Saturday, July 27, 2013

ಒಗ್ಗಟ್ಟು

             ಒಗ್ಗಟ್ಟು
 
      ನನ್ನ ಮನದೊಳು ಮೂಡಿದ ಆಶ್ಚರ್ಯವಿದು
      ನಮ್ಮವರೇ ಕೊಡುವ ಲಘು ಆಘಾತವಿದು

      ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ
      ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ

      ನನ್ನ ಕನ್ನಡಾಭಿಮಾನವೇ ಅಸಹಜ ಹಾಗೂ
      ಅಪರೂಪದ್ದೇ ಎಂದೆನಿಸುವಷ್ಟು ಅನುಮಾನ

      ಒಗ್ಗಟ್ಟು ಮೂಡಿಸಲು ಕೊಡರು ಪ್ರೋತ್ಸಾಹ
      ಆಸಕ್ತರಿಗೂ ಹರಡುವರು ತಮ್ಮ ನಿರುತ್ಸಾಹ

       ಸರಳ ಕನ್ನಡದ ಸುಖ ಬೇಡವೇ ನಿಮಗೆ
       ಸಹಜತೆಯಲ್ಲೇ ಸಂತಸವಲ್ಲವೇ ನಮಗೆ

      ಕನ್ನಡವ ಬಳಸಲು ಪಡಬೇಡಿ ಕೀಳರಿಮೆ
      ನಮ್ಮಲ್ಲೇ ಪರರ ಮೆಚ್ಚಿಸಿ ಪಡದಿರಿ ಗರಿಮೆ

      ಕನ್ನಡದ ಮೇಲೆ ಸದಾ ಇರಲಿ ಅಭಿಮಾನ
      ಕನ್ನಡದಲ್ಲೇ ಅಡಗಿದೆ ನಮ್ಮ ಸ್ವಾಭಿಮಾನ

      ಮುಂದೆ ಬಾರದಿರಲು ನಮ್ಮಲ್ಲಿ ಮುಗ್ಗಟ್ಟು
      ಕನ್ನಡಿಗರ ಹೃದಯದಲಿ ಮೂಡಲಿ ಒಗ್ಗಟ್ಟು

       - ತೇಜಸ್ವಿ. ಎ. ಸಿ

Monday, July 8, 2013

ನಸು ನಗು

 ನಸು ನಗು

  ಕಿಸಕ್ಕನೆ ಸುಖಾಸುಮ್ಮನೆ ನಗುವ ನನ್ನ ನೋಡಿ
  ನನ್ನವಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ
  ನನ್ನ ಮನದೊಳ ಹರಿವ ಅಸಂಖ್ಯಾತ ಲೋಕಗಳ
  ವಿವರವ ನೀಡಲು, ಅವು ಅತಿ ಖಾಸಗಿಯಾಗಿ  
  ಮತ್ತೊಮ್ಮೆ ಅವಳ ಮುಖ ನೋಡಿ ನಸು ನಕ್ಕೆ.

  ಕ್ಷಣ ಕ್ಷಣಕೂ ಬದಲಾಗುವ ನನ್ನೊಳಗಿನ ಲೋಕ
  ಗಾಳಿಯಂತೆ ಬಂದು ಹರಿದಾಡಿ, ಅನುಭವವಿತ್ತು
  ಹೇಳ ಹೆಸರಿಲ್ಲದೆ ಹೊರಟು ಹೋಗುವ ಆಗುಂತಕ
  ಅದರ ಜಾಡು ಹಿಡಿದು ನಾನೆಂದೂ ಹಿಂಬಾಲಿಸಲಿಲ್ಲ
  ನಿನ್ನ ಪರಿಚಯವೇನೆಂದು ಅವುಗಳ ಪ್ರಶ್ನಿಸಲಿಲ್ಲ

  ಮುಂದೊಮ್ಮೆ ನಾ ಈ ರೀತಿ ನಸುನಕ್ಕರೆ ನೀನೂ
  ಹಿಂದಿರುಗಿ ನೋಡಿ ಓಮ್ಮೆ ನಕ್ಕುಬಿಡು ಮನದೊಡತಿ
  ಏಕೆಂದರೆ ನೀ ಕೇಳುವ ಪ್ರೆಶ್ನೆಗಳಿಗೆ ಉತ್ತರಿಸಬೇಕಾದ
  ನನ್ನೀ ಮನದ ಮರ್ಮ ಸ್ವತಃ ನಾನೂ ಅರಿಯೆ

  - ತೇಜಸ್ವಿ .ಎ.ಸಿ

Saturday, June 15, 2013

ಅಣಿಗೊಳಿಸು

 ಅಣಿಗೊಳಿಸು 

 ಖಾಲಿ ಮನಸಿನ ಒಳ ಹೊಕ್ಕು 
 ಸುಂದರ ರೇಖೆಯ ಚಿತ್ರವ ಬಿಡಿಸಿ 
 ವಿಧ ವಿಧ ಬಗೆಯ ಬಣ್ಣವ ಮೂಡಿಸಿ
 ರಮ್ಯ ಪ್ರಕೃತಿ ಹಿನ್ನಲೆಯಿರಿಸಿ   
 ಅದ್ಭುತ ಘಟನೆಗಳ ಸರಣಿ ಪೋಣಿಸಿ   
 ವಿವಿಧ ಭಾವಗಳ ಭಾವನೆ ತೋರಿಸಿ  
 ಹೊಸ ಅನುಭವದ ರಸದೌತಣ ಬಡಿಸಿ 
 ಮನಕೆ ಆಹ್ಲಾದತೆಯ ಸಂತಸ ಕೊಡಿಸಿ      
 ನಿಧಾನವಾಗಿ ಸಿದ್ದ ಪಡೆಸುವೇ ನನ್ನನು
 ಹೊಸ ಕವನ ಬರೆಯಲು ಅಣಿಗೊಳಿಸಿ 
 
 - ತೇಜಸ್ವಿ..ಸಿ 

Tuesday, January 1, 2013

ಸರತಿ ಸಾಲು


  ಸರತಿ ಸಾಲು

  ನನ್ನ ಬದುಕಿನ ನಡು ಯೌವನದಿ
  ಬದುಕಿನ ಗುರಿಗಳ ಪಟ್ಟಿಯ ಹಿಡಿದು,
  ಜಾಣ ಯೋಜನೆಗಳನ್ನೆಲ್ಲ ರೂಪಿಸಿ
  ಕಾರ್ಯಶೀಲನಾಗಿ ಅವಕೆ ದುಡಿದು

  ಸಂಭ್ರಮಿಸಿದ್ದೆ ನಾನಂದು, ಕೆಲಸ
  ಕಾರ್ಯಗಳೆಲ್ಲಾ ಮುಗಿದಿದೆ ಎಂದು,
  ಮರು ದಿನದಲೂ ಕಾಣತೊಡಗಿತು
  ಕೆಲಸ ಕಾರ್ಯಗಳು ಒಂದೊಂದೇ

  ಹಳೆಯ ಅಭ್ಯಾಸದಂತೆ ಮಾಡಿದೆ
  ಅವುಗಳೆಲ್ಲದರ ಹೊಸ ಪಟ್ಟಿಯನು,
  ಕೊಡುತ ನಾ ಸಾಗಿದೆ ಎಲ್ಲ ಕಾರ್ಯಕೆ
  ಆದ್ಯತೆಯ ಮೇರೆಗೆ  ಸಂಖ್ಯೆಯನು

  ಮತ್ತೊಮ್ಮೆ ಎಲ್ಲಾ ಮುಗಿಸಿ ಆಶಿಸಿದೆ,
  ಬರೀ ವಿನೋದ ವಿರಾಮದ ದಿನಗಳ
  ಮರು ದಿನವು ಕಂಡೆ ನಾ ಕೆಲಸಗಳ,
  ತಿಳಿಯಿತಂದು ಜೀವನದ ಹೊಸ ಅರ್ಥ

  ಜೀವನವಿದು ಕೆಲಸಗಳ ಸರತಿಸಾಲು
  ಮುಗಿಯದು ಬದುಕಿನ ಕಾರ್ಯಗಳು
  ಜೀವನ ನಿರ್ವಹಣೆಯೇ ನಿತ್ಯದ ಕಾರ್ಯ
  ಕೆಲಸದ ಸಾಲಿದು ನಮಗನಿವಾರ್ಯ

  - ತೇಜಸ್ವಿ.ಎ.ಸಿ

Monday, December 10, 2012

ಪ್ರೀತಿಯಿಂದ

   ಪ್ರೀತಿಯಿಂದ  

   ಕವಿಮನದ ಸಹಜ ಆಸೆ ಬಿಟ್ಟು 
   ಬದುಕ ಕಟ್ಟುವ ಕಾರ್ಯ ಹೊತ್ತು
   ದುಡಿಯುತಿರುವೆ ಬದುಕಿಗಾಗಿ 
   ಅನ್ಯರ ಸಂಸ್ಥೆಗೆ ಹೆಗಲ ಕೊಟ್ಟು

   ನನ್ನೊಳಗಿನ ಕವಿಯು ರಾಜಿ ಮಾಡಿ
   ಅನ್ಯರ ವ್ಯವಹಾರಕೆ ಹಾದಿ ಮಾಡಿ 
   ದುಡಿಯುತಿರುವೆ ಆಸೆಗಳ ಮುಂದೂಡಿ    
   ಬದುಕ ಕಟ್ಟುವನೆಂಬ ಗುರಿಯ ಇಟ್ಟು

   ವಾರದ ದಿನಗಳ ಕಚೇರಿ ಕೆಲಸ
   ವಾರಾಂತ್ಯದ ಸಂಸಾರದ ಕೆಲಸ 
   ಕಾರ್ಯಗಳಲೇ ಮುಳುಗುತಿರುವೆ  
   ಸಾಹಿತ್ಯ ಕೃಷಿಯ ಆಸೆಯ ಬಿಟ್ಟು 

   ಬದುಕ ಕಟ್ಟುವ ಕಾರ್ಯವೂ ಇರಲಿ
   ಸಂಸಾರ ನೊಗದ ಭಾರವೂ ಇರಲಿ
   ಹೊಂದಿಕೊಂಡೇ ಸಾಗಿಸುವೆ ನನ್ನೀ  
   ಹವ್ಯಾಸವ, ಕೊಂಚ ಹೊತ್ತ ಮೀಸಲಿಟ್ಟು

   ಹವ್ಯಾಸಕುಂಟು ಬತ್ತದ ಉತ್ಸಾಹ
   ಎಲ್ಲ ಕಾಲದಲ್ಲುಂಟು ಸ್ವಪ್ರೋತ್ಸಾಹ
   ಅಂತಾರಾಳದ ಸಹಜ ಮಾತುಗಳಿವು
   ಕವನ ರಚಿಸುವೆ ನಾ ಪ್ರೀತಿಯಿಟ್ಟು

   - ತೇಜಸ್ವಿ.ಎ .ಸಿ

Monday, October 8, 2012

ಧರೆಗಿಳಿದ ಕಂದ

  ಧರೆಗಿಳಿದ ಕಂದ

  ಧರೆಗಿಳಿದು ಬಂದ ನನ್ನಯ ಕಂದ
  ಅಂದಾಯಿತು ಎನಗೆ ಮಹದಾನಂದ

  ವೈದ್ಯರಿತ್ತರು ಮಗನನು ಅಪ್ಪನ ಕೈಗೆ
  ಕಣ್ತುಂಬಿ ಬಂತಂದು ಸಂತಸ ಎನಗೆ

  ಬಟ್ಟಲು ಕಂಗಳಲಿ ನೋಡಿದ ಕಂದ
  ಮುದ್ದು ಮೊಗವು ನೋಡಲು ಚೆಂದ

  ಸಿಹಿ ಸುದ್ದಿಯನೆಲ್ಲೆಡೆ ಹಂಚಿದೆ ನಾನು
  ಮನೆಯವರ ಹರುಷಕೆ ಮಿತಿಯುನ್ಟೇನು

  ಜೀವನದ ದೃಷ್ಟಿಯೇ ಬದಲಾಯಿತೀಗ
  ಮುದ್ದು ಮಗನ ಆರೈಕೆಯೆ ಜೀವನವೀಗ

  ಕಂದನ ಮಡಿಲಲ್ಲೇ ಇರಿಸುವೆ ನಾನು
  ಮುದ್ದಿಸಿ ಆಡಿಸಿ ಮಲಗಿಸುವೆ ಅವನನ್ನು

  ನೀಡುವೆ ಉತ್ತಮವಾದ ಬದುಕಿನ ಪಾಠ
  ತೋರುವೆ ಸುಂದರ ಜೀವನದ ನೋಟ

  - ತೇಜಸ್ವಿ .ಎ.ಸಿ
    ಲಂಡನ್, ಯು.ಕೆ

Tuesday, September 11, 2012

ಬದಲಾವಣೆಯ ಗಾಳಿ

 ಬದಲಾವಣೆಯ ಗಾಳಿ
 
 ಬದುಕ ತಿರುವುಗಳ ಹಿಂದೆ ಮರೆಮಾಚಿವೆ ಮುಖಗಳು             
 ನಾವು ಕಂಡಿರದ ಒಳಮುಖಗಳ ನಿಜ ದರುಶನವಿತ್ತು 
 ಸಂಬಂಧದ ಸಂಕೋಲೆಗಳ ಸಡಿಲತೆಯ ತಿಳಿಸುತ್ತ
 ನವವಾಸ್ತವವ ತೋರಿ, ಸಂಬಂಧದ ಸೂಕ್ಷ್ಮತೆಯನು 
 ದ್ವಂದ್ವದಲಿ ಸಿಲುಕಿಸಿ, ಮೃದು ಮನದೊಡು ಆಟವಾಡಿದೆ
   
 ಹೊಸ ಚಿಗುರು ಬೆಳೆಯುವ ಪ್ರಕೃತಿಯ ನಿಯಮದಂತೆ  
 ಮುಂದಿನ ತಿರುವಿನಲ್ಲಿ ಹೊಸ ಸಂಬಂಧಗಳು ಸೇರಿ
 ಜೀವನದಿ ಬತ್ತದ ಉತ್ಸಾಹವನ್ನಿತ್ತು, ಇರುವ ಚಿಲುಮೆಯ  
 ನವೀಕರಿಸುತ್ತ, ಬದುಕಿಗೆ ಹೊಸ ದಿಕ್ಕಿನಲ್ಲಿ ಗಮ್ಯವನಿತ್ತು
 ಹೊಸ ಬದಲಾವಣೆಯ ಗಾಳಿಯು ಬೀಸಿದೆ ಜೀವನದಲಿ.

 - ತೇಜಸ್ವಿ.ಎ.ಸಿ