ಮರಳಿ ಬಾ ವರ್ಷಧಾರೆ
ನೋಡಲು ನಾ ನಿಂತಿದ್ದೆ ಬೀಳುವ ವರ್ಷಧಾರೆಯ
ಆಗಸದಿಂದ ಸುರಿಯುತ್ತಿದ್ದ ಬಿಳಿಯ ಶುಭ್ರ ಹನಿಯ
ಸುತ್ತಲು ಕಣ್ಣಾಡಿಸದಲ್ಲೆಲ್ಲಾ ಕಾಣುತ್ತಿತ್ತು ಜಲಧಾರೆ
ಸುರಿಯುತ ಮಜ್ಜನ ಮಾಡಿಸಿ ಶುಭ್ರಗೊಂಡಿತು ಧರೆ
ಅಲ್ಲಲ್ಲಿ ಸಣ್ಣದಾಗಿ ಹರಿಯಲಾರಂಭಿಸಿತು ಝರಿಗಳು
ಝರಿಗಳಲ್ಲಿ ದೋಣಿ ಬಿಡಲು ಕಾಯುತ್ತಿದ್ದರು ಮಕ್ಕಳು
ಮಳೆಗಾಳಿಗೆ ಬಾಗಿ ಕರೆಯುತ್ತಿದ್ದವು ಮರದ ರೆಂಬೆಗಳು
ಅದು ಕೊಡುವ ಆಶ್ರಯಕೆ ಓಡುತ್ತಿದ್ದವು ಹಸು-ಕರುಗಳು
ಆಕಾಶದೆಡೆಗೆ ನೋಡಿದೆ ಕಪ್ಪು ಕಾರ್ಮೋಡದ ಛಾಯೆ
ತಾ ಸರಿಯುವುದ ಸೂಚಿಸಿತು ಮುಗಿಸುತ ತನ್ನ ಮಾಯೆ
ನಿಧಾನವಾಗಿ ನಿಲ್ಲಲಾರಂಭಿಸಿತು ಸುಂದರ ವರ್ಷಧಾರೆ
ತನ್ನ ವೈಭವಕೆ ನಿಧಾನವಾಗಿ ಎಳೆಯತೊಡಗಿತು ತೆರೆ
ಮಳೆಯು ನಿಂತಾಗ ಕಾಣುತಿತ್ತು ಶುಭ್ರ ವಾತಾವರಣ
ತನ್ನೆಲ್ಲಾ ಆರ್ಭಟವ ಮುಗಿಸಿ ಶಾಂತವಾಗಿದ್ದ ವರುಣ
ಗಿಡ ಮರಗಳ ಎಲೆಗಳೆಲ್ಲ ತೊಯ್ದಾಗಿತ್ತು ಹಚ್ಚ ಹಸಿರು
ಎಲ್ಲಾ ಜೀವಿಗಳಿಗೆ ಸಿಕ್ಕಿತ್ತು ಆಡಲು ಉಲ್ಲಾಸದ ಉಸಿರು
ನೀ ಬಂದು ಜೀವಗಳಿಗೆ ಹೊಸ ಜೀವವ ಇತ್ತೆ ವರ್ಷಧಾರೆ
ಹೊರಟೆ ಎನಬೇಡ ಹಾಗೆ ನಮ್ಮ ಭೇಟಿಗಾಗಿ ಮರಳಿ ಬಾರೆ
- ತೇಜಸ್ವಿ.ಎ.ಸಿ
No comments:
Post a Comment