Sunday, November 30, 2014

ಕನಸು

                     ಕನಸು

  ನೆರಳು ಬೆನ್ನತ್ತುವದ ನಿಲ್ಲಬಹುದೇನೋ
  ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು
  ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ
  ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ 

  ಎಲ್ಲ ವಾಸ್ತವ ಒಮ್ಮೆಲೇ ಮರೆಸಿ, ಸದಾ
  ಬಂದು ನನ್ನ ಹೊತ್ತೊಯ್ಯುವ ನಿನಗೆ
  ನನ್ನ ಮೈ ಮನಗಳಿಗೆ ರಸದೌತಣ
  ಉಣಬಡಿಸದೆ ಮನದ ತಣಿವಾರದೇ 

  ನೀ ನಿತ್ಯವೂ ತೋರುವ ಲೋಕದ
  ಸೌಂದರ್ಯವು ನಿನ್ನ ಕೈಗಳ ಸೃಷ್ಟಿಯೇ 
  ಅಥವಾ ಇಂದ್ರನ ಆಸ್ಥಾನದಿಂದ
  ನನಗಾಗಿ ಎರವಲು ತಂದಿರಿವೆಯೋ

  ದಿನ ನಿತ್ಯ ನೋಡುವ ವಿಭಿನ್ನ ಕಥಾನಕ
  ಆ ಕಥೆಯ ವಿವಿಧ ಪಾತ್ರಗಳು ನನ್ನ
  ಕುತೂಹಲವ ಮೀರಿ ಸಂತಸವ 
  ಹೊತ್ತು ತಂದು ಮನದುಂಬಿವೆ

  ನೀ ನನಗಾಗಿ ತರುವ ಸುಖಾನುಭವ 
  ಸಂತಸವಿತ್ತಿದೆ, ಎನ್ನುವುದರ ಜೊತೆಗೆ
  ವಾಸ್ತವವ ಮರೆಮಾಚಿ ನನ್ನ ಕೆಲಸ
  ಕಾರ್ಯಗಳ ತಡ ಮಾಡಿರುವುದೂ ಸತ್ಯ

  ನೀ ಒಯ್ಯುವ ಸುಂದರ ಲೋಕದ
  ಪಯಣಕೆ  ಶಿಸ್ತಿನ ಅಲ್ಪವಿರಾಮವನಿತ್ತಿ
  ವಾಸ್ತವ ಜೀವನಕು ಪ್ರಾಶಸ್ತ್ಯ ಕೊಟ್ಟು
  ಎರಡನು ಸಮತೋಲನಗೊಳಿಸುವಾಸೆ

   - ತೇಜಸ್ವಿ.ಎ.ಸಿ

Friday, November 28, 2014

ನಿಷ್ಟುರ


                         ನಿಷ್ಟುರ


ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು
ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ
ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ
ನನ್ನ ಬಗ್ಗೆಯೇ ಇರುವ ಕೀಳು ಆತ್ಮ ಗೌರವದಿಂದೋ
ಎಂದು ತಪ್ಪು ತಿಳಿಯ ಬೇಡ ನನ್ನ ಬಂಧು ಮಿತ್ರನೇ

ನನ್ನ ತಾಳ್ಮೆ, ಸಹನೆಯ ತಪ್ಪು ತಿಳಿದು ನನ್ನ ಲಘುವಾಗಿ
ತೆಗೆದು ಕೊಳ್ಳಬೇಡ ನನ್ನ ಬಂಧು ಮಿತ್ರನೇ
ನಾ ತೋರುವ ಸಹಿಷ್ಣುತೆಗೆ ಇರುವ ಕಾರಣವೆಂದರೆ
ನಾ ನಮ್ಮ ಸಂಬಂಧಕ್ಕೆ ಕೊಡುವ ಬೆಲೆ ಹಾಗು ಅದನ್ನು
ಉಳಿಸಿಕೊಳ್ಳುಲು ನಾ ಮಾಡುತ್ತಿರುವ ತ್ಯಾಗ, ತಾಳ್ಮೆ

ನಾ ನಮ್ಮಗಳ ಸಂಬಂಧಕ್ಕೆ ಬೆಲೆ ಕೊಡುವ ಬದಲು
ತಿರುಗಿ ಸಿಡಿದೆದ್ದಿ ನಿಂತರೆ, ನಿಷ್ಟುರ ಕಟ್ಟಿಕೊಂಡು,
ನಮ್ಮೀ ಧೀರ್ಘ ಕಾಲದ ಸಂಬಂಧ ಕ್ಷಣ ಮಾತ್ರಕೆ
ಮುರಿದು ಬಿದ್ದು, ಜೀವನ ಪೂರ್ತಿ ಒಬ್ಬರನೊಬ್ಬರ
ಮುಖ ನೋಡದೆ, ಸಂಬಂಧ ಹಳಸೀತು ಎಚ್ಚರ.

ಕೋಪದಲ್ಲಿ ಕೊಯ್ದ ಮೂಗ, ಕೋಪವಿಳಿದ ಮೇಲೆ
ಬರಲಾರದೆಂಬಂತೆ, ನಮ್ಮ ಸಂಬಂಧ ಉಳಿಸಲು
ನಮ್ಮಿಬ್ಬರಲ್ಲಿಯೂ ಇರಲಿ ಸಹನೆ, ತಾಳ್ಮೆ, ತ್ಯಾಗ
ಇವೇ ನಮ್ಮ ದೀರ್ಘ ಕಾಲದ ಬಂಧುತ್ವ, ಸ್ನೇಹ
ಉಳಿಸಲು ಇರುವ ಅತ್ಯುತ್ತಮ ರಾಜ ಮಾರ್ಗಗಳು.

- ತೇಜಸ್ವಿ ಎ ಸಿ

Saturday, September 27, 2014

ಹಬ್ಬಗಳು

                       ಹಬ್ಬಗಳು

    ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ
   ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ

   ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ
   ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ

   ಹಬ್ಬದ ದಿನ ಹತ್ತಿರ ಬರುತ್ತಲೇ ನಡೆವುದು ತಯಾರಿ
   ಮನೆಯವರಿಗೆಲ್ಲ ಹೊಸ ಬಟ್ಟೆಗಳು ಬೇಕು ತರಾವರಿ

   ಮನೆಯ ಮುಂದೆ ಸುಂದರ ರಂಗೋಲಿಯ ಚಿತ್ತಾರ
   ಮನೆಯ ಬಾಗಿಲಿಗೆ ಮಾವಿನ ತೋರಣದ ಸಿಂಗಾರ

   ಮುಂಜಾನೆಯೇ ಮಾಡುವರು ಅಭ್ಯಂಜನ ಸ್ನಾನ
   ಮಡಿಯುಟ್ಟು ಆರಂಭಿಸುವರು ದೇವರ ಪೂಜೆಯನ

   ಹೊಸ ಬಟ್ಟೆಯುಟ್ಟು ನಲಿವರು ಮಕ್ಕಳು-ಮುದುಕರು
   ಹಬ್ಬಕೆ ನೆಂಟರು ಬಂದು ಸಂತೋಷ ತಂದಿಹರು

   ಮಧ್ಯಾಹ್ನ ಭೋಜನಕೆ ಉಂಟು ಒಬ್ಬಟ್ಟಿನ ಊಟ
   ಊರ ಬೀದಿ ಬೀದಿಗಳಲ್ಲೆಲ್ಲಾ ಸಂಭ್ರಮದ ನೋಟ

   ಹಬ್ಬಗಳ ಆಚರಿಸುವರು ಜನ ವಿಭಿನ್ನ ಕಾರಣಗಳಿಗೆ
   ಎಲ್ಲಾ ಹಬ್ಬಗಳು ಕೊಡುವುದು ಸಂತಸದ ಘಳಿಗೆ

   ಹಬ್ಬಗಳು ನಾಡಿನ ಅಖಂಡತೆ, ಏಕತೆಗೆ ದ್ಯೋತಕ
   ಇವುಗಳು ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕ

   - ತೇಜಸ್ವಿ. ಎ. ಸಿ

Tuesday, August 19, 2014

ಧಾರಾವಾಹಿ

                      ಧಾರಾವಾಹಿ
 
  ವಾಹಿನಿಯಲಿ ಹೊಸ ಧಾರಾವಾಹಿ ಆರಂಭಿಸಿದಾಗ
  ವಾಹಿನಿ ನೋಡುಗರಿಗೆ ಕುತೂಹಲ, ಹೊಸ ಆಶಯ
  ನೂತನ ಕಲ್ಪನೆಯ ಹೊಸತನ, ಭಿನ್ನತೆಯ ಸೊಗಸು
  ಹೊಸ ಮುಖಗಳ ತಾಜಾತನ ತರುವುದು ಆಹ್ಲಾದತೆ
 
  ದಿನಗಳೆದಂತೆ ತಾಜಾತನವು ಅಲ್ಲಿಯೇ ನಿಂತ 
  ನೀರಿನಂತಾಗಿ ನಿಧಾನಕೆ ಹುಳು ಉಪ್ಪಟೆಗಳ ತಾಣ 
  ನಿಂತಲ್ಲೇ ನಿಲ್ಲುವ ಧಾರಾವಾಹಿಯು ನಾರಲು ಶುರು 
  ಕ್ರಮೇಣವೆ ತಾಳ್ಮೆಯ ಕದ ತಟ್ಟುತಿದೆ ಹಳೆಯ ಚಾಳಿ
 
  ಸರಳ ಸಮಸ್ಯೆಯನು ಪರಿಹರಿಸದ ಕಥೆಗಾರನಿಗೆ 
  ಧಾರಾವಾಹಿ ಅಂತ್ಯದ ಭಯ ಮೂಡಿ, ತನ್ನ ಸೃಜನತೆಗೆ 
  ತಾನೇ ಬೇಲಿ ಕಟ್ಟುತ, ಪ್ರಭುದ್ದವಾಗಬೇಕಾದ ಕಥೆಗೆ    
  ಮೊದ್ದುತನ ಪೇರಿಸಿ ಅದನ್ನೇ ನೀರಸಗೊಳಿಸುತಿಹನು
 
 ಇಷ್ಟೆಲ್ಲಾ ನಡೆಯುತಿಹಲು ಮನೆಯಲ್ಲಿನ ಮಾನಿನಿಯರ
 ತಾಳ್ಮೆ, ಸಹನೆಯ ಕಟ್ಟೆಯ ಒಡೆಯದೆ, ಅದೇ ನಿಂತ 
 ಕಥೆಯ ಒಳ್ಳೆಯ ಭವಿಷ್ಯದ ಸದಾಶಯದಿಂದ ವೀಕ್ಷಿಸಿ
 ತಮ್ಮ ಸಹನಾಮಯತೆಯ ಪ್ರದರ್ಶನ ನೀಡುತಿಹರು    
 
 ಏಕಮುಖ ಮಾಧ್ಯಮದಿ ಪ್ರೇಕ್ಷಕ ಏನು ಮಾಡಿಯಾನು
 ಎಂದರಿತು ನಿರ್ದೇಶಕ ಭೀಗಿದಂತೆ, ಜನರ ತಾಳ್ಮೆಯ 
 ಸಮಯವ ಹಾಳುಗೆಡಹುತ, ಸರಣಿ ನಿರಾಸೆಗಳ ಜನಕೆ 
 ನೀಡುತ ತಾನು ಮಾತ್ರ ಕಾಂಚಣವ ಪೇರಿಸುತಿಹನು 
 
 - ತೇಜಸ್ವಿ .ಎ.ಸಿ

Wednesday, August 6, 2014

ಮುಖ ಪುಸ್ತಕ


      ಮುಖ ಪುಸ್ತಕ
 
ಪುಸ್ತಕದ ಹುಳುವಾಗಿ ಜ್ಞಾನವೆಚ್ಚಿಸಲೂ 
ಪುಸ್ತಕದ ಹಿಂದೆ ಮುಖವಡಗಿಸಲೂ
ಇರುವ ವ್ಯತ್ಯಾಸವನರಿಯೆ ಗೆಳೆಯ 

ಪುಸ್ತಕದ ಹಿಂದೆ ಅವಿತು ಕುಳಿತು ಸ್ನೇಹ
ಬಯಸಿ, ನನ್ನೆಲ್ಲ ವೈಯಕ್ತಿಕ ಜೀವನವ
ಮರೆಯಲ್ಲಿಯೇ ಸಾಲಾಗಿ ನೋಡ ಬಯಸಿ  

ನಾನು ನೇರವಾಗಿ ಆಡುವ ಮಾತುಗಳಿಗೆ
ಉತ್ತರ ಕೊಡದೆ ಮರೆಯಲ್ಲೇ ಮೌನತಾಳಿ
ಕುಳಿತರೆ ನಿನ್ನ ನಿಜ ಮುಖಬಣ್ಣ ತಿಳಿಯದೇ  

ನಾವಿರುವ ಪುಟ್ಟ ಬಾಳಿನಲಿ ಮರೆಯಿಂದ
ಹೊರಬಂದು, ಗೆಳೆಯನೊಟ್ಟಿಗೆ ಮುಕ್ತವಾಗಿ
ಮಾತನಾಡಿದರೆ ಬದುಕು ಸುಂದರವಲ್ಲವೇ 

- ತೇಜಸ್ವಿ ಎ ಸಿ

Friday, June 27, 2014

ನನ್ನತನ

              ನನ್ನತನ

 
ನನ್ನೊಳಗಿನ ನನ್ನನೇ ಬದಲಿಸಲೇ ನಾನು
ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ
ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ
ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ

ನಾನು ನೋಡಿ ಕೇಳಿ ಸ್ಪರ್ಶಿಸಿದ ಜಗ ಮಿಥ್ಯವೇ
ನನ್ನನುಭವ ತೋರಿ, ಹೇಳಿದ ವಾಸ್ತವ ಮಿಥ್ಯವೇ
ಪಂಚೇಂದ್ರಿಯಗಳ ನಂಬಿ ಬೆಳೆದ ನಾ ಮಿಥ್ಯನೇ
ವಾಸ್ತವವ ಅರ್ಥೈಸದೇ ಬೆಳೆಯಿತೇ ನನ್ನತನ

ನನ್ನೋಳಗಿನವ ನೋಡಿ ಕಲಿತದ್ದು ಹಸಿಸತ್ಯ
ಅವನಿಗೆ ಹೊಸ ಅಭ್ಯಾಸಗಳ ಪರಿಚಯಿಸಿ, ಸ್ವಲ್ಪ
ಶಕ್ತಿ ತುಂಬಿ, ಹೊಸ ನಡಾವಳಿಗಳ ಕಳಿಸಿ
ಅವನ ಹಾಗೆ ಉಳಿಸಿ, ಸ್ವಲ್ಪ ಮಾತ್ರ ಬದಲಿಸಬಲ್ಲೆ

ಆತ ಹಾಗೆ ಉಳಿಯಲಿ, ತಿಳಿದ ಹೊಸ ಸತ್ಯಗಳ
ಸ್ವಲ್ಪ ಸ್ವಲ್ಪವೇ ಪೋಣಿಸುತ, ಸಾಂಧರ್ಭಿಕವಾಗಿ
ಪ್ರತಿಸ್ಪಂದನೆ ಬದಲಾಯಿಸಿ, ನನ್ನವನ ಮೂಲ
ವ್ಯಕ್ತಿತ್ವಕೆ ಧಕ್ಕೆ ಬರದೆ, ತನ್ನತನವ ಉಳಿಸುವೆ

 - ತೇಜಸ್ವಿ .ಎ.ಸಿ

Friday, March 21, 2014

ಮಾಯಾಮೃಗ


          ಮಾಯಾಮೃಗ

ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ
ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ

ನನಗೂ ಬೇಡ ನಿರಾಸೆಗಳ ಹೊರುವ ಭಾರ
ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ

ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ ಒಮ್ಮೆಲೆ
ಎಲ್ಲವೂ ಕಳೆದಂತೆ ಮುಖ ಬಾಡಿತು ಒಮ್ಮೆಲೆ

ಸ್ವಲ್ಪ ದಿನಗಳು ಹಾಗೆ ಕಳೆದೆ ಕಳಾಹೀನನಾಗಿ
ವೈರಾಗ್ಯ ಮೂಡಿ ಕುಳಿತ ಸನ್ಯಾಸಿಯಂತಾಗಿ

ಆಸೆಗೂ ಗೊತ್ತು ಹೃದಯದಲ್ಲಿನ ಸಂವೇದನೆ  
ಅದರ ವಾಸ್ತವ ಮಾಚಬಲ್ಲ ಎಲ್ಲ ಪ್ರಲೋಭನೆ

ಹೃದಯಕೆ ಅರ್ಥವಾಗದು ಮೆದುಳಿನ ಭಾಷೆ
ಮತ್ತೆ ಏರುತಿದೆ ಅವಾಸ್ತವಿಕ ಆಸೆಗಳ ನಶೆ

ಅನುಭವವಿದ್ದರೂ ಮಾಯಾಮೃಗದ ಬೆನ್ನತ್ತಿದೆ
ಅದು ಮಿಂಚಿಮಾಯವಾದಾಗ ಪರಿತಪಿಸಿದೆ

ತೀರದ ಆಸೆಗಳು ಭಾರವಾಗಿ ಕಾಡಿವೆ ಜೀವನವ
ಬಿಡದೆ ಮಾಯಾಮೃಗವ ಹಿಡಿಯುವ ಹಂಬಲವ

 - ತೇಜಸ್ವಿ ಸಿ