Friday, June 27, 2014

ನನ್ನತನ

              ನನ್ನತನ

 
ನನ್ನೊಳಗಿನ ನನ್ನನೇ ಬದಲಿಸಲೇ ನಾನು
ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ
ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ
ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ

ನಾನು ನೋಡಿ ಕೇಳಿ ಸ್ಪರ್ಶಿಸಿದ ಜಗ ಮಿಥ್ಯವೇ
ನನ್ನನುಭವ ತೋರಿ, ಹೇಳಿದ ವಾಸ್ತವ ಮಿಥ್ಯವೇ
ಪಂಚೇಂದ್ರಿಯಗಳ ನಂಬಿ ಬೆಳೆದ ನಾ ಮಿಥ್ಯನೇ
ವಾಸ್ತವವ ಅರ್ಥೈಸದೇ ಬೆಳೆಯಿತೇ ನನ್ನತನ

ನನ್ನೋಳಗಿನವ ನೋಡಿ ಕಲಿತದ್ದು ಹಸಿಸತ್ಯ
ಅವನಿಗೆ ಹೊಸ ಅಭ್ಯಾಸಗಳ ಪರಿಚಯಿಸಿ, ಸ್ವಲ್ಪ
ಶಕ್ತಿ ತುಂಬಿ, ಹೊಸ ನಡಾವಳಿಗಳ ಕಳಿಸಿ
ಅವನ ಹಾಗೆ ಉಳಿಸಿ, ಸ್ವಲ್ಪ ಮಾತ್ರ ಬದಲಿಸಬಲ್ಲೆ

ಆತ ಹಾಗೆ ಉಳಿಯಲಿ, ತಿಳಿದ ಹೊಸ ಸತ್ಯಗಳ
ಸ್ವಲ್ಪ ಸ್ವಲ್ಪವೇ ಪೋಣಿಸುತ, ಸಾಂಧರ್ಭಿಕವಾಗಿ
ಪ್ರತಿಸ್ಪಂದನೆ ಬದಲಾಯಿಸಿ, ನನ್ನವನ ಮೂಲ
ವ್ಯಕ್ತಿತ್ವಕೆ ಧಕ್ಕೆ ಬರದೆ, ತನ್ನತನವ ಉಳಿಸುವೆ

 - ತೇಜಸ್ವಿ .ಎ.ಸಿ

Friday, March 21, 2014

ಮಾಯಾಮೃಗ


          ಮಾಯಾಮೃಗ

ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ
ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ

ನನಗೂ ಬೇಡ ನಿರಾಸೆಗಳ ಹೊರುವ ಭಾರ
ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ

ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ ಒಮ್ಮೆಲೆ
ಎಲ್ಲವೂ ಕಳೆದಂತೆ ಮುಖ ಬಾಡಿತು ಒಮ್ಮೆಲೆ

ಸ್ವಲ್ಪ ದಿನಗಳು ಹಾಗೆ ಕಳೆದೆ ಕಳಾಹೀನನಾಗಿ
ವೈರಾಗ್ಯ ಮೂಡಿ ಕುಳಿತ ಸನ್ಯಾಸಿಯಂತಾಗಿ

ಆಸೆಗೂ ಗೊತ್ತು ಹೃದಯದಲ್ಲಿನ ಸಂವೇದನೆ  
ಅದರ ವಾಸ್ತವ ಮಾಚಬಲ್ಲ ಎಲ್ಲ ಪ್ರಲೋಭನೆ

ಹೃದಯಕೆ ಅರ್ಥವಾಗದು ಮೆದುಳಿನ ಭಾಷೆ
ಮತ್ತೆ ಏರುತಿದೆ ಅವಾಸ್ತವಿಕ ಆಸೆಗಳ ನಶೆ

ಅನುಭವವಿದ್ದರೂ ಮಾಯಾಮೃಗದ ಬೆನ್ನತ್ತಿದೆ
ಅದು ಮಿಂಚಿಮಾಯವಾದಾಗ ಪರಿತಪಿಸಿದೆ

ತೀರದ ಆಸೆಗಳು ಭಾರವಾಗಿ ಕಾಡಿವೆ ಜೀವನವ
ಬಿಡದೆ ಮಾಯಾಮೃಗವ ಹಿಡಿಯುವ ಹಂಬಲವ

 - ತೇಜಸ್ವಿ ಸಿ 

Saturday, February 15, 2014

ಸಂಪದದ ಹಳೆಯಸಹಪಾಠಿಗಳ ನೆನೆದು

ಸಂಪದದ ಹಳೆಯಸಹಪಾಠಿಗಳ ನೆನೆದು

ಸಂಪದ ತೆರೆದಾಗ ನನ್ನ ಹಳೆಯ ಶಾಲೆಯ               
ಹೊಕ್ಕಂತಾಗಿ, ಹೊಸ  ಹೊಸ  ಹೆಸರುಗಳ
ಕಂಡು, ನನ್ನೊಂದಿಗಿದ್ದ ಸಕ್ರಿಯ ಸಂಪಧಿಗರ
ಹೆಸರುಗಳು ಇತಿಹಾಸದ ಪುಟ ಸೇರಿರುವುದ
ನೋಡಿ, ಶಾಲೆಯಲ್ಲಿದ್ದ ಹಳೆಯ ಸಹಪಾಠಿಗಳ 
ನೆನೆದಂತಾಗಿ, ಏನೋ ಖಾಲಿತನ ಕಾಡಿತು

ನಾ ಹಿಂದೆ ಬರೆಯುತ್ತಿದ್ದ ಪ್ರತಿ ಕವಿತೆಗಳ
ತಿದ್ದಿ ತೀಡಿ, ಪ್ರೋತ್ಸಾಹಿಸಿ, ಸ್ಪೂರ್ತಿಯಿತ್ತು
ಸದಾ ನನ್ನೊಂದಿಗೆ ಇದ್ದ  ನಾ ಹೆಚ್ಚು ಕಂಡಿರದ
ನನ್ನ ಸಂಪದ ಸಹಪಾಠಿಗಳ ನೆನೆದಿಂದು
ಮನಸಿನಲಿ ಖಾಲಿ ಮನೋಭಾವ ಮೂಡಿದೆ

ಸಂಪದ ಸಮ್ಮಿಲನದಲಿ ಭೇಟಿ ಮಾಡಿದ ಎಲ್ಲರ
ನೆನೆದು ಬೀಳ್ಕೊಟ್ಟ ವಿದ್ಯಾರ್ಥಿಗಳ ಹಳೆಯ
ನೆನಪಿನಂತೆ, ಒಂದೊಂದಾಗೆ ನೆನಪಿನ ಬುತ್ತಿ ಬಿಚ್ಚಿ,
ಇವರುಗಳು ಮತ್ತೊಮ್ಮೆ ಏಕೆ ಸಕ್ರಿಯರಾಗಬಾರದು
ಎಂದೆನಿಸಿ, ಜೊತೆಗೆ ಹೊಸಬರನ್ನೂ ಸ್ವಾಗತಿಸಿ
ಸಂಪದದ ಅಂಗಳದಲಿ ಸಕ್ರಿಯನಾಗುವಾಸೆ

- ತೇಜಸ್ವಿ.ಎ.ಸಿ 

Friday, February 14, 2014

ಸಾಲಾವಳಿ



                   ಸಾಲಾವಳಿ
 
ದಶಕಗಳು ಕಾದರು ಕನಸಿನ ದಿನ ಬರುವದೆಂದು
ವಿಜ್ಞಾನವ ಓದಿ, ತಿಳಿದರು ಬುದ್ದಿವಂತರಾದರೆಂದು
ಓದಿ ದುಡಿದು ಕೂಡಿಟ್ಟರು ತಮ್ಮ ಶುಭ ವಿವಾಹಕೆ
ತಮ್ಮ ಕನಸಿನ ಸಂಗಾತಿಯ ಪಡೆವ ಸಾಕಾರಕೆ
ಇರುವ ಆಯ್ಕೆಗಳ ಜಾತಿಯ ಹೆಸರಿನಲಿ ಬಸಿದು
ಮತ್ತೊಮ್ಮೆ ಒಳ ಪಂಗಡದ ಹೆಸರಿನಲಿ ಬಸಿದು
ನಂತರ ರೂಪ, ವಿಧ್ಯೆ, ಹಣದ ತಕ್ಕಡಿಯಲಿ ತೂಗಿ
ತದನಂತರ ಗುಣ, ಮನೆತನದ ಜಾಲರಿಗೆ ಹಾಕಿ
ಎಲ್ಲವೂ ಸಿಕ್ಕೂ ಮತ್ತೆ ನೋಡುವರು ಸಾಲಾವಳಿ
ಯುವ ವರ್ಗದ ಅಪೇಕ್ಷೆಗೆ ತಾವೇ ಹಾಕುತ ಬೇಲಿ
ಬೇಕೇ ವಿಜ್ಞಾನದ ಯುಗದಲೂ ಅಜ್ಞಾನದ ಾವಳಿ
ನಿಮ್ಮದೇ ಜೀವನಕೆ ನೀವೇ ಇಡುವ ಬೆಂಕಿ ಕೊಳ್ಳಿ
 
- ತೇಜಸ್ವಿ..ಸಿ


 
 

Friday, August 16, 2013

ನಾ ಭಾರತೀಯ.

          ನಾ ಭಾರತೀಯ 

ಮನದೊಳು ಪ್ರಾಂತೀಯತೆಯ ಧ್ವಜ ನೆಟ್ಟಿ
ನಮ್ಮ ಭಾಷಿಗರೆಂಬ ಸ್ವಂತ ಕೋಟೆಯ ಕಟ್ಟಿ
ಕೈಯಲ್ಲಿ ಮಾತ್ರ ತ್ರಿವರ್ಣವ ಹಿಡಿದಿಹ ಭಾರತೀಯ

ರಾಷ್ಟ್ರೀಯ ಭಾವೈಕ್ಯತೆಯ ಹುಡುಕ ಹೊರಟು ಸಿಕ್ಕಾರು
ಉತ್ತರ ಭಾರತೀಯ, ದಕ್ಷಿಣ ಭಾರತೀಯ
ಪೂರ್ವ ಭಾರತೀಯ, ಪಶ್ಚಿಮ ಭಾರತೀಯ
ಸಿಕ್ಕಾರೆ ಎಂದಾದರು ಎದೆ ತಟ್ಟಿ ಹೇಳುವ ನಾ ಭಾರತೀಯ

ಸಾವಿರ ಭಾಷೆಯ ದೇಶದಲಿ, ಸಾವಿರ ಸಂಸ್ಕೃತಿಯ
ನಾಡಿನಲ್ಲಿ, ಪರರ ಸಂಸ್ಕಾರಕೆ ಗೌರವವನಿತ್ತು   
ಭಾರತದ ಗಣತಂತ್ರತೆಯ ಬೆಸುಗೆಯ ಬೆಸೆದು
ಎದೆ ತಟ್ಟಿ ನಾವ್ ಹೇಳೋಣ ನಾ ಭಾರತೀಯ

ಸಣ್ಣ ತನಗಳ ಕಟ್ಟಿಟ್ಟು, ವಿಶಾಲ ಹೃದಯವ ಬಿಚ್ಚಿಟ್ಟು
ನಮ್ಮ ದೇಶಿಗರ ಎಲ್ಲಾ ಸಾಧನೆಗೆ ಹೆಮ್ಮೆ ಪಟ್ಟು
ದೇಶದ ಭವಿಷ್ಯ ಜೀವನದ ಮೇಲೆ ಕಣ್ಣಿಟ್ಟು
ನಾವೆಲ್ಲ ಎದೆ ತಟ್ಟಿ ಹೇಳೋಣ ನಾ ಭಾರತೀಯ.

- ತೇಜಸ್ವಿ. ಎ. ಸಿ

Saturday, July 27, 2013

ಒಗ್ಗಟ್ಟು

             ಒಗ್ಗಟ್ಟು
 
      ನನ್ನ ಮನದೊಳು ಮೂಡಿದ ಆಶ್ಚರ್ಯವಿದು
      ನಮ್ಮವರೇ ಕೊಡುವ ಲಘು ಆಘಾತವಿದು

      ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ
      ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ

      ನನ್ನ ಕನ್ನಡಾಭಿಮಾನವೇ ಅಸಹಜ ಹಾಗೂ
      ಅಪರೂಪದ್ದೇ ಎಂದೆನಿಸುವಷ್ಟು ಅನುಮಾನ

      ಒಗ್ಗಟ್ಟು ಮೂಡಿಸಲು ಕೊಡರು ಪ್ರೋತ್ಸಾಹ
      ಆಸಕ್ತರಿಗೂ ಹರಡುವರು ತಮ್ಮ ನಿರುತ್ಸಾಹ

       ಸರಳ ಕನ್ನಡದ ಸುಖ ಬೇಡವೇ ನಿಮಗೆ
       ಸಹಜತೆಯಲ್ಲೇ ಸಂತಸವಲ್ಲವೇ ನಮಗೆ

      ಕನ್ನಡವ ಬಳಸಲು ಪಡಬೇಡಿ ಕೀಳರಿಮೆ
      ನಮ್ಮಲ್ಲೇ ಪರರ ಮೆಚ್ಚಿಸಿ ಪಡದಿರಿ ಗರಿಮೆ

      ಕನ್ನಡದ ಮೇಲೆ ಸದಾ ಇರಲಿ ಅಭಿಮಾನ
      ಕನ್ನಡದಲ್ಲೇ ಅಡಗಿದೆ ನಮ್ಮ ಸ್ವಾಭಿಮಾನ

      ಮುಂದೆ ಬಾರದಿರಲು ನಮ್ಮಲ್ಲಿ ಮುಗ್ಗಟ್ಟು
      ಕನ್ನಡಿಗರ ಹೃದಯದಲಿ ಮೂಡಲಿ ಒಗ್ಗಟ್ಟು

       - ತೇಜಸ್ವಿ. ಎ. ಸಿ

Monday, July 8, 2013

ನಸು ನಗು

 ನಸು ನಗು

  ಕಿಸಕ್ಕನೆ ಸುಖಾಸುಮ್ಮನೆ ನಗುವ ನನ್ನ ನೋಡಿ
  ನನ್ನವಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ
  ನನ್ನ ಮನದೊಳ ಹರಿವ ಅಸಂಖ್ಯಾತ ಲೋಕಗಳ
  ವಿವರವ ನೀಡಲು, ಅವು ಅತಿ ಖಾಸಗಿಯಾಗಿ  
  ಮತ್ತೊಮ್ಮೆ ಅವಳ ಮುಖ ನೋಡಿ ನಸು ನಕ್ಕೆ.

  ಕ್ಷಣ ಕ್ಷಣಕೂ ಬದಲಾಗುವ ನನ್ನೊಳಗಿನ ಲೋಕ
  ಗಾಳಿಯಂತೆ ಬಂದು ಹರಿದಾಡಿ, ಅನುಭವವಿತ್ತು
  ಹೇಳ ಹೆಸರಿಲ್ಲದೆ ಹೊರಟು ಹೋಗುವ ಆಗುಂತಕ
  ಅದರ ಜಾಡು ಹಿಡಿದು ನಾನೆಂದೂ ಹಿಂಬಾಲಿಸಲಿಲ್ಲ
  ನಿನ್ನ ಪರಿಚಯವೇನೆಂದು ಅವುಗಳ ಪ್ರಶ್ನಿಸಲಿಲ್ಲ

  ಮುಂದೊಮ್ಮೆ ನಾ ಈ ರೀತಿ ನಸುನಕ್ಕರೆ ನೀನೂ
  ಹಿಂದಿರುಗಿ ನೋಡಿ ಓಮ್ಮೆ ನಕ್ಕುಬಿಡು ಮನದೊಡತಿ
  ಏಕೆಂದರೆ ನೀ ಕೇಳುವ ಪ್ರೆಶ್ನೆಗಳಿಗೆ ಉತ್ತರಿಸಬೇಕಾದ
  ನನ್ನೀ ಮನದ ಮರ್ಮ ಸ್ವತಃ ನಾನೂ ಅರಿಯೆ

  - ತೇಜಸ್ವಿ .ಎ.ಸಿ