Monday, June 15, 2026

ಸಾಲಗಳು

 ಸಾಲಗಳು 



      ನಮಗೆ ದಿನನಿತ್ಯವೂ ಎಷ್ಟೋ ಮೊಬೈಲ್ ಕರೆಗಳು ಬರುತ್ತಿರುತ್ತವೆ, ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಿ, ವೈಯಕ್ತಿಕ ಸಾಲ ತೆಗೆದುಕೊಳ್ಳಿ, ಓವರ್ ಡ್ರಾಫ್ಟ್ ಸಾಲ, ಬಂಗಾರದ ಮೇಲಿನ ಸಾಲ ಹೀಗೆ ನಾನಾ ಹೆಸರುಗಳಲ್ಲಿ ಲೋನ್ ಸಂಸ್ಥೆಗಳು, ಬ್ಯಾಂಕ್ ಗಳು, NBFC ಗಳು ಸಾಲವನ್ನು ಕೊಡಲು ನಾ ಮುಂದು ತಾ ಮುಂದು ಎಂದು ಹಾತೊರೆಯುತ್ತಿರುತ್ತವೆ. ಹಾಗಿದ್ದಲ್ಲಿ ಸಾಲ ಎಂದರೇನು ಎಂದು  ಅರ್ಥಮಾಡಿಕೊಳ್ಳೋಣ.

     ಸಾಲವು ನಾವು ಸಂಪಾದಿಸುವ ಮುನ್ನವೇ ಖರ್ಚು ಮಾಡುವ ಹಣವಾಗಿದ್ದು, ಅದನ್ನು ಭವಿಷ್ಯದ  ದಿನಗಳಲ್ಲಿ ಸಂಪಾದಿಸಿ ತೀರಿಸುವೆನು ಎಂಬ ಭರವಸೆಯ ಮೇಲೆ ಹಾಗೂ ಅಡಮಾನದ ಆಧಾರದ   ಮೂಲಕ ಹಣವನ್ನು ಎರವಲು ಪಡೆದು, ಇವತ್ತಿನ ದಿನ ಖರ್ಚು ಮಾಡುತ್ತೇವೆ.  ಆದರೆ ಸಾಲವನ್ನು ತೀರಿಸಲು ನಿಯಮಿತ ದಿನಗಳಿರುತ್ತವೆ ಹಾಗೂ ಅದಕ್ಕೆ ಬಡ್ಡಿ ಮತ್ತು ಶುಲ್ಕಗಳು ಇರುತ್ತದೆ.  ಕೆಲವು ಕಡೆ ಚಕ್ರಬಡ್ಡಿಯು ಸೇರುತ್ತದೆ. 

    ಹಾಗೆ ನೋಡಿದರೆ ಕೇವಲ ಜನಸಾಮಾನ್ಯರು  ಅಷ್ಟೇ ಅಲ್ಲ, ಕಾರ್ಪೊರೇಟ್ ಸಂಸ್ಥೆಗಳು, ಇತರೆ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಸಾಲವನ್ನು ಪಡೆಯುತ್ತವೆ.  ಹಾಗಂತ ಸಾಲವು ಒಳ್ಳೆಯದೆಂದು ಸಬೂಬು ಹೇಳುವುದಿಲ್ಲ. ಸಾಲವು ಒಂದು ಬದ್ಧತೆ ಆಗಿದ್ದು, ಕೆಲವು ದೀರ್ಘ ಕಾಲದ್ದು ಆಗಿರುತ್ತದೆ. ಅದು ಅಧಿಕವಾದರೆ ಇತರ ಖರ್ಚುಗಳಿಗೆ ಅಡ್ಡಿಪಡಿಸಿ ಮನೆಯಲ್ಲಿ, ಮನಸ್ಸಿನಲ್ಲಿ, ಜೀವನದಲ್ಲಿ ಇಕ್ಕಟ್ಟನ್ನು ಸೃಷ್ಟಿ ಮಾಡುತ್ತದೆ.  ಈ ಆರ್ಥಿಕ ಇಕ್ಕಟ್ಟಿನಿಂದ ನಮ್ಮ ಇತರೆ ಆರ್ಥಿಕ ಗುರಿಗಳನ್ನು ತಲುಪಲು ಹಣದ ಕೊರತೆಯುಂಟಾಗಿ, ಈ  ಆರ್ಥಿಕ ಇಕ್ಕಟ್ಟು ಮತ್ತೆ ಬೇರೆ  ಸಾಲವನ್ನು ಮಾಡಲು ದಾರಿ ಮಾಡಿಕೊಡುತ್ತದೆ.  ಆದಕಾರಣ ಸಾಲವನ್ನು ಒಂದು ಮಿತಿಯಲ್ಲಿ ತೆಗೆದುಕೊಳ್ಳಬೇಕು. ಅತಿ ಅವಶ್ಯಕತೆ ಇರುವ ಸಂದರ್ಭಗಳಲ್ಲಿ ಮಾತ್ರ ಸಾಲವನ್ನು ಮಾಡಬೇಕು, ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ,  ಅದರಲ್ಲೂ ನಂಬಲಾರ್ಹ ಬ್ಯಾಂಕ್ /ಸಂಸ್ಥೆಗಳಲ್ಲಿ ಮಾತ್ರ. 

  ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಹಾಗೂ ತಾವೇ ಸಂಪಾದಿಸಿದ ಹಣದಲ್ಲಿ ಉತ್ಪನ್ನಗಳನ್ನು, ಸೇವೆಗಳನ್ನು ಕೊಳ್ಳುವುದು ಉತ್ತಮ ಆಯ್ಕೆಯಾದರು ಕೆಲವೊಮ್ಮೆ ಅತಿ ಹೆಚ್ಚು ವೆಚ್ಚದ ಗೃಹ ನಿರ್ಮಾಣ ಅಥವಾ ಹೊಸ ಉದ್ದಿಮೆ / ವ್ಯಾಪಾರದ ಆರಂಭಕ್ಕೆ ಬೇಕಾಗುವಷ್ಟು ಹಣ ಜನರ ಬಳಿ ಇರುವುದಿಲ್ಲ.  ಎಲ್ಲರಲ್ಲಿಯೂ ಅತಿದೊಡ್ಡ ಖರ್ಚಿನ ಕೆಲಸಗಳಿಗೆ ಕೂಡಿಡಲು ಸಾಧ್ಯವಾಗುವುದಿಲ್ಲ,  ಅದು ಅಲ್ಲದೆ ಹಣದುಬ್ಬರದಿಂದ, ಹಾಗೂ ದೀರ್ಘ ಕಾಲದ ಸಮಯಾವಕಾಶ ಬೇಡುವುದರಿಂದ ಸಾಲ ಪಡೆಯುವುದು ಒಳ್ಳೆಯ ನಿರ್ಧಾರವೇ ಆಗಿರುತ್ತದೆ. ಇಂತಹ ರಚನಾತ್ಮಕ ವಿಷಯಗಳಿಗೆ ತೆಗೆದುಕೊಳ್ಳುವ ಸಾಲ ಅನಿವಾರ್ಯವಾಗಿರುತ್ತದೆ ಹಾಗೂ ಅದು ಉತ್ತಮ ಭವಿಷ್ಯಕ್ಕೆ ಲಾಭದಾಯಕವಾಗಿರುತ್ತದೆ. 
ಆದರೆ ಮನೋರಂಜನೆಯ ಉದ್ದೇಶಕ್ಕಾಗಿ, ಮೋಜಿಗಾಗಿ, ಪ್ರವಾಸಕ್ಕಾಗಿ, ಪ್ರತಿಷ್ಠೆಯ ಪ್ರದರ್ಶನಕ್ಕಾಗಿ,  ದುಂದು ವೆಚ್ಚದ ಸಮಾರಂಭಗಳಿಗಾಗಿ, ಅಥವಾ ಯಾವುದೇ ಆರ್ಥಿಕ ಪ್ರಗತಿಯನ್ನು ಸಾಧಿಸದ ಕೆಲಸಗಳಿಗೆ ಸಾಲ ತೆಗೆದುಕೊಳ್ಳುವುದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಇಂತಹ ಸಾಲಗಳನ್ನು ತೆಗೆದುಕೊಳ್ಳಬಾರದು. 


ಸಾಲದ ಜೊತೆಗೆ ಬರುವ ಸಮಸ್ಯೆಗಳು:  

ಸಾಲವು ನಿಮ್ಮ ಹಲವು ಅಗತ್ಯಗಳು ಆಸೆಗಳನ್ನು ಒದಗಿಸುವ ಕೆಲಸ ಮಾಡುತ್ತವೆ, ತಾತ್ಕಾಲಿಕ ಆರ್ಥಿಕ ನೆರವು ನೀಡುತ್ತವೆ. ಆದರೆ ಜೊತೆಗೆ ಪ್ರತಿಕೂಲತೆಗಳು ಸಹ ತರುತ್ತದೆ. ಸಾಲವನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದು ಆರ್ಥಿಕ, ಮಾನಸಿಕ, ಸಾಮಾಜಿಕ ಸಂಕಷ್ಟಗಳಿಗೆ ಕಾರಣವಾಗುತ್ತದೆ.  ಅವುಗಳೇನೆಂದು ನೋಡೋಣ 

1. ಉಳಿತಾಯ ಕಡಿಮೆಯಾಗುತ್ತದೆ: ಸಾಲದ ಕಂತು ಪಾವತಿಸಲು ಆದಾಯದ ದೊಡ್ಡ ಭಾಗ 
    ಬಳಸಲ್ಪಡುವುದರಿಂದ ಉಳಿತಾಯ ಕಡಿಮೆಯಾಗುತ್ತದೆ.

2. ಹೂಡಿಕೆ ಮಾಡಲು ಸಾಧ್ಯವಾಗದಿರುವುದು: ಭವಿಷ್ಯದ ಜವಾಬ್ದಾರಿಗಳಿಗೆ, ಯೋಜನೆಗಳಿಗೆ, ಆರ್ಥಿಕ ಗುರಿಗಳಿಗೆ ಹೂಡಿಕೆ ಮಾಡುವುದು ಸಾಧ್ಯವಾಗದಿರಬಹುದು.

3. ಸಾಲದ ಬಲೆ: ಒಂದು ಸಾಲ ತೀರಿಸಲು ಮತ್ತೊಂದು ಸಾಲ ತೆಗೆದುಕೊಳ್ಳುವ ಪರಿಸ್ಥಿತಿ.

4. ಆಸ್ತಿ ಕಳೆದುಕೊಳ್ಳುವ ಅಪಾಯ: ಆಸ್ತಿ ಮೇಲಿನ ಸಾಲ ಅಥವಾ ಚಿನ್ನದ ಮೇಲಿನ ಸಾಲ 
    ತೀರಿಸಲಾಗದಿದ್ದರೆ ಆಸ್ತಿ ಕಳೆದುಕೊಳ್ಳುವ ಸಾಧ್ಯತೆಗಳು. 

5. ಮಾನಸಿಕ ಒತ್ತಡ: ದೊಡ್ಡ ಮೊತ್ತದ ಹಾಗೂ ದೀರ್ಘ ಕಾಲಿನ ಸಾಲದಿಂದಾಗಿ ಮಾನಸಿಕ ಒತ್ತಡ, ನೆಮ್ಮದಿಯ ಹಾಗೂ ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು. 

6. ಕುಟುಂಬ ಕಲಹ: ಹಣದ ಕೊರತೆಯಿಂದ ಅಗತ್ಯ ಹಾಗೂ ಆಸೆಗಳಲ್ಲಿ ರಾಜಿಮಾಡಿಕೊಂಡು ಕುಟುಂಬದಲ್ಲಿ ಅಸಮಾಧಾನ, ಅಶಾಂತಿ ಹಾಗೂ ಘರ್ಷಣೆ ಉಂಟಾಗಬಹುದು. 

7. ಸಂಬಂಧಗಳಲ್ಲಿ ಒಡಕು: ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಸಾಲದ ಪಾವತಿಯಲ್ಲಿ ಏರುಪೇರಾದರೆ ಸಂಬಂಧಗಳು ಒಡೆಯುವ ಅಥವಾ ಅಪನಂಬಿಕೆಯ ಸಾಧ್ಯತೆ.  

ಹೀಗೆ ಸಾಲವನ್ನು ಸರಿಯಾಗಿ ನಿರ್ವಹಿಸದೆ ಹೋದರೆ ಅನೇಕ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಸಾಲ ಒಂದು ಹೊರೆಯಾಗಿ ಪರಿಣಮಿಸಿ ಮನಸ್ಸಿನ ನೆಮ್ಮದಿಯನ್ನು  ಹಾಳು  ಮಾಡಿ, ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕ ಟ್ಟು ಸೃಷ್ಟಿಸಿ , ಕುಟುಂಬದ ಜೀವನ ಮಟ್ಟಕ್ಕೆ ಅಡ್ಡ ಪರಿಣಾಮ ಬೀರುತ್ತದೆ.
 

ಸಾಲವನ್ನು ತಪ್ಪಿಸುವುದು / ತಡೆಗಟ್ಟುವುದು  ಹೇಗೆ

     ಸಾಲದ ಮೂಲಕ ಎರವಲು ಪಡೆದ ಹಣ, ಕೆಲವು ಅಗತ್ಯಗಳು, ಆಸೆಗಳನ್ನು ಈಡೇರಿಸಬಹುದು ಆದರೆ ಅದು ಹೆಚ್ಚಿನ ಹೊರೆಯಾಗಿ ಅನೇಕ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಆದುದರಿಂದ ನಾವು ನಮ್ಮ ಅವಶ್ಯಕತೆಗಳ, ಆಸೆಗಳ ಈಡೇರಿಕೆಗಾಗಿ ಬೇಕಾಗುವ ಹಣವನ್ನು ಒಂದು ಪ್ರಕ್ರಿಯೆಗೆ ಒಳಪಡಿಸಿ  ಸಮರ್ಥವಾಗಿ ಸಂಪಾದಿಸಿ, ಕೂಡಿಟ್ಟು, ಹೂಡಿಕೆಯಿಂದ ಹೆಚ್ಚಿನ ಹಣ ಗಳಿಸುವುದರ ಮೂಲಕ ಬೇಕಾದ ಸೇವೆಗಳನ್ನು, ಉತ್ಪನ್ನಗಳನ್ನು ಸ್ವಂತ ಹಣದಿಂದ ಪಡೆದರೆ, ಸಾಲ ಮಾಡುವ ಸಂದರ್ಭವು ಬರುವುದಿಲ್ಲ ಅದು ಹೇಗೆಂದು ಕೆಳಗೆ ನೋಡೋಣ.

1.   ಜವಾಬ್ದಾರಿಗಳು ಹಾಗೂ ಘಟ್ಟಗಳನ್ನು ಗುರುತಿಸಿ: ನಿಮ್ಮ ಜೀವನದ ಘಟ್ಟವನ್ನು ಗುರುತಿಸಿ ನಂತರ ನಿಮ್ಮ ಜೀವನದ ಪ್ರಮುಖ ಜವಾಬ್ದಾರಿಗಳು, ಅನಿವಾರ್ಯ ಕಾರ್ಯಗಳನ್ನು ಪಟ್ಟಿ ಮಾಡುತ್ತಾ ಹೋಗಿ.
ಉದಾಹರಣೆಗೆ: ಶಿಕ್ಷಣ, ಮನೆ ನಿರ್ಮಾಣ, ಮಕ್ಕಳ ಅಭಿವೃದ್ಧಿ, ನಿವೃತ್ತಿ

2. ಯೋಜನೆ ರೂಪಿಸಿ:  ಮುಂಬರುವ ಜವಾಬ್ದಾರಿಗಳನ್ನು ನಿಭಾಯಿಸಲು ನೀವು ಆ ಜವಾಬ್ದಾರಿಯನ್ನು  ಅರ್ಥಮಾಡಿಕೊಂಡು, ಆರ್ಥಿಕವಾಗಿ ಸಂಪನ್ಮೂಲಗಳ ಅವಶ್ಯಕತೆಗಳನ್ನು ಕ್ರೂಢೀಕರಿಸುವ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿ. 

3. ಆರ್ಥಿಕ ಗುರಿ: ಗುರಿ ತಲುಪುವ ಅವಧಿಯನ್ನು ಗುರುತಿಸಿ, ಅವಧಿಗೆ ತಕ್ಕಂತೆ ಉಳಿತಾಯ ಮತ್ತು ಹೂಡಿಕೆ ಗುರಿಗಳನ್ನು ನಿಗದಿ ಮಾಡಿ ಆರ್ಥಿಕ ಗುರಿಯನ್ನು ಹಮ್ಮಿಕೊಳ್ಳಿ.  

4. ಹಲವು ಅಕೌಂಟ್ ಗಳ ಬಳಕೆ: ಉಳಿತಾಯದ ಹಣ ಕೂಡಿಹಾಕಲು  ಹಲವು ಅಕೌಂಟ್ ಗಳನ್ನು ಬಳಸುವುದು ಉತ್ತಮ. ವಿವಿಧ ಎಫ್ ಡಿ ಗಳಲ್ಲಿ ವಿವಿಧ ಉದ್ದೇಶಗಳಿಗೆ ಹಣವನ್ನು ಗಂಟು ಕಟ್ಟುವುದು ಬುದ್ಧಿವಂತಿಕೆಯ ಕೆಲಸ.  

ಸಾಮಾನ್ಯವಾಗಿ ಸಾಲ ತೆಗೆದುಕೊಳ್ಳುವ ಕಾರಣಗಳೆಂದರೆ ಮನೆ ನಿರ್ಮಾಣ, ಕಾರ್, ದ್ವಿಚಕ್ರ ವಾಹನ ಕೊಳ್ಳುವುದು, ದುಬಾರಿ ಉತ್ಪನ್ನಗಳ ಮೊಬೈಲ್, ಟಿವಿ, ಫ್ರಿಡ್ಜ್ ಇತ್ಯಾದಿ. 
 
  ಹೀಗೆ ಗುರಿಗಳ ಮೂಲಕ ನಾವು ನಮ್ಮ ಖರ್ಚು ವೆಚ್ಚದ ಅವಶ್ಯಕತೆಗಳನ್ನು ಈಡೇರಿಸಿ ಕೊಂಡು ಸಾಲವನ್ನು ತಪ್ಪಿಸಬೇಕು. 

ಸಾಲ ಪಡೆಯುವ ಮುನ್ನ ಗಮನದಲ್ಲಿ ಇರಿಸಬೇಕಾದ ಅಂಶಗಳು:

    ಸಾಲವು ಕೆಲವೊಮ್ಮೆ ಅನಿವಾರ್ಯವಾಗಿರುತ್ತದೆ ಆದರೆ ಅನಿವಾರ್ಯವೆಂದು ನಾವು ಅದರ ವ್ಯತಿರಿಕ್ತ ಪರಿಣಾಮಗಳಿಂದ ರಕ್ಷಿಸಿ ಕೊಳ್ಳಬೇಕು. ಅದಕ್ಕಾಗಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿ ಇರಿಸಬೇಕು.  

1. ಅಗತ್ಯಕ್ಕೆ ಮಾತ್ರ ಸಾಲ: ಸಾಲವನ್ನು ಕೇವಲ ಅಗತ್ಯಗಳಿಗೆ ಮಾತ್ರ ತೆಗೆದುಕೊಳ್ಳಿ 

2ಬ್ಯಾಂಕ್ ಮತ್ತು ಸಾಲದ ಬಗ್ಗೆ ಮಾಹಿತಿ: ಬ್ಯಾಕ್ ಬಡ್ಡಿ ದರ, ಬಡ್ಡಿ ದರ ನಿಯಮಗಳು, ಮರು ಪಾವತಿಯ ನಿಯಮಗಳು, ಸಾಲ ಪ್ರಕ್ರಿಯೆ ಶುಲ್ಕ, ಕಾನೂನು ಮತ್ತು ಮೌಲ್ಯಮಾಪನ ಶುಲ್ಕ, MODT ಶುಲ್ಕ, ವಿಮಾ ಶುಲ್ಕ, GST ತೆರಿಗೆ ಹೀಗೆ  ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ. 

3.  ಸುಲಭ ಮರು ಪಾವತಿ:  ಸಾಲದ ಮರುಪಾವತಿಯ ನಿಯಮಗಳು ಸುಲಭ ಮರುಪಾವತಿಗೆ ಅವಕಾಶ ಕೊಡುವಂತೆ ಇರಲಿ 

4. ಸಾಲದ ಕಂತಿನ ಮಿತಿ: ಸಾಲದ ಕಂತು ನಿಮ್ಮ ಆದಾಯದ ಶೇಕಡಾ 30% ಅನ್ನು ಮೀರಬಾರದು. 

5. ಸಾಲದ ಅವಧಿ: ಸಾಲದ ಅವಧಿ ಆದಷ್ಟು ಕಡಿಮೆ ಇರಲಿ, ಇದರಿಂದ ಬಡ್ಡಿ ಕಡಿಮೆಯಾಗಿ ಹಣದ  ಉಳಿತಾಯವಾಗುತ್ತದೆ. 

6. ಹೆಚ್ಚುವರಿ ಮರುಪಾವತಿಗೆ ಹಣ:  ಸಾಲದ ಹೊರೆ ತಪ್ಪಿಸಲು ಭಾಗಶಃ ಮರು ಪಾವತಿಗೆ ಪ್ರತ್ಯೇಕ ಬಜೆಟ್ ಎತ್ತಿಡಿ. 
 


ವೇಗವಾಗಿ ಸಾಲ ತೀರಿಸುವ ವಿಧಾನ:  

         ಸಾಲವನ್ನು ಹೆಚ್ಚು ದಿನ ಉಳಿಸಿಕೊಂಡು ಹೆಚ್ಚಿನ ಬಡ್ಡಿಯನ್ನು ಕೊಟ್ಟು ನಾವು ಸಂಪಾದಿಸಿದ ಹಣವನ್ನು ಬಡ್ಡಿಗೆ ಕಳೆದ ಕೊಳ್ಳಬೇಕಾಗುತ್ತದೆ. ಆದುದರಿಂದ ಆದಷ್ಟು ಬೇಗ ಸಾಲವನ್ನು ತೀರಿಸುವುದು ಬುದ್ಧಿವಂತಿಕೆ ಆಯ್ಕೆ. ಅದನ್ನು ಹೇಗೆ ಮಾಡಬೇಕೆಂದು ಈ ಕೆಳಗೆ ನೋಡೋಣ.

1. ಮೊಟ್ಟ ಮೊದಲನೆಯದಾಗಿ ಸಾಲದ ಕಂತು ನಿಮ್ಮ ಆದಾಯದ ಶೇಕಡ 30% ನ್ನು ದಾಟಬಾರದು. ಇದರಿಂದ ಬೇರೆ ಖರ್ಚುಗಳಿಗೆ ಹಣ ಇರುತ್ತದೆ. 

2. ಭಾಗಶಃ ಪೂರ್ವ ಪಾವತಿ ಮಾಡಲು ಶೇಕಡಾ 10% ರಷ್ಟು ಹಣವನ್ನು ನಿಮ್ಮ ಬಜೆಟ್ ನಲ್ಲಿ  ಮೀಸಲಿಡಬೇಕು.  

3. ಪ್ರತಿ ತಿಂಗಳು ಕಂತಿನ ಶೇಕಡಾ 10%  ಅಥವಾ ಯಾವುದೇ ಚಿಕ್ಕಪುಟ್ಟ ಭಾಗವನ್ನಾದರೂ  ನೇರವಾಗಿ ಪೂರ್ವ ಪಾವತಿ ಮಾಡಿ. 

4. ಸಾಲದ ಹೊರೆ ಹೆಚ್ಚು ಇದ್ದಲ್ಲಿ, Side hustle, freelance ಕೆಲಸ, consulting ಮೂಲಕ ಹೆಚ್ಚುವರಿ ಆದಾಯ ಗಳಿಸಿ. 

5. ಸಾಲದಿಂದ ತೀರಾ ಇಕ್ಕಟ್ಟಾದ ಪರಿಸ್ಥಿತಿ ಇದ್ದರೆ, ದಂಪತಿಗಳಿಬ್ಬರು ಸಂಪಾದನೆ ಮಾಡುವುದು ಉತ್ತಮವಾದ ಮಾರ್ಗ. 

ಸಾಲ ಮರು ಪಾವತಿಸಲು ಎರಡು ವಿಧಾನಗಳನ್ನು ಆರ್ಥಿಕ ತಜ್ಞರು ರೂಪಿಸಿ ಸಲಹೆಯನ್ನು ಇಟ್ಟಿದ್ದಾರೆ. ಅವು ಈ ಕೆಳಕಂಡಂತೆ ಇವೆ. ಅವುಗಳೆಂದರೆ 
1. Debt Snowball ವಿಧಾನ
2. Debt Avalanche ವಿಧಾನ
  ಇವುಗಳು ಏನೆಂದು ವಿವರಣೆಯೊಂದಿಗೆ ತಿಳಿಯೋಣ.  

Debt Snowball ವಿಧಾನ:  
    ಮೊಟ್ಟಮೊದಲನೆಯದಾಗಿ Snowball ಹೇಗೆ ಆಗುತ್ತದೆ ಎಂಬುದನ್ನು ತಿಳಿಯೋಣ. ಒಂದು ಮಂಜಿನ ಉಂಡೆಯನ್ನು ಬೆಟ್ಟದ ಮೇಲಿನಿಂದ ಉರುಳಿ ಬಿಟ್ಟರೆ, ಅದು ಸುತ್ತುತ್ತ ಇನ್ನು ಹೆಚ್ಚಿನ ಮಂಜನ್ನು ಸೇರಿಸುತ್ತಾ ದೊಡ್ಡ ಉಂಡೆಯಾಗಿ ಬದಲಾಗುತ್ತದೆ, ಅಂದರೆ ಚಿಕ್ಕದರಿಂದ ದೊಡ್ಡದು. ಇದು Debt Snowball. 
   ಒಂದು ವೇಳೆ ನಿಮಗೆ ಹಲವಾರು ಸಾಲಗಳು ಇದ್ದಲ್ಲಿ, Debt Snowball ವಿಧಾನ ಉಪಯೋಗಿಸಬಹುದು. ಇದರಲ್ಲಿ ನೀವು ಕಡಿಮೆ ಮೊತ್ತದ ಸಾಲವನ್ನು ಮೊದಲಾಗಿಸಿ ಸಾಲಗಳನ್ನು ಒಂದೊಂದಾಗಿ ತೀರಿಸುತ್ತಾ ಬರಬೇಕು. ಉದಾಹರಣೆಗೆ ನಿಮಗೆ 50 ಸಾವಿರ, 2 ಲಕ್ಷದ, 30 ಲಕ್ಷದ ಒಟ್ಟು 3 ಸಾಲ ಗಳಿದ್ದಲ್ಲಿ, ನೀವು ಸಣ್ಣ ಮೊತ್ತದ 50 ಸಾವಿರ ರೂಪಾಯಿಯ ಸಾಲವನ್ನು ಮೊದಲು ಪಾವತಿಸಬೇಕು ನಂತರ ಹೆಚ್ಚಿನ ಮೊತ್ತದ ಹಣವನ್ನು ಗುರಿಯಾಗಿಸಬೇಕು. ಅಂದರೆ ಚಿಕ್ಕದರಿಂದ ದೊಡ್ಡ ಸಾಲವನ್ನು ಮರು ಪಾವತಿಸುತ್ತಾ ಹೋಗುವುದು.
    ಇದರಿಂದ ಸಾಲಗಳ ಸಂಖ್ಯೆ ಬೇಗನೆ ತೀರುತ್ತ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಹಾಗೂ ಒಂದು ವಿಧಾನ ಅಳವಡಿಸುವುದರಿಂದ ಸಾಲ ತೀರಿಸುವ ಸ್ಪಷ್ಟತೆ ನಿಮಗೆ ಮರು ಪಾವತಿಗೆ ನಿಶ್ಚಿತ ರೂಪ ಕೊಡುತ್ತದೆ.
 
Debt Avalanche ವಿಧಾನ:
      ಮೊಟ್ಟಮೊದಲನೆಯದಾಗಿ Avalanche ಎಂದರೇನು ಎಂಬುದನ್ನು ತಿಳಿಯೋಣ. Avalanche ಎಂದರೆ ಹಿಮಕುಸಿತ, ಅಂದರೆ ಪರ್ವತ ತುದಿಯಲ್ಲಿ ಅಪಾರ ಹಿಮರಾಶಿಯ ಸೇರಿದ್ದು, ಒಮ್ಮೆಲೇ ಆ ಹಿಮರಾಶಿ ಕುಸಿದು, ಪರ್ವತದ ಕೆಳಗೆ ಜಾರಿ ಆ ಹಿಮವು ಹಂಚಿ ಹೋಗಿ ಆ ರಾಶಿಯು ಚಿಕ್ಕದಾಗುತ್ತದೆ ಇದೆ Avalanche
     ಒಂದು ವೇಳೆ ನಿಮಗೆ ಹಲವಾರು ಸಾಲಗಳು ಇದ್ದಲ್ಲಿ, Debt Avalanche ವಿಧಾನ ಉಪಯೋಗಿಸಬಹುದು. ಇದರ ಪ್ರಕಾರ ದೊಡ್ಡ ಬಡ್ಡಿದರದ ಸಾಲವನ್ನು ಮೊದಲಾಗಿಸಿ ಸಾಲಗಳನ್ನು ಒಂದೊಂದಾಗಿ ಮರುಪಾವತಿಸಿ ತೀರಿಸುತ್ತಾ ಬರುವುದು. ಉದಾಹರಣೆಗೆ ನಿಮ್ಮ ಬಳಿ 3 ಸಾಲಗಳಿದ್ದು ಒಂದು ಸಾಲಕ್ಕೆ 10.5 % ಬಡ್ಡಿ ದರವಿದ್ದು, ಎರಡನೆಯದಕ್ಕೆ 9.5% ಬಡ್ಡಿ ದರ ಹಾಗೂ ಮೂರನೆಯದಕ್ಕೆ 8.25% ಬಡ್ಡಿ ದರ ವಿದ್ದಲ್ಲಿ, ನೀವು ಅತಿ ಹೆಚ್ಚು ಬಡ್ಡಿ ದರ ವಿರುವ ಸಾಲವನ್ನು ಮೊದಲು ತೀರಿಸಿ. ಅದಕ್ಕಿಂತಲೂ ಕಡಿಮೆ ಬಡ್ಡಿ ದರದ ಸಾಲವನ್ನು ಇಳಿಮುಖದ ದರದಲ್ಲಿ ತೀರಿಸುತ್ತಾ ಬರಬೇಕು ಇದು  Debt Avalanche ವಿಧಾನ. 
    ಈ ವಿಧಾನದಿಂದ ಬಡ್ಡಿ ಕಟ್ಟುವ ಹಣದ ಉಳಿತಾಯವಾಗುತ್ತದೆ. ಹೆಚ್ಚಿನ ಬಡ್ಡಿ ದರದ 
ಸಾಲವನ್ನು ಮೊದಲು ತೀರಿಸುತ್ತಾ ಬರುವುದರಿಂದ ಹೆಚ್ಚಿನ ಬಡ್ಡಿ ಕಟ್ಟುವುದನ್ನು ತಪ್ಪಿಸಿ ಹಣದ ಉಳಿತಾಯವನ್ನು ಈ ವಿಧಾನದ ಮೂಲಕ ಮಾಡಬಹುದು. 
   

ವಿವಿಧ ರೀತಿಯ ಸಾಲಗಳು:     

1. ಸುರಕ್ಷಿತ ಸಾಲಗಳು (ಮೇಲಾಧಾರದ ಬೆಂಬಲದೊಂದಿಗೆ) 

ಗೃಹ ಸಾಲಗಳು: ಆಸ್ತಿಯನ್ನು ಖರೀದಿಸಲು, ನಿರ್ಮಿಸಲು ಅಥವಾ ನವೀಕರಿಸಲು ಬಳಸಲಾಗುವ ದೀರ್ಘಾವಧಿಯ ಸಾಲಗಳು, ಅಲ್ಲಿ ಆಸ್ತಿಯು ಮೇಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ. 

ವಾಹನ ಸಾಲಗಳು: ದ್ವಿಚಕ್ರ ವಾಹನಗಳು ಅಥವಾ ನಾಲ್ಕು ಚಕ್ರಗಳ ವಾಹನಗಳನ್ನು ಖರೀದಿಸಲು ನಿರ್ದಿಷ್ಟ ಸಾಲಗಳು, ಅಲ್ಲಿ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸುವವರೆಗೆ ವಾಹನವು ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ. 

ಚಿನ್ನದ ಸಾಲಗಳು: ಹಣಕ್ಕೆ ಬದಲಾಗಿ ನೀವು ಚಿನ್ನದ ಆಭರಣಗಳು ಅಥವಾ ನಾಣ್ಯಗಳನ್ನು ಒತ್ತೆ ಇಡುವ ತ್ವರಿತ ಪ್ರವೇಶ ಸಾಲಗಳು. 

ಸ್ಥಿರ ಠೇವಣಿಗಳ ಮೇಲೆ ಸಾಲ (FD) / ಭದ್ರತೆಗಳು: ನಿಮ್ಮ FD, ಮ್ಯೂಚುಯಲ್ ಫಂಡ್‌ಗಳು ಅಥವಾ ಷೇರುಗಳನ್ನು ಬೆಂಬಲವಾಗಿ ಬಳಸಿಕೊಂಡು ನಿಮ್ಮ ಹೂಡಿಕೆಗಳನ್ನು ಮುರಿಯದೆ ಹಣವನ್ನು ಎರವಲು ಪಡೆಯಲು ನಿಮಗೆ ಅನುಮತಿಸುತ್ತದೆ.

  
2. ಅಸುರಕ್ಷಿತ ಸಾಲಗಳು (ಕ್ರೆಡಿಟ್ ಮತ್ತು ಆದಾಯದ ಆಧಾರದ ಮೇಲೆ) 

ವೈಯಕ್ತಿಕ ಸಾಲಗಳು: ಯಾವುದೇ ಮೇಲಾಧಾರ ಅಗತ್ಯವಿಲ್ಲದ ಬಹುಮುಖ ಸಾಲಗಳು. ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಪ್ರಯಾಣ, ಮದುವೆಗಳು ಅಥವಾ ಸಾಲ ಕ್ರೋಢೀಕರಣದಂತಹ ವಿವಿಧ ವೈಯಕ್ತಿಕ ವೆಚ್ಚಗಳಿಗೆ ಅವುಗಳನ್ನು ಬಳಸಬಹುದು. 

ಶಿಕ್ಷಣ ಸಾಲಗಳು: ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಉನ್ನತ ಅಧ್ಯಯನಗಳಿಗೆ ಹಣಕಾಸು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಬೋಧನೆ, ಪ್ರಯಾಣ ಮತ್ತು ಜೀವನ ವೆಚ್ಚಗಳನ್ನು ಒಳಗೊಂಡಿರುತ್ತದೆ. ಅವರು ಸಾಮಾನ್ಯವಾಗಿ ಕೋರ್ಸ್ ಮುಗಿದ ನಂತರ ಮರುಪಾವತಿ ಪ್ರಾರಂಭವಾಗುವ ನಿಷೇಧದ ಅವಧಿಯನ್ನು ನೀಡುತ್ತಾರೆ. 

ಕ್ರೆಡಿಟ್ ಕಾರ್ಡ್ ಸಾಲಗಳು: ಅಲ್ಪಾವಧಿಯ ಅಸುರಕ್ಷಿತ ಕ್ರೆಡಿಟ್ ನಿಮಗೆ ದೊಡ್ಡ ಖರೀದಿಗಳನ್ನು ಸುಲಭ ಮಾಸಿಕ ಕಂತುಗಳಾಗಿ (EMI) ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.


3. ವ್ಯಾಪಾರ ಸಾಲಗಳು 

ಕಾರ್ಯನಿರತ ಬಂಡವಾಳ ಸಾಲಗಳು: ವ್ಯವಹಾರದಲ್ಲಿ ದೈನಂದಿನ ಕಾರ್ಯಾಚರಣೆ ವೆಚ್ಚಗಳು, ದಾಸ್ತಾನು ಅಥವಾ ನಗದು ಹರಿವಿನ ಏರಿಳಿತಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.

ವ್ಯಾಪಾರ ವಿಸ್ತರಣಾ ಸಾಲಗಳು: ಉದ್ಯಮಿಗಳು ತಮ್ಮ ಕಾರ್ಯಾಚರಣೆಗಳನ್ನು ಅಳೆಯಲು, ಹೊಸ ಉಪಕರಣಗಳನ್ನು ಖರೀದಿಸಲು ಅಥವಾ ಹೊಸ ಸ್ಥಳಗಳಿಗೆ ವಿಸ್ತರಿಸಲು ಸಹಾಯ ಮಾಡಲು ಸುರಕ್ಷಿತ ಅಥವಾ ಅಸುರಕ್ಷಿತವಾಗಿ ನೀಡಲಾಗುತ್ತದೆ.
  

 4. ಗ್ರಾಹಕ ಬಾಳಿಕೆ ಬರುವ ಸಾಲಗಳು ಗ್ರಾಹಕ ಬಾಳಿಕೆ ಬರುವ ಸಾಲಗಳು: ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು (ಉದಾ. ಟೆಲಿವಿಷನ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳು) ಖರೀದಿಸಲು ನಿಮಗೆ ಸಹಾಯ ಮಾಡಲು ನಿರ್ದಿಷ್ಟವಾಗಿ ಅಲ್ಪಾವಧಿಯ ಹಣಕಾಸು.

       



Thursday, June 11, 2026

ಆರ್ಥಿಕ ಗುರಿಗಳು

ಆರ್ಥಿಕ ಗುರಿಗಳು 



     ಮನುಷ್ಯನ ಜೀವನವು ಹುಟ್ಟಿನಿಂದ ಸಾವಿನವರೆಗೂ ಅನೇಕ ಸಂದರ್ಭಗಳು ಮತ್ತು ಘಟ್ಟಗಳಿಂದ ಕೂಡಿದೆ. ಪ್ರತಿಯೊಂದು ಹಂತವೂ ತನ್ನದೇ ಆದ ಆರ್ಥಿಕ ಹೊರೆಗಳನ್ನು ತರುತ್ತದೆ. ನಾವು ಗಮನಿಸಿದರೆ, ಜೀವನದ ಕಾಲಮಾನದಲ್ಲಿ ಎದುರಾಗುವ ಪ್ರಮುಖ ಘಟನೆಗಳು — ಉನ್ನತ ಶಿಕ್ಷಣ, ನಿಶ್ಚಿತಾರ್ಥ ಮತ್ತು ವಿವಾಹ, ಹೊಸ ಕುಟುಂಬಕ್ಕೆ ಮನೆ, ಸೀಮಂತ ಮತ್ತು ಹೆರಿಗೆ, ನಾಮಕರಣ, ಮಗುವಿನ ಹುಟ್ಟುಹಬ್ಬ, ವಾಹನ ಖರೀದಿ (ಸ್ಕೂಟರ್, ಕಾರು), ಸ್ವಂತ ಮನೆ ನಿರ್ಮಾಣ, ನಿವೃತ್ತಿ ಪಿಂಚಣಿ, ಆರ್ಥಿಕ ಸಂಕಷ್ಟಗಳು, ಅನಾರೋಗ್ಯ, ಹಾಗೂ ಪೂಜೆ-ಹಬ್ಬಗಳು — ಇವೆಲ್ಲವೂ ದೊಡ್ಡ ಮಟ್ಟದ ಖರ್ಚುಗಳನ್ನು ಮುಂದಿರಿಸುತ್ತವೆ.

ಈ ಖರ್ಚುಗಳನ್ನು ನಿಭಾಯಿಸುವುದು ಕೇವಲ ಆಯ್ಕೆಯಲ್ಲ, ಅದು ನಮ್ಮ ಅನಿವಾರ್ಯ ಕರ್ತವ್ಯ ಮತ್ತು ಗುರಿ. ಆದ್ದರಿಂದ, ಇಂತಹ ದೊಡ್ಡ ಮೊತ್ತದ ವೆಚ್ಚಗಳನ್ನು ಹೇಗೆ ಯೋಜಿಸಿ, ಕಾರ್ಯತತ್ಪರವಾಗಿ ನಿಭಾಯಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಪೂರ್ವಸಿದ್ಧತೆ ಮತ್ತು ಪ್ರಜ್ಞೆ:

ಜೀವನದಲ್ಲಿ ಈ ಹಂತಗಳು ಹೊಸದಲ್ಲ. ನಾವು ಪ್ರತಿದಿನ ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಇಂತಹ ಘಟನೆಗಳನ್ನು ನೋಡುತ್ತೇವೆ, ಕೇಳುತ್ತೇವೆ. ನಮ್ಮ ಜೀವನದಲ್ಲೂ ಅವು ಬರುವುದನ್ನು ಅರಿತಿದ್ದೇವೆ. ಆದ್ದರಿಂದ, ಇದು ಕೇವಲ ಸಾಮಾನ್ಯ ಪ್ರಜ್ಞೆ ಮಾತ್ರವಲ್ಲ, ಆರ್ಥಿಕ ಪೂರ್ವಸಿದ್ಧತೆ ಅಗತ್ಯವಿರುವ ವಿಷಯ.

  • ಘಟನೆಗಳನ್ನು ಗುರುತಿಸುವುದು: ಜೀವನದಲ್ಲಿ ಎದುರಾಗುವ ಪ್ರಮುಖ ಹಂತಗಳನ್ನು ಸ್ಪಷ್ಟವಾಗಿ ಗುರುತಿಸಬೇಕು.

  • ಗುರಿಗಳಾಗಿ ಪರಿಗಣಿಸುವುದು: ಇವುಗಳನ್ನು ಕೇವಲ ಸಂದರ್ಭಗಳೆಂದು ನೋಡದೆ, ಆರ್ಥಿಕ ಗುರಿಗಳಾಗಿ ಪರಿಗಣಿಸಬೇಕು.

  • ಪೂರ್ವಸಿದ್ಧತಾ ಕಾರ್ಯಕ್ರಮ: ಪ್ರತಿಯೊಂದು ಹಂತಕ್ಕೂ ಮುಂಚಿತವಾಗಿ ಯೋಜನೆ ರೂಪಿಸಿ, ಸಂಪನ್ಮೂಲಗಳನ್ನು ಒಗ್ಗೂಡಿಸಿ, ಕಾರ್ಯಪ್ರವೃತ್ತರಾಗಬೇಕು.


ಆರ್ಥಿಕ ಗುರಿಗಳ ವರ್ಗೀಕರಣ ಮತ್ತು ಯೋಜನೆ: 

ಜೀವನದ ವಿವಿಧ ಹಂತಗಳಲ್ಲಿ ಎದುರಾಗುವ ಆರ್ಥಿಕ ಗುರಿಗಳನ್ನು ಸಾಧಿಸಲು ಅವುಗಳನ್ನು ಸಮಯಾವಧಿ ಆಧಾರಿತವಾಗಿ ಮೂರು ವರ್ಗಗಳಲ್ಲಿ ವಿಂಗಡಿಸಬಹುದು:

  1. ಅಲ್ಪಾವಧಿಯ ಆರ್ಥಿಕ ಗುರಿಗಳು

  2. ಮಧ್ಯಾವಧಿಯ ಆರ್ಥಿಕ ಗುರಿಗಳು

  3. ದೀರ್ಘಾವಧಿಯ ಆರ್ಥಿಕ ಗುರಿಗಳು

ಪ್ರತಿಯೊಂದು ಗುರಿಯನ್ನು ರೂಪಿಸುವಾಗ ಈ ಕೆಳಗಿನ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬೇಕು:

  • ಗುರಿಯ ಹೆಸರು

  • ತಿಂಗಳ ಹೂಡಿಕೆಯ ಮೊತ್ತ

  • ಸಾಧಿಸಬೇಕಾದ ಒಟ್ಟು ಹಣದ ಮೊತ್ತ

  • ಬಳಸುವ ಆರ್ಥಿಕ ಸಾಧನ

  • ಗುರಿ ಸಾಧಿಸುವ ಕಾಲಾವಧಿ

  • ಗುರಿ ಸಾಧಿಸಬೇಕಾದ ನಿಖರ ದಿನಾಂಕ

1. ಅಲ್ಪಾವಧಿಯ ಆರ್ಥಿಕ ಗುರಿಗಳು (1–3 ವರ್ಷ)

ಈ ವರ್ಗದಲ್ಲಿ ಒಂದರಿಂದ ಮೂರು ವರ್ಷಗಳೊಳಗೆ ಸಾಧಿಸಬಹುದಾದ ಗುರಿಗಳು ಬರುತ್ತವೆ.

  • ಉದಾಹರಣೆಗಳು: ದುಬಾರಿ ಉತ್ಪನ್ನಗಳ ಖರೀದಿ ಅಥವಾ ದುರಸ್ತಿ, ತುರ್ತು ನಿಧಿ (Emergency Fund), ಚಿಕ್ಕ ಸಾಲದ ಮರುಪಾವತಿ, ಮಕ್ಕಳ ಶಾಲಾ ಶುಲ್ಕ, ವಿಮೆ ಪ್ರೀಮಿಯಂ ಪಾವತಿ, ಪೂಜೆಗಳು ಮತ್ತು ಕುಟುಂಬ ಸಮಾರಂಭಗಳು.

  • ಹೂಡಿಕೆ ಸಾಧನಗಳು:

    • ಬ್ಯಾಂಕ್ ರಿಕರಿಂಗ್ ಡೆಪಾಸಿಟ್ ( ಆರ್ ಡಿ )

    • ಅಲ್ಪಾವಧಿಯ ಮ್ಯೂಚುಯಲ್ ಫಂಡ್ SIP

2. ಮಧ್ಯಾವಧಿಯ ಆರ್ಥಿಕ ಗುರಿಗಳು (3–10 ವರ್ಷ)

ಈ ವರ್ಗದಲ್ಲಿ ಮೂರು ವರ್ಷಗಳಿಂದ ಹತ್ತು ವರ್ಷಗಳೊಳಗೆ ಸಾಧಿಸಬಹುದಾದ ಗುರಿಗಳು ಬರುತ್ತವೆ.

  • ಉದಾಹರಣೆಗಳು: ವಿವಾಹ ವೆಚ್ಚ, ಮನೆ ಅಥವಾ ನಿವೇಶನ corpus (down payment), ಕಾರು ಖರೀದಿ, ದೇಶ/ವಿದೇಶ ಪ್ರವಾಸ, ವ್ಯಾಪಾರ ಅಥವಾ ವ್ಯವಹಾರದ ಆರಂಭ.

  • ಹೂಡಿಕೆ ಸಾಧನಗಳು:

    • ಮ್ಯೂಚುಯಲ್ ಫಂಡ್ SIP

    • ಬ್ಯಾಂಕ್ ರಿಕರಿಂಗ್ ಡೆಪಾಸಿಟ್ ( ಆರ್ ಡಿ )

    • ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ( ಎಫ್ ಡಿ )

3. ದೀರ್ಘಾವಧಿಯ ಆರ್ಥಿಕ ಗುರಿಗಳು (10–30 ವರ್ಷ)

ಈ ವರ್ಗದಲ್ಲಿ ಹತ್ತು ವರ್ಷಗಳಿಂದ ಮೂವತ್ತು ವರ್ಷಗಳೊಳಗೆ ಸಾಧಿಸಬಹುದಾದ ಗುರಿಗಳು ಬರುತ್ತವೆ.

  • ಉದಾಹರಣೆಗಳು: ನಿವೃತ್ತಿ ನಿಧಿ, ಮಕ್ಕಳ ಉನ್ನತ ವಿದ್ಯಾಭ್ಯಾಸ , ಗೃಹ ಸಾಲದ ಮರುಪಾವತಿ.

  • ಹೂಡಿಕೆ ಸಾಧನಗಳು:

    • ಇಕ್ವಿಟಿ ಮ್ಯೂಚುಯಲ್ ಫಂಡ್ 

    • ಉದ್ಯೋಗಿ ಭವಿಷ್ಯ ನಿಧಿ ( ಇಪಿಎಫ್ )

    • ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್ )

    • ನ್ಯಾಷನಲ್ ಪೆನ್ಶನ್ ಸಿಸ್ಟಮ್ (ಎನ್ ಪಿ ಎಸ್)

    • ಜೀವ ವಿಮೆಯ ಆನ್ಯೂಟಿ ಪ್ಲಾನ್ಸ್

    • ಸಿಸ್ಟಮ್ಯಾಟಿಕ್ ವಿತ್ ಡ್ರಾವಲ್ ಪ್ಲಾನ್ ( ಎಸ್ ಡಬ್ಲ್ಯೂ ಪಿ )


.

Sunday, April 19, 2026

ವೈಯಕ್ತಿಕ ಹಣಕಾಸು ಯೋಜನೆ

  ವೈಯಕ್ತಿಕ ಹಣಕಾಸು ಯೋಜನೆ


 




  
    ಜೀವನದಲ್ಲಿ ಅತಿ ಪ್ರಮುಖ ವಿಷಯಗಳ ಭದ್ರತೆಗಾಗಿ, ರಕ್ಷಣೆಗಾಗಿ ಹಾಗೂ ನಮ್ಮ ಅಭಿವೃದ್ಧಿಗಾಗಿ ನಾವು ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಹಣಕಾಸು ಯೋಜನೆಗಳನ್ನು ಹಾಕಿಕೊಳ್ಳದೇ ಹೋದರೆ ನಮ್ಮ ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗಿ ಸಾಲಗಳ ಸರಣಿ ಶುರುವಾಗುತ್ತದೆ. ಮನೆಯಲ್ಲಿಯೇ ಅವಶ್ಯಕತೆಗಳಿಗೆ ಅಸಮಾಧಾನ, ಮನಸ್ತಾಪ, ಸಂಘರ್ಷಗಳು ನಡೆದು ಹೋಗುತ್ತದೆ. ನಿಮ್ಮ ಅವಶ್ಯಕತೆಗಳು ಆಸೆಗಳು ಅದನ್ನು ಪೂರೈಸುವ ಆರ್ಥಿಕತೆಯನ್ನು ನಿಭಾಯಿಸಲು ಹಣಕಾಸು ಯೋಜನೆಗಳು ಅತ್ಯಗತ್ಯ . ಇದರ ಅಡಿಯಲ್ಲಿ ಒಂದು ವೈಯಕ್ತಿಕ ಹಣಕಾಸು ಯೋಜನೆ ಹಾಕಿಕೊಳ್ಳುವುದು ಬಹುಮುಖ್ಯವಾದ ವಿಷಯ ವಾಗುತ್ತದೆ. ಆದುದರಿಂದ ನಾವು ಕೆಳಕಂಡಂತೆ ಒಂದು ಹಣಕಾಸು ಯೋಜನೆಯನ್ನು ಹಮ್ಮಿಕೊಳ್ಳಬೇಕು ಹಾಗೂ ಹಂತ ಹಂತವಾಗಿ ಅದನ್ನು ಸಾಧಿಸಬೇಕು. ಇದರಿಂದ ಆರ್ಥಿಕ ಸಂಘರ್ಷಗಳು ಕಡಿಮೆಯಾಗಿ ಜೀವನವು ಸುಲಲಿತವಾಗಿ ಸಾಗುತ್ತದೆ.


1ಉಳಿತಾಯ:  

       ಈಗಿನ ಕಾಲದಲ್ಲಿ ಮನೆಯಲ್ಲಿ ಹಲವು ಗೃಹಪಯೋಗಿ ವಸ್ತುಗಳು ಬಳಕೆಯಾಗುತ್ತದೆ. ಇಂತಹ ಹಲವು ಉತ್ಪನ್ನಗಳು ದುಬಾರಿಯಾಗಿದ್ದು, ಅಷ್ಟೇ ಅಲ್ಲದೆ ಅವುಗಳ ದುರಸ್ತಿ ಕೂಡ ದುಬಾರಿಯಾಗಿರುತ್ತವೆ. ಇಂತಹ ಉತ್ಪನ್ನಗಳು ನಮ್ಮನ್ನು ಸಾಲಕ್ಕೆ ದೂಡುತ್ತವೆ. ಎಷ್ಟೋ ಬಾರಿ ಖರೀದಿ ಮಾಡಲು ಹೋದಾಗ ಕಂತಿನ ಮೇಲೆ ಸಾಲವನ್ನು ಮಾಡುತ್ತೇವೆ.  ಅದನ್ನು ಒಂದರಿಂದ ಮೂರು ವರ್ಷಗಳ ತನಕ ಸಮಯ ಕಳೆದುಕೊಂಡು ತೀರಿಸುತ್ತೇವೆ. ಹೀಗೆ ನಮ್ಮ ಅನುಭವದಿಂದ ಹಾಗೂ ನಾವು ಕಂಡ ಪ್ರಪಂಚದಲ್ಲಿ ದುಬಾರಿ ವಸ್ತುಗಳಾದ ಮೊಬೈಲ್ ಫೋನ್, ಫ್ರಿಡ್ಜ್, ಟಿವಿ, ದ್ವಿಚಕ್ರ ವಾಹನಗಳು, ಲ್ಯಾಪ್ ಟಾಪ್ ಹೀಗೆ ಹಲವು ವಸ್ತುಗಳಿಗೆ ನಾವು ಸಾಲವನ್ನು ತೆಗೆದುಕೊಳ್ಳುತ್ತೇವೆ. ಈ ಸನ್ನಿವೇಶಗಳು ನಮಗೆ ತಿಳಿದಿರುವುದರಿಂದ, ಇವುಗಳನ್ನು ನಿಭಾಯಿಸುವ ಬುದ್ಧಿವಂತಿಕೆಯನ್ನು  ಪ್ರದರ್ಶಿಸಬೇಕು. ಇದನ್ನು ತಡೆಗಟ್ಟಲು ನಾವು ಕನಿಷ್ಠ ಎರಡು ಲಕ್ಷದವರೆಗೆ ಹಣವನ್ನು ಉಳಿತಾಯ ಮಾಡಿ ಸಂಗ್ರಹಿಸಬೇಕು. 

    ಸಂದರ್ಭಕ್ಕೆ ಅನುಸಾರವಾಗಿ ಹಲವು ಬಾರಿ  ಖರೀದಿಗಳು ನಡೆಯುತ್ತಿರುತ್ತದೆ, ಜೊತೆಗೆ  ಖರೀದಿಸಿದ ಹಳೆಯ ಉತ್ಪನ್ನಗಳ ದುರಸ್ತಿಯನ್ನು ಮಾಡಿಸುತ್ತಿರಬೇಕು ಹಾಗಾಗಿ ಈ ಹಣದ ಮೊತ್ತವನ್ನು ಖರ್ಚು ಆದಂತೆ ಪುನಃ ಭರ್ತಿ ಮಾಡುತ್ತಿರಬೇಕು. ಇದು ತೀರಾ ದೊಡ್ಡ ಮೊತ್ತ ಆಗಿಲ್ಲವಾದ್ದರಿಂದ ನೀವು ಬ್ಯಾಂಕ್ ನಲ್ಲಿ ರಿಕರಿಂಗ್ ಡೆಪೋಸಿಟ್ (ಆರ್ ಡಿ)  ಮಾಡುವುದರ ಮೂಲಕ ಸಂಗ್ರಹಿಸಬಹುದು. 


2. ತುರ್ತು ನಿಧಿ ( ಎಮರ್ಜೆನ್ಸಿ ಫಂಡ್ ):

        ಜೀವನ ಎಂದಿಗೂ ಅನಿಶ್ಚಿತತೆಯಿಂದ ಕೂಡಿರುತ್ತದೆ, ನಾವು ಯಾರು ಭವಿಷ್ಯವನ್ನು ನೋಡಿಲ್ಲ. ಆದರೆ ಸುತ್ತಮುತ್ತಲಿನ ಸಮಾಜದಲ್ಲಿರುವ ನಡೆದಿರುವ  ಸಮಸ್ಯೆಗಳನ್ನು ನೋಡಿದ್ದೇವೆ, ನಮ್ಮದೇ ವೈಯಕ್ತಿಕ ಜೀವನದಲ್ಲೂ ಕೂಡ ಹಲವು ಪ್ರಮುಖ ಸಮಸ್ಯೆಗಳನ್ನು ಅನುಭವಿಸಿದ್ದೇವೆ.  ಉದ್ಯೋಗ ನಷ್ಟ, ಆದಾಯದಲ್ಲಿ ಏರುಪೇರು ಆಗಿರುವುದನ್ನು ನಾವು ನೋಡಿದ್ದೇವೆ, ಅನುಭವಿಸಿದ್ದೇವೆ. ವೇತನ ಪಡೆಯುವ ಉದ್ಯೋಗಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಎಲ್ಲರೂ ಆದಾಯದಲ್ಲಿ ನಷ್ಟವನ್ನು  ಅನುಭವಿಸಿರುವುದನ್ನು  ನೋಡಿರುತ್ತೇವೆ. ಇದೇ ರೀತಿಯಲ್ಲಿ ಆರೋಗ್ಯದಲ್ಲಿ ಏರುಪೇರಾಗುತ್ತದೆ ಹೀಗೆ   ಅನಿರೀಕ್ಷಿತ ದುರ್ಘಟನೆ ಗಳಿಂದ ತುರ್ತುಪರಿಸ್ಥಿತಿ ಬರಬಹುದು ಹೀಗಾಗಿ ಎದುರಿಸಲು ನಾವು ಒಂದು ತುರ್ತು ನಿಧಿಯನ್ನು ಕೂಡಿಡುವುದು ಅತ್ಯವಶ್ಯಕ.  

         ಖಾಸಗಿ ಸಂಸ್ಥೆಗಳಲ್ಲಿ ಪಿಂಕ್ ಸ್ಲಿಪ್ ಕೊಟ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದನ್ನು ಹಲವಾರು ಬಾರಿ ದಿನಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ಇಂತಹ ಕ್ಲಿಷ್ಟಕರ ಸಂದರ್ಭಗಳನ್ನು ಎದುರಿಸಲು ಉತ್ತಮವಾದ ಸಿದ್ಧತೆ ಬಹುಮುಖ್ಯ. ತುರ್ತು ನಿಧಿ ದೊಡ್ಡ ಮೊತ್ತದ್ದಾಗಿರಬೇಕು ಅಂದರೆ  ನಿಮಗೆ ಉದ್ಯೋಗ ನಷ್ಟವಾದರೆ ಮತ್ತೆ ಉದ್ಯೋಗ ಪಡೆಯಲು ಹಲವಾರು ತಿಂಗಳುಗಳು ತೆಗೆದುಕೊಳ್ಳಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿ ಇರುವ ಆದಾಯಗಳ ಸಂಖ್ಯೆಗಳ ಅನುಸಾರವಾಗಿ ನೀವು ತುರ್ತು ನಿಧಿಯ ಮೊತ್ತವನ್ನು ನಿರ್ಧರಿಸಬೇಕಾಗುತ್ತದೆ.  ಒಮ್ಮೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರು ಸಂಪಾದಿಸುತ್ತಿದ್ದರೂ ಕನಿಷ್ಠ ಪಕ್ಷ 6 ತಿಂಗಳ ಖರ್ಚಿಗೆ  ಬೇಕಾಗುವಷ್ಟು ಹಣವನ್ನು ತುರ್ತು ನಿಧಿಯಲ್ಲಿ ಕೂಡಿಡಬೇಕು. ಇದರಲ್ಲಿ ಯಾವುದಾದರೂ ಸಾಲದ ಕಂತು ಗಳಿದ್ದಲ್ಲಿ, ಹಾಗೂ ಬೇರೆಲ್ಲಾ ಖರ್ಚುಗಳನ್ನು ಒಳಗೊಂಡು ನಿಮಗೆ ಒಂದು ತಿಂಗಳಲ್ಲಿ ಎಷ್ಟು ಖರ್ಚಾಗುತ್ತದೆ  ಅಷ್ಟನ್ನೂ ತಪ್ಪದೆ ಲೆಕ್ಕ ಹಾಕಿ ಒಂದು ತಿಂಗಳ ಮೊತ್ತವನ್ನು ಗುರುತಿಸಬೇಕು. ಆ ಮೊತ್ತದ ಆರು  ತಿಂಗಳಿಗಾಗುವಷ್ಟು ಒಟ್ಟು ವೆಚ್ಚವನ್ನು ಲೆಕ್ಕ ಹಾಕಿ ಕೂಡಿಡಬೇಕು. ನೀವು ಮನೆಯಲ್ಲಿ ಒಬ್ಬರೇ ದುಡಿಯುತ್ತಿದ್ದರೆ ಒಂದು ವರ್ಷದ ತನಕ ಖರ್ಚಿಗೆ ಬೇಕಾಗುವ ಮೊತ್ತವನ್ನು ಕೂಡಿಡುವುದು ಅತ್ಯಂತ ಸೂಕ್ತ.   

   ತುರ್ತು ನಿಧಿ ಖರ್ಚು ಆದಂತೆಲ್ಲ ಅದನ್ನು ಪುನಃ ಭರ್ತಿ ಮಾಡಬೇಕು. ಈ ನಿಧಿ ಯಾವಾಗಲೂ ಲಭ್ಯವಿರಬೇಕು ಏಕೆಂದರೆ ಕಷ್ಟಗಳು ಹೇಳಿ ಕೇಳಿ ಬರುವುದಿಲ್ಲ, ಆದುದರಿಂದ ನಾವು ಸದಾ ಸಿದ್ಧರಿರಬೇಕು.  ಹೀಗೆ ಕೂಡಿಟ್ಟ ಹಣವನ್ನು ಬ್ಯಾಂಕಿನಲ್ಲಿ ಎಫ್ ಡಿ ಮಾಡಿಸ ಬಹುದು, ಅಥವಾ ಲಿಕ್ವಿಡ್ ಮ್ಯೂಚುವಲ್ ಫಂಡ್ ನಲ್ಲೂ ಕೂಡಿಡಬಹುದು. 



3. ಆರೋಗ್ಯ ವಿಮೆ: 

ಮನುಷ್ಯ ಜೀವನದಲ್ಲಿ ಮಗು ಹುಟ್ಟಿದಾಗಿನಿಂದ, ಹಣ್ಣು ಹಣ್ಣು ಮುದುಕರಾಗಿ ಸಾಯುವವರಿಗೆ ಎಲ್ಲಾ ಹಂತಗಳಲ್ಲೂ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿರುತ್ತದೆ, ಆರೋಗ್ಯ ಪ್ರಮುಖ ವಿಷಯವಾಗಿರುವುದರಿಂದ ಜನರು ಹಿಂಜರಿಯದೆ ವೈದ್ಯರ ಬಳಿ ಹೋಗಿ ಸಮಸ್ಯೆಗಳ ಪರಿಹಾರವನ್ನು ಕೇಳುತ್ತಾರೆ. ಆಸ್ಪತ್ರೆ ಖರ್ಚು ಹೆಚ್ಚು ಇರುವುದರಿಂದ ಪದೇ ಪದೇ ದೊಡ್ಡ ಮಟ್ಟದಲ್ಲಿ ಹಣವನ್ನು ಕೂಡಿಡುವುದು ಕಷ್ಟ ಸಾಧ್ಯ ಆದುದರಿಂದ ಪ್ರತಿಯೊಂದು ಮನೆಯ ಯಜಮಾನ ತನ್ನ ಕುಟುಂಬಕ್ಕೆ ಒಂದು ಉತ್ತಮವಾದ ಆರೋಗ್ಯ ವಿಮೆಯನ್ನು ಮಾಡಿಸಲೇಬೇಕು. ಆರೋಗ್ಯ ವಿಮೆಯು ದೊಡ್ಡ ಮೊತ್ತದ್ದೆ ಆಗಿರಲಿ. ಎಷ್ಟೋ ಬಾರಿ ಆಸ್ಪತ್ರೆಯ ಬಿಲ್ಲುಗಳು ನಿಮ್ಮ ಉಳಿತಾಯವನ್ನು ಖಾಲಿ ಮಾಡಿ ಸಾಲಕ್ಕೂ ದೂಡುತ್ತದೆ. ಇದಲ್ಲದೆ ಕುಟುಂಬದಲ್ಲಿ ನಾಲ್ಕು ಸದಸ್ಯರು ಇದ್ದಾರೆ ಎಂದರೆ ಪ್ರತಿಯೊಬ್ಬರಿಗೂ ಬೇರೆ ಬೇರೆ ಹಂತದಲ್ಲಿ, ಬೇರೆ ಬೇರೆ ಕಾಲಮಾನದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಬಹುದು, ವಿಶೇಷವಾಗಿ ವಯಸ್ಸಾದಂತೆ ದೊಡ್ಡ ಮೊತ್ತದ ಖರ್ಚುಗಳು ತಗಲುವ ಶಸ್ತ್ರ ಚಿಕಿತ್ಸೆಗಳು ಎದುರಿಸಬೇಕಾಗುತ್ತದೆ. ಇದಕ್ಕೆ ಪೂರ್ವ ಸಿದ್ಧತೆಯಾಗಿ ನಾವು ಆರೋಗ್ಯ ವಿಮೆಯನ್ನು ಮಾಡಿಸುವುದು ಉತ್ತಮ ನಿರ್ಧಾರ. ಇದಕ್ಕಾಗಿ ಕನಿಷ್ಠ 10 ಲಕ್ಷದಿಂದ 15 ಲಕ್ಷದವರೆಗೆ ಕವರ್ ಆಗುವ ಆರೋಗ್ಯ ವಿಮೆಯನ್ನು ಖರೀದಿಸುವುದು ಉತ್ತಮವಾದಂತಹ ಆಯ್ಕೆ.    

      ಆರೋಗ್ಯ ವಿಮೆಯನ್ನು ನೀವು ದುಡಿಯಲು ಆರಂಭಿಸಿದಾಗ ಮಾಡಿಸಿಕೊಳ್ಳಿ ಅಂದರೆ ಯುವಕರು ಇದ್ದಾಗಲೇ ಮಾಡಿಸುವುದು ಸೂಕ್ತ. ಏಕೆಂದರೆ ವಿಮೆ ಮಾಡಿಸುವಾಗ ನೀವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ, ನಿಮ್ಮಲ್ಲಿ ಕಾಯಿಲೆಗಳು ಇದ್ದಲ್ಲಿ ಅದು ತಿರಸ್ಕೃತ ಗೊಳ್ಳುವ ಸಾಧ್ಯತೆಗಳು ಇರುತ್ತದೆ ಆದುದರಿಂದ ಯುವಕರಿದ್ದಾಗಲೇ, ಉತ್ತಮ ಆರೋಗ್ಯವಿದ್ದಾಗಲೇ ಮಾಡಿಸಿಕೊಳ್ಳುವುದು ಸೂಕ್ತ.    

ಒಂದು ಉತ್ತಮ ಆರೋಗ್ಯ ವಿಮೆಯನ್ನು ಗುರಿತಿಸಲು ಈ ಕೆಳಗಿನ ಗುಣಲಕ್ಷಣಗಳನ್ನು ಪರಿಶೀಲಿಸಿ:

1. ಹೊರರೋಗಿಗಳ ವೈದ್ಯರ ಸಮಾಲೋಚನೆ ಶುಲ್ಕವನ್ನು ಇದು ಬರಿಸುತ್ತದೆಯ 

2. ನಿಮ್ಮ ಸ್ಥಳದ ಬಗ್ಗೆ ಹೆಚ್ಚಿನ ಸಂಖ್ಯೆಯ ನೆಟ್ವರ್ಕ್ ಆಸ್ಪತ್ರೆಗಳನ್ನು ಹೊಂದಿರುವ ವಿಮೆದಾರರು ಆರಿಸಿ 

3. ನಗದುರಹಿತ ( ಕ್ಯಾಶ್ ಲೆಸ್ ) ಚಿಕಿತ್ಸೆಯು ಲಭ್ಯವಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ 

4. ಚಿಕಿತ್ಸೆ ನಂತರ ಬರುವ ಮರು ಪಾವತಿ (ರೀ ಅಂಬರ್ಸ್ ಮೆಂಟ್ ) ನಿಯಮಗಳನ್ನು ತಿಳಿದುಕೊಳ್ಳಿ 

5. ಹಿರಿಯ ನಾಗರಿಕರ  ಚಿಕಿತ್ಸೆಯ ಮಿತಿಗಳನ್ನು, ನಿಯಮಗಳನ್ನು ತಿಳಿದುಕೊಳ್ಳಿ 

6.  ವಿಮೆ ಪಾಲಿಸಿ ಯಲ್ಲಿ ಕೋ ಪೇಮೆಂಟ್ ಶೇಕಡ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳಿ ಹಿರಿಯ ನಾಗರಿಕರಿಗೆ ಕೋ ಪೇಮೆಂಟ್ ಪ್ರಮಾಣ ಎಷ್ಟಿರುತ್ತದೆ ಎಂದು ತಿಳಿದುಕೊಳ್ಳಿ 

7. ಪಾಲಿಸಿಯಲ್ಲಿ ಅಸ್ತಿತ್ವದಲ್ಲಿರುವ ಕಾಯಿಲೆಗಳ ಕಾಯುವಿಕೆಯ ಅವಧಿಯನ್ನು ತಿಳಿದುಕೊಳ್ಳಿ 


4.    ಟರ್ಮ್ ವಿಮೆ (ಜೀವ ವಿಮೆ): 

          ಹಣದ ಒಳಹರಿವು ಬಹಳ ಮುಖ್ಯ, ಒಂದು ವೇಳೆ ಹಣ ಸಂಪಾದಿಸುವ ಮನೆಯ ಯಜಮಾನ ಅಥವಾ ಮನೆಗೆ ಆದಾಯ ತರುವ ವ್ಯಕ್ತಿ ಸಾವಿಗೀಡಾದಾಗ ಮನೆಯ ಆದಾಯ ನಿಂತು ಹೋಗುತ್ತದೆ. ಇದರಿಂದ ಅವಲಂಬಿತರ ಜೀವನ  ಒಟ್ಟಾರೆ ನಿಂತು ಹೋಗುತ್ತದೆ, ಆದುದರಿಂದ ಆದಾಯ ತರುವ ವ್ಯಕ್ತಿಗೆ ಅಥವಾ ಆದಾಯಕ್ಕೆ ಒಂದು ಬ್ಯಾಕಪ್ ಅವಶ್ಯಕತೆ ಇರುತ್ತದೆ ಅದಕ್ಕಾಗಿ ನಾವು ಜೀವ ವಿಮೆಯನ್ನು ಮಾಡಿಸುತ್ತೇವೆ. 

    ಟರ್ಮ್ ವಿಮೆ ಇರುವ ವಿಮೆ ಉತ್ಪನ್ನಗಳಲ್ಲಿ ಅತಿ ಕಡಿಮೆ ದರದ್ದು, ಹಾಗೂ ಇದೆ ಮೂಲ ಹಾಗೂ ಶುದ್ಧ ವಿಮೆ. ಜನರು ಕನಿಷ್ಠ 1 ಕೋಟಿಯಿಂದ ಹಿಡಿದು ನಿಮ್ಮ ಶಕ್ತಿಗೆ  ಅನುಸಾರವಾಗಿ ಹಲವು ಕೋಟಿಗಳಲ್ಲಿ ಟರ್ಮ್ ವಿಮೆ ಮಾಡಿಸಬೇಕು. ಈ ವಿಮೆ ಒಂದು ಪವರ್ ಜನರೇಟರ್ ಗೆ ಸಮ. ಅಂದರೆ ಇದು ಜೀವನ ಪರ್ಯಂತ ಬೇಕಾದಷ್ಟು ಹಣವನ್ನು ಒದಗಿಸುವುದಿಲ್ಲ ಆದರೆ ನೀವು ಮಾಡಿಸಿದ ವಿಮೆಯ ಮೊತ್ತ ಎಷ್ಟು ದಿನದ ವರೆಗೂ ಬರುತ್ತದೆಯೋ ಅಲ್ಲಿಯ ತನಕ ಇದರ ಮೇಲೆ ಅವಲಂಬಿಸಬಹುದು, ನಂತರ ನಿಮ್ಮ ಸ್ವಂತ ದುಡಿಮೆಯಿಂದಲೇ ನೀವು ಜೀವನವನ್ನು ನಡೆಸಬೇಕಾಗುತ್ತದೆ. ಅಂದರೆ ವಿಮೆಯ ಹಣ ಖರ್ಚಾಗುವ ಮುನ್ನ ನೀವು ದುಡಿಮೆಯ ದಾರಿಯನ್ನು ಕಂಡುಕೊಳ್ಳಬೇಕು ಅದರಿಂದಲೇ ನಿಮ್ಮ ಆದಾಯವನ್ನು ಭವಿಷ್ಯದಲ್ಲಿ ಸಂಪಾದಿಸಬಹುದು. ಆದುದರಿಂದ ಇದನ್ನು ತಾತ್ಕಾಲಿಕ ಬ್ಯಾಕಪ್ ಹಣವೆಂಬ ದೃಷ್ಟಿಯಲ್ಲಿ ನೋಡಬೇಕು. ಜನರೇಟರ್ ಎಂದಿಗೂ ಶಾಶ್ವತವಾಗಿ ವಿದ್ಯುತ್ತನ್ನು ಒದಗಿಸುವುದಿಲ್ಲ ಹಾಗೆಯೇ ವಿಮೆ ಕೂಡ ಶಾಶ್ವತವಾಗಿ ಆದಾಯಕ್ಕೆ ಪರ್ಯಾಯ ಆಗಲಾರದು. 

   ವಿಮೆಗೆ ಅವಲಂಬಿತರು ಇರುವುದು ಅತಿ ಮುಖ್ಯ. ಆದುದರಿಂದ ಒಂಟಿ ವ್ಯಕ್ತಿಗಳಿಗೆ ಇದು ಸೂಕ್ತವಲ್ಲ ಆದುದರಿಂದ ನಿಮಗೆ ಅವಲಂಬಿತರು ಇದ್ದರೆ ಮಾತ್ರ ವಿಮೆ ಮಾಡಿಸಿ. 

      ಟರ್ಮ್ ವಿಮೆಯನ್ನು ಯುವಕರು ಇದ್ದಾಗಲೇ ಮಾಡಿಸುವುದು ಸೂಕ್ತ. ಏಕೆಂದರೆ ವಿಮೆ ಮಾಡಿಸುವಾಗ ನೀವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ, ನಿಮ್ಮಲ್ಲಿ ಕಾಯಿಲೆಗಳು ಇದ್ದಲ್ಲಿ ಅದು ತಿರಸ್ಕೃತ ಗೊಳ್ಳುವ ಸಾಧ್ಯತೆಗಳು ಇರುತ್ತದೆ ಆದುದರಿಂದ ಯುವಕರಿದ್ದಾಗಲೇ, ಉತ್ತಮ ಆರೋಗ್ಯವಿದ್ದಾಗಲೇ ಮಾಡಿಸಿಕೊಳ್ಳುವುದು ಸೂಕ್ತ.   

 
  ವರ್ಷದಲ್ಲಿ ಪದೇ ಪದೇ ವಿಮಾ ಪ್ರೀಮಿಯಂ ಕಟ್ಟುವ ಬದಲು ವರ್ಷಕ್ಕೆ ಒಂದೇ ಸಲ ಕಟ್ಟುವ ಹಾಗೆ ಮಾಡಿಕೊಂಡರೆ ಕೆಲಸ ಸುಲಭ.    


ಒಂದು ಉತ್ತಮ ಟರ್ಮ್  ವಿಮೆಯನ್ನು ಆಯ್ಕೆ ಮಾಡುವಾಗ ಕೆಳಕಂಡ ವಿಷಯಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಿ 

1. ಭವಿಷ್ಯದ ಹಣದುಬ್ಬರ ಹಾಗೂ ಜವಾಬ್ದಾರಿಗಳನ್ನು ಗಮನದಲ್ಲಿ ಇರಿಸಿ ಕನಿಷ್ಠ ವೆಂದರು ನಿಮ್ಮ ಆದಾಯದ 10 ರಿಂದ 15 ಪಟ್ಟು ಹಣವನ್ನು ಒಟ್ಟು ವಿಮಾ ಮೊತ್ತವಾಗಿ ಆಯ್ಕೆ ಮಾಡಿ. ಇದು ಕೆಲ ಕೋಟಿಗಳಲ್ಲಿ ಇದ್ದರೆ ಒಳ್ಳೆಯದು.

2. ಪಾಲಿಸಿ ಅವಧಿ ನಿಮ್ಮ ಜವಾಬ್ದಾರಿಗಳು ಮುಗಿಯುವ ತನಕ ಇರಬೇಕು 

3. ಕ್ಲೈಮ್ ಸೆಟಲ್ಮೆಂಟ್ ಅನುಪಾತ (Claim Settlement Ratio - CSR) ಉತ್ತಮ ಆಗಿರುವಂತಹ ಸಂಸ್ಥೆ ಇಂದನೆ ವಿಮೆಯನ್ನು ತೆಗೆದುಕೊಳ್ಳಿ. 

4. ಉತ್ತಮವಾದ ರೈಡರ್ ಗಳ ಆಯ್ಕೆಗಳನ್ನು ಮಾಡಿಕೊಳ್ಳಿ 


ನಿವೃತ್ತಿ ನಿಧಿ :

           ನಿವೃತ್ತಿ ನಿಧಿ ಅತಿ ಹೆಚ್ಚಿನ ಹಣವನ್ನು ಬೇಡುವ ಯೋಜನೆ ಅಥವಾ ನಿಧಿ. ಇದು ಅತಿ ಪ್ರಮುಖವಾದಂತಹ ಹಣಕಾಸು ಯೋಜನೆ ಏಕೆಂದರೆ, ಇದು ದೊಡ್ಡ ಮೊತ್ತದ ಹಣವನ್ನು ಕೇಳುತ್ತದೆ ಹಾಗೂ ಇದನ್ನು ಸಾಧಿಸಿದರೆ ನಿಮಗೆ ಆರ್ಥಿಕ ಸ್ವಾತಂತ್ರ್ಯ ದೊರೆಯುತ್ತದೆ. ಈ ಸ್ವಾತಂತ್ರ್ಯ ಎಲ್ಲರಿಗೂ ಅತಿ ಪ್ರಿಯವಾದದ್ದು ಹಾಗೂ ನಿರ್ಣಾಯಕ ವಾದದ್ದು ಆದುದರಿಂದ ಈ ನಿಧಿಗೆ ಮಹತ್ವ ಹೆಚ್ಚು.
     

        

Friday, March 27, 2026

ಕನಿಷ್ಠ ತಾವಾದ (Minimalism)

ಕನಿಷ್ಠ ತಾವಾದ   (Minimalism)


        ಚಿತ್ರ ಕೃಪೆ: ಅಂತರ್ಜಾಲ 


ಹಣದ ಕೊರತೆ ಹಾಗೂ ಅದರ ಚಿಂತೆ ಇವುಗಳನ್ನೆಲ್ಲಾ ಕಡಿಮೆ ಮಾಡಲು ಸರಿಯಾದ ಜೀವನ ಶೈಲಿ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳಿಗೆ ಮಿನಿಮಲಿಸಂ ( ಕನಿಷ್ಠ ತಾವಾದ ) ಜೀವನಶೈಲಿ ಅತಿದೊಡ್ಡ ಕೊಡುಗೆ ನೀಡುತ್ತದೆ, ಅದೇನೆಂದು  ತಿಳಿಯೋಣ. 

ಕನಿಷ್ಠ ತಾವಾದ ಅಥವಾ ಮಿನಿಮಲಿಸಂ ಎಂದರೆ ಏನು 
              ಜೀವನದಲ್ಲಿ ನಮಗೆ ಅವಶ್ಯಕತೆ ಇರುವ ವಸ್ತು, ಸೇವೆಗಳನ್ನು ಗುರುತಿಸಿ ಅವುಗಳನ್ನು ಮಾತ್ರ ಇಟ್ಟುಕೊಳ್ಳುವುದು, ಬಳಕೆ ಮಾಡುವುದು ಇದನ್ನು ಹೊರತುಪಡಿಸಿ ಉಳಿದಿದ್ದೆಲ್ಲ ಅನಾವಶ್ಯಕ ಎಂದು ಮನಗಂಡು ಅವುಗಳನ್ನು ನಮ್ಮ ಜೀವನದಿಂದ ಹೊರಗೆ ಇಡುವುದೇ ಕನಿಷ್ಠ ತಾವಾದ ಅಥವಾ ಮಿನಿಮಲಿಸಂ 

ನಾವು ಹಿಂದಿನ ಲೇಖನಗಳಲ್ಲಿ ಓದಿದಂತೆ ನಾವು ಬಳಸುವ ಸೇವೆಗಳ ಮತ್ತು ಉತ್ಪನ್ನಗಳ  ದೊಡ್ಡ ಪಟ್ಟಿಯೇ ಇದೆ. ಇವುಗಳಲ್ಲಿ ನಿಜವಾಗಲೂ ಯಾವುದು ಅವಶ್ಯಕತೆ ಇದೆಯೋ, ನಿಜವಾಗಲೂ ಯಾವುವನ್ನು ಬಳಸುತ್ತೇವೆಯೋ ಅಂತಹ ಉತ್ಪನ್ನಗಳನ್ನು, ವಸ್ತುಗಳನ್ನು ಮಾತ್ರ ನಾವು ಇಟ್ಟುಕೊಳ್ಳಬೇಕು, ಉಳಿದವೆಲ್ಲವು ನಮ್ಮ ಮನೆಯಲ್ಲಿ ಕಸವಾಗಿ ಉಳಿದುಬಿಡುತ್ತವೆ, ಹೌದು ಕಸವಾಗಿ ಹೆಚ್ಚಿನ ಸ್ಥಳಾವಕಾಶವನ್ನು ಕೇಳುತ್ತಾ, ಧೂಳು ಹಿಡಿದು ಕುಳಿತುಕೊಳ್ಳುತ್ತವೆ, ಅವುಗಳ ದುರಸ್ತಿ, ಸ್ವಚ್ಛತೆ, ನಿರ್ವಹಣೆ ನಮಗೆ ಅನಗತ್ಯ ವೆಚ್ಚದ ಹೊರೆಯನ್ನು ತಂದುಕೊಡುತ್ತವೆ. ಇದರಿಂದ ಹಣದ ದುಂದು ವೆಚ್ಚ, ಅದುವೇ ಬೇಡದ ಕಸವಾಗಿ ಕೂರುವ ವಸ್ತುಗಳಿಗಾಗಿ. ಇವುಗಳಿಂದ ಶ್ರಮ ಹೆಚ್ಚಾಗುತ್ತದೆ, ಸಮಯ ಹಾಳಾಗುತ್ತದೆ, ಹಣದ  ವ್ಯರ್ಥ.  ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ನಾವು ಪ್ರಜ್ಞಾಪೂರ್ವಕವಾಗಿ ಮಿನಿಮಲಿಸಂ (ಕನಿಷ್ಠ ತಾವಾದ ) ಅನ್ನು ಅನುಸರಿಸಬೇಕು. ಇದರಿಂದ ಪ್ರಜ್ಞಾಪೂರ್ವಕವಾಗಿ ಮನೆಗೆ ಬರುವ ಪ್ರತೀ ವಸ್ತುವಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ನಾವುಗಳು ತರುವುದು ಬಿಡುವುದು ನಿರ್ಧರಿಸಬಹುದು.

       ಮಿನಿಮಲಿಸಂ ಕೇವಲ ಭೌತಿಕ ವಸ್ತುಗಳಿಗೆ ಅನ್ವಯಿಸುವುದಿಲ್ಲ ಜೊತೆಗೆ ಡಿಜಿಟಲ್ ಜಗತ್ತಿನಲ್ಲೂ ಈ ಕನಿಷ್ಠತಾವಾದವನ್ನು  ನಾವು ಅಳವಡಿಸಿಕೊಳ್ಳಲೇಬೇಕು. ನಾವು ಹಲವಾರು ವಾಟ್ಸಾಪ್ ಗುಂಪುಗಳಲ್ಲಿ ಸದಸ್ಯರಾಗಿ ಜನರು ಕಳಿಸುವ ನಮ್ಮ ಜೀವನದಲ್ಲಿ ವ್ಯತ್ಯಾಸ ಮಾಡದ, ಪ್ರಭಾವ ಬೀರದ, ಅನಗತ್ಯ ಚಿತ್ರಗಳು, ಉಕ್ತಿಗಳು, ವಿಡಿಯೋಗಳು ಬರುತ್ತಲೇ ಇರುತ್ತವೆ. ಇವುಗಳು ನಮ್ಮ ಡಿಸ್ಕ್ ನಲ್ಲಿ  ಅನಗತ್ಯವಾದ ಸಂಖ್ಯೆಯಲ್ಲಿ  ಕುಳಿತು  ಬಿಡುತ್ತದೆ. ಇವುಗಳ ಮಧ್ಯದಲ್ಲಿ ನಾವು ಉಪಯೋಗಿಸುವ ಪ್ರಮುಖವಾದ ಕಡತಗಳು ಯಾವುದೋ ಮೂಲೆಯಲ್ಲಿ ಕುಳಿತಿರುತ್ತದೆ. ಅವುಗಳನ್ನು ಹುಡುಕುವುದು ದುಸ್ತರವಾಗುತ್ತದೆ, ಬೇಕೆಂದಾಗ ತಕ್ಷಣ ಸಿಗುವುದಿಲ್ಲ. ಇದರಿಂದ ಅನಗತ್ಯ ಆತಂಕ, ಹಾಗಾಗಿ ಡಿಜಿಟಲ್ ಲೋಕದಲ್ಲಿ ನಾವು ಅನಗತ್ಯ ಕಡತಗಳನ್ನು, ಚಿತ್ರಗಳನ್ನು, ವಿಡಿಯೋಗಳನ್ನು ಅಳಿಸಿ ಹಾಕಿ  ಕೇವಲ ಉಪಯೋಗಿಸುವ ಕಡತಗಳನ್ನು ಮಾತ್ರ ಉಳಿಸಿಕೊಂಡು ಬೇಕಾಗಿದ್ದನ್ನು ಹುಡುಕುವ ಅನಗತ್ಯ ಶ್ರಮದಿಂದ ತಪ್ಪಿಸಿ ಕೊಳ್ಳಬಹುದು. ಸಮಯ ವ್ಯರ್ಥ ದಿಂದ ಹಾಗೂ ಡಿಸ್ಕ್ ನಲ್ಲಿ ಸ್ಥಳಾವಕಾಶದ ಕೊರತೆಯಿಂದ  ಕಾಪಾಡಿಕೊಳ್ಳಬಹುದು.  

ಸಂಗ್ರಹಣೆ:

    ಸಂಗ್ರಹಣೆ ಹೇಗೆ ಶುರುವಾಗುತ್ತದೆ ಎಂಬುದನ್ನು ಅರಿಯೋಣ. ಮೊದಲು ನಾವು ಒಂಟಿಯಾಗಿ ಇರುತ್ತೇವೆ ನಂತರ ವಿವಾಹವಾಗಿ ಸಂಗಾತಿಯ ಒಬ್ಬಳು/ನು ಬರುತ್ತಾಳೆ/ನೆ . ನಾವು ಮನೆ ಮಾಡಬೇಕಾಗುತ್ತದೆ, ಮನೆಗೆ ಒಂದೊಂದಾಗಿ ವಸ್ತುಗಳು ಸಂಗ್ರಹವಾಗುತ್ತದೆ, ಮಕ್ಕಳಾಗುತ್ತಾರೆ, ನಂತರ ಓಡಾಡಲಿಕ್ಕೆ ಸ್ಕೂಟರ್ ಗಳು, ಕಾರ್, ಮಕ್ಕಳಿಗಾಗಿ ಸೈಕಲ್ ಗಳು ಕೊಂಡುಕೊಳ್ಳುತ್ತೇವೆ, ಒಂದು ಕುಟುಂಬವಾಗಿ ನಾವು ಬದಲಾದಾಗ, ನಮಗೆ ವಾಸಿಸಲು ಮನೆ ಬೇಕಾಗುತ್ತದೆ. ಹೀಗೆ ಸಂಗ್ರಹಣೆ ಶುರುವಾಗಿ ಮುಂದುವರೆಯುತ್ತಾ ಹೋಗುತ್ತದೆ. ಹಾಗೆ ನೋಡಿದರೆ ಮನೆಯಲ್ಲಿ ಸಾವಿರಾರು ವಸ್ತುಗಳು ಇರುತ್ತವೆ ಅವುಗಳನ್ನು ಹಿಂದಿನ ವಿಷಯಗಳಲ್ಲಿ ತಿಳಿಸಿದ್ದೇನೆ.  
    ಬಹುಮುಖ್ಯವಾಗಿ ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಬೇಡಿಕೆಗಳ ಸಂಖ್ಯೆ ಹೆಚ್ಚುತ್ತದೆ. ಎಲ್ಲರಿಗೂ ತಮ್ಮದೇ ಆದ ಅವಶ್ಯಕತೆಗಳು, ಆಸೆಗಳು ಇರುತ್ತವೆ. ಅವುಗಳನ್ನು ಪೂರೈಸುತ್ತ ಹೋದಂತೆ ಸೇವೆಗಳ ಹಾಗೂ ಉತ್ಪನ್ನಗಳ ಸಂಗ್ರಹಣೆ ಹೆಚ್ಚಾಗುತ್ತಿರುತ್ತದೆ. ನಾವು ಪ್ರಜ್ಞಾಪೂರ್ವಕವಾಗಿ, ಶಿಸ್ತುಬದ್ಧವಾಗಿ ಅವುಗಳ ಅಗತ್ಯತೆಯನ್ನು ಅರ್ಥೈಸಿಕೊಂಡು, ಅವುಗಳು ಹೊರೆಯಾಗದಂತೆ, ಮಿನಿಮಲಿಸಂ ಅನ್ನು ಪಾಲಿಸುತ್ತಾ ಬುದ್ಧಿವಂತಿಕೆಯಿಂದ ಬದುಕಬೇಕು. 

ಅಗತ್ಯ ಮತ್ತು ಆಸೆ:

     ಸಾಮಾನ್ಯವಾಗಿ ಒಂದು ಉತ್ಪನ್ನವನ್ನು ತಯಾರಿಸುವಾಗ, ಅವುಗಳ ಹಲವು ರೂಪಾಂತರಗಳನ್ನು ಉತ್ಪಾದಿಸುತ್ತಾರೆ. ಉದಾಹರಣೆಗೆ ನೀವು ಕಾರು ಖರೀದಿಸಲು ಹೋದರೆ ಬೇಸಿಕ್ ಮಾಡೆಲ್ ನಂತರ ಐಷಾರಾಮಿಯ ಹಲವು ರೂಪಾಂತರ ಮಾಡೆಲ್ ಗಳು ನಮಗೆ ನೋಡಲು ದೊರೆಯುತ್ತದೆ. ಆದರೆ ಕಾರು ಒಂದೇ ಆಗಿರುತ್ತದೆ ಅಂದರೆ ಬೇಸಿಕ್ ಮಾಡೆಲ್ ನ ಕಾರು ನಿಮ್ಮ ಅವಶ್ಯಕತೆಗಳನ್ನು ಪೂರೈಸಿದರೆ, ಮೇಲ್ದರ್ಜೆಯ ಮಾಡೆಲ್ ಕಾರ್ ಗಳು ನಿಮ್ಮ ಆಸೆ ಹಾಗೂ ಅವಶ್ಯಕತೆ ಎರಡನ್ನು ಪೂರೈಸುತ್ತದೆ ಅಂದರೆ ನೋಡಲು ಆಕರ್ಷಕವಾಗಿರುತ್ತದೆ, ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಹೀಗಾಗಿ ಅವಶ್ಯಕತೆಯ ವಸ್ತುವೇ ಬೇರೆ, ಆಸೆ ಪಟ್ಟ ವಸ್ತುವೇ ಬೇರೆ ಇರುವುದಿಲ್ಲ, ಒಂದೇ ಉತ್ಪನ್ನದಲ್ಲಿ ನಾವು ಅವಶ್ಯಕತೆ ತಕ್ಕಂತೆ ಬೇಸಿಕ್ ಮಾಡೆಲ್ ನ ತಯಾರಿಸಬಹುದು ಅಥವಾ ಐಷಾರಾಮಿ ಉತ್ಪನ್ನವಾಗಿ ಉತ್ಪಾದಿಸಬಹುದು.  
     ಈ ಮೇಲಿನ ಸ್ಪಷ್ಟತೆಯಿಂದ ನಾವು ತಿಳಿದುಕೊಂಡ ವಿಷಯವೇನೆಂದರೆ ಮನೆಯಲ್ಲಿರುವ ವಸ್ತುಗಳ ಸಂಖ್ಯೆಯನ್ನು ಹೆಚ್ಚಿಸದೆ ನಾವು ಬಯಸಿದಂತಹ ವಸ್ತುಗಳನ್ನು ಮಾತ್ರ ಕೊಂಡು ಕನಿಷ್ಠತಾವಾದವನ್ನು ಅಳವಡಿಸಿಕೊಳ್ಳಬಹುದು. 

     ಮಿನಿಮಲಿಸಂನಿಂದ ಈ ಕೆಳಗಿನ ಲಾಭಗಳನ್ನು ನಾವು ಪಡೆಯಬಹುದು:

1. ಅನಗತ್ಯ ವಸ್ತುಗಳು ಕಡಿಮೆಯಾಗಿ ಮನೆಯಲ್ಲಿನ ಸ್ವಚ್ಛತೆ ಹೆಚ್ಚಾಗುತ್ತದೆ  

2. ಗೊಂದಲಗಳು ಕಡಿಮೆಯಾಗಿ ಮನಸು ಶಾಂತವಾಗಿರುತ್ತದೆ 

3. ವಸ್ತುಗಳ ಹುಡುಕಾಟದ ಸಮಸ್ಯೆ ಇರುವುದಿಲ್ಲ 

4. ಮನೆಯ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸುವ, ನಿರ್ವಹಣೆ ಮಾಡುವ, ದುರಸ್ತಿ ಮಾಡಿಸುವ ಖರ್ಚು     ವೆಚ್ಚಗಳು ಗಣನೀಯವಾಗಿ ಕಡಿಮೆಯಾಗಿ ಹಣದ ಉಳಿತಾಯವಾಗುತ್ತದೆ. 

5. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ 

6. ಬೇಡ ಅಥವಾ ಸಾಕು ಎಂದು ಹೇಳಲು ಕಲಿಯುತ್ತೀರಿ 

7. ಜೀವನದಲ್ಲಿ ಅರ್ಥಪೂರ್ಣತೆ  ಹಾಗೂ ತೃಪ್ತಿಗೆ ಮಹತ್ವದ ಕೊಡುಗೆ ನೀಡುತ್ತದೆ 

8. ಜೀವನ ಸರಳ ಹಾಗೂ ಸುಲಭ ಎಂಬ ವಾಸ್ತವ ಅರ್ಥವಾಗುತ್ತದೆ 

9. ಮನೆ ಬದಲಾಯಿಸಿದಾಗ ಮನೆ ವಸ್ತುಗಳ ಸಾಗಾಣೆ ಸುಲಭವಾಗುತ್ತದೆ 

10. ಪ್ರಕೃತಿಗೆ ಕಸ ಹಾಕದೆ ಪರಿಸರ ಸ್ನೇಹಿಯಾಗಿರುತ್ತದೆ.

11. ಡಿಜಿಟಲ್ ಮಿನಿಮಲಿಸಂ ನಿಮಗೆ ಗಮನ-ಭಂಗ ಕಡಿಮೆ ಮಾಡುತ್ತದೆ. 

12. ಉಳಿತಾಯ ಹೆಚ್ಚಾಗಿ  ವಸ್ತುಗಳ ಖರೀದಿಗೆ ಸಾಲದ ಅಗತ್ಯ ಇರುವುದಿಲ್ಲ

13. ಸಾಮಾನ್ಯ ಪ್ರಜ್ಞೆ ಹಾಗೂ ಬುದ್ಧಿವಂತಿಕೆಯ ಪ್ರಯೋಗ ಹೆಚ್ಚಾಗುತ್ತದೆ