Sunday, February 13, 2011

ಸುಪ್ರಭಾತ

  ಸುಪ್ರಭಾತ

 ಸಣ್ಣಗಿನ ಚುಮು ಚುಮು ಚಳಿಯಲಿ
 ಸಾಲು ಸಾಲಿನ ಹಕ್ಕಿಗಳ ಚಿಲಿಪಿಲಿ,
 ಸಣ್ಣನೆ ಬೆಳಕಿನ ಬಾನಿಗೆ ಸುಂದರ
 ಬಾನಾಡಿಗಳ ತೋರಣದ ಸಿಂಗಾರ

 ಸುತ್ತಣವು ತಿಳಿ ಮಂಜು ಮುಸುಕಿರಲು
 ಭುವಿಯ ಮೇಲೆಲ್ಲಾ ಇಬ್ಬನಿಯ ಹಾಸು
 ಪ್ರಾತಃಕಾಲದ ತಂಪಾದ ತಂಗಾಳಿಯಲಿ
 ಹಕ್ಕಿಗಳ ಕಲರವ ಊರಿಗೆಲ್ಲ ಸುಪ್ರಭಾತ

 ತೆಂಗಿನಗರಿಗಳ ನಡುವೆ ಮಿಂಚುವ ಎಳೆ
 ನೇಸರನ ಕಿರಣಗಳು, ಬೆಚ್ಚನೆಯ ಹಿತವ
 ನೀಯುತ, ಉಲ್ಲಾಸಭರಿತ ನವ ದಿನದ
 ಆರಂಭವ ಸೂಚಿಸಿ ಶುಭವ ಕೋರಿತು

 ಪ್ರಭೆಯ ಸೂಸುತ ಪ್ರಭಾಕರನುದಯಿಸಿ
 ತನ್ನೆಳೆಯ ಕಿರಣಗಳ ಮುಚ್ಚಿದ ನಯನಕೆ
 ತಾಕಿಸಿ, ಶಯನದಲ್ಲಿದ್ದ ಜೀವಿಗಳನ್ನೆಲ್ಲ
 ಎಬ್ಬಿಸುತ ಧರೆಗೆಳಿದನೋ ಸೂರ್ಯರಶ್ಮಿ.

 - ತೇಜಸ್ವಿ .ಎ.ಸಿ

Wednesday, February 9, 2011

ಸಾಹಿತ್ಯ ಸಮ್ಮೇಳನ

ಸಾಹಿತ್ಯ ಸಮ್ಮೇಳನ

ಊರಿನೆಲ್ಲಾ ದಾರಿಗಳು ಕರೆದೊಯ್ದವು ಒಂದೆಡೆಗೆ
ಎಲ್ಲಾ ಹಾದಿಗಳು ಸೇರುತ್ತಿದ್ದವು ಸಮ್ಮೇಳನದೆಡೆಗೆ

ಹಾದಿಯ ಉದ್ದಕ್ಕೂ ಸವಿದದ್ದು ಕನ್ನಡದ ಕಂಪು
ಅಂದಿನ ಕನ್ನಡದ ಹಬ್ಬ ನೀಡಿತ್ತು ಕಣ್ಣಿಗೆ ತಂಪು

ಕನ್ನಡ ರಾಜ ಕುಟುಂಬಕ್ಕಂದು ಭವ್ಯ ಸುಸ್ವಾಗತ
ಕನ್ನಡಿಗರ ಸ್ವಾಗತಿಸಿ ವೇದಿಕೆಯತ್ತ ಕರೆತರುತ

ಸಂಭ್ರಮಕೆ ಸಜ್ಜಾಗಿತ್ತಂದು ಸಾಹಿತ್ಯ ಸಮ್ಮೇಳನ
ಅಂದು ಊರಿನೆಲ್ಲೆಡೆ ಪಸರಿಸಿತ್ತದು ಕನ್ನಡತನ

ಅಧ್ಯಕ್ಷರ ಭಾಷಣ ನೀಡಿತ್ತು ಉತ್ಸವಕೆ ಚಾಲನೆ
ಮಹಿಳ, ಮಕ್ಕಳ ಸಾಹಿತ್ಯ ನೀಡಿದ್ದವು ಪೋಷಣೆ

ತಂದಿತ್ತು ಕವಿಗಳ ಕವಿಗೋಷ್ಠಿ ಸಮ್ಮೆಳನಕೆ ಕಳೆ
ಕಾವ್ಯಗಳ ಗಾಯನ ತಂದಿತು ಸಂತಸದ ಹೊಳೆ

ಕನ್ನಡ ಸ್ಥಿತಿಯ ಒಳನೋಟವಿತ್ತು ಸಂವಾದದಲ್ಲಿ
ಸಮಾನಾಂತರ ಗೋಷ್ಠಿ ನಡೆದವು ಬೇರೆಡೆಯಲ್ಲಿ

ಇನ್ನೊಂದು ಆಕರ್ಷಣೆಯಾಗಿತ್ತು ಪುಸ್ತಕದ ಮಳಿಗೆ
ಮಳಿಗೆಗಳು ತುಂಬಿದ್ದವು ಸಾಹಿತ್ಯಾಸಕ್ತರ ದಾಳಿಗೆ

ನೆಚ್ಚಿನ ಹಾಸ್ಯ ಸಂವೇದನೆಯಿತ್ತು ಕೊನೆಯ ದಿನ
ಅಂದೇ ಕನ್ನಡದ ಮಹನೀಯರಿಗೆ ಸನ್ಮಾನದ ದಿನ

ಹಾಗೆಯೇ ತೆರೆ ಕಂಡಿತು ಕನ್ನಡ ಸಾಹಿತ್ಯ ಉತ್ಸವ
ಎಲ್ಲಾ ಸಾಹಿತ್ಯ ಪ್ರಿಯರಿಗೆ ಕೊಡುತ ನವ ಉತ್ಸಾಹ

- ತೇಜಸ್ವಿ.ಎ.ಸಿ

Thursday, February 3, 2011

ಕಾಗದದ ನಿರೀಕ್ಷೆಯಲಿ

ಕಾಗದದ ನಿರೀಕ್ಷೆಯಲಿ

ಮನದೊಳು ಮನೆಮಾಡಿದೆ ಚಡಪಡಿಕೆ
ಪ್ರತಿ ಅವಧಿಗೊಮ್ಮೆ ಮುಂಬಾಗಿಲ ಪಕ್ಕದ
ಕಿಟಕಿಯ ಬಳಿ ನಿಂದು ಇಣುಕುವ ಕುತೂಹಲ,
ಬಂದಿರಬಹುದೇ ನನ್ನ ಇನಿಯನ ಕಾಗದ

ಅಂಚೆಯು ಬರುವವರೆಗೂ ಕಾಯಲೊಲ್ಲದು
ತುದಿಗಾಲಲಿ ನಿಂತಿರುವ ನನ್ನೀ ಕಾತರವು,
ಮನೆಯ ಮುಂದಿನ ಕಾಗದದ ಪೆಟ್ಟಿಗೆಯ
ಮತ್ತೊಮ್ಮೆ ತೆರೆದು ಪತ್ರ ಹುಡುಕುವ ಹಂಬಲ

ಅಪರಾಹ್ನದ ವೇಳೆಗೆ ತೀವ್ರವಾಯಿತು ಪತ್ರದ
ತವಕವು, ಆ ವೇಳೆಗೆ ಹರಿದುಬರುವ ಕಾಗದ
ಎಂಬುವ ಕೂಗು ಎನ್ನ ಶ್ರವಣಕೆ ಘಂಟೆ ನಾದ,
ಕೇಳಿ ಬರುವುದೇ ನನಗೆ ಆ ಅಮೃತ ನಾದ

ಮಧ್ಯಾಹ್ನದಿ ತುಸು ಸಮಯದ ಬಳಿಕ ಟಪಾಲಿನ
ಕೂಗು ಕೇಳಿ ಅದು ನನ್ನೀ ಶ್ರವಣಕೆ ಗಾನವಾಗಲು
ನನ್ನೀ ಹೃದಯವು ಸಂಭ್ರಮದಿ ನರ್ತನವಾಡಲು
ಇನಿಯನ ವಿರಹದ ನೋವ ಕಡಿಮೆಮಾಡಲು

- ತೇಜಸ್ವಿ.ಎ.ಸಿ