ಆರ್ಥಿಕ ಇಕ್ಕಟ್ಟು ಮತ್ತು ನಿರ್ವಹಣೆ
ಹಣದ ಇಕ್ಕಟ್ಟು ಸಾಮಾನ್ಯವಾಗಿ ಎಲ್ಲರಿಗೂ ಜೀವನದ ಒಂದಲ್ಲ ಒಂದು ಹಂತದಲ್ಲಿ ಕಾಡಿರುತ್ತದೆ. ಆರ್ಥಿಕ ಇಕ್ಕಟ್ಟು ಎಂದರೆ ನಮಗೆ ಬೇಡಿಕೆ ಇರುವಷ್ಟು ಹಣವನ್ನು ಸಂಪಾದಿಸಲಾಗಿದೆ, ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಾವು ಕೆಲವು ಅವಶ್ಯಕತೆಗಳನ್ನು ಹಣದ ಪೂರೈಕೆಗಾಗಿ ಕಾಯುತ್ತ, ಮುಂದೂಡಿ ತಡವಾಗಿ ಪೂರೈಸಿಕೊಳ್ಳುವುದು ಅಥವಾ ರಾಜಿಮಾಡಿಕೊಂಡು ಪೂರೈಸಿ ಕೊಳ್ಳಲಾಗದೆ ಇರುವುದು.
ಎಷ್ಟೋ ಕೆಲಸಗಳಿಗೆ, ಹೊಸ ವಸ್ತುಗಳನ್ನು ಕೊಳ್ಳಲು, ಇರುವ ಮನೆಯ ಉತ್ಪನ್ನಗಳನ್ನು ದುರಸ್ತಿ ಮಾಡಿಸಲು, ಅಗತ್ಯ ಸೇವೆಗಳನ್ನು ಪಡೆಯಲು, ಆರೋಗ್ಯದ ಚಿಕಿತ್ಸೆಗೂ ಸಹ ಒಮ್ಮೊಮ್ಮೆ ಯೋಚಿಸುವ ಸಂದರ್ಭಗಳು ಜನರು ಎದುರಿಸುತ್ತಾರೆ. ಅದಕ್ಕೆ ಇನ್ನು ಹೆಚ್ಚಿನ ಉಳಿತಾಯವಿದ್ದಿದ್ದರೆ ನಮ್ಮ ಕೆಲಸಗಳು ಆಗಿರುತ್ತಿದ್ದವು, ಇನ್ನೂ ಹೆಚ್ಚಿನ ಆದಾಯ ಬೇಕು ಈ ಆದಾಯ ಎಷ್ಟೋ ಕೆಲಸಗಳಿಗೆ ಸಾಲುತ್ತಿಲ್ಲ ಎಂದು ಯೋಚಿಸುತ್ತಾರೆ. ಇದು ಹಣಕಾಸಿನ ಇಕ್ಕಟ್ಟು ಆದರೆ ಆರ್ಥಿಕ ಇಕ್ಕಟ್ಟು ಕೇವಲ ಹಣಕಾಸಿಗೆ ಸಂಬಂಧ ಪಟ್ಟದ್ದು ಮಾತ್ರವಲ್ಲ ಇದು ಸಾಮಾಜಿಕವಾಗಿ, ಮಾನಸಿಕವಾಗಿ, ಕೌಟುಂಬಿಕವಾಗಿ, ಭಾವನಾತ್ಮಕವಾಗಿ, ಭೌತಿಕವಾಗಿ ಇಕ್ಕಟ್ಟಾಗಿ ಪರಿಣಮಿಸುತ್ತದೆ.
ಕೌಟುಂಬಿಕ ಪರಿಣಾಮಗಳು:
ಹಣದ ಕೊರತೆ ಆರಂಭವಾದಾಗ ಅದು ಮೊದಲು ಗೊತ್ತಾಗುವುದು ಮನೆಯ ಯಜಮಾನನಿಗೆ ಯಾಕೆಂದರೆ ಆತ ಹಣಕಾಸಿನ ಹಾಗೂ ಮನೆಯ ಎಲ್ಲಾ ಖರ್ಚು ವೆಚ್ಚಗಳನ್ನು ನಿರ್ವಹಿಸುತ್ತಾನೆ. ನಂತರ ಆತನ ವರ್ತನೆಯಿಂದ, ದೇಹ ಭಾಷೆಯಿಂದ ಮನೆಯ ಯಜಮಾನಿಗೆ ಹಾಗೂ ಇತರ ಸದಸ್ಯರಿಗೂ ಅದರ ಅರಿವು ಉಂಟಾಗುತ್ತದೆ. ನಂತರ ಆರ್ಥಿಕ ಇಕ್ಕಟ್ಟಿನಿಂದ ಕೌಟುಂಬಿಕವಾಗಿ ಹಲವು ಸಮಸ್ಯೆಗಳು ಆರಂಭವಾಗುತ್ತದೆ. ಅವುಗಳೇನೆಂದು ತಿಳಿಯೋಣ.
1. ಮನೆಯ ಯಜಮಾನ ಕುಟುಂಬ ವರ್ಗದವರಿಗೆ ಒದಗಿಸಬೇಕೆಂದು ತಾನು ತನ್ನ ಅವಶ್ಯಕತೆ,
ಆಸೆಗಳ ತ್ಯಾಗವನ್ನು ಮಾಡುತ್ತಾ ಬರುತ್ತಾನೆ.
2. ಮನೆಯಲ್ಲಿ ಖರ್ಚನ್ನು ಕಡಿಮೆ ಮಾಡಲು ಹೇಳುತ್ತಿರುತ್ತಾನೆ.
3. ಈ ಮಾತು ಮತ್ತು ಕೊರತೆಗಳು ಮನೆಯಲ್ಲಿ ಅಸಮಾಧಾನ ಭುಗಿದೇಳಿಸುತ್ತದೆ, ಕಲಹಗಳು
ಏರ್ಪಡುತ್ತವೆ .
4. ಸಂಪಾದಿಸುವ ವ್ಯಕ್ತಿಗೂ ಈ ಕೊರತೆಯಿಂದ ತಪ್ಪಿತಸ್ಥ ಮನೋಭಾವನೆ ಕಾಡಲಾರಂಭಿಸುತ್ತದೆ.
5. ಸೀಮಿತ ಹಣದಿಂದ ಮನೆಯಲ್ಲಿ ಅವಶ್ಯಕತೆಗಳ ಪೂರೈಕೆಗೆ ಸ್ಪರ್ಧೆಗಳು ಏರ್ಪಡಬಹುದು.
6. ಅವಶ್ಯಕತೆಗಳ ಪೂರೈಕೆಯ ಕೊರತೆಯಿಂದ ಸಂಬಂಧಗಳು ದುರ್ಬಲಗೊಳ್ಳುತ್ತವೆ.
7. ಭವಿಷ್ಯದ ಬಗ್ಗೆ ಅಭದ್ರತೆ, ಆತ್ಮವಿಶ್ವಾಸದ ಕೊರತೆ ಕಾಣಲಾರಂಭಿಸುತ್ತದೆ, ಇದು
ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
8. ಸಾಮಾಜಿಕವಾಗಿ ಬೆರೆತಾಗ ಬರುವ ಖರ್ಚುಗಳಿಂದ ಸಂತೋಷ ಕೂಟಗಳಿಂದ ದೂರ ಉಳಿಯುತ್ತಾರೆ.
ಅಭಿವೃದ್ಧಿಯ ಮೇಲೆ ಪರಿಣಾಮಗಳು:
ನಮಗೆ ಬೇಕಾದ ಮುಕ್ಕಾಲುಪಾಲು ವಸ್ತು, ವಿಷಯಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಹಣದ ಇಕ್ಕಟ್ಟು ಅಭಿವೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
1. ಭವಿಷ್ಯದ ಪ್ರಮುಖ ಯೋಜನೆಯಾದ ನಿವೃತ್ತಿ ಪಿಂಚಣಿ ನಿಧಿ ಸಂಗ್ರಹಿಸಲು ಇದು ತಡೆಯಾಗುತ್ತದೆ.
2. ಹಲವಾರು ಆರ್ಥಿಕ ಗುರಿಗಳನ್ನು ಸಾಧಿಸಲು ಅದರಿಂದ ಸೌಕರ್ಯಗಳನ್ನು ಹೊಂದಲು ಇದು ಅಡ್ಡಿಯಾಗುತ್ತದೆ.
3. ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗದೆ, ಜೀವನದ ಪ್ರಗತಿ ನಿಧಾನಗೊಳ್ಳುತ್ತದೆ.
4. ಉತ್ತಮ ಉತ್ಪನ್ನಗಳನ್ನು ಕೊಳ್ಳಲು, ದುರಸ್ತಿ ಮಾಡಿಸಲು ಹಣದ ಇಕ್ಕಟ್ಟು ತೊಂದರೆಗೀಡು ಮಾಡುತ್ತದೆ.
5. ಮಕ್ಕಳ ಉನ್ನತ ಶಿಕ್ಷಣ ಕೊಡಿಸಲು ಆರ್ಥಿಕ ಇಕ್ಕಟ್ಟು ಒಂದು ಬಿಕ್ಕಟ್ಟಾಗಿ ಅವಕಾಶ ವಂಚಿತರನ್ನಾಗಿ ಮಾಡುತ್ತದೆ.
6. ಹಣದ ಕೊರತೆಯ ಪರಿಣಾಮವಾಗಿ ಅವಶ್ಯಕತೆಗಳಿಗೆ ಸಾಲದ ಮೊರೆ ಹೋಗುವಂತೆ ಮಾಡುತ್ತದೆ.
ಆರ್ಥಿಕ ಇಕ್ಕಟ್ಟಿನ ಕಾರಣಗಳು:
ಸಾಮಾನ್ಯವಾಗಿ ಮನುಷ್ಯ ಸಂಪಾದಿಸಲು ಆರಂಭಿಸಿದಾಗ ಒಂಟಿಯಾಗಿ ಇರುತ್ತಾನೆ, ಆಗ ಬೇಡಿಕೆಗಳು ಕಡಿಮೆ ಇರುತ್ತವೆ. ಸಂಪಾದನೆ ಬೇಡಿಕೆಯನ್ನು ಮೀರಿ ಇರುತ್ತದೆ. ಈ ಸಂದರ್ಭದಲ್ಲಿ ಹಣಕಾಸಿನ ಇಕ್ಕಟ್ಟು ಇರುವುದಿಲ್ಲ. ಆದರೆ ಯಾವಾಗ ಆತ ಸಂಗ್ರಹಿಸಲು ಪ್ರಾರಂಭಿಸಿತ್ತಾನೋ ಆವಾಗಿನಿಂದ ಖರ್ಚು ಹೆಚ್ಚಾಗಿ, ಉಳಿತಾಯ ಕಡಿಮೆಯಾಗುತ್ತದೆ. ಸಂಗ್ರಹಣೆ ಎಂದರೇನು ಮದುವೆಯಾಗಿ ಹೆಂಡತಿ ಬಂದು, ಇಬ್ಬರು ಮಕ್ಕಳಾಗಿ ಹೀಗೆ ಕುಟುಂಬ ಸದಸ್ಯರ ಆಗಮನ ಒಂದು ಸಂಗ್ರಹವೇ ಸರಿ. ಅವರಿಗಾಗಿ ಮನೆ, ಮನೆಯಲ್ಲಿನ ಸಾವಿರಾರು ವಸ್ತುಗಳು, ವಾಹನಗಳು, ಮತ್ತಷ್ಟು ಆಸ್ತಿ ಹೀಗೆ ಜನರ ಹಾಗೂ ವಸ್ತುಗಳ ಸಂಗ್ರಹವಾಗಿ ಸಂಪಾದನೆ ಆಗಿದ್ದೆಲ್ಲ ಖರ್ಚಾಗಿ ಆರ್ಥಿಕ ಇಕ್ಕಟ್ಟನ್ನು ಅನುಭವಿಸಲು ಆರಂಭಿಸುತ್ತಾರೆ.
ಇದು ಪ್ರಮುಖ ಕಾರಣ.
ಎರಡನೆಯ ಮುಖ್ಯ ಕಾರಣ ಎಂದರೆ ವೈಯಕ್ತಿಕ ಹಣಕಾಸು ಜ್ಞಾನದ ಕೊರತೆ. ಅದು ಕೂಡ ಯುವ ವಯಸ್ಸಿನಲ್ಲಿ ತಿಳುವಳಿಕೆ ಇಲ್ಲದೆ, ಹೋಗುತ್ತಾ ಅನುಭವದ ಆಧಾರದ ಮೇಲೆ ಪೆಟ್ಟು ತಿಂದು ಕಲಿಯುವುದು. ವೈಯಕ್ತಿಕ ಹಣಕಾಸಿನ ಯೋಜನೆಯ ಜ್ಞಾನ ಯುವಕರಲ್ಲಿ ಇದ್ದರೆ ಮುಂಬರುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ಸುಲಭವಾಗುತ್ತದೆ. ಆದರೆ ಅನುಭವದ ಆಧಾರದ ಮೇಲೆ ಮಧ್ಯ ವಯಸ್ಸಿನಲ್ಲೋ, ಇಳಿ ವಯಸ್ಸಿನಲ್ಲೋ ಬಂದರೆ ಆರ್ಥಿಕ ಇಕ್ಕಟ್ಟನ್ನು ತಡೆಯುವುದು ಕಷ್ಟ ಸಾಧ್ಯವಾಗುತ್ತದೆ. ಆದುದರಿಂದ ಯುವಕರು ಈ ಜ್ಞಾನವನ್ನು ಆದ್ಯತೆಯ ಮೇರೆಗೆ ಸಂಪಾದಿಸಬೇಕು. ಮಧ್ಯ ವಯಸ್ಕರೂ ಸಹ ಸ್ವಲ್ಪ ತಡವಾದರೂ ಪರವಾಗಿಲ್ಲ ಇದರ ಜ್ಞಾನ ಸಂಪಾದಿಸಿ ಮುಂಬರುವ ಜವಾಬ್ದಾರಿಗಳನ್ನು ನಿರ್ವಹಿಸಲು ಹಾಗೂ ಇರುವ ಆರ್ಥಿಕ ಬದ್ಧತೆಗಳನ್ನು ಮುಗಿಸಲು ಇದು ಸಹಾಯ ಮಾಡುತ್ತದೆ.
ಮೂರನೆಯದಾಗಿ ನೀವು ನಿಮ್ಮ ಅಗತ್ಯ ಮತ್ತು ಆಸೆಗಳಿಗೆ ತಕ್ಕಂತೆ ಹಣವನ್ನು ಸಂಪಾದಿಸಬೇಕು. ಯಥೇಚ್ಛವಾಗಿ ಹಳೆ ಸಂಪಾದನೆಯಾದಲ್ಲಿ, ನೀವು ನಿಮ್ಮದೇ ವೈಯಕ್ತಿಕವಾಗಿ ಹಣಕಾಸು ಯೋಜನೆಗಳನ್ನು ರೂಪಿಸಿಕೊಂಡು ನಿಮ್ಮ ಎಲ್ಲಾ ಅವಶ್ಯಕತೆಗಳು, ಆಸೆಗಳನ್ನು ಈಡೇರಿಸಿಕೊಂಡು, ಆರ್ಥಿಕವಾಗಿ ಸುರಕ್ಷಿತರಾಗಿ ನಿಶ್ಚಿಂತೆಯಿಂದ ಬದುಕನ್ನು ನಡೆಸಬಹುದು.
ಆರ್ಥಿಕ ಇಕ್ಕಟ್ಟಿಗೆ ಪರಿಹಾರಗಳು:
ಆರ್ಥಿಕ ಇಕ್ಕಟ್ಟನ್ನು ಪರಿಹಾರ ಮಾಡುವುದಕ್ಕಿಂತ ತಡೆಗಟ್ಟುವುದು ಉತ್ತಮವಾದ ಆಯ್ಕೆ ಆದುದರಿಂದ ಮೊದಲು ಹೇಗೆ ತಡೆಗಟ್ಟಬಹುದು ಎಂಬುದನ್ನು ತಿಳಿಯೋಣ.
ಅನಿರೀಕ್ಷಿತ ಖರ್ಚುಗಳಿಗಾಗಿ ಎತ್ತಿಟ್ಟ ಹಣವನ್ನು ವೇತನ ಬರುತ್ತಿದ್ದಂತೆಯೇ ಖರ್ಚು ಮಾಡಬೇಡಿ. ಅವುಗಳನ್ನು ನಾಲ್ಕು ಭಾಗವಾಗಿ ಮಾಡಬೇಕು. ಪ್ರತಿ ಭಾಗವನ್ನು ತಿಂಗಳ ನಾಲ್ಕು ವಾರಗಳಲ್ಲಿ ಪ್ರತಿ ವಾರಕ್ಕೆ ಸಮವಾಗಿ ಹಂಚಿಕೆ ಮಾಡಬೇಕು. ಇದರಿಂದ ಎಲ್ಲಾ ಹಣವು ಮೊದಲ ಎರಡು ವಾರಗಳಲ್ಲಿ ವೆಚ್ಚ ಮಾಡುವ ಬದಲು ಕೊನೆಯ ವಾರದ ತನಕ ಹಾಗೂ ತಿಂಗಳ ಕೊನೆಯ ದಿನದ ತನಕ ಸ್ವಲ್ಪವಾದರೂ ಉಳಿಸಿಕೊಳ್ಳಬಹುದು. ಇದರಿಂದ ತಿಂಗಳ ಕೊನೆಯ ಮುಂಚೆಯೇ ಬ್ಯಾಂಕಿನ ಖಾತೆ ಖಾಲಿಯಾಗಿ ಹಣಕ್ಕಾಗಿ ಪರದಾಡುವುದು ಅಥವಾ ಕೈ ಸಾಲ ಮಾಡುವುದು ತಪ್ಪಿಸಬಹುದು. ಇದರಿಂದ ಇಕ್ಕಟ್ಟಿನಿಂದ ಹಾಗೂ ಅದರಿಂದ ಆಗುವ ಆತಂಕದಿಂದ ಪಾರಾಗಬಹುದು. ಆದರೆ ಇದಕ್ಕೆ ಆದ್ಯತೆಯ ಮೇರೆಗೆ ಹಣವನ್ನು ಖರ್ಚು ಮಾಡುವುದು ಪೂರ್ವ ನಿರ್ಧರಿಸಬೇಕಾಗುತ್ತದೆ. ಇದರಿಂದ ಅತಿ ಮುಖ್ಯವಾದ ವಿಷಯಗಳಿಗೆ ಮೊದಲೆರಡು ವಾರದಲ್ಲಿ ಹಣವನ್ನು ಖರ್ಚು ಮಾಡಿ ಕಡಿಮೆ ಆದ್ಯತೆಯ ಖರ್ಚನ್ನು ಕೊನೆಯ ಎರಡು ವಾರಕ್ಕೆ ನಿಗದಿಪಡಿಸಬೇಕು. ಇದಕ್ಕೆ ತಾಳ್ಮೆ, ಸಂಯಮದ ಅವಶ್ಯಕತೆ ಇರುತ್ತದೆ. ಜೊತೆಗೆ ಆದ್ಯತೆಯನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ . ಇದನ್ನು ಗಂಡ ಹೆಂಡತಿ ಇಬ್ಬರು ಕುಳಿತು ನಿರ್ಧರಿಸುವುದು ಪ್ರಮುಖ ವಿಷಯವಾಗಿರುತ್ತದೆ. ಇದರಿಂದ ಈ ಯೋಜನೆಯ ಯಶಸ್ವಿ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಮೊಟ್ಟ ಮೊದಲನೆಯದಾಗಿ ವೈಯಕ್ತಿಕ ಹಣಕಾಸು ಯೋಜನೆಯ ಪುಸ್ತಕಗಳನ್ನು ಓದುವ ಅಭ್ಯಾಸವಿದ್ದರೆ ಇದರಿಂದ ಹೆಚ್ಚಿನ ವಿಷಯವು ತಿಳಿದುಬಂದು ನೀವು ಯುವಕರಾಗಿದ್ದಾಗಲೇ ನಿರ್ವಹಿಸಲು ಪ್ರಾರಂಭಿಸಬಹುದು. ಇದರಿಂದ ಮುಂದಿನ ಜವಾಬ್ದಾರಿಗಳು, ನಿಮ್ಮೆಲ್ಲಾ ಅವಶ್ಯಕತೆಗಳು, ಆಸೆಗಳು ಅಷ್ಟಲ್ಲದೆ ಅವಘಡಗಳು, ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ನೀವು ನಿರ್ವಹಿಸಲು ಸುಲಭವಾಗುತ್ತದೆ. ಆದುದರಿಂದ ಹೆಚ್ಚು ಓದಿ ತಿಳಿದುಕೊಳ್ಳಿ ಅದರಿಂದ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.
ವಿವಾಹದ ನಂತರ ಸಂಗಾತಿಯ ಜೊತೆಗೂಡಿ ಮಾಸಿಕ ಬಜೆಟ್ ಸಿದ್ಧಪಡಿಸುವುದು. ಇಬ್ಬರು ಬಜೆಟ್ ಗೆ, ಆರ್ಥಿಕ ಗುರಿಗಳಿಗೆ ಒಪ್ಪಿ, ನಿಮ್ಮ ಧ್ಯೇಯಕ್ಕೆ ಒಂದೇ ತಂಡದಂತೆ ಕಾರ್ಯನಿರ್ವಹಿಸಬೇಕು. ಸಂಗಾತಿಗಳಿಬ್ಬರೂ ವೈಯಕ್ತಿಕ ಹಣಕಾಸು ಯೋಜನೆಯ ಜ್ಞಾನವನ್ನು ಸಂಪಾದಿಸಿ ಒಮ್ಮತದಿಂದ ಕಾರ್ಯನಿರ್ವಹಿಸಬೇಕು.
ನಿಮ್ಮ ಆದಾಯ ಕಡಿಮೆ ಇದ್ದರೆ ಗಂಡ ಹೆಂಡತಿ ಇಬ್ಬರು ಹಣವನ್ನು ಸಂಪಾದಿಸಿ ತಂದರೆ ಅದು ನಿಮಗೆ ನಿಮ್ಮ ಗುರಿಗಳಿಗೆ ಅನುಕೂಲಕರವಾಗಿರುತ್ತದೆ. ಸಂಪಾದನೆ ಎಂದರೆ ಉದ್ಯೋಗಕ್ಕೆ ಹೊರಗೆ ಹೋಗಬೇಕೆಂದಿಲ್ಲ, ಸೈಡ್ ಬಿಸಿನೆಸ್, ಅಥವಾ ಮನೆಯಲ್ಲಿ ಕುಳಿತು ಮಾಡುವ ಉದ್ಯೋಗ ಇದ್ದರು ಹೆಂಗಸರಿಗೆ ತಮ್ಮ ಸಂಸಾರ ಹಾಗೂ ಸಂಪಾದನೆ ಎರಡನ್ನು ನಿರ್ವಹಿಸಬಹುದು.
ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಳ್ಳುವುದರಿಂದ ನೆಮ್ಮದಿ ಹೆಚ್ಚಾಗುತ್ತದೆ. ಜೀವನದಲ್ಲಿ ಸ್ವಾಭಿಮಾನದಿಂದ ಬದುಕುವುದು ಅತಿ ಮುಖ್ಯ ಆದುದರಿಂದ ನೀವು ಮಿನಿಮಲಿಸ್ಟ್ ಆಗಿ ಎಷ್ಟು ಬೇಕೋ ಅಷ್ಟೇ ಮನೆಯಲ್ಲಿ ವಸ್ತುಗಳನ್ನು ತನ್ನಿ, ಅನಗತ್ಯವಾಗಿ ದುಂದು ವೆಚ್ಚ ಮಾಡಬೇಡಿ. ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಜಾಣ್ಮೆಯಿಂದ ಬದುಕಿ ಅದರಿಂದ ಅನಗತ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಸರಳತೆಯಿಂದ ಜೀವನದಲ್ಲಿ ನೆಮ್ಮದಿ ಹಾಗೂ ತೃಪ್ತಿಯನ್ನು ಕಾಣಬಹುದು.
ಪರರನ್ನು ಮೆಚ್ಚಿಸಲು ನೀವು ಅನಗತ್ಯ ಆಡಂಬರದ, ವೈಭೋಗದ ಪ್ರದರ್ಶನ ಬೇಡ. ಎಲ್ಲರನ್ನು ಮೆಚ್ಚಿಸುವುದು ಅಸಾಧ್ಯ, ನೀವು ಎಷ್ಟೇ ಮೆಚ್ಚಿಸಲು ಹಣವನ್ನು ವ್ಯಯಿಸಿದರು ಜನ ಟೀಕೆಯನ್ನು ಮಾಡುತ್ತಾರೆ. ಅದರಿಂದ ಆರ್ಥಿಕ ಇಕ್ಕಟ್ಟಾಗಿ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಅದರ ಬದಲಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ, ಕಲೆಯ ಕಡೆಗೆ ಗಮನ ಕೊಡಿ, ಆಗಾಗೆ ಅವಕಾಶ ಸಿಕ್ಕಾಗೆಲ್ಲ ವೇದಿಕೆಯ ಮೇಲೆ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಇದರಿಂದ ಸಮಾಜದಲ್ಲಿ ನೀವು ಗುರುತಿಸಿಕೊಳ್ಳಬಹುದು. ಅದರ ಹೊರತಾಗಿ ಕೇವಲ ಆಡಂಬರದ ಖರ್ಚು ಮಾಡಿ ವೈಭೋಗ ಪ್ರದರ್ಶಿಸಲು ಹೋಗುವುದು ನಿಮ್ಮ ಜೀವನಕ್ಕೆ ಮುಳುಗುತ್ತದೆ ಎಚ್ಚರವಿರಲಿ.

No comments:
Post a Comment