ಒಗ್ಗಟ್ಟು

on Saturday, July 27, 2013

             ಒಗ್ಗಟ್ಟು
 
      ನನ್ನ ಮನದೊಳು ಮೂಡಿದ ಆಶ್ಚರ್ಯವಿದು
      ನಮ್ಮವರೇ ಕೊಡುವ ಲಘು ಆಘಾತವಿದು

      ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ
      ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ

      ನನ್ನ ಕನ್ನಡಾಭಿಮಾನವೇ ಅಸಹಜ ಹಾಗೂ
      ಅಪರೂಪದ್ದೇ ಎಂದೆನಿಸುವಷ್ಟು ಅನುಮಾನ

      ಒಗ್ಗಟ್ಟು ಮೂಡಿಸಲು ಕೊಡರು ಪ್ರೋತ್ಸಾಹ
      ಆಸಕ್ತರಿಗೂ ಹರಡುವರು ತಮ್ಮ ನಿರುತ್ಸಾಹ

       ಸರಳ ಕನ್ನಡದ ಸುಖ ಬೇಡವೇ ನಿಮಗೆ
       ಸಹಜತೆಯಲ್ಲೇ ಸಂತಸವಲ್ಲವೇ ನಮಗೆ

      ಕನ್ನಡವ ಬಳಸಲು ಪಡಬೇಡಿ ಕೀಳರಿಮೆ
      ನಮ್ಮಲ್ಲೇ ಪರರ ಮೆಚ್ಚಿಸಿ ಪಡದಿರಿ ಗರಿಮೆ

      ಕನ್ನಡದ ಮೇಲೆ ಸದಾ ಇರಲಿ ಅಭಿಮಾನ
      ಕನ್ನಡದಲ್ಲೇ ಅಡಗಿದೆ ನಮ್ಮ ಸ್ವಾಭಿಮಾನ

      ಮುಂದೆ ಬಾರದಿರಲು ನಮ್ಮಲ್ಲಿ ಮುಗ್ಗಟ್ಟು
      ಕನ್ನಡಿಗರ ಹೃದಯದಲಿ ಮೂಡಲಿ ಒಗ್ಗಟ್ಟು

       - ತೇಜಸ್ವಿ. ಎ. ಸಿ

ನಸು ನಗು

on Monday, July 8, 2013

 ನಸು ನಗು

  ಕಿಸಕ್ಕನೆ ಸುಖಾಸುಮ್ಮನೆ ನಗುವ ನನ್ನ ನೋಡಿ
  ನನ್ನವಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ
  ನನ್ನ ಮನದೊಳ ಹರಿವ ಅಸಂಖ್ಯಾತ ಲೋಕಗಳ
  ವಿವರವ ನೀಡಲು, ಅವು ಅತಿ ಖಾಸಗಿಯಾಗಿ  
  ಮತ್ತೊಮ್ಮೆ ಅವಳ ಮುಖ ನೋಡಿ ನಸು ನಕ್ಕೆ.

  ಕ್ಷಣ ಕ್ಷಣಕೂ ಬದಲಾಗುವ ನನ್ನೊಳಗಿನ ಲೋಕ
  ಗಾಳಿಯಂತೆ ಬಂದು ಹರಿದಾಡಿ, ಅನುಭವವಿತ್ತು
  ಹೇಳ ಹೆಸರಿಲ್ಲದೆ ಹೊರಟು ಹೋಗುವ ಆಗುಂತಕ
  ಅದರ ಜಾಡು ಹಿಡಿದು ನಾನೆಂದೂ ಹಿಂಬಾಲಿಸಲಿಲ್ಲ
  ನಿನ್ನ ಪರಿಚಯವೇನೆಂದು ಅವುಗಳ ಪ್ರಶ್ನಿಸಲಿಲ್ಲ

  ಮುಂದೊಮ್ಮೆ ನಾ ಈ ರೀತಿ ನಸುನಕ್ಕರೆ ನೀನೂ
  ಹಿಂದಿರುಗಿ ನೋಡಿ ಓಮ್ಮೆ ನಕ್ಕುಬಿಡು ಮನದೊಡತಿ
  ಏಕೆಂದರೆ ನೀ ಕೇಳುವ ಪ್ರೆಶ್ನೆಗಳಿಗೆ ಉತ್ತರಿಸಬೇಕಾದ
  ನನ್ನೀ ಮನದ ಮರ್ಮ ಸ್ವತಃ ನಾನೂ ಅರಿಯೆ

  - ತೇಜಸ್ವಿ .ಎ.ಸಿ