾಗಮನವ ಸಾರುತ್ತಿತ್ತು

ಕಾರ್ಮೋಡದ ನಡುವೆ ಬೆಳ್ಳನೆಯ ಬೆಳ್ಳಿ ರೇಖೆ ಮಿಂಚುತಿರಲು
ರೈತನ ಮನದೊಳಗಿನ ಸಣ್ಣನೆಯ ನಗೆ ಮುಖವರಳುತಿರಲು
ಸುತ್ತಣದ ವಾತಾವರಣದಲಿ ಹೊಸ ಉಲ್ಲಾಸವ ಪಸರಿಸಿತ್ತು

ಎದುರಿನ ಬಯಲಲ್ಲಿ ಸಣ್ಣಗೆ ಎದ್ದ ಗಾಳಿಗೆ ಓಡುತ್ತಿರುವ ಕರು
ಅದನ್ನೇ ಹಿಂಬಾಲಿಸುವಂತೆ ಧರೆಗೆ ಬಿದ್ದ ಮುತ್ತಿನ ಹನಿಗಳು
ಧಣಿದ ಭೂಮಿಗೆ ಉಲ್ಲಾಸದ ಸಿಂಚನವ ಸಿಂಪಡಿಸುತ್ತಿತ್ತು

ಧರೆಗೆ ಬಿದ್ದ ಮುತ್ತಿನ ಹನಿಗಳ ತನ್ನ ಮೈಯೊಳಗೆ ಹೀರಿ
ಘಮ ಘಮಿಸುವ ಸುವಾಸನೆಯ ಎಲ್ಲೆಡೆಯಲಿ ಪಸರಿಸಲು
ಭೂಮಿ ಬಚ್ಚಿಟ್ಟ ಸುಂದರ ಸುಗಂಧವ ಹೊರಸೂಸುತಿತ್ತು

ಅಂಗಳೊಳ ಮಕ್ಕಳು ಮನದ ಗರಿ ಗೆದರಿ ಆಡಲನುವಾಗಿ
ಕಾಡಿನೊಳು ಗರಿ ಗೆದರಿ ನವಿಲುಗಳ ನರ್ತನದ ತೆರನಾಗಿ
ಸುತ್ತಲ ವಾತಾವರಣ ತಂಗಾಳಿಯಾಗಿ ಹರಿದಾಡುತ್ತಿತ್ತು

ಹನಿ ಹನಿಯಾಗಿ ಸುರಿಯಲಾರಂಭಿಸಿತು ಮುಸಲಧಾರೆಯು
ಸೃಷ್ಟಿಸುತ ಭುವಿ ಆಕಾಶವೊಂದು ಮಾಡುವ ಕಾಮನ ಬಿಲ್ಲನು
ನೋಡಲು ದಕ್ಕಿತ್ತು ಪ್ರಕೃತಿಯ ರಮ್ಯದೃಶ್ಯ ಕಣ್ಣಿಗೆ ಹಬ್ಬವಾಗಿ

- ತೇಜಸ್ವಿ.ಎ.ಸಿ

No comments:

Post a Comment