Tuesday, September 11, 2012

ಬದಲಾವಣೆಯ ಗಾಳಿ

 ಬದಲಾವಣೆಯ ಗಾಳಿ
 
 ಬದುಕ ತಿರುವುಗಳ ಹಿಂದೆ ಮರೆಮಾಚಿವೆ ಮುಖಗಳು             
 ನಾವು ಕಂಡಿರದ ಒಳಮುಖಗಳ ನಿಜ ದರುಶನವಿತ್ತು 
 ಸಂಬಂಧದ ಸಂಕೋಲೆಗಳ ಸಡಿಲತೆಯ ತಿಳಿಸುತ್ತ
 ನವವಾಸ್ತವವ ತೋರಿ, ಸಂಬಂಧದ ಸೂಕ್ಷ್ಮತೆಯನು 
 ದ್ವಂದ್ವದಲಿ ಸಿಲುಕಿಸಿ, ಮೃದು ಮನದೊಡು ಆಟವಾಡಿದೆ
   
 ಹೊಸ ಚಿಗುರು ಬೆಳೆಯುವ ಪ್ರಕೃತಿಯ ನಿಯಮದಂತೆ  
 ಮುಂದಿನ ತಿರುವಿನಲ್ಲಿ ಹೊಸ ಸಂಬಂಧಗಳು ಸೇರಿ
 ಜೀವನದಿ ಬತ್ತದ ಉತ್ಸಾಹವನ್ನಿತ್ತು, ಇರುವ ಚಿಲುಮೆಯ  
 ನವೀಕರಿಸುತ್ತ, ಬದುಕಿಗೆ ಹೊಸ ದಿಕ್ಕಿನಲ್ಲಿ ಗಮ್ಯವನಿತ್ತು
 ಹೊಸ ಬದಲಾವಣೆಯ ಗಾಳಿಯು ಬೀಸಿದೆ ಜೀವನದಲಿ.

 - ತೇಜಸ್ವಿ.ಎ.ಸಿ

Friday, August 17, 2012

ಮನದೊಡತಿ

ಮನದೊಡತಿ

ಮನದೊಡತಿಯ ನೆನಪೇ ಎನ್ನ ಮನದ ಅಲಂಕಾರ
ನನ್ನಾಕೆಯ ಧ್ವನಿಯ ಗುಂಗೇ ಮನಕೆ ಮಾಧುರ್ಯ

ನನ್ನ ಕರುಳ ಕುಡಿಯ ಹೊತ್ತಿರುವಾಕೆಗೆ ವಿರಹದ
ನೋವು ಸೋಕದಿರಲಿ, ನಾ ಮರಳುವೆ ಮನದನ್ನೆ

ನೀನಾಡುವ ಎರಡು ಜೀವಗಳ ಉಸಿರಿನ ಬಿಸಿ
ಅನುದಿನವು ನನ್ನ ಸೋಕುವುದೆಂದು ಮರೆಯದಿರು

ನೀ ಆಡುವ ಪ್ರತಿ ಉಸಿರಿನಲು ನಿನ್ನ ಹೃದಯ
ಬಡಿತ ಕೇಳುವುದೆಂದು ಮರೆಯದಿರು ಮನದನ್ನೆ

ನಿನ್ನೀ ಮನದ ತಳಮಳ ನನ್ನ ಹೃದಯದ ಪ್ರತಿ
ಬಡಿತಕ್ಕು ಬಂದು ತಲುಪುದೆಂದು ನೀ ತಿಳಿದಿರು

ವಿರಹದ ಬೇನೆಯಲಿರುವ ನಿನ್ನ ಪ್ರೀತಿಗೆ ಕರಗಿ
ಕಾಲನೇ ನಿನ್ನ ನೋವನು ಬೇಗ ನಲಿವಾಗಿಸುವನು

ನಿನ್ನ ಮನದ ಕೂಗಿಗೆ ಸಪ್ತಸಾಗರದ ದೂರವನ್ನು
ಕ್ಷಣಿಕದಲಿ ದಾಟಿ ಬಂದು ಸೇರುವೆ ಮನದೊಡತಿ

ನೀನೆಂದು ಮರುಗಬೇಡ, ವಿರಹದಲಿ ಬೇಯಬೇಡ
ನಿನಗಾಗಿ ಮರಳಿ ಬರುವೆ, ಸಂತಸವ ಹೊತ್ತಿ ತರುವೆ

- ತೇಜಸ್ವಿ ಎ ಸಿ
  ಲಂಡನ್, ಯು.ಕೆ

Tuesday, March 27, 2012

ಮತ್ತೊಮ್ಮೆ ತಿರುಗಿ ನೋಡುವಾಸೆ

ಮತ್ತೊಮ್ಮೆ ತಿರುಗಿ ನೋಡುವಾಸೆ

 ನಡೆಯಲು ಯತ್ನಿಸಿದರು ನಡೆಯಲಾಗದು ನನಗೆ
 ಓಮ್ಮೆ ತಿರುಗಿ ನೋಡಿ ಕಣ್ತುಂಬುವ ಆಸೆ ಎನಗೆ

 ಕೆಲ ಹೆಜ್ಜೆಗಳ ಕ್ರಮಿಸಿ ತಿರುಗಿ ನೋಡಿದೆ ನಾನು
 ಸೌಂದರ್ಯವ ಸವಿಯುತ ಹಾಗೆಯೇ ನಿಲ್ಲಲೇನು?

 ನನ್ನೀ ವರ್ತನೆಯ ಗಮನಿಸುವರೆಂಬ ಭಯವೆನಗೆ
 ಆದರೂ ಬಿಡಿಸಿಕೊಳ್ಳಲಾರೆ ಆಕರ್ಷಣೆಯ ಆ ಘಳಿಗೆ

 ಒಂದು ದಿನದಿ ನಿಂತು ನೋಡಿದರು ತೀರದು ದಾಹ
 ದಿನ ಕಳೆದಂತೆ ಗಾಡವಾಗುತ್ತಿದೆ ನನ್ನೀ ಮೋಹ

 ಕಚೇರಿಯ ಒಳಗಿದ್ದರೂ ಗಂಟೆಗೊಮ್ಮೆ ಅದೇ ಧ್ಯಾನ
 ಮಳಿಗೆಯೊಳು ಖರೀದಿಗೆ ನಿಂತರು ಅದರದೇ ಧ್ಯಾನ

 ಹೆಂಡತಿಯೊಡು ಬೈಸಿಕೊಂಡಿದ್ದು ಆಯಿತು ನಾನು
 ಹಾಗಂತ ನನ್ನ ಆಸೆಯ ಕೂಸನು ಬಿಡಲಾಯಿತೇನು

 ಶುರುವಾಗಿದೆ ನನಗೆ ನನ್ನ ಕಾರು ನೋಡುವ ಚಟ 
 ಖರೀದಿಸಿದ ಮೇಲೆ ನನ್ನ ಹೊಸ ಶೆವ್ರೋಲೆಟ್ ಬೀಟ್       

 - ತೇಜಸ್ವಿ.ಎ.ಸಿ

Tuesday, March 13, 2012

ಕಾವ್ಯಾನುರಕ್ತ

ಕಾವ್ಯಾನುರಕ್ತ 

ಜೀವನದ ಸಣ್ಣ ಎಳೆಗಳರಸಿ ಕವನ ರಚಿಸುವಾಸೆ
ನಗಣ್ಯ ಪ್ರಸಂಗದೊಳು ಕಾವ್ಯವನು ಅರಸುವಾಸೆ 
ಜನರ ಮೊಗದ ಅಭಿವ್ಯಕ್ತಿಯ ಕಾವ್ಯದೊಳು ಮೀಯುವಾಸೆ
ತಂಗಾಳಿಯ ತಂಪೊಳಗಿನ ಕಾವ್ಯವ ಅನುಭವಿಸುವಾಸೆ
ಎಲೆ ಉದುರಿ ಬೋಡಾದ ಮರದೊಳು ಕಾವ್ಯ ಹುಡುಕುವಾಸೆ
ಹಣ್ಣಾದ ಮುಪ್ಪಿನ ಸುಕ್ಕಲೂ ಕಾವ್ಯವ ಕಾಣುವಾಸೆ
ಸಣ್ಣ ಹನಿಗಳ ಮಳೆಯ ಕಾವ್ಯದಲಿ ನೆನೆಯುವಾಸೆ
ಕೆರೆಯ ದಡದ ನೀರ ತೆರೆಯಲಿ ಕಾವ್ಯ ಕೇಳುವಾಸೆ
ಎಳೆಯ ಮೊಗದ ತುಟಿಯಲಿ ಕವನ ಅನುಭವಸಿವಾಸೆ
ಮೊದಲ ಮಳೆಯ ಘಮಿಸುವ ಮಣ್ಣಲೂ ಕವನ ರಚಿಸುವಾಸೆ

- ತೇಜಸ್ವಿ.ಎ.ಸಿ 

Saturday, February 25, 2012

ಹುಸಿ ಮುನಿಸು

ಹುಸಿ ಮುನಿಸು

ಮನೆಯಲಿ ಜನರಿದ್ದೂ ಮನೆಯು ಬರಿದಾಗಿದೆ
ವಿನೋದಕೆ ಪರಿಕರವಿದ್ದೂ ಮನ ಶೂನ್ಯವಾಗಿದೆ
 
ನಿನ್ನ ನೆನಪು ಮನದಂಗಳಕೆ ಓಮ್ಮೆ ಇಣುಕಿದರು 
ತುಟಿಯರಳಿ ಸುಂದರ ಕಾಮನ ಬಿಲ್ಲಾಗುವುದು
 
ನಿನ್ನ ನಗುವಿನ ನೆನಪು ನನಗೆಂದೂ ನವೋಲ್ಲಾಸ  
ನಿನ್ನ ಮಾತುಗಳೆಂದೂ ಹೃದಯದಿ ನರ್ತನದ ಭಾಸ
 
ನಿನ್ನ ಮಾತುಗಳಲ್ಲಿನ ಹುಸಿ ಮುನಿಸು ತಿಳಿಯದೇ
ನನಗೆ, ಅದರ ಹಿಂದಿನ ನಗೆಯು ಕಾಣದೇ ಎನಗೆ   
 
ನನ್ನೊಳು ಕೋಪದಿ ಕಾಣುವ ನಿನ್ನ ಕೆಂಪಾದ ಕಣ್ಣು
ನಂತರದ ವಿರಹದಿ ಆಗುವವು ಬಾಡಿ ಬತ್ತಿದ ಹಣ್ಣು
 
ನಿನಗೂ ಗೊತ್ತು ನಿನ್ನ ವಿರಹ ವೇದನೆಯ ನನ್ನ
ತಿಳುವಳಿಕೆ,  ಅದರೂ ನಿನಗೆ ಹುಸಿಮುನಿಸು ಬೇಕೇ
 
ಇಬ್ಬರೂ ಇರುವೆವು ಭಾರವಾದ ಮನದ ವಿರಹದಿ
ಬಾ ಪ್ರಿಯೆ ಅರಸಿ ನೆಲೆಸೋಣ ಪ್ರೀತಿಯ ವಾಸ್ತವದಿ
 
- ತೇಜಸ್ವಿ.ಎ.ಸಿ

Sunday, December 18, 2011

ಪುಸ್ತಕದ ಹುಳು

ಪುಸ್ತಕದ ಹುಳು

ಪುಸ್ತಕ ಮಳಿಗೆ ನೋಡಿದೊಡೆ ಅನುಭವಿಸುವೆ ಸೆಳೆತ
ಕಾಲುಗಳು ತಿರುಗುವುವು ಬಿಡಿಸಿಕೊಳ್ಳಲಾರದೆ ಎಳೆತ

ವಾಹನಗಳ ದಾಟುತ ರಸ್ತೆಯ ಆ ಬದಿಗೆ ತಲುಪಿದೆ
ಪುಸ್ತಕ ಮಳಿಗೆಯ ತಲುಪಿ ಸಂತಸದಿ ಸಂಭ್ರಮಿಸಿದೆ               

ಮಳಿಗೆಯೊಳಗೆ ಹೊಕ್ಕಿದೊಡೆ ಪುಸ್ತಕಗಳ ಕೋಟೆ
ಮಳಿಗೆಯೊಳು ಗಿಜಿಗುಟ್ಟಿತು ಕೊಳ್ಳುವವರ ಭರಾಟೆ

ಪುಸ್ತಕವೆಂಬ ಶಬ್ದವೇ ಆಗುವುದು ಗೌರವಕ್ಕೆ ಪಾತ್ರ
ಆ ಅಭಿಮಾನಕೆ ಮಳಿಗೆಯಾಗಿತ್ತು ಸಂಭ್ರಮದ ಛತ್ರ    

ಕಪಾಟಿನೊಳಗೆ ವಿವಿಧ ವಿಷಯ ಪುಸ್ತಕಗಳ ಸಾಲು   
ಅತ್ಯತ್ತಮ ಹೊತ್ತಗೆಗಳೆಲ್ಲ ಪುಸ್ತಕ ಪ್ರೇಮಿಗಳ ಪಾಲು

ನಾನು ಹುಡುಕಿದೆ ನನ್ನ ನೆಚ್ಚಿನ ವಿಷಯದ ಗ್ರಂಥ
ಅದೂ ಇಟ್ಟಿದ್ದರು ನೋಡಿ ರಿಯಾಯಿತಿ ಬೆಲೆಗಂತ

ಹೀಗೆ ಮನೆಯಲ್ಲಿ ಹಾಗಿವೆ ಹತ್ತು-ಹಲವು ಪುಸ್ತಕಗಳು
ಇದ ನೋಡಿಯೇ ನನ್ನ ಕರೆದರೆನೋ ಪುಸ್ತಕದ ಹುಳು

- ತೇಜಸ್ವಿ .ಎ.ಸಿ

Tuesday, November 1, 2011

ಕಾವ್ಯಧಾರೆ

  ಕಾವ್ಯಧಾರೆ

  ಒಮ್ಮೆ ಎಚ್ಚೆತ್ತು ಹುಡುಕಲಾರಂಭಿಸಿದೆ ನನ್ನೊಳಗಿನ ಕವಿಯ
  ಒಳಗಿನ ಸೃಜನತೆಯ ಬಳಸಿ ನೀಡುತ್ತಿದ್ದ ಭಾಷೆಯ ಸವಿಯ

  ಆ ಸವಿ ರುಚಿಯ ಅನುಭವಿಸುವ ಚಪಲ ಮತ್ತೆ ಶುರುವಾಗಿದೆ
  ಅನುಭವದ ಮಾಧುರ್ಯವ ಮೆಲ್ಲುವ ಆಸೆ ಗರಿಗೆದರಿದೆ

  ಮನದೊಡಲಿನ ಲೋಕಕೆ ಬೆಳೆಸುವೆ ನನ್ನ ಪಯಣವ
  ಹಲವು ಅನುಭವಗಳೊಂದಿಗೆ ನಾ ಪಡೆವೆ ಮುದವ

  ನನ್ನೊಳಗಿನ ಮಾಧುರ್ಯವೇ ಮಾತಾಗಿ ಉಲಿಯಲಿ
  ಅನುಭವದ ಸವಿಯನು ಭಾಷೆಯ ರೂಪದಲಿ ಹರಡಲಿ

  ಕಾವ್ಯದ ಮಾಧುರ್ಯವೇ ನಿನ್ನ ಅಭಿಮಾನಿ ನಾನು
  ನಿನ್ನ ಕಂಪನು ಪಸರಿಸಿ ಮನವ ತಿಳಿಗೊಳುಸುವೆನು

  ಕನ್ನಡ ಪದಗಳ ಮೆರುಗಿನೊಡೆ ನಿನ್ನ ಅಲಂಕರಿಸುವೆ
  ಕನ್ನಡ ಅಕ್ಷರ ಮಾಲೆಯೊಡು ನಿನ್ನ ಆಲಂಗಿಸುವೆ

  ಕನ್ನಡ ಕಾವ್ಯದ ಸೇವೆಯಲ್ಲಿ ಪಡೆವೆ ನಾ ಸಂತಸವ 
  ಕಾವ್ಯಧಾರೆಯಲಿ ಉಣಬಡಿಸುವೆ ಎಲ್ಲರಿಗೂ ನವರಸವ

 - ತೇಜಸ್ವಿ.ಎ.ಸಿ