Saturday, March 27, 2010

ನಮ್ಮ ಮನೆ

 ನಮ್ಮ ಮನೆ

ಶಾಲೆಯಲ್ಲಿದ್ದಾಗ ನೆನೆಯುತ್ತಿದ್ದೆ ನಿನ್ನ ಪ್ರತಿ ಅವಧಿ
ಮನೆಯೇ, ನಿನ್ನಲ್ಲಿ ಅಲ್ಲವೇ ಸಿಗುವುದು ನನ್ನ ನೆಮ್ಮದಿ

ಶಾಲೆ ಘಂಟೆಯ ಸದ್ದಿಗೆ ಕಾದಿದ್ದೆವು ಬಕ ಪಕ್ಷಿಯಂತೆ
ಸಂಜೆಯಾದರೆ ಹಾರುತ್ತಿದ್ದೆವಲ್ಲ ಗೂಡಿಗೆ ಹಕ್ಕಿಯಂತೆ

ಆರಾಮದ ವಿಷಯದಲ್ಲಿ ಮನೆಗೆ ಉಂಟೆ ಸಾಟಿ?
ಮನೆಯಲಿರುವ ಸುಖಕ್ಕಾಗಿ ಎಲ್ಲರಿಗೂ ಬೇಕು ಸೂಟಿ

ಜನರು ದುಡಿದು ಕಟ್ಟಲು ಬಯಸುವ ಗೂಡು ನೀನು
ನಿನ್ನನು ನೆನೆದಾಗ ಸಿಗುವ ನೆಮ್ಮದಿಗೆ ಹೋಲಿಕೆ ಏನು?

ಹುಟ್ಟಿದಾಗಲೇ ಸ್ವಂತ ಮನೆಯೊಂದಿದ್ದರೆ ಅದೇ ಅದೃಷ್ಟ
ಆದರೂ, ಹೊಸ ಮನೆ ಕಟ್ಟುವ ಗುರಿಯೂ ಬಲು ಇಷ್ಟ

ಈಗೇನು, ಮನೆ ಕಟ್ಟಲು ಹಲವು ಬ್ಯಾಂಕುಗಳು ಕೊಡುತ್ತವೆ ಸಾಲ
ತೀರಿಸಲು ಉಪಯೋಗಿಸಿ ಕಂತುಗಳಲ್ಲಿ ನಿಮ್ಮ ಸಂಬಳದ ಬಲ

ಏನೇ ಹೇಳೀ ರಾಜಿ ಮಾಡಲಾಗದು ವಿಶಾಲ ಮನೆಯ ಅಗತ್ಯಕ್ಕೆ
ಬುದ್ದಿಯಿಂದ ಹಣ ಮಾಡಿ ಕಟ್ಟುವೆವು ಕನಸಿನ ಮನೆಯನ್ನು ಆಗಸಕ್ಕೆ

ಹಾಕಲಿ ಎಲ್ಲರೂ ಕಟ್ಟಿಸಲು ಮನೆಯ ನೀಲ ನಕ್ಷೆಯ ಯೋಜನೆ
ಎಲ್ಲರಿಗೂ ಸಿಗಲಿ ಸುಂದರ-ನೆಮ್ಮದಿಯ ತರುವ ಸ್ವಂತದ ಮನೆ

- ತೇಜಸ್ವಿ. ಎ. ಸಿ

Tuesday, March 16, 2010

ಸವಲತ್ತಿನ ಜೀವನ

ಸವಲತ್ತಿನ ಜೀವನ

ನಮ್ಮ ಕನಸಿಗೂ ಎಟುಕದ ಜೀವನವಿದು
ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು
ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ
ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ

ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ
ದೂರದಿ ಮಾತಾಡಲು ದೂರವಾಣಿಯ ಜಾಲ
ಸಾವಿರಾರು ಚಾನಲ್ ನ ದೂರದರ್ಶನದ ಗಾಳ
ಹೊಸ ವಿಧ್ಯುನ್ಮಾನ ಯಂತ್ರಗಳ ನಿತ್ಯದ ಮೇಳ

ಗಣಕ ಯಂತ್ರಗಳಲ್ಲಿ ಕೆಲಸ ಮಾಡುವ ಸವಲತ್ತು
ಬೇಕಾದಾಗ ಹಣ ಕೊಡುವ ಎಟಿಎಂಗಳ ದೌಲತ್ತು
ಆಹಾರ ಸುರಕ್ಷಿಸುವ ಶೀತಕ ಪೆಟ್ಟಿಗೆಗಳ ತಂಪು
ಬಗೆ ಬಗೆ ಅಡುಗೆಗೆ ವಿಧ್ಯುತ್ ಸಾಧನಗಳ ಇಂಪು

ಬರೆಯಲು ಕೂತರೆ ಬಾಲಂಗೋಚಿಯ ಪಟ್ಟಿಯಿದೆ
ಇವೆಲ್ಲದರಿಂದ ನಮ್ಮಗಳ ಜೀವನ ಬಲು ಗಟ್ಟಿಯಿದೆ
ಹಲವು ಯುಗದ ಜನಗಳು ಅನುಭವಿಸದ ಬಾಳ್ವೆಯಿದು
ನಿಶ್ಚಿಂತರಾಗಿರಲು ನಮಗೆ ದೈವವಿತ್ತ ಸೌಕರ್ಯವಿವು

ನೆನೆಯಿರಿ ಇಲ್ಲದ ಕುರಿತು ಕೊರಗುವ ಜನಗಳೇ
ಹಾಗೆಂದು ಸೋಮಾರಿಗಳಾಗಬೇಡಿ ಮನುಜರೆ
ಬಾಳಲು ಸಿಕ್ಕಿದೆ ಕೇಳದ ಸುಂದರ ಸುಖದ ಜೀವನ
ನೆನೆಯಿರಿ ಈ ಸುಖ ಸವಲತ್ತು ಕೊಟ್ಟ ಭಗವಂತನ

- ತೇಜಸ್ವಿ .ಎ.ಸಿ





Thursday, March 11, 2010

ತನ್ನನ್ನು ಮೊದಲು ಪ್ರೀತಿಸು

ತನ್ನನ್ನು ಮೊದಲು ಪ್ರೀತಿಸು

ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ದೋಣಿಯನು ಸಾಗಿಸುವ ಭರದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಬಾಲ್ಯದ ಹೊತ್ತಿಗೆಯ ಭಾರವನು ಇಳಿಸುವೆತ್ನದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಹರೆಯದ ಹುಚ್ಚು ಸ್ಪರ್ಧೆಯನು ಗೆಲ್ಲುವೆಡೆಯಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಯೌವನದಿ ಪರರ ಪ್ರೇಮವ ಪಡೆಯುವ ತವಕದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ತನ್ನ ಸಂಸಾರದ ಹೊರೆ ಹೊತ್ತು ದಡ ಮುಟ್ಟುವಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನಕೆ ಸಂಪಾದಿಸುವ ನೀ ಪಡುವ ಶ್ರಮದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ಪುಟವೊಮ್ಮೆ ತಿರುಗಿಸು, ಅಲಕ್ಷಿಸಿದ್ದೆಯ ತನ್ನನೇ
ನಿನ್ನೇ ಮನ ಬಿಚ್ಚಿ ಪ್ರೀತಿಸು, ಜೀವನೋತ್ಸಾಹವನ್ನು ಹೆಚ್ಚಿಸು  
ಆದ್ಯತೆ ಕೊಡು ಬದುಕಿನ ಲಕ್ಷ್ಯಕ್ಕೆ, ಹೆಚ್ಚಿಸು ಜೀವನದ ದಕ್ಷತೆ

- ತೇಜಸ್ವಿ.ಎ.ಸಿ

Wednesday, March 3, 2010

ಮಾನವ ಸಮಾನತೆ

ಮಾನವ ಸಮಾನತೆ

ಜೀವಿಸಲೊಂದು ಭೂಮಿ, ಒಂದೇ ಜೀವನ.
ಮಾಡಬಹುದಲ್ಲವೇ ಇದನ್ನು ನಂದನ ವನ

ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ
ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ

ಜಾತಿ ಧರ್ಮ ಎಂದು ಮಾಡುತ್ತಿದ್ದಾರೆ ಅಮಾಯಕರ ತಿಥಿ
ವೈಯಕ್ತಿಕವಲ್ಲವೇ ಈ ನಂಬಿಕೆಗಳು, ಓ ಭೂಮಿ ಮೇಲಿನ ಅತಿಥಿ?

ಈ ಮನದೊಳಗಿನ ನಂಬಿಕೆಗೆ ಏಕೆ ಬೇಕು ಬಾಹ್ಯ ಕಟ್ಟಡ?
ಸೃಷ್ಟಿಸಲೇ ಸದಾ ಗುಮಾನಿ, ಧ್ವೇಷವೆಂಬ ಅಂತರ?

ಅಳಿಸಿ ನೋಡಿ ಜಾತಿ, ಧರ್ಮ, ಭಾಷೆ ಹಾಗು ಬಣ್ಣ,
ಈ ಎಲ್ಲಾ ಒಂದೇ ಆದ್ರೆ ಜಗವು ಎಷ್ಟು ಸುಂದರವಣ್ಣ.

ಎಲ್ಲಾ ತೊಡೆದು ಒಂದಾಗಲು ಮನದಲಿ ತುಂಬಲಿ ಪ್ರೀತಿಯ
ಎಲ್ಲಾ ವ್ಯತ್ಯಾಸ ಮೀರಿ, ಮಾನವತೆ ಮೆರೆಯಲಿ ಎಂದೆನ್ನ ಆಶಯ

- ತೇಜಸ್ವಿ .ಎ. ಸಿ