Wednesday, October 27, 2010

ಕೃಷಿಕನಾಗುವೆ

ಕೃಷಿಕನಾಗುವೆ


ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ
ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ
ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ,
ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ

ವರುಷಗಳ ನಂತರ ಸಿಕ್ಕ ಅವಕಾಶಕೆ ನಾ ನಡೆದೆ
ತೋಟದ ಒಳಗೆ, ಹಿಂದೆಯೇ ಇದ್ದ ಹಸಿರು ಗದ್ದೆಯು
ಮೈದುಂಬಿ ನಿಂತಿತ್ತು, ತನ್ನ ಬಳಿ ಇದ್ದ ಜಲ ಸಂಪತ್ತ
ತೋರುತ, ತನ್ನ ಶ್ರೀಮಂತಿಕೆಯ ಜೊತೆ ಬೀಗುತ

ಹಾಗೆಯೇ ಕಾಲ ಸವೆಸುತ ಸ್ವಲ್ಪ ಮುನ್ನಡೆದರೆ
ಕಂಡಿತೆನಗೆ ಘಮ ಘಮಿಸುವ ಏಲಕ್ಕಿಯ ಗಿಡಗಳು
ಸುತ್ತಲೂ ಇದ್ದ ಎತ್ತರದ ಅಡಕೆಯ ಮರಗಳ ಮಧ್ಯೆ
ತಾನು ಕಾಣದೆ ಮೆಣಸಿನ ಹಿಂದೆ ಬಚ್ಚಿಟ್ಟು ಕೊಂಡಿತ್ತು

ತೋಟದ ಪಕ್ಕದಲ್ಲೇ ಇದ್ದ ಕೊಡಗಿನ ಕಿತ್ತಳೆ ಹಣ್ಣು
ನನ್ನ ಕೃಷಿಯ ತಿಳುವಳಿಕೆಗೆ ಪುಟ್ಟ ಸವಾಲಾಯಿತು
ಪಕ್ಕದಲ್ಲೇ ಗುಡ್ಡದ ಮೇಲೆ ಇದ್ದ ಕಾಫಿ ಬೆಳೆ, ಒಂದೇ
ಕಡೆ ಕಂಡ ವೈವಿಧ್ಯ ಬೆಳೆ ನನ್ನನ್ನು ಬೆರಗುಗೊಳಿಸಿತು

ಸುಂದರ ಪ್ರಕೃತಿಯ ನಡುವೆ ಕಂಡ ಹತ್ತು ಹಲವು
ಬಗೆಯ ಕೃಷಿ ತಂದುಕೊಟ್ಟಿತು ಎಲ್ಲರಿಗೂ ಉತ್ಸಾಹ
ನಾವೂ ಮುಂದೆ ನಗರವ ತೊರೆದು, ಪ್ರಕೃತಿ ಸಹಜ
ಕೃಷಿಯಲಿ ತೊಡಗಿ ವ್ಯವಸಾಯ ಮಾಡುವ ಪ್ರೋತ್ಸಾಹ

- ತೇಜಸ್ವಿ.ಎ.ಸಿ

Sunday, October 17, 2010

ಗೃಹಸ್ತಾಶ್ರಮ

  ಗೃಹಸ್ತಾಶ್ರಮ


  ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ
  ಹಸೆಮಣೆಯ ಏರಿ ಕುಳಿತಿಹನಿಂದು ವರ
  ಬಾಗಿಲಲಿ ಕಾಣುತಿದೆ ಹಸಿರು ತೋರಣ
  ಹುಡುಗನ ಮೈಯೆಲ್ಲಾ ಆಗಿದೆ ಹರಿಶಿಣ

  ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು
  ಭರದಿಂದ ಸಾಗಿದೆ ಲಗ್ನದ ಕಾರ್ಯಗಳು
  ಮನೆಯಲ್ಲಿಂದು ನಡೆದಿದೆ ದೇವರ ಕಾರ್ಯ
  ಹುಡುಗನು ಮುಗಿಸುತ್ತಿದ್ದಾನೆ ಬ್ರಹ್ಮಚರ್ಯ

  ನಾಲ್ಕು ದಿನದಿ ಬಂದಿತು ಮದುವೆಯ ದಿನ
  ಮನೆ ಮಂದಿಗೆಲ್ಲರಿಗಿದು ಸಂಭ್ರಮದ ದಿನ
  ಮಂಟಪವು ಅಲಂಕೃತವಾಗಿದೆ ಹೂಗಳಿಂದ
  ಶಾಸ್ತ್ರಗಳು ಆರಂಭವಾಗಿದೆ ಶಾಸ್ತ್ರಿಗಳಿಂದ

  ಕನ್ಯಾಧಾರೆಯ ಮಾಡಿಹರು ಮಗಳ ಹೆತ್ತವರು
  ಮಾಂಗಲ್ಯಧಾರಣೆ ಮಾಡಿಸಿ ಆದರು ಗೆದ್ದವರು
  ಗೃಹಸ್ತಾಶ್ರಮ ಪ್ರವೇಶಿಸಿದ ಸಪ್ತಪದಿ ತುಳಿದು
  ಹೊಸ ಜೀವನವ ಆರಂಭಿಸಿದ ಹುಡುಗನಿಂದು

  - ತೇಜಸ್ವಿ ಎ.ಸಿ

Friday, October 8, 2010

ಕಾರ್ಯಶೀಲನಾಗು

  ಕಾರ್ಯಶೀಲನಾಗು


ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ
ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ

ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ
ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ

ಮನೆಯಲ್ಲಿ ಹಣದ ಕೊರತೆಯ ಎಂದೂ ನೋಡಲಿಲ್ಲ
ಬೇಡದ ದುರಭ್ಯಾಸಗಳ ನಾ ಎಂದೂ ಬೆಳೆಸಲಿಲ್ಲ

ತಿಳಿದಿದೆಯೇ ನಿಮಗೆ ಈ ಎಲ್ಲಾ ಸೋಲಿಗೆ ಕಾರಣ
ನಾನು ಕಟ್ಟಬೇಕು ಕೆಲಸಗಳಿಗೆ ಗೆಲುವಿನ ತೋರಣ

ಶಿಷ್ಯಾ, ಕೂತು ಕೆಲಸದ ಬಗ್ಗೆ ಯೋಚಿಸಿದರೆ ಫಲವಿಲ್ಲ
ಕಾರ್ಯಶೀಲನಾಗದೇ ನಿನ್ನ ಕೆಲಸದಲಿ ಗೆಲುವಿಲ್ಲ

ಬರೇ ಯೋಚಿಸುತ್ತಾ ಕುಳಿತರೆ ಆಗುವುದು ಮನ ಭಾರ
ಯೋಚಿಸದೆ ಕಾರ್ಯಶೀಲನಾದರೆ ಹೋಗುವೆ ನೀ ದೂರ

ಎಲ್ಲಾ ಕೆಲಸವ ಕಲಿತು ನಂತರವೇ ಪ್ರಾರಂಭಿಸಬೇಕಿಲ್ಲ
ಕೆಲಸವ ಆರಂಭಿಸು, ಮಾಡುತ್ತಾ ಕಲಿಯುವೆ ನೀ ಎಲ್ಲಾ

ಕೆಲಸದಲಿ ಇರಲಿ ಯೋಜನೆಗೆ ಕೇವಲ ಪ್ರತಿಶತ ಇಪ್ಪತ್ತು
ಕಾರ್ಯಶೀಲನಾಗಿ ಕೆಲಸ ಮಾಡಲು ಪ್ರತಿಶತ ಎಂಬತ್ತು

ಸಂಪೂರ್ಣ ಹೊಣೆ ಹೊತ್ತು ಶುರು ಮಾಡು ನೀ ಕೆಲಸವ
ನಿನ್ನೀ ಚುರುಕುತನ ನಿನ್ನರಿವಿಲ್ಲದೆ ಕ್ರಮಿಸುವುದು ದೂರವ


- ತೇಜಸ್ವಿ.ಎ.ಸಿ