ಹುಡುಗಾಟದ ಹುಡುಗ

on Thursday, January 21, 2010

ಹುಡುಗಾಟದ ಹುಡುಗ
ಬರುತ್ತಿದ್ದವು ಮೊಬೈಲಿಗೆ ಬೇಡವಾದ ಸಂದೇಶ
ಅರ್ಥವಾಗಲಿಲ್ಲ ಅಪರಿಚಿತ ವ್ಯಕ್ತಿಯ ಉದ್ದೇಶ

ಫೋನಾಯಿಸಿದೆ ಆತನಿಗೆ ಕೇಳಲು ಅವನ ದೇಶ
ಗದರಿಸಲು ಬಂದ ಹೇಳದೆ ತನ್ನ ನಿಜ ವೇಷ

ಹೇಳಿದೆ ಆತನಿಗೆ ನಿಲ್ಲಿಸಲು ಅಸಭ್ಯ ಸಂದೇಶ
ನೀಡಿದೆ ಹುಡುಗನಿಗೆ ಸ್ವಲ್ಪ ಸಭ್ಯತೆಯ ಉಪದೇಶ

ಕೇಳಲಿಲ್ಲ ಹುಡುಗ, ಮೀರಿದ ಸಭ್ಯತೆಯ ಎಲ್ಲೆ
ಆತನಿಗೆ ತಿಳಿಸಿದೆ ನಾ ಮುಂದಿನ ಕ್ರಮವ ಬಲ್ಲೆ

ಎರಡು ದಿನ ಕಳೆದರು ನಿಲ್ಲಲಿಲ್ಲ ಆತನ ತರಲೆ
ಎಚ್ಚರಿಸಿ ತಿಳಿಸಿದೆ ನಾ ನಿನ್ನನ್ನು ಬಗ್ಗಿಸಬಲ್ಲೆ

ನೋಡ ನೋಡತ್ತಲೇ ಕೇಳಿಸಿತು ಗಹಿಸಿ ನಗುವ ಸದ್ದು
ನೋಡಿದರೆ ನಗುತ್ತಲಿದ್ದರು ಗೆಳೆಯರು ಬಿದ್ದು ಬಿದ್ದು

ತಿಳಿಯಿತು ನನಗೆ ನಮ್ಮ ಕಚೇರಿಯ ಹುಡುಗರಾಟ
ಗೊತ್ತಿಲ್ಲದೇ ಬಡಿಸಿದ್ದೆ ಎಲ್ಲರಿಗೆ ಹಾಸ್ಯದ ರಸದೂಟ

- ತೇಜಸ್ವಿ . ಎ. ಸಿ

ಆಹಾ!! ಅದ್ಭುತ ಹಣ

on Friday, January 15, 2010


ಆಹಾ!! ಅದ್ಭುತ ಹಣ

ಅಬ್ಬಾ ಎಂತಹ ಅದ್ಭುತ ನೀನು
ಮಾನವ ಸೃಷ್ಠಿಯ ನಿಜ ಶಕ್ತಿ ನೀನು

ಎಂಥ ಬಲಹೀನನಲ್ಲೂ ತುಂಬುವೆ ಧೈರ್ಯ
ನಿನ್ನ ಸ್ಪೂರ್ತಿಗೇ ನಡೆವುದು ಜಗದ ಕಾರ್ಯ

ನಿನ್ನ ಸಂಪಾದನೆ ಜನಗಳ ಒಂದು ಗುರಿ
ನಮ್ಮನು ಚುರುಕುಗೊಳಿಸಲು ನೀನೊಂದು ದಾರಿ

ಝಣ ಝಣ ಸದ್ದಿನೊಂದಿಗೆ ಕಿವಿಗಿಡುವೆ ಕಂಪು
ಅನೇಕ ಆತಂಕಗಳಿಗೆ ನೀ ಎರಿಯುವೆ ತಂಪು

ನಿನ್ನ ಶಕ್ತಿಯಿಂದ ಈಡೆರುವುದು ನಮ್ಮಗಳ ಆಸೆ
ನಾವು ಸುರಕ್ಷಿತವಿರಲು ನೀ ಮುಖ್ಯ ಕಾಸೇ

ಜೀವನದಲ್ಲಿ ಪ್ರತಿಯೊಂದು ನೀನೇನಲ್ಲ
ಆದರೂ ಜೀವನದ ಮುಖ್ಯ ಅಂಗ ಆಗಿರುವೆಯಲ್ಲ

ಘಮ ಘಮ ವಾಸನೆಯ ಪ್ರೀತಿಯ ಕಾಸೇ
ಸೇರು ನೀ ಎಲ್ಲಾ ಪ್ರೀತಿಸುವ ಜನಗಳ ಕಿಸೆ.

- ತೇಜಸ್ವಿ.ಎ.ಸಿ

ಕನಸಿನ ಕನ್ಯೆಯ ಹುಡುಕಾಟ

on Tuesday, January 12, 2010

ಕನಸಿನ ಕನ್ಯೆಯ ಹುಡುಕಾಟ

ಕಾಲವು ಬಂದಿದೆ ನನಗೆ
ಓಡಾಡಲು ಸಂಗಾತಿಯ ಜೊತೆಗೆ
ಹುಡುಕುವೆ ಕನಸಿನ ಕನ್ಯೆಯನು
ನಿಜ ಮಾಡುವೆ ಬರಿಗನಸಿನ ನಿನ್ನೆಯನು

ಹುಡುಕುತ ಪರಿಪೂರ್ಣ ಕನ್ಯೆಯನು
ಕಂಡೆ ನಾ ಸೃಷ್ಠಿಯ ನಿಯಮವನು
ಪರಿಪೂರ್ಣತೆ ಎಂಬ ಜನರ ಕಲ್ಪನೆ
ಸೃಷ್ಠಿಕರ್ತ ಕೊಟ್ಟ ಮಹತ್ವ ಅಲ್ಪನೆ

ಹೊಸ ಹೊಸ ಊರು ತಿರುಗುತ
ಬಗೆ ಬಗೆ ಜನರಲ್ಲಿ ಬೆರೆಯುತ
ಹಿಂದಿನ ಉಪ್ಪಿಟ್ಟು ಕೇಸರಿ ಬಾತು
ಆಗಿದೆ ಇಂದಿನ ಕಾರ ಬಿಸ್ಕತ್ತು

ಮಜವಾಗಿದೆ ಹುಡುಕುವ ಆಟ
ಆಗಿದೆ ಜೀವನದ ಹೊಸ ಪಾಠ
ಇರುವುದೊಂದೇ ಜೀವನದಲಿ ಅವಕಾಶ
ಎಣಿಸುತ ಕೂರಲಾರೆ ನಾ ಮೀನ-ಮೇಷ

ನಿಜ ಮಾಡುವೆ ನಿನ್ನೆಯ ಕನಸನ್ನು
ಹುಡುಕುವೆ ಕನಸಿನ ಕನ್ಯೆಯನು
ನನಗಿದೆ ನನ್ನ ಆಸೆಯ ಬಗ್ಗೆ ಕಾಜಿ
ಮಾಡಲೊಲ್ಲೆ ಜೀವನದೊಂದಿಗೆ ರಾಜಿ.

- ತೇಜಸ್ವಿ.ಎ.ಸಿ

ಗೆಳೆಯನ ವಿವಾಹದ ಸುದ್ದಿ

on Saturday, January 9, 2010

ಗೆಳೆಯನ ವಿವಾಹದ ಸುದ್ದಿ

ಸೋಮವಾರ ಬಂದೆ ನಾ ಕಚೇರಿಗೆ
ರಾಮ ಅಂಟಿಕೊಂಡು ಕೂತಿದ್ದ ಚೇರಿಗೆ

ಏನೋ ರಾಮ ಮುಖದಲ್ಲಿ ಈ ಕಳೆ
ಕೈಗೆ ಸಿಕ್ಕಿತೇನೊ ಹುಡುಗಿಯ ಬಳೆ

ಸಣ್ಣಗೆ ಮುಗುಳ್ನಗೆ ಬೀರಿದ ಗೆಳೆಯ
ಸ್ವಲ್ಪ ದಿನದಲ್ಲಿ ಆಗುವೆನೆಂದ ಅಳಿಯ

ಹಂಚಿದೆನು ಸಿಹಿ ಸುದ್ದಿಯನು ನಮ್ಮ ತಂಡಕೆ
ಬೀಳುವನು ರಾಮ ಮದುವೆಯೆಂಬ ಹೊಂಡಕೆ

ಸಂಭ್ರಮಿಸಿದರು ಅವಿವಾಹಿತ ಮಿತ್ರರು
ವಿವಾಹಿತರು ಒಳಗೆ ಮುಸು ಮುಸು ನಕ್ಕರು

ದುಂಬಾಲು ಬಿದ್ದೆವೆಲ್ಲ ವಿವಾಹ ಔತಣ ಕೂಟಕೆ
ಕಾರ್ಡ್ ಉಜ್ಜಲು ಒಪ್ಪಿದ ರಾಮ ನಮ್ಮ ಕಾಟಕೆ

ಕಲಿಸಿದೆವು ಹಣ ವ್ಯಯಿಸುವ ಹೊಸ ಪಾಠ
ರೂಡಿಸಲೇ ಬೇಕಲ್ಲವೆ ರಾಮ ಈ ಪರಿಪಾಠ

ಶುಭವಾಗಲಿ ರಾಮನ ಹೊಸ ಜೀವನಕೆ
ಗೃಹಸ್ಥಾಶ್ರಮದ ನವ ಸಾಗರದ ಪಯಣಕೆ.

- ತೇಜಸ್ವಿ .ಎ.ಸಿ