ಸುಮ್ಮನಿರಬಾರದೇ ನೀನೊಮ್ಮೆ
ಸುಮ್ಮನಿರು ಎಂದು ಹೇಳಿದರೂ ಕೇಳದು ಮನ,
ವಟ-ವಟನೆ ಸದಾ ಮಾತಾಡುವ ಚಂಚಲ ಮನ
ನಿನ್ನ ಈ ಸ್ವಭಾವದಿಂದ ಬೇಸರಸಿದ್ದಾರೆ ಜನ
ಇರದ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಂಡು,
ನಡೆಯದ ಘಟನೆಗಳ ತನ್ನ ಕಲ್ಪನೆಯಲಿ ಕಟ್ಟಿ
ಕಲ್ಪನೆಯಲ್ಲೇ ಪ್ರಪಂಚ ಕಾಣುವ ಮೊದ್ದು ಮನ
ತನ್ನ ಪಂಚೇಂದ್ರಿಯಗಳ ಮೂಲಕ ನೇರವಾದ
ವಾಸ್ತವವ ಗ್ರಹಿಸದೆ, ಕೂತಲ್ಲೇ ಎಲ್ಲಾ ಕಲ್ಪಿಸಿ
ಸರಳ ವಾಸ್ತವದಿಂದ ದೂರವಿರುವ ಪೆದ್ದು ಮನ
ಬೇಡದ ಸಂದರ್ಭದಲ್ಲೂ ಮಾತನಾಡುವ, ಸ್ವಲ್ಪ
ಸುಮ್ಮನಿರದೇ ಕಿರಿಕಿರಿ ಮಾಡುವ ತುಂಟ ಮನ,
ಈ ತುಂಟನಿಗೊಂದು ಕೊಡಬಾರದೇ ರಜಾ ದಿನ
ನನಗೆ ಗೊತ್ತು ನಿನ್ನದು ಎಂದೂ ಬತ್ತದ ಉತ್ಸಾಹ
ನಾ ಅರ್ಥೈಸಿರುವೆ ನೀ ಚೈತನ್ಯದ ಚಿಲುಮೆ ಎಂದು
ಆದರೂ ಕೆಲವು ಸಂದರ್ಭದಲಿ ತೆಗೆದುಕೋ ಬಿಡುವು
ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡಲು ಒರಗಿದರು
ನಿನ್ನ ಮಾತಾಡುವ ಬಾಯನು ನಿಲ್ಲಿಸ ಯತ್ನಿಸಿದರು
ನಿದ್ದೆಯಲಿ ಕನಸಾಗಿ ಬಂದು ತೊಂದರೆಯ ಕೊಡುವೆ
ನನಗೆ ಗೊತ್ತು ಸುಟ್ಟರೂ ಬಿಡದು ಈ ನಿನ್ನ ಬುದ್ದಿ
ನಾನೂ ನಿನ್ನ ಕೇಳಿ ಸಮಯ ವ್ಯರ್ಥ ಮಾಡುತ್ತಿರುವೆ
ಏಕೆ ಹೇಳು? ಏಕೆಂದರೆ ಹೇಳುತ್ತಿರುವವನು ನೀನೆನೇ.
- ತೇಜಸ್ವಿ.ಎ.ಸಿ
No comments:
Post a Comment