ಸರತಿ ಸಾಲು

on Tuesday, January 1, 2013


  ಸರತಿ ಸಾಲು

  ನನ್ನ ಬದುಕಿನ ನಡು ಯೌವನದಿ
  ಬದುಕಿನ ಗುರಿಗಳ ಪಟ್ಟಿಯ ಹಿಡಿದು,
  ಜಾಣ ಯೋಜನೆಗಳನ್ನೆಲ್ಲ ರೂಪಿಸಿ
  ಕಾರ್ಯಶೀಲನಾಗಿ ಅವಕೆ ದುಡಿದು

  ಸಂಭ್ರಮಿಸಿದ್ದೆ ನಾನಂದು, ಕೆಲಸ
  ಕಾರ್ಯಗಳೆಲ್ಲಾ ಮುಗಿದಿದೆ ಎಂದು,
  ಮರು ದಿನದಲೂ ಕಾಣತೊಡಗಿತು
  ಕೆಲಸ ಕಾರ್ಯಗಳು ಒಂದೊಂದೇ

  ಹಳೆಯ ಅಭ್ಯಾಸದಂತೆ ಮಾಡಿದೆ
  ಅವುಗಳೆಲ್ಲದರ ಹೊಸ ಪಟ್ಟಿಯನು,
  ಕೊಡುತ ನಾ ಸಾಗಿದೆ ಎಲ್ಲ ಕಾರ್ಯಕೆ
  ಆದ್ಯತೆಯ ಮೇರೆಗೆ  ಸಂಖ್ಯೆಯನು

  ಮತ್ತೊಮ್ಮೆ ಎಲ್ಲಾ ಮುಗಿಸಿ ಆಶಿಸಿದೆ,
  ಬರೀ ವಿನೋದ ವಿರಾಮದ ದಿನಗಳ
  ಮರು ದಿನವು ಕಂಡೆ ನಾ ಕೆಲಸಗಳ,
  ತಿಳಿಯಿತಂದು ಜೀವನದ ಹೊಸ ಅರ್ಥ

  ಜೀವನವಿದು ಕೆಲಸಗಳ ಸರತಿಸಾಲು
  ಮುಗಿಯದು ಬದುಕಿನ ಕಾರ್ಯಗಳು
  ಜೀವನ ನಿರ್ವಹಣೆಯೇ ನಿತ್ಯದ ಕಾರ್ಯ
  ಕೆಲಸದ ಸಾಲಿದು ನಮಗನಿವಾರ್ಯ

  - ತೇಜಸ್ವಿ.ಎ.ಸಿ