ವನ ಮಹೋತ್ಸವ

on Friday, December 31, 2010

ವನ ಮಹೋತ್ಸವ


ಶಾಲೆಯಲ್ಲಿ ಮಾಡಿದೆವು ವನ ಮಹೋತ್ಸವ
ಸಸಿಯ ನೆಡಲು ನಮಗೆ ಕೊಟ್ಟಿತು ಉತ್ಸಾಹ

ಅಂದು ಶಾಲೆಯಲಿ ಇತ್ತು ಪುಟ್ಟ ಸಮಾರಂಭ
ನಂತರ ಮಾಡಿದೆವು ಗಿಡ ನೆಡಲು ಆರಂಭ

ಪುಟ್ಟ ಸಲಾಖೆಯ ಹೊತ್ತು ತಂದೆವು ನಾವು
ಕೆತ್ತಿ ಆವರಣದಲಿ ಚಿಕ್ಕ ಪಾತಿಯ ಮಾಡಿದೆವು

ಬಗೆ ಬಗೆಯ ಸಸಿ ನೆಟ್ಟು ಅದಕ್ಕೆ ನೀರೆರೆದೆವು
ಆ ಸಸಿಗಳಿಗೆ ಗೊಬ್ಬರ ನೀಡಿ ಪೋಷಿಸಿದೆವು

ಪುಟ್ಟ ಸಸಿಗಳ ತೋಟವಾಯ್ತು ಶಾಲೆ ಅಂಗಳ
ಮುಂದಿನ ಪೀಳಿಗೆಗೆ ಹಾಡುವುದಿದು ಮಂಗಳ

ಪ್ರತಿ ವರ್ಷ ಆಚರಿಸುವೆವು ವನ ಮಹೋತ್ಸವ
ಹಸಿರು ಹೆಚ್ಚಿಸಲು ಕೊಡುವೆವು ಪ್ರೋತ್ಸಾಹ

- ತೇಜಸ್ವಿ.ಎ.ಸಿ

ಪ್ರಕೃತಿ ಪ್ರವಾಸ

on Wednesday, December 22, 2010

ಪ್ರಕೃತಿ ಪ್ರವಾಸ


ಯಾಂತ್ರಿಕತೆಯಿಂದ ಬೇಸರವೆನಿಸಿತು ನಗರದ ವಾಸ
ಯೋಚಿಸಿದೆವು ನಾವೆಲ್ಲಾ ಮಾಡಲು ಪುಟ್ಟ ಪ್ರವಾಸ

ಸಭೆ ಏರ್ಪಡಿಸಿದೆವು ತೀರ್ಮಾನಿಸಲು ಪ್ರವಾಸದ ತಾಣ
ಬದಲಾವಣೆಗೆ ಮಲೆನಾಡೇ ಒಳ್ಳೆಯದೆಂದ ಒಬ್ಬ ಜಾಣ

ನಾಲ್ವರೂ ಸೇರಿ ಹೊರೆಟೆವು ಹತ್ತಿ ನಮ್ಮ ಕಾರು
ಉತ್ಸಾಹದಲೇ ಪ್ರವಾಸಕಾಗಿ ಬಿಟ್ಟೆವು ನಮ್ಮ ಊರು

ದಾರಿಯುದ್ದಕೂ ಕಂಡಿತು ಹಚ್ಚ ಹಸಿರ ಗುಡ್ಡ ಬೆಟ್ಟಗಳು
ಹಸಿರ ಕಾಡ ತಂಪಾಗಿಸಿತ್ತು ಹರಿಯುತ್ತಿದ್ದ ಝರಿಗಳು

ದಾರಿಯಲ್ಲಿ ಕಾಣ ಸಿಕ್ಕವು ಪುಟ್ಟ ಮೊಲ, ಜಿಂಕೆ, ಕೋತಿ
ಸಣ್ಣನೆ ಮಂಜು ಹೆಚ್ಚಿಸಿತು ಪ್ರಕೃತಿಯ ರಮ್ಯತೆ ಈ ರೀತಿ

ಸುಂದರ ನೋಟದ ನಡುವೆ ತಲುಪಿದೆವು ವಿಹಾರಧಾಮ
ತುಂತುರು ಮಳೆ ಶುರುವಾಗಿ ಹೆಚ್ಚಿಸಿತು ಪ್ರಕೃತಿ ಪ್ರೇಮ

ಪ್ರವಾಸದಿ ನಾವು ಹೊಕ್ಕಿದೆವು ದಟ್ಟನೆಯ ಅಭಯಾರಣ್ಯ
ನಾಡಿನ ಅರಣ್ಯ ಸಂಪತ್ತು ನೋಡಿ ನಾನಾದೆನಂದು ಧನ್ಯ

ಯಥೇಚ್ಛ ಪ್ರಕೃತಿ ಸಂಪತ್ತನು ಹೊಂದಿದ ನಾಡು ನಮ್ಮದು
ಈ ಸಂಪತ್ತನು ರಕ್ಷಿಸಿ ಬೆಳೆಸುವ ಜವಾಬ್ದಾರಿಯು ನಮ್ಮದು

ಪ್ರಕೃತಿಯ ಪ್ರವಾಸದಲಿ ಎಲ್ಲೂ ಪ್ಲಾಸ್ಟಿಕ್ ಬಳಸಿಲಿಲ್ಲ ನಾವು
ಹೀಗೆ ಎಲ್ಲಾ ನೋಡಿಕೊಂಡೆವು ಏರದಂತೆ ಭೂಮಿಯ ಕಾವು

- ತೇಜಸ್ವಿ.ಎ.ಸಿ

ಪರಿಪೂರ್ಣತೆಯ ಹುಚ್ಚು

on Sunday, December 12, 2010

ಪರಿಪೂರ್ಣತೆಯ ಹುಚ್ಚು

ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು
ಸರಳ ತೃಪ್ತಿಗಾಗಿ ಹೋರಾಡುವುದು ತರವೇ?
ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ
ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?
ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ ಅತ್ಯುನ್ನತ
ಸಾಧಿಸಲು ಮನದ ನೆಮ್ಮದಿಯ ಮರೆವುದು ತರವೇ?
ಬಾಹ್ಯ ಸಮಾಜದ ಕಣ್ಣ ಮೆಚ್ಚುಗೆಯ ಉದ್ದೇಶಕಾಗಿ
ಬಲವಂತದ ಗುರಿಯ ಹೊರುವುದು ತರವೇ?

ಮನದ ಸಹಜ ಸಂತೋಷವನು ಮಿತಿ ಇಲ್ಲದ
ಈ ಆಸೆಗಳ ಹತೋಟಿಗೆ ಬಿಟ್ಟು ಕೊಡಲಾರೆ
ನವಿರಾದ ಭಾವನೆಗಳ ಕೋಮಲ ಹೃದಯವನು
ಸಾಮರ್ಥ್ಯ ಅಳೆವ ಹುಚ್ಚು ಜೂಜಿಗೆ ಬಿಡಲಾರೆ
ಕೈಯಲ್ಲೇ ಇರುವ ನನ್ನ ಸುಂದರ ಜೀವನವನ್ನು
ದಿಕ್ಕು ಕೊನೆಯಿಲ್ಲದ ಸ್ಪರ್ಧೆಗಳಿಗೆ ತಳ್ಳಲಾರೆ
ನನಗಿತ್ತುರುವ ಶಕ್ತಿ ಸಾಮರ್ಥ್ಯವನು ವಿರಳವಾದ
ಪರಿಪೂರ್ಣತೆಯೆಂಬ ಅತೃಪ್ತಿಗೆ ಒಪ್ಪಿಸಲಾರೆ

ಚಿಕ್ಕ ವಿಷಯಗಳಲ್ಲೂ ತೃಪ್ತಿ ಪಡೋಣ ನಾವು
ಆಗದಿರಲಿ ಪರಿಪೂರ್ಣತೆ ಎಂಬುದು ನೋವು
-ತೇಜಸ್ವಿ.ಎ.ಸಿ

ಕವನ ರಚಿಸುವ ಅನುಭವ

on Monday, December 6, 2010

ಕವನ ರಚಿಸುವ ಅನುಭವ


ಕವನ ಬರೆಯಲು ಕೂತರೆ ಆಗುವುದು ಮನ ಪುಳಕ
ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ

ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ
ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ

ಬರೆಯಲು ಕುಳಿತರೆ ಜೀವಕೆ ಸಿಗುವುದು ಹೊಸಜೀವ
ಕವನವು ಕೊಡುವುದು ನಮಗೆ ನವ ಜೀವನೋತ್ಸಾಹ

ನನ್ನ ಅನುಭವಕೆ ಅಕ್ಷರಗಳು ಕೊಡುವವು ಸೌಂದರ್ಯ
ಕನ್ನಡದಲೇ ನಾ ಮಾಡುವೆನು ಕವನ ಕೆತ್ತುವ ಕಾರ್ಯ

ಕನ್ನಡದ ಪದಗಳು ಮಾಡುವವು ನಿರೂಪಣೆ ಸುಲಭ
ಅದರಿಂದಲೆ ಕವನ ರಚನೆ ಒಂದು ಸುಂದರ ಅನುಭವ

ಕವನ ರಚನೆಯಿಂದ ಹಗುರವಾಗುವುದು ನಮ್ಮ ಮನ
ಸುಂದರ ಕವನದ ರಚನೆ ನೀಡುವುದು ಸಂತೋಷವನ್ನ

- ತೇಜಸ್ವಿ.ಎ.ಸಿ