Friday, December 26, 2014

ಉದ್ಯಾನ


                      ಉದ್ಯಾನ

     ಮುಂಜಾವಿನ ಸಮಯದ ತಂಗಾಳಿಗೆ
     ಹೊಸ ಜೀವ ಕೊಡುವ ತಾಜಾತನಕೆ 
     ಬಂದು ಕುಳಿತಿಹರು ಉದ್ಯಾನವನದಲಿ

     ದೃಷ್ಟಿ ಆಯಿಸಿದಷ್ಟು ಸುಂದರ ಹಸಿರು
     ಸುಸಜ್ಜಿತ ನಡೆವ ಪಥ, ಪಕ್ಕದಲ್ಲೇ
     ಸಾಲಾಗಿ ನೆಟ್ಟಿರುವ ಕಲ್ಲಿನಾಸನಗಳು
  
     ಆಸೀನರಾಗಿ ಹರಟುತ್ತ ಕುಳಿತ ವೃದ್ಧರ 
     ಗುಂಪು, ಅವರದು ಅದೇ ರಾಜಕೀಯ,
     ಪತ್ರಿಕಾ ಸುದ್ದಿಗಳು ಚರ್ಚೆಯ ವಿಷಯ

     ಅಲ್ಲಿಯೇ ಪಕ್ಕದಲಿ ಕುಳಿತ ಜೋಡಿಗಳ
     ಪಿಸುಮಾತಿನೊಡನೆ ಕಿಸಕ್ಕನೆಯ ನಗೆ
     ಅವರಿಗೂ ಬೇಕು ಉದ್ಯಾನದ ಪರಿಸರ 

     ಇವೆಲ್ಲವೂ ನಮಗೇಕೆಂಬಂತೆ ಮಕ್ಕಳ
     ನಲಿದಾಟದಲಿ ಕೇಳಬರುತ್ತಿದೆ ಕಲರವ
     ತಂದಿಟ್ಟಿದೆ ಉದ್ಯಾನಕೆ ನವೋತ್ಸಾಹ
 
     ತಾಜಾತನಕ್ಕೆ ವೇಗದಿ ಹೆಜ್ಜೆ ಹಾಕುತ್ತಿಹ 
     ಜನರು ಹತೋಟಿಯಲ್ಲಿಡಲು, ಹೃದಯ 
     ಮಧುಮೇಹ ಹಾಗು ಅಧಿಕ ರಕ್ತದೊತ್ತಡ

     ಹೀಗೆ ಕಾಣುವುದು ವಿವಿಧ ಲೋಕಗಳು
     ಉದ್ಯಾನದೊಳು, ಎಲ್ಲರಿಗು ಬೇಕಾಗಿ 
     ಎಲ್ಲ ಬಡವಾಣೆಯ ಜನರ ಅಗತ್ಯವಾಗಿ
     
    - ತೇಜಸ್ವಿ ಎ ಸಿ

Wednesday, December 3, 2014

ಬಸ್ ನಿಲ್ದಾಣ

             

                 ಬಸ್ ನಿಲ್ದಾಣ

    ನಾನು ಹೊರ ಹೊರಟೆ ನನ್ನ ಕಾರ್ಯಕೆ
    ಹೆಜ್ಜೆ ಹಾಕ ತೊಡಗಿದೆ ಬಸ್ ನಿಲ್ದಾಣಕೆ

    ತಲುಪಿದೆ ಮನೆ ಹತ್ತಿರದ ಬಸ್ ನಿಲ್ದಾಣವ
    ಅಲ್ಲಿ ಕಂಡೆ ಬಸ್ಸಿಗೆ ಕಾದು ಸುಸ್ತಾದ ಮುಖವ

    ನಾನು ಅರಿತೆ ಬಸ್ಸು ಬಾರದೆ ಆಗಿದೆ ಹೊತ್ತು
    ನನಗೂ ಬರಬಹುದೇನೋ ಕಾಯುವ ಆಪತ್ತು

    ಬಸ್ಸುಗಳು ಬಂದವು ಒಂದರ ಹಿಂದೆ ಒಂದು
    ಬೇರೆ ಊರಿಗೆ ಹೊರಟ್ಟಿದ್ದವು ಪ್ರತಿಯೊಂದು

    ನಮ್ಮ ಊರಿನದೇಕೆ ಬರುತ್ತಿಲ್ಲವೆಂಬ ಚಿಂತೆ
    ಪಕ್ಕದಲ್ಲಿದ್ದವನ ತಲೆಗೂ ಅದೇ ಪ್ರಶ್ನೆಯಂತೆ

    ಕಾದು ಕಾದು ನಮ್ಮ ಬಸ್ಸು ಬಂತು ಕೊನೆಗೂ
    ಹತ್ತಿದರೆ ಆಸನದ ಅಲಭ್ಯತೆ ಕಾಡಿತು ನಮಗೂ

    ಬಸ್ಸಿನಲ್ಲಿ ಶುರುವಾಯಿತು ಸ್ಪರ್ಧೆ ಆಸನಕೆ
    ಮೈಯೆಲ್ಲಾ ಕಣ್ಣಾಯಿತು ಒಳಗಿನ ಸ್ಪರ್ಧೆಗೆ

    ಅರ್ಧ ದಾರಿ ಸವೆಸಿದೆ ನಿಂತಲ್ಲೇ ಕುಲುಕುತ
    ಕೊನೆಗೂ ಸಿಕ್ಕತು ಆಸನ ಸ್ಪರ್ಧೆಯ ಗೆಲ್ಲುತ

    ಕೊನೆಗೂ ಮುಗಿಸಿದೆ ಪ್ರಯಾಸದ ಪ್ರಯಾಣ
    ಇಳಿಯುತ್ತಲೇ ಅನುಭವಿಸಿದೆ ನೆಮ್ಮದಿಯ ಕ್ಷಣ

     - ತೇಜಸ್ವಿ.ಎ.ಸಿ