Monday, December 10, 2012

ಪ್ರೀತಿಯಿಂದ

   ಪ್ರೀತಿಯಿಂದ  

   ಕವಿಮನದ ಸಹಜ ಆಸೆ ಬಿಟ್ಟು 
   ಬದುಕ ಕಟ್ಟುವ ಕಾರ್ಯ ಹೊತ್ತು
   ದುಡಿಯುತಿರುವೆ ಬದುಕಿಗಾಗಿ 
   ಅನ್ಯರ ಸಂಸ್ಥೆಗೆ ಹೆಗಲ ಕೊಟ್ಟು

   ನನ್ನೊಳಗಿನ ಕವಿಯು ರಾಜಿ ಮಾಡಿ
   ಅನ್ಯರ ವ್ಯವಹಾರಕೆ ಹಾದಿ ಮಾಡಿ 
   ದುಡಿಯುತಿರುವೆ ಆಸೆಗಳ ಮುಂದೂಡಿ    
   ಬದುಕ ಕಟ್ಟುವನೆಂಬ ಗುರಿಯ ಇಟ್ಟು

   ವಾರದ ದಿನಗಳ ಕಚೇರಿ ಕೆಲಸ
   ವಾರಾಂತ್ಯದ ಸಂಸಾರದ ಕೆಲಸ 
   ಕಾರ್ಯಗಳಲೇ ಮುಳುಗುತಿರುವೆ  
   ಸಾಹಿತ್ಯ ಕೃಷಿಯ ಆಸೆಯ ಬಿಟ್ಟು 

   ಬದುಕ ಕಟ್ಟುವ ಕಾರ್ಯವೂ ಇರಲಿ
   ಸಂಸಾರ ನೊಗದ ಭಾರವೂ ಇರಲಿ
   ಹೊಂದಿಕೊಂಡೇ ಸಾಗಿಸುವೆ ನನ್ನೀ  
   ಹವ್ಯಾಸವ, ಕೊಂಚ ಹೊತ್ತ ಮೀಸಲಿಟ್ಟು

   ಹವ್ಯಾಸಕುಂಟು ಬತ್ತದ ಉತ್ಸಾಹ
   ಎಲ್ಲ ಕಾಲದಲ್ಲುಂಟು ಸ್ವಪ್ರೋತ್ಸಾಹ
   ಅಂತಾರಾಳದ ಸಹಜ ಮಾತುಗಳಿವು
   ಕವನ ರಚಿಸುವೆ ನಾ ಪ್ರೀತಿಯಿಟ್ಟು

   - ತೇಜಸ್ವಿ.ಎ .ಸಿ

No comments:

Post a Comment