ಮತ್ತೊಮ್ಮೆ ತಿರುಗಿ ನೋಡುವಾಸೆ

on Tuesday, March 27, 2012

ಮತ್ತೊಮ್ಮೆ ತಿರುಗಿ ನೋಡುವಾಸೆ

 ನಡೆಯಲು ಯತ್ನಿಸಿದರು ನಡೆಯಲಾಗದು ನನಗೆ
 ಓಮ್ಮೆ ತಿರುಗಿ ನೋಡಿ ಕಣ್ತುಂಬುವ ಆಸೆ ಎನಗೆ

 ಕೆಲ ಹೆಜ್ಜೆಗಳ ಕ್ರಮಿಸಿ ತಿರುಗಿ ನೋಡಿದೆ ನಾನು
 ಸೌಂದರ್ಯವ ಸವಿಯುತ ಹಾಗೆಯೇ ನಿಲ್ಲಲೇನು?

 ನನ್ನೀ ವರ್ತನೆಯ ಗಮನಿಸುವರೆಂಬ ಭಯವೆನಗೆ
 ಆದರೂ ಬಿಡಿಸಿಕೊಳ್ಳಲಾರೆ ಆಕರ್ಷಣೆಯ ಆ ಘಳಿಗೆ

 ಒಂದು ದಿನದಿ ನಿಂತು ನೋಡಿದರು ತೀರದು ದಾಹ
 ದಿನ ಕಳೆದಂತೆ ಗಾಡವಾಗುತ್ತಿದೆ ನನ್ನೀ ಮೋಹ

 ಕಚೇರಿಯ ಒಳಗಿದ್ದರೂ ಗಂಟೆಗೊಮ್ಮೆ ಅದೇ ಧ್ಯಾನ
 ಮಳಿಗೆಯೊಳು ಖರೀದಿಗೆ ನಿಂತರು ಅದರದೇ ಧ್ಯಾನ

 ಹೆಂಡತಿಯೊಡು ಬೈಸಿಕೊಂಡಿದ್ದು ಆಯಿತು ನಾನು
 ಹಾಗಂತ ನನ್ನ ಆಸೆಯ ಕೂಸನು ಬಿಡಲಾಯಿತೇನು

 ಶುರುವಾಗಿದೆ ನನಗೆ ನನ್ನ ಕಾರು ನೋಡುವ ಚಟ 
 ಖರೀದಿಸಿದ ಮೇಲೆ ನನ್ನ ಹೊಸ ಶೆವ್ರೋಲೆಟ್ ಬೀಟ್       

 - ತೇಜಸ್ವಿ.ಎ.ಸಿ

ಕಾವ್ಯಾನುರಕ್ತ

on Tuesday, March 13, 2012

ಕಾವ್ಯಾನುರಕ್ತ 

ಜೀವನದ ಸಣ್ಣ ಎಳೆಗಳರಸಿ ಕವನ ರಚಿಸುವಾಸೆ
ನಗಣ್ಯ ಪ್ರಸಂಗದೊಳು ಕಾವ್ಯವನು ಅರಸುವಾಸೆ 
ಜನರ ಮೊಗದ ಅಭಿವ್ಯಕ್ತಿಯ ಕಾವ್ಯದೊಳು ಮೀಯುವಾಸೆ
ತಂಗಾಳಿಯ ತಂಪೊಳಗಿನ ಕಾವ್ಯವ ಅನುಭವಿಸುವಾಸೆ
ಎಲೆ ಉದುರಿ ಬೋಡಾದ ಮರದೊಳು ಕಾವ್ಯ ಹುಡುಕುವಾಸೆ
ಹಣ್ಣಾದ ಮುಪ್ಪಿನ ಸುಕ್ಕಲೂ ಕಾವ್ಯವ ಕಾಣುವಾಸೆ
ಸಣ್ಣ ಹನಿಗಳ ಮಳೆಯ ಕಾವ್ಯದಲಿ ನೆನೆಯುವಾಸೆ
ಕೆರೆಯ ದಡದ ನೀರ ತೆರೆಯಲಿ ಕಾವ್ಯ ಕೇಳುವಾಸೆ
ಎಳೆಯ ಮೊಗದ ತುಟಿಯಲಿ ಕವನ ಅನುಭವಸಿವಾಸೆ
ಮೊದಲ ಮಳೆಯ ಘಮಿಸುವ ಮಣ್ಣಲೂ ಕವನ ರಚಿಸುವಾಸೆ

- ತೇಜಸ್ವಿ.ಎ.ಸಿ