Wednesday, February 21, 2024

ಹಣದ ಜಾಡು ಹಿಡಿಯುವುದು

 ಹಣದ ಜಾಡು ಹಿಡಿಯುವುದು


ಚಿತ್ರ ಕೃಪೆ:  ಅಂತರ್ಜಾಲ

 ನಾವು ಸಂಪಾದಿಸಿದ ಹಣ  ಎಲ್ಲಿ ಹೋಗುತ್ತದೆ,  ಯಾವುದಕ್ಕಾಗಿ ಬಳಸಲಾಗುತ್ತದೆ, ಎಲ್ಲಾದರೂ ಹಣದ ಸೋರಿಕೆ ಆಗುತ್ತಿದೆಯಾ  ಹಾಗೂ  ಇದರ ಮೂಲಕ ನಮ್ಮ ಸ್ವಭಾವವನ್ನು  ಅರಿತುಕೊಳ್ಳಲು  ಹಣದ ಜಾಡನ್ನು ಹಿಡಿಯಬೇಕಾಗುತ್ತದೆ.  ಇದಕ್ಕಾಗಿ  ನಾವು ಮಾಡುವ ಖರ್ಚುಗಳನ್ನು  ಬರೆಯಬೇಕು   ಅದು  ನಿರ್ದಿಷ್ಟವಾಗಿರಲಿ  ಅಂದರೆ  ಈ  ದಿನಾಂಕದಂದು  ಇಂತಿಷ್ಟು ಮೊತ್ತದ ಹಣವನ್ನು   ಈ ಉದ್ದೇಶಕ್ಕಾಗಿ  ಖರ್ಚು ಮಾಡಲಾಗಿದೆ  ನಂತರ  ಖರ್ಚುಗಳನ್ನು  ವರ್ಗಿಕರಣ ಮಾಡಬೇಕು.   ಇದನ್ನು  ಒಂದು ಪುಸ್ತಕದಲ್ಲಿ ಪೆನ್ನಿನ ಸಹಾಯದಿಂದಾದರು ಮಾಡಬಹುದು  ಅಥವಾ   ನಿಮ್ಮ ಮೊಬೈಲ್ ನಲ್ಲಿ   ಖರ್ಚುಗಳಿಗೆ ಸಂಬಂಧಪಟ್ಟ  ಮೊಬೈಲ್ ಅಪ್ಲಿಕೇಶನ್ ಮೂಲಕವಾದರೂ  ಮಾಡಬಹುದು.  ನಿಮ್ಮ ಖರ್ಚು ವೆಚ್ಚಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ   ಕನಿಷ್ಠಪಕ್ಷ  ಮೂರು ತಿಂಗಳಾದರೂ ಬರೆಯಬೇಕು. ಆದರೆ  ವರ್ಷಪೂರ್ತಿ ಪ್ರತಿನಿತ್ಯ ಬರೆಯುವ ಅಗತ್ಯವಿರುವುದಿಲ್ಲ.

 ಇಂದಿನ ದಿನಗಳಲ್ಲಿ  ಖರ್ಚಿನ ಲೆಕ್ಕ ಬರೆಯುವುದು ತಂತ್ರಜ್ಞಾನದ ಸಹಾಯದಿಂದ ಇನ್ನೂ ಸುಲಭವಾಗಿದೆ.    ನೀವು  ಯುಪಿಐ ಮೂಲಕ  ಆಗುವ ವೆಚ್ಚಗಳು  ನೆಟ್ ಬ್ಯಾಂಕಿಂಗ್  ನಲ್ಲಿ   ಸುಲಭವಾಗಿ   ನೋಡಿ  ಲೆಕ್ಕವನ್ನು ಬರೆಯುವುದು.   ಮೊಬೈಲ್ ಅಪ್ಲಿಕೇಶನ್ ನಲ್ಲಿ   ಖರ್ಚು ಆದ ತಕ್ಷಣ   ಖರ್ಚನ್ನು ದಾಖಲಿಸಬಹುದು.   ಇದಲ್ಲದೆ   ಖರ್ಚಿನ  ಸಮಗ್ರ ವರದಿಯನ್ನು ಸಿದ್ಧಪಡಿಸಬಹುದು.  ಇದರಿಂದ   ನಿಮಗೆ   ಏತಕ್ಕಾಗಿ,   ಎಷ್ಟು,   ಎಲ್ಲಿ,   ಯಾವತ್ತು   ಖರ್ಚುಗಳನ್ನು ಮಾಡಿದ್ದೇವೆ  ಎಂಬುದು   ನಿಮ್ಮ ಮುಂದೆ ಬರುತ್ತದೆ.    ಈ ವರದಿಯಿಂದ   ನೀವು   ವಿಷಯಗಳನ್ನು ಅರ್ಥೈಸಿಕೊಂಡು  ಮುಂದೆ  ಯಾವ ಕ್ರಮವನ್ನು ಕೈಗೊಳ್ಳಬೇಕೆಂದು  ನಿರ್ಧರಿಸಬಹುದು.

Tuesday, February 6, 2024

ಒಬ್ಬರೇ ನಿರ್ವಹಿಸುವುದು ಅಸಾಧ್ಯ

ಒಬ್ಬರೇ  ನಿರ್ವಹಿಸುವುದು  ಅಸಾಧ್ಯ:

ಚಿತ್ರ ಕೃಪೆ:  ಅಂತರ್ಜಾಲ 

    ವೈಯಕ್ತಿಕ  ಹಣಕಾಸು ನಿರ್ವಹಣೆ    ಹೆಸರೇ ಸೂಚಿಸುವಂತೆ  ವೈಯಕ್ತಿಕ ಆದರೂ  ಅದು  ನಿಜ ಅರ್ಥದಲ್ಲಿ ಕೌಟುಂಬಿಕ.   ಅಂದರೆ  ಮನೆಯ ಹಣಕಾಸು ನಿರ್ವಹಣೆ  ಕೇವಲ  ಮನೆಯ  ಯಜಮಾನನದಲ್ಲ ಅದರಲ್ಲಿ  ಸಂಗಾತಿಯ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಹಾಗೂ ಕೌಟುಂಬಿಕ   ಮಟ್ಟದಲ್ಲಿ ನಡೆಯಬೇಕು.    ಹಣಕಾಸಿನ  ಎಲ್ಲಾ  ಆಯವ್ಯಯಗಳ  ಚರ್ಚೆ  ಮನೆಯಲ್ಲಿ ನಡೆಯಬೇಕು  ಸಂಗಾತಿಗಳು ಇಬ್ಬರು ಕುಳಿತು  ಚರ್ಚಿಸಿ  ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.   ಇಲ್ಲದೆ ಹೋದರೆ   ಎತ್ತು ಏರಿಗೆ  ಎಳೆದರೆ ಕೋಣ  ನೀರಿಗೆ ಎಳಿದಂತೆ.  ಇದರಿಂದ  ಬದುಕಿನ ಬಂಡಿ  ಎಲ್ಲೂ ಸಾಗುವುದಿಲ್ಲ. 

 ಇಂತಹ ಅವ್ಯವಸ್ಥೆಯಿಂದ ಸೋಲುಗಳು, ನಿರಾಶೆಗಳು, ಹತಾಶೆಗಳು ಸಾಮಾನ್ಯವಾಗಿ ಬಿಡುತ್ತವೆ. ಅತೃಪ್ತಿ, ಅಸಮಾಧಾನ, ಕೋಪ  ಹೊಗೆಯಾಡುತ್ತಿರುತ್ತದೆ ಇದರಿಂದ ಕೌಟುಂಬಿಕ ವ್ಯವಸ್ಥೆಗೆ  ಅಡ್ಡ ಪರಿಣಾಮ ಬೀರುತ್ತದೆ.  ಆದ್ದರಿಂದ  ಪರಿಹಾರವಾಗಿ ಕುಟುಂಬದಲ್ಲಿ  ಆರ್ಥಿಕ ವ್ಯವಸ್ಥೆಯನ್ನು  ಸೃಷ್ಟಿಸಿಕೊಳ್ಳಬೇಕು  ಒಂದು ಪ್ರಕ್ರಿಯೆಯನ್ನು  ರೂಪಿಸಬೇಕು,   ಅದಕ್ಕಾಗಿ   ಮೂಲಸೌಕರ್ಯದ  ವ್ಯವಸ್ಥೆಯನ್ನು ಮಾಡಿರಬೇಕು ಹಾಗೆ ಅದಕ್ಕೆ ಸಾಧನಗಳನ್ನು ಕಂಡುಕೊಳ್ಳಬೇಕು.    

     ಈ ವ್ಯವಸ್ಥೆಯ ಭಾಗವಾಗಿ  ಕನಿಷ್ಠಪಕ್ಷ  ತಿಂಗಳಿಗೆ ಒಂದು  ದಿನ ಕುಳಿತು  ಆಯವ್ಯಯಗಳ  ಚರ್ಚೆ ನಡೆಸಬೇಕು.  ಇದರಲ್ಲಿ  ಮುಂದಿನ ಕೆಲಸ ಕಾರ್ಯಗಳು,  ಎದುರಿಸುತ್ತಿರುವ ಸಮಸ್ಯೆಗಳು,  ಅದರ  ಪರಿಹಾರಗಳು  ಹಾಗೂ ಭವಿಷ್ಯದ ಯೋಜನೆಗಳನ್ನು ಚರ್ಚಿಸಬೇಕು.   ಎಲ್ಲದಕ್ಕೂ ಎಷ್ಟು ಖರ್ಚಾಗುತ್ತದೆ,  ಅವುಗಳನ್ನು ಹೇಗೆ ನಿಭಾಯಿಸಬೇಕು  ಎಂಬುದರ ಚರ್ಚೆ ನಡೆಸಬೇಕು  ಹಾಗೆಯೇ ಮುಂದಿನ ತಿಂಗಳ  ಬಜೆಟ್  ಅನ್ನು ಸಿದ್ಧಪಡಿಸಬೇಕು. ಈ ಚರ್ಚೆಯು  ಒಂದು ಕಚೇರಿಯಲ್ಲಿ ಕಾರ್ಯವು ನಡೆಯುವಂತೆ  ವ್ಯವಸ್ಥಿತವಾಗಿ  ಇರಬೇಕು   ಅದಕ್ಕಾಗಿ  ನೀವು ಮನೆಯಲ್ಲಿ  ಕುರ್ಚಿ ಮೇಜುಗಳ  ವ್ಯವಸ್ಥೆ ಇರಬೇಕು ಅಥವಾ  ನಿಮ್ಮ ಮನೆಯ  ಡೈನಿಂಗ್ ಟೇಬಲ್ ಮೇಲೆ  ಕೂಡ ನಡೆಸಬಹುದು.   ಇದಕ್ಕಾಗಿ    ಗಣಕಯಂತ್ರದಲ್ಲಿ   ಎಂಎಸ್ ಎಕ್ಸೆಲ್  ನಂತಹ  ಸಾಧನಗಳನ್ನು  ಬಳಸುವುದು  ಅತಿ ಮುಖ್ಯ.   ಜೊತೆಗೆ   ಅವಶ್ಯಕತೆ   ಬಂದಲ್ಲಿ  ಸಂಬಂಧಪಟ್ಟ  ಮೊಬೈಲ್ ಅಪ್ಲಿಕೇಶನ್ ಗಳನ್ನು  ಬಳಸಬಹುದು.         

     ಈ ರೀತಿಯಲ್ಲಿ  ಇಬ್ಬರೂ ಚರ್ಚೆ ನಡೆಸುವುದರಿಂದ ಮನೆಯಲ್ಲಿನ ಬೇಡಿಕೆಗಳನ್ನು ಅರ್ಥೈಸಿಕೊಂಡು ಅದರ ಪೂರೈಕೆ ಹೇಗೆ,  ಯಾವಾಗ  ಮಾಡಬೇಕು ಎಂಬುದನ್ನು ನಿರ್ಧರಿಸಬಹುದು. ಇದರಿಂದ ಇಬ್ಬರಲ್ಲೂ ಸಮನ್ವಯತೆ  ಮೂಡಿ ಬರುತ್ತದೆ  ಜೊತೆಗೆ ಕೆಲಸಗಳು ಸರಾಗವಾಗಿ ಸಾಗುತ್ತವೆ.   ಇಲ್ಲದೆ ಹೋದರೆ ಮನೆಯಲ್ಲಿರುವ ಇತರೆ ಸದಸ್ಯರುಗಳು ಬೇಡಿಕೆಗಳನ್ನು ಇಡುವುದು,  ಒಬ್ಬರು ಮಾತ್ರ  ಅವುಗಳನ್ನು ನಿರ್ವಹಿಸುವುದು, ಪೂರೈಸುವುದು   ಸಾಧ್ಯವಾಗದ ಮಾತು.   ಅದಕ್ಕೆ   ಮನೆಯ ಎಲ್ಲಾ ಸದಸ್ಯರು   ಬೇಡಿಕೆ ಹಾಗೂ ಪೂರೈಕೆಗಳನ್ನು ಅರ್ಥಮಾಡಿಕೊಳ್ಳಬೇಕು. ಬಜೆಟ್ ಗೆ ಎಲ್ಲರೂ ಸ್ಪಂದಿಸಬೇಕು  ಆಗಲೇ  ಮನೆಯಲ್ಲಿ  ಸಮತೋಲನವಿರುತ್ತದೆ.

     ಸಾಮಾನ್ಯವಾಗಿ  ಮನೆಯಲ್ಲಿ  ಮಾಡಬೇಕಾದ ಕೆಲಸಗಳ ಪಟ್ಟಿಯನ್ನು (To-Do List) ಸಿದ್ಧಪಡಿಸುತ್ತಾ ಹೋಗಬೇಕು.     ಈ ಪಟ್ಟಿ  ನಿಮ್ಮ  ಕೆಲಸಗಳನ್ನು  ಮರೆಯದೆ  ಮಾಡಲು  ಸಹಕಾರಿಯಾಗುತ್ತದೆ ಅಲ್ಲದೆ ನಿಮ್ಮ ಚರ್ಚೆಗೆ  ವಿಷಯಗಳಾಗಿ  ಪ್ರಸ್ತುತವಾಗುತ್ತದೆ.   ಇದಲ್ಲದೆ  ನೀವು ಮಾಡುವ ಖರ್ಚುಗಳನ್ನು  ಒಂದು ಪುಸ್ತಕದಲ್ಲಿ  ಬರೆಯಿರಿ, ಅದಕ್ಕಿಂತಲೂ ಉತ್ತಮವಾದ  ಉಪಾಯವೆಂದರೆ  ಒಂದು ಮೊಬೈಲ್ ಅಪ್ಲಿಕೇಶನ್ ನಲ್ಲಿ  ದಾಖಲಿಸುತ್ತಾ ಹೋಗಬೇಕು.  ಇದು  ನೀವು ಮಾಡುವ  ಖರ್ಚುಗಳ ವೈಕರಿಯನ್ನು  ತೋರಿಸುತ್ತದೆ  ಇದರಿಂದ  ನೀವು ಚರ್ಚೆ  ಹಾಗೂ ವಿಶ್ಲೇಷಣೆ ಮಾಡಲು  ಅನುಕೂಲವಾಗುತ್ತದೆ.   ಇದು ಒಂದು ತ್ರಾಸದಾಯಕವಾದ ಕೆಲಸ  ಆದುದರಿಂದ  2 ರಿಂದ 3 ತಿಂಗಳು ಮಾಡಿದರು  ನಿಮಗೆ  ಒಂದು ಅಂದಾಜು ಲೆಕ್ಕ ಸಿಗುತ್ತದೆ.      

 ಸಾಕಷ್ಟು ಮನೆಗಳಲ್ಲಿ  ವೇತನ ಬಂದ  ಒಂದು ವಾರ ಅಥವಾ 15 ದಿವಸಗಳಲ್ಲಿ   ಹಣವೆಲ್ಲ ಮುಕ್ಕಾಲು ಪಾಲು ಖಾಲಿಯಾಗುತ್ತದೆ ಎಂದು ಹೇಳುವವರು ಹೆಚ್ಚು.    ನೀವು ಬಕಪಕ್ಷಿಗಳಂತೆ  ಕಾದು ಕುಳಿತು ನಿಮ್ಮ ವೇತನ ಅಥವಾ ಆದಾಯ ಬರುತ್ತಿದ್ದಂತೆ   ಎಲ್ಲವನ್ನು ಒಟ್ಟಿಗೆ ಖರ್ಚು ಮಾಡದಿರಿ.   ಅದರ ಬದಲಾಗಿ  ಕೇವಲ ಮಾಸಿಕ ಬಿಲ್ ಗಳನ್ನು ಕಟ್ಟಿ  ಉಳಿದವನ್ನು  10 ದಿನಗಳ ಕಾಲಾವಧಿಯ  3 ಸ್ಲಾಟ್ ಗಳನ್ನು  ಮಾಡಿಕೊಳ್ಳಿ.   ಅಂದರೆ   ಮೊದಲ 10 ದಿನದಲ್ಲಿ   ಕೆಲವು ಕಾರ್ಯಗಳನ್ನು ಮಾಡಿ.  ಉಳಿದ ಕೆಲಸಗಳನ್ನು 10 ದಿನಗಳ  ಇನ್ನು ಎರಡು ಸ್ಲಾಟ್ ಗಳಲ್ಲಿ  ಹಂಚಿಕೆ ಮಾಡಿ.   ಇದರಲ್ಲಿ ಕಾಯಲಾರದ ಕೆಲಸಗಳನ್ನು  ಮೊದಲ ಸ್ಲಾಟ್ ನಲ್ಲೆ ಮುಗಿಸಿ, ಆತುರವಲ್ಲದ ಕಾಯಬಲ್ಲ ಕೆಲಸಗಳನ್ನು ಉಳಿದ ಇನ್ನೆರಡು ಸ್ಲಾಟ್ ಗಳಲ್ಲಿ  ಮಾಡಬಹುದು.    ಇದರಿಂದ  ತಿಂಗಳ ಮೊದಲ ವಾರದಲ್ಲೇ  ಹಣವೆಲ್ಲ ಖರ್ಚಾಗಿ  ಅಭದ್ರತೆಯಿಂದ  ಚಿಂತೆ ಮಾಡುವುದು ತಪ್ಪುತ್ತದೆ  ಹಾಗೂ  ಮುಂಬರುವ ತುರ್ತು ಪರಿಸ್ಥಿತಿಗಳನ್ನು  ನಿಭಾಯಿಸಲು  ಹಣದ ಅಭಾವ  ಇರುವುದಿಲ್ಲ.   ಹೀಗೆ ಮಾಡುವುದರಿಂದ  ನಿಮ್ಮ ಬ್ಯಾಂಕಿನ ಖಾತೆಯಲ್ಲಿ  ಹಣ ಉಳಿದು  ಮನದ ನೆಮ್ಮದಿಯನ್ನು ಕಾಪಾಡಲು  ಸಹಾಯವಾಗುತ್ತದೆ.    

 ಹೀಗೆ  ಮನೆಯಲ್ಲಿರುವ ದಂಪತಿಗಳು  ಹಾಗೂ ಹಿರಿಯರು  ಎಲ್ಲರೂ ಸೇರಿ  ಚರ್ಚೆಗಳ ಮೂಲಕ  ಹಾಗೂ ಒಪ್ಪಂದದ ಮೂಲಕ  ಮನೆಯನ್ನು ಹಾಗೂ ಹಣಕಾಸನ್ನು ನಿರ್ವಹಿಸಿದರೆ,  ಮನೆಯ  ಮತ್ತು  ಆರ್ಥಿಕ ನಿರ್ವಹಣೆ  ವಾಸ್ತವಿಕತೆಯ ನೆಲೆಗಟ್ಟಿನಲ್ಲಿ  ಸುಸೂತ್ರವಾಗಿ ನಡೆಯುತ್ತದೆ.  ಒಂದು ವೇಳೆ  ಮನೆಯ ಹಿರಿಯ ಸದಸ್ಯರು  ಇದಕ್ಕೆ  ಆಸಕ್ತಿ  ತೋರದಿದ್ದಲ್ಲಿ   ಅವರಿಗೆ   ಇದರ ಮಹತ್ವವನ್ನು  ವಿಸ್ತೃತವಾಗಿ ಹೇಳಿ   ಮನದಟ್ಟು ಮಾಡಬೇಕು  ಮತ್ತು   ಅವರು  ಇದಕ್ಕೆ ಸಹಕಾರ ಕೊಡುವಂತೆ  ಮನವೊಲಿಸಿ  , ಈ ಚಟುವಟಿಕೆಯಲ್ಲಿ   ಸಕ್ರಿಯವಾಗಿ   ಭಾಗವಹಿಸುವಂತೆ  ಮಾಡಬೇಕಾಗುತ್ತದೆ.


  


Thursday, February 1, 2024

ಹಣಕ್ಕೆ ಪ್ರತಿಯಾಗಿ ಸಿಗುವ ಮೌಲ್ಯ

 ಹಣಕ್ಕೆ ಪ್ರತಿಯಾಗಿ ಸಿಗುವ  ಮೌಲ್ಯ :


                                
ಹಣವೇ  ಮುಖ್ಯಾನಾ ? ಈ ಪ್ರಶ್ನೆಗೆ  ಸಿಗುವ  ಸರಳವಾದ ಉತ್ತರವೆಂದರೆ   'ಇಲ್ಲ'.   ಹಾಗಿದ್ದರೆ ಹಣ ಯಾಕೆ ಮುಖ್ಯವಲ್ಲ?   ಏಕೆಂದರೆ  ನಮಗೆ ಬೇಕಾದದ್ದು  ಹಣವಲ್ಲ  ಬದಲಾಗಿ  ಹಣವೆಂಬ ವಿನಿಮಯ ಮಾಧ್ಯಮದಿಂದ  ವಿನಿಮಯದಲ್ಲಿ ಸಿಗುವ  ಮೌಲ್ಯ  ಅಂದರೆ  ಉತ್ಪನ್ನಗಳು  ಹಾಗೂ ಸೇವೆಗಳು   ಹಾಗೂ ಅದರ ಮೂಲಕ  ನಮ್ಮ ಅವಶ್ಯಕತೆ  ಹಾಗೂ  ಆಸೆಗಳ  ಈಡೇರಿಕೆ. 


                                          ಚಿತ್ರ ಕೃಪೆ:  ಅಂತರ್ಜಾಲ

ಮೌಲ್ಯಗಳೆಂದರೆ ಯಾವುದು?   ಉತ್ತಮವಾದ ಆರೋಗ್ಯ,  ಆರ್ಥಿಕ ಮತ್ತು ಸಾಮಾಜಿಕ ಭದ್ರತೆ,   ಸುಸಜ್ಜಿತವಾದ ಮನೆ, ಪ್ರಯಾಣಕ್ಕೆ ವಾಹನದಂತಹ ಮೂಲ ಸೌಕರ್ಯ, ಆರೋಗ್ಯಕರ ಮನೋರಂಜನೆ,  ಸ್ನೇಹಿತರೊಡನೆ, ಕುಟುಂಬದೊಡನೆ  ಉಲ್ಲಾಸ ಗೊಳಿಸುವ ಪ್ರವಾಸ, ಆಸೆಗಳ ಈಡೇರಿಕೆ,  ಸ್ವಚ್ಛತೆ,  ಶಾಂತಿ-ನೆಮ್ಮದಿ, ಗುರಿಗಳ ಸಾಧನೆ ಹಾಗೂ  ಅಭಿವೃದ್ಧಿ, ಉತ್ತಮರ ಒಡನಾಟ,   ಮಕ್ಕಳ  ಶ್ರೇಯೋಭಿವೃದ್ಧಿ  ಹಾಗೂ  ಬೌದ್ಧಿಕ ವಿಕಾಸ,  ಸೃಜನಶೀಲತೆ ಹೆಚ್ಚಿಸುವ ಚಟುವಟಿಕೆ,  ಆರೋಗ್ಯಕರ ಕ್ರೀಡೆಗಳು, ಉತ್ತಮ ಹವ್ಯಾಸಗಳು ಇತ್ಯಾದಿ  

   ಮೇಲೆ ತಿಳಿಸಿದ  ಮೌಲ್ಯಗಳನ್ನು  ತಲುಪಲು  ಮಾಧ್ಯಮಗಳು ಬೇಕು ಅದಕ್ಕೆ ಉತ್ತಮವಾದ ಸೇವೆ  ಹಾಗೂ  ಉತ್ಪನ್ನಗಳ ಪಾತ್ರ ಮಹತ್ವದ್ದು. ಅದರಲ್ಲೂ ಉತ್ಪನ್ನಗಳು  ಹೆಚ್ಚು    ಲಾಭದಾಯಕವಾಗಿರುತ್ತದೆ ಅವು ಏಕೆ ಮಹತ್ವದ್ದು ಎಂದರೆ ಒಂದು ಉತ್ಪನ್ನವು ಕೂಡ ಸೇವೆಯನ್ನೇ ಒದಗಿಸುತ್ತದೆ, ಅವುಗಳಿಗೆ  ಒಮ್ಮೆ ಹಣ ಪಾವತಿ ಮಾಡಿಕೊಂಡು ಕೊಂಡರೆ ಅವು ನಮ್ಮ ಮಾಲೀಕತ್ವದಲ್ಲಿ  ಇರುವುದರಿಂದ   ಸೇವೆಗಳನ್ನು  ಪುನರತ್ಮಾಕವಾಗಿ  ಬಳಸಿಕೊಳ್ಳಬಹುದು.  ನಮ್ಮ ಬಳಿ ಇರುವ  ಕುಕ್ಕರ್ ,  ಗಣಕಯಂತ್ರ,   ವಾಹನ ,   ಮೊಬೈಲ್ ಫೋನ್  ಅಥವಾ  ಯಾವುದಾದರೂ ಸಲಕರಣೆಗಳು ಅಂದರೆ ಮನೆಯ ಪಾತ್ರೆಗಳು,  ಸೌಟು, ಚಮಚ ,  ಏಣಿ,  ಕುರ್ಚಿ, ಮೇಜು  ಇವುಗಳನ್ನು ಸಹ ಪುನರ್  ಬಳಕೆ ಮಾಡಿ    ಅವು ಕೊಡುವ  ಸೇವೆಗಳನ್ನು  ಪುನರತ್ಮಾಕವಾಗಿ   ಬಳಸಬಹುದು. ಅಂದರೆ  ಉತ್ಪನ್ನಗಳು  ತಮ್ಮ ಸೇವೆಗಳನ್ನು ಹೆಚ್ಚುವರಿ ಶುಲ್ಕವಿಲ್ಲದೆ  ಸತತವಾಗಿ  ಕೊಡುತ್ತವೆ. 

  ಅದೇ ರೀತಿಯಲ್ಲಿ ಹಣ ಪಾವತಿಸಿ  ಒಮ್ಮೆಲೆ  ಮಾತ್ರ  ಬಳಸಬಹುದಂತ  ಹೋಟೆಲ್  ಆಹಾರ,  ಬಾಡಿಗೆ ವಾಹನ,  ದಿನಸಿ,  ತರಕಾರಿ,  ಇಂಧನ,  ಬ್ಯೂಟಿ ಪಾರ್ಲರ್ ಸೇವೆ,  ಸಮಾರಂಭದ ಖರ್ಚು  ಇತ್ಯಾದಿ  ಸೇವೆಗಳು  ಪಾವತಿಸಿದ ಹಣಕ್ಕೆ ಒಮ್ಮೆ ಮಾತ್ರ ಬಳಸಬಹುದು.  ಇವುಗಳನ್ನು  ಉಪಭೋಗ್ಯ (consumables) ವಸ್ತುಗಳನ್ನಾಗಿ  ಗುರುತಿಸಬಹುದು. ಹೀಗೆ  ಉತ್ಪನ್ನಗಳು ಆಗಿರಲಿ,  ಸಲಕರಣೆಗಳಾಗಿರಲಿ  ಅಥವಾ ಸೇವೆಗಳಾಗಿರಲಿ  ನಮ್ಮ ಜೀವನದಲ್ಲಿ  ಬೇಕಿದ್ದ ಮೌಲ್ಯಗಳನ್ನು ಸೃಷ್ಟಿ ಮಾಡುವುದು.   ಆದುದರಿಂದ  ನಮಗೆ ಬೇಕಿರುವ  ಮೌಲ್ಯಗಳು  ಅಥವಾ ಸೇವೆಗಳ  ಕಡೆಗೆ ಗಮನವಿರಬೇಕೆ ಹೊರತು ಅದರ ಬೆಲೆಗಲ್ಲ ಅಥವಾ ಬರಿ ಹಣದ ಸಂಗ್ರಹಣೆಗಲ್ಲ.

 ಹಣ ಗಳಿಸುತ್ತಾ ಹೋದರೆ  ಅದಕ್ಕೆ ಮಿತಿ ಇರುವುದಿಲ್ಲ ಆದರೆ  ನೀವು ನಿಮ್ಮ ಅವಶ್ಯಕ  ವಸ್ತುಗಳನ್ನು  ಅಥವಾ  ನಿಮ್ಮ ಆಸೆಗಳನ್ನು  ಈಡೇರಿಸಲು ಹೊರಟರೆ ಜೊತೆಗೆ ಅದು ನಿಮ್ಮ ಜೀವನಕ್ಕೆ ಕೊಡುವ  ಮೌಲ್ಯಗಳಿಗೆ ಗಮನಹರಿಸಿದರೆ  ಅದಕ್ಕೊಂದು ಮಿತಿ ಇರುತ್ತದೆ  ಹಾಗೆಯೇ  ತೃಪ್ತಿಯ  ಕೊನೆ ಇರುತ್ತದೆ.   ಆದುದರಿಂದ  ನಿಮಗೇನು ಬೇಕು  ಎಂಬುದು ಸ್ಪಷ್ಟವಾಗಿ   ತಿಳಿದಿರಲಿ  ಆಗ  ನಿಮ್ಮ ಜೀವನದಲ್ಲಿ ಮೌಲ್ಯದ ಕಡೆಗೆ ಗಮನ ಹರಿಸಬಹುದು  ಹಾಗೂ  ಸಂತೃಪ್ತಿಗೆ ಒತ್ತು ಕೊಡಬಹುದು. 


ಒಂದು ವೇಳೆ ಜಗತ್ತನ್ನು  ಮೆಚ್ಚಿಸಬೇಕು  ಎಂಬ ಉದ್ದೇಶದಿಂದ  ಹೊರಟರೆ, ನೀವು ಅನಗತ್ಯವಾದಂತಹ   ಅದ್ದೂರಿ  ಮತ್ತು ಆಡಂಬರದ ವಸ್ತುಗಳನ್ನು,  ನಿಮ್ಮ ಬಳಿ ಇಲ್ಲದ ದುಡ್ಡಿನಿಂದ  (ಸಾಲದ  ಹಣದಿಂದ)  ಖರೀದಿಸಲು ಹೊರಟರೆ, ಆ ಜಗಮೆಚ್ಚುಗೆ ಎಂಬ ಕಾರ್ಯ ಯಾವುದೇ ಮೌಲ್ಯ   ಸೃಷ್ಟಿಸುವುದಿಲ್ಲ.  ನಿಮಗೆ ಹೊರೆಯಾಗಿ ಮಾನಸಿಕ ಹಿಂಸೆಯಾಗಿ  ಪರಿಣಮಿಸುತ್ತದೆ.   ಹಾಗಾಗಿ ಪೊಳ್ಳು ಪ್ರತಿಷ್ಠೆಯನ್ನು ಬಿಟ್ಟು  ಸರಿಯಾದ ಮೌಲ್ಯಗಳನ್ನು ಅರ್ಥೈಸಿಕೊಳ್ಳಿ  ಹಾಗೂ ಅದರ ಈಡೇರಿಕೆಯೊಂದಿಗೆ ತೃಪ್ತಿಯ ಜೀವನ ನಡೆಸಿ.