ಬಜೆಟ್ ತಯಾರಿಕೆ
ಮನುಷ್ಯನ ಆರ್ಥಿಕ ನಿರ್ವಹಣೆ ಜೊತೆಗೆ ಜೀವನ ನಿರ್ವಹಣೆಗೆ ಬಜೆಟ್ ತಯಾರಿಕೆ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಜನರ ಬಳಿ ಆರ್ಥಿಕ ಸಂಪನ್ಮೂಲಗಳು ಸಾಮಾನ್ಯವಾಗಿ ಸೀಮಿತವಾಗಿರುತ್ತದೆ, ಆದುದರಿಂದ ಸೀಮಿತ ಸಂಪನ್ಮೂಲಗಳಿಗೆ ಒಂದು ಬಜೆಟ್ ತಯಾರಿಸುವುದು ಬುದ್ಧಿವಂತಿಕೆಯ, ಶಿಸ್ತಿನ ಹಾಗೂ ಸ್ಪಷ್ಟತೆಯ ಕೆಲಸವಾಗಿದೆ. ಬಜೆಟ್ ತಯಾರಿಕೆ ಪ್ರತಿಯೊಬ್ಬರಿಗೂ, ಪ್ರತಿಯೊಂದು ಕುಟುಂಬಕ್ಕೂ ತಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಬದ್ಧತೆಯ ಮೇಲೆ ನಿಂತಿರುತ್ತದೆ ಆದುದರಿಂದ ಇದು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿದ್ದು ಹಾಗೆಯೇ ವಿಭಿನ್ನವಾಗಿರುತ್ತದೆ .
ನೀವು ವಿವಾಹಿತರಾಗಿದ್ದು ಕುಟುಂಬವನ್ನು ನಡೆಸುತ್ತಿದ್ದಾರೆ ನಿಮ್ಮ ಸಂಗಾತಿಯ ಜೊತೆಗೆ ಬಜೆಟ್ ತಯಾರಿಸುವುದು ಹೆಚ್ಚು ಅರ್ಥಬದ್ಧ ವಾಗಿರುತ್ತದೆ. ಏಕೆಂದರೆ ಇಬ್ಬರ ಹಾಗೂ ಕುಟುಂಬದವರ ಅವಶ್ಯಕತೆಗಳು, ಆಸೆಗಳು, ಭವಿಷ್ಯದ ಯೋಜನೆಗಳು ಹೀಗೆ ಎಲ್ಲವನ್ನು ಕಲೆಹಾಕಿ ನೀವು ವಾಸ್ತವದ ನೆಲಗಟ್ಟಿನಲ್ಲಿ ಬಜೆಟ್ ಅನ್ನು ತಯಾರಿಸಬಹುದು. ಇದು ವಿಫಲಗೊಳ್ಳುವ ಸಾಧ್ಯತೆಗಳು ಕಡಿಮೆಯಾಗಿರುತ್ತದೆ.
ಬಜೆಟ್ ಗಾಗಿ ಸಿದ್ಧತೆ:
ಬಜೆಟ್ ತಯಾರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅವುಗಳು ನಿಮ್ಮ ಖರ್ಚುಗಳ ಅಧ್ಯಯನದಿಂದ ತಿಳಿದು ಬಂದಂತಹ ಮಾಹಿತಿ ಗಳಾಗಿರುತ್ತವೆ. ಆ ಮಾಹಿತಿಯು ನಿಮ್ಮ ಖರ್ಚುಗಳ ಅನುಸರಣೆ ಮಾಡಿ ತೆಗೆದ ವರದಿಯಲ್ಲಿ ದೊರೆಯುತ್ತದೆ. ಆದುದರಿಂದ ನೀವು ಕಾಲಕಾಲಕ್ಕೆ ಕನಿಷ್ಠ ಪಕ್ಷ ಎರಡರಿಂದ ಮೂರು ತಿಂಗಳು ಖರ್ಚಿನ ಅನುಸರಣೆ ಮಾಡಿದರೆ ನಿಮಗೆ ನಿಖರವಾದ ಮಾಹಿತಿ ದೊರೆಯುತ್ತದೆ. ಅವುಗಳೆಂದರೆ ನಿಮ್ಮ ಬಳಿ ಇರುವ ಸಾಲಗಳು, ನಿಶ್ಚಿತ ಖರ್ಚುಗಳು, ಅನಿಶ್ಚಿತ ಖರ್ಚುಗಳು, ಆರ್ಥಿಕ ಗುರಿಗಳು ಹಾಗೂ ಗುರಿಗಳಿಗೆ ಬೇಕಾದ ಹೂಡಿಕೆ ಮೊತ್ತ.
ಹೀಗೆ ನಿಮ್ಮ ಎಲ್ಲಾ ಖರ್ಚುಗಳ ಬಗ್ಗೆ ಖರ್ಚುಗಳ ಅನುಸರಣೆಯ ಮೂಲಕ ಸ್ವಯಂ ಅರಿವು ಉಳ್ಳವರಾಗಿರಬೇಕು. ಈ ಅರಿವಿನಿಂದ ಮುಂಬರುವ ಮಾಡಬೇಕಾದ ಸಾಲಗಳು, ಆರ್ಥಿಕ ನಿರ್ವಹಣೆ, ಆರ್ಥಿಕ ಗುರಿಗಳು, ನಿಮ್ಮ ಆರ್ಥಿಕ ಸಾಮರ್ಥ್ಯದ ಪ್ರಜ್ಞೆ ನಿಮ್ಮಲ್ಲಿದ್ದು. ಅದರ ಮೂಲಕ ನೀವು ನಿಮ್ಮದ್ದೇ ಆದ ಸ್ವಂತದ ಹಾಗೂ ವಾಸ್ತವದ ಬಜೆಟ್ ನಿರ್ಮಿಸಲು ಸಹಕಾರಿ ಆಗುತ್ತದೆ.
ಸೂಚನೆ: ಜನರ ಆರ್ಥಿಕ ಪರಿಸ್ಥಿತಿಗಳು, ಆಯ್ಕೆಗಳು ವಿಭಿನ್ನವಾಗಿರುತ್ತದೆ, ಆದುದರಿಂದ ಕೆಳಗೆ ಕೊಟ್ಟಿರುವ ಬಜೆಟ್ ಗಳು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ದಯವಿಟ್ಟು ಇದನ್ನು ಬಳಸಿಕೊಂಡು ನಿಮ್ಮ ಆರ್ಥಿಕ ಆಯ್ಕೆಗಳು, ಪರಿಸ್ಥಿತಿಗೆ ಅನುಗುಣವಾಗಿ ಸ್ವಂತದ ಬಜೆಟ್ ನಿರ್ಮಿಸಿ.
ನಿರೀಕ್ಷಿತ ಖರ್ಚು :
ನಿರೀಕ್ಷಿತ ಖರ್ಚು ಎಂದರೆ ನಿಮ್ಮ ಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿ ನೀವು ಕಟ್ಟುವಂತ ಹಾಗೂ ನಿಮಗೆ ತಿಳಿದಿರುವಂತಹ ಖರ್ಚುಗಳು. ಅಂದರೆ ನೀವು ಕಟ್ಟುವ ಬಿಲ್ಲುಗಳು ಶಾಲೆಯ ಶುಲ್ಕ, ವಿದ್ಯುತ್ ಬಿಲ್, ದಿನಸಿ ತರಕಾರಿಗಳ ಖರ್ಚು, ಅಂತರ್ಜಾಲ, ಮೊಬೈಲ್ ಬಿಲ್, ವಿಮಾ ಕಂತುಗಳು, ಇಂಧನದ ಖರ್ಚು, ದೂರದರ್ಶನದ ಚಂದಾದಾರಿಕೆ ಇತ್ಯಾದಿ.
ಕೆಲವು ನಿರೀಕ್ಷಿತ ಖರ್ಚುಗಳು ಇಂತಿಷ್ಟೇ ಎಂದು ಹೇಳಲಾಗುವುದಿಲ್ಲ ಉದಾಹರಣೆಗೆ ದಿನಸಿ, ತರಕಾರಿ, ಬಟ್ಟೆ ಇಸ್ತ್ರಿ, ಗ್ರಂದಿಗೆ ಸಾಮಗ್ರಿ ಇತ್ಯಾದಿ. ಆದರೆ ಇದನ್ನು ಪ್ರತಿ ತಿಂಗಳು ಉಪಯೋಗಿಸುವುದರಿಂದ ನಿರೀಕ್ಷಿತ ಖರ್ಚುಗಳೆಂದು ಗುರುತಿಸಿ ಒಂದು ಹಣದ ರೇಂಜ್ ನಲ್ಲಿ ಮಿತಿ ಮಾಡಿ ಬಜೆಟ್ಟಿಗೆ ಸೇರಿಸಿ ಒಂದು ನಿಗದಿತ ಮೊತ್ತವನ್ನು ಹಂಚಿಕೆ ಮಾಡಬೇಕಾಗುತ್ತದೆ.
ಅನಿರೀಕ್ಷಿತ ಖರ್ಚು :
ಅನಿರೀಕ್ಷಿತ ಖರ್ಚುಗಳು ಎಂದರೆ ಅನಿರೀಕ್ಷಿತವಾಗಿ ಬರುವ ದುರಸ್ತಿ ಕಾರ್ಯಗಳು, ಹೊಸ ಬಟ್ಟೆ, ಉತ್ಪನ್ನಗಳ ಖರೀದಿಗಳು, ಇರುವ ಉತ್ಪನ್ನಗಳ ನಿರ್ವಹಣಾ ವೆಚ್ಚಗಳು, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಖರ್ಚುಗಳು ಹೀಗೆ ಅನಿರೀಕ್ಷಿತವಾಗಿ ಬರುವ ಖರ್ಚುಗಳನ್ನು ಅನಿರೀಕ್ಷಿತ ಖರ್ಚುಗಳು ಎಂಬ ಹಣೆಪಟ್ಟಿಯಲ್ಲಿ ವರ್ಗೀಕರಿಸಬಹುದು
ಇವುಗಳು ಸಹ ಪ್ರತಿ ತಿಂಗಳು ಇದ್ದೇ ಇರುತ್ತವೆ, ಚಿಕ್ಕ ಮೊತ್ತದ್ದೋ, ದೊಡ್ಡ ಮೊತ್ತದ್ದೇ ಆಗಿರಲಿ ಆದರೆ ಅನಿರೀಕ್ಷಿತ ಖರ್ಚುಗಳು ಬರುವುದು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದುದರಿಂದ ಇದಕ್ಕೆ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಹಣವನ್ನು ಹಂಚಿಕೆ ಮಾಡಬೇಕು. ಇಲ್ಲದೆ ಇದ್ದರೆ ಇವುಗಳಿಂದ ಸಾಲದ ಮೊರೆ ಹೋಗಬೇಕಾಗುತ್ತದೆ. ಆದುದರಿಂದ ಈ ಹಂಚಿಕೆ ಬಜೆಟ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅವಿವಾಹಿತ ಯುವ ಪೀಳಿಗೆಗೆ ಬಜೆಟ್ :
ಅವಿವಾಹಿತ ಯುವಕ ಯುವತಿಯರಿಗೆ ಬಜೆಟ್ ಮಾಡುವುದು ಅತಿ ವಿಶೇಷವಾದಂತಹ ವಿಷಯ. ಏಕೆಂದರೆ ಇವರು ಯುವಕರು ಆಗಿರುವುದರಿಂದ ಇವರ ಬಳಿ ಹೆಚ್ಚು ಕಾಲಾವಕಾಶವಿದೆ, ಹಾಗೂ ಸೂಕ್ತ ವಯಸ್ಸು. ಈ ವಯಸ್ಸಿನಲ್ಲಿ ಖರ್ಚು ಕಡಿಮೆ ಹಾಗೂ ಉಳಿತಾಯ ಹೆಚ್ಚು ಆದುದರಿಂದ ಇವರು ಭವಿಷ್ಯದ ಯೋಜನೆಗಳಿಗೆ ಉಳಿತಾಯ ಮಾಡಿ, ಹಣ ಹೂಡಿಕೆ ಮಾಡಿ ಹೆಚ್ಚು ಗಳಿಸಬಹುದು ಜೊತೆಗೆ ಸಾಲವಿಲ್ಲದೆ ಬದುಕಲು ಅವಕಾಶಗಳು ಇರುತ್ತವೆ. ಒಂದು ವೇಳೆ ಯುವಕರಲ್ಲಿ ಸಾಲ ಇಲ್ಲದಿದ್ದರೆ ಕೆಳಗಿನ ಬಜೆಟ್ ಸೂಕ್ತವಾಗಿರುತ್ತದೆ.
ಈ ಕೆಳಗೆ ಉದಾಹರಣೆಯಾಗಿ 1 ಲಕ್ಷ ಆದಾಯವೆಂದು ತೆಗೆದುಕೊಳ್ಳಲಾಗಿದೆ.
ಇವರು ಕೆಳಗಿನ ಆರ್ಥಿಕ ಗುರಿಗಳನ್ನು ಹಮ್ಮಿಕೊಳ್ಳಬಹುದು
- ತಮ್ಮ ವಿವಾಹದ ಖರ್ಚು
- ಹೊಸ ಸಂಸಾರಕ್ಕೆ ಮನೆ ಮಾಡುವುದು
- ಮನೆಗೆ ಗೃಹಪಯೋಗಿ ವಸ್ತುಗಳನ್ನು ಕೊಳ್ಳುವುದು
- ದೊಡ್ಡ ಖರ್ಚಿನ ನಿಧಿ
- ತುರ್ತು ನಿಧಿ ... ಇತ್ಯಾದಿ
ಗೃಹ ಸಾಲ ಉಳ್ಳ ಸಂಸಾರಕ್ಕೆ ಬಜೆಟ್
ನೀವು ವಿವಾಹಿತರಾಗಿದ್ದು ನಿಮ್ಮ ಕುಟುಂಬಕ್ಕೆ ಮನೆ ಕಟ್ಟಿಸಿ ಗೃಹ ಸಾಲ ಹೊಂದಿದ್ದರೆ ಕೆಳಗಿನ ಬಜೆಟ್ ಸೂಕ್ತವಾಗಿರುತ್ತದೆ. ಸಾಲವನ್ನು ಆದಷ್ಟು ಬೇಗ ತೀರಿಸುವುದು ಉತ್ತಮ ಆಯ್ಕೆ. ಇದರಿಂದ ನಿಮ್ಮ ಸಾಲ ಕಡಿಮೆ ಬಡ್ಡಿಯಲ್ಲಿ ತೀರಿ ನಿಮ್ಮ ಹಣದ ಉಳಿತಾಯವಾಗುತ್ತದೆ, ಜೊತೆಗೆ ಉಳಿದ ವೇತನದಲ್ಲಿ ಆರ್ಥಿಕ ಗುರಿಗಳನ್ನು ಹಮ್ಮಿಕೊಂಡು ಯಶಸ್ವಿ ಹಾಗು ನೆಮ್ಮದಿಯ ಜೀವನ ನಡೆಸಬಹುದು. ಇದಕ್ಕಾಗಿ ಸಾಲದ ಭಾಗಶಃ ಮರುಪಾವತಿಗೆ ಬಜೆಟ್ ನಲ್ಲಿ ಹಣವನ್ನು ಹಂಚಿಕೆ ಮಾಡುವುದು ಅಷ್ಟೇ ಮುಖ್ಯ.
ಇವರು ಕೆಳಗಿನ ಆರ್ಥಿಕ ಗುರಿಗಳನ್ನು ಹಮ್ಮಿಕೊಳ್ಳಬಹುದು
- ನಿವೃತ್ತಿ ಪಿಂಚಣಿ ನಿಧಿ
- ಕಾರು ಕೊಳ್ಳುವುದು
- ಮಕ್ಕಳ ಉನ್ನತ ವಿದ್ಯಾಭ್ಯಾಸದ ಖರ್ಚು
- ಮಗಳ ವಿವಾಹದ ಖರ್ಚು... ಇತ್ಯಾದಿ
ಸಾಲವಿಲ್ಲದ ಸಂಸಾರಕ್ಕೆ ಬಜೆಟ್
ಎಷ್ಟೋ ಜನರಿಗೆ ಸ್ವಂತ ಮನೆ ಇದ್ದು, ಮನೆ ಕಟ್ಟಿಸುವ ಗೃಹ ಸಾಲ ಮಾಡುವ ಅವಶ್ಯಕತೆಗಳು ಇರುವುದಿಲ್ಲ. ಹೀಗಿದ್ದ ಮೇಲೆ ಸಾಲ ಇಲ್ಲದೆ ಬದುಕುವವರು ತಮ್ಮ ಮುಂದಿನ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿ ಮುಂಬರುವ ತಮ್ಮ ಅಗತ್ಯಗಳನ್ನು, ಆಸೆಗಳನ್ನು ಈಡೇರಿಸಿ ಕೊಳ್ಳಬಹುದು. ಆರ್ಥಿಕ ಗುರಿಗಳಿಗೆ ಸಾಕಷ್ಟು ಬಜೆಟ್ ಇದ್ದರೆ ಯಾವುದೇ ಸಾಲ ಮಾಡುವ ಅವಶ್ಯಕತೆಗಳು ಬರುವುದಿಲ್ಲ.ಆದರೆ ಗುರಿಗಳನ್ನು ಇಟ್ಟು ನಿಮ್ಮ ಹಣವನ್ನು ಸರಿಯಾದ ರೀತಿ ಬಳಸಿದರೆ ಹಣದ ಸದ್ಬಳಕೆ ಆಗುತ್ತದೆ. ಇಂತಹ ಅವಕಾಶವಿದ್ದರೆ ಕೆಳಗಿನ ಬಜೆಟ್ ಸೂಕ್ತವಾಗಿರುತ್ತದೆ.
ಆದರೆ ನೆನಪಿರಲಿ, ನೀವು ಲೈಫ್ ಸ್ಟೈಲ್ ಇನ್ಫ್ಲೇಶನ್ ನಿಂದ ಎಚ್ಚರವಿರಬೇಕು, ಐಷಾರಾಮಿ ವಸ್ತುಗಳಿಗಾಗಿ ದುಂಬಾಲು ಬಿದ್ದರೆ, ಇನ್ನೊಬ್ಬರಿಗೆ ಸಂಪತ್ತಿನ ಪ್ರದರ್ಶನಕ್ಕಾಗಿ ಹಣವನ್ನು ದುಂದು ವೆಚ್ಚ ಮಾಡಿದರೆ, ನೀವು ಸಾಲದ ಬೀಳುವ ಸಾಧ್ಯತೆ ಇರುತ್ತದೆ. ಅದರಿಂದ ಹಣ ಉಳ್ಳವರು ಉತ್ಪನ್ನಗಳನ್ನು, ಸೇವೆಗಳನ್ನು ಪಡೆಯುವಾಗ ವಿವೇಕವನ್ನು ಪ್ರದರ್ಶಿಸಬೇಕು. ಆಗಷ್ಟೇ ನಿಮ್ಮ ಜೀವನ ನಿಶ್ಚಿಂತೆಯಿಂದ ಕೂಡಿರುತ್ತದೆ.
ಒಂದು ವೇಳೆ ಆದಾಯ ತೀರ ಕಡಿಮೆ ಇದ್ದಾರೆ, ಆರ್ಥಿಕ ಇಕ್ಕಟ್ಟು ಅಸಹನೆಯ ವಾಗಿದ್ದರೆ. ದಂಪತಿಗಳಿಬ್ಬರು ಸಂಪಾದಿಸುವುದು ಉತ್ತಮ. ಜೊತೆಗೆ ಮನೆಯ ಯಜಮಾನನು ಅಗತ್ಯ ಕೌಶಲ್ಯಗಳನ್ನು ಕಲಿತು ಆದಾಯವನ್ನು ಹೆಚ್ಚಿಸಲು ಅವಕಾಶಗಳನ್ನು ಉಪಯೋಗಿಸಿಕೊಂಡು ಮುಂದುವರೆಯಬೇಕು.

No comments:
Post a Comment