Saturday, June 19, 2010

ಅನಿರೀಕ್ಷಿತ ಅತಿಥಿ

ಅನಿರೀಕ್ಷಿತ ಅತಿಥಿ

ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ
ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ

ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು
ಸ್ವಲ್ಪ ದಿನದಲ್ಲಿ ತನ್ನ ಪುಟ್ಟ ಗೂಡಿನ ನಿರ್ಮಾಣ ಶುರು ಮಾಡಿತ್ತು

ನಮ್ಮ ಅತಿಥಿ ಪಾರಿವಾಳವು ಹಾರುತ್ತಿತ್ತು ಮಾತಾಡಿಸಲು ಬಂದರೆ
ನಮಗೂ ಅನಿಸಿತು ಕೊಡುವುದು ಬೇಡ ಅದರ ಸಂಸಾರಕ್ಕೆ ತೊಂದರೆ

ನಾವೆಲ್ಲಾ ಸುಮ್ಮನಿದ್ದೆವು ಆದರೆ ಕೇಳಬೇಕಲ್ಲ ನಮ್ಮ ಪುಟ್ಟ ಪೋರ
ಪದೇ ಪದೇ ಹೋಗಿ ಕಿಟಕಿ ಹತ್ತಿ ನೋಡುತ್ತಿದ್ದನು ಅದರ ಸಂಸಾರ

ಪೋರನ ಜೊತೆಗೂಡಿತ್ತು ಅವನ ಜೊತೆಗಾರ ನಮ್ಮನೆಯ ಶ್ವಾನ
ಇಬ್ಬರೂ ಜೊತೆಗೂಡಿ ಕಾಡಿ ಹಿಂಡುತ್ತಿದ್ದರು ಪಾರಿವಾಳದ ಪ್ರಾಣ

ಬಿಡಲಾದೀತೇ ಸಂಸಾರ ನಡೆಸುವುದು ಪೋರ, ಕುನ್ನಿಯ ಕಾಟಕ್ಕೆ
ಮೊಟ್ಟೆ ಇಟ್ಟು ಮುನ್ನುಗಿದ್ದವು, ತಡೆಯುವರಿಲ್ಲ ಅವುಗಳ ಹಾರಾಟಕ್ಕೆ

ದಿನ ಕಳೆದಂತೆ ಹೆಚ್ಚಾಗುತ್ತಾ ಹೋಯಿತು ಕಸ, ಕಡ್ಡಿಗಳ ಉಪಟಳ
ಕಾಲ ಕ್ರಮೇಣ ಬರಲಾರಂಬಿಸಿತು ಅವು ಹಾಕಿದ ಪಿಕ್ಕಿಯ ಪರಿಮಳ

ದುರ್ವಾಸನೆಯ ಅತಿಥಿಗಳನ್ನು ಮರಳಿ ಕಳಿಸಲು ನಿರ್ಧರಿಸಿದರು ಅಪ್ಪ
ನಾನು ಅಣ್ಣ ಸೇರಿ ಗೂಡ ತೆಗೆದು ಓಡಿಸಿದೆವು ಅವುಗಳ ಮರಿಗಳ ಪಾಪ

ಬಿಡಬೇಕೆ ಪಾರಿವಾಳಗಳು ಮತ್ತೆ ತಿರುಗಿ ಬಂದಿವೆ, ಹೊಸ ಗೂಡು ಕಟ್ಟಿವೆ
ತನ್ನ ಹೊಸ ಸಂಸಾರವನ್ನು ಹೊತ್ತು ತಂದಿವೆ, ಮತ್ತೆ ಮೊಟ್ಟೆಗಳ ಇಟ್ಟಿವೆ

- ತೇಜಸ್ವಿ.ಎ.ಸಿ

Saturday, June 12, 2010

ಜವಾಬ್ದಾರಿಯ ಲಾಭ

ಜವಾಬ್ದಾರಿಯ ಲಾಭ

ನಾನೊಮ್ಮೆ ಯೋಚಿಸಿದೆ ನಾನೇಕೆ ಹೀರೋ ಅಲ್ಲ
ಹೀರೋ ಆಗಬೇಕಾದರೆ ಏನೇನು ಮಾಡಬೇಕೆಲ್ಲ

ಕ್ರಿಕೆಟ್ ಆಡುವಾಗ ಚೆಂಡು ಬಂದಿತು ನಮ್ಮಿಬ್ಬರ ನಡುವೆ
ನಾನೇಕೆ ಓಡಲಿ ಅವನಿಗೆ ಚೆಂಡ ತಡೆವ ಜವಾಬ್ದಾರಿ ಬಿಡುವೆ

ತನ್ನೆಲ್ಲಾ ಶಕ್ತಿ ಕೊಟ್ಟು, ಹಾರಿ ಚೆಂಡ ತಡೆದನಾತ ಅಂದು
ಆ ಪ್ರಯತ್ನದಿಂದಾಗಿ ಉಳಿಯಿತು ಮೂರು ಓಟ ನಮ್ದು

ಆತನ ಶ್ರಮಕ್ಕೆ ಸಿಕ್ಕಿತು ಆತನಿಗೆ ಚಪ್ಪಾಳೆಯ ಸುರಿಮಳೆ
ಅದರಿಂದ ಆತನ ಮುಖದಲ್ಲಿ ಕಾಣುತ್ತಿತ್ತು ಉತ್ಸಾಹದ ಕಳೆ

ನಾ ಲೆಕ್ಕ ಹಾಕಿದೆ ಇದರಿಂದ ಆತನಿಗೆ ಸಿಕ್ಕ ಲಾಭವೇನು
ಆತನ ಜವಾಬ್ದಾರಿ ಮೂರು ಓಟ ಉಳಿಸಿದ್ದು ಲಾಭವಲ್ಲವೇನು

ಆತನಿಗೆ ಸಿಕ್ಕ ಮತ್ತೊಂದು ಲಾಭ ಆತನ ತುಂಬು ಆತ್ಮ ವಿಶ್ವಾಸ
ಇದೆಲ್ಲರ ಜೊತೆಗೆ ಆತನು ಗಳಿಸಿದ್ದ ತನ್ನ ಇಡೀ ತಂಡದ ವಿಶ್ವಾಸ

ಆ ಜವಾಬ್ದಾರಿಯಿಂದ ಅವನಿಗೆ ಸಿಕ್ಕಿತ್ತು ತಂಡದಿಂದ ಪ್ರಶಂಸೆ
ಈ ಅನುಭವಕ್ಕೆ ಮುಂಚೆ ನಾ ತಿಳಿದಿದ್ದೆ ಜವಾಬ್ದಾರಿ ಬರೀ ಹಿಂಸೆ

ಈ ಎಲ್ಲ ನನ್ನ ಅನುಭವದಿಂದ ನಾ ಕಲಿತೆ ಹೊಸ ಪಾಠವನು
ಇದು ಬೆಳೆಸಲಾರಂಭಿಸಿತು ಜವಾಬ್ದಾರಿಯ ಬಗ್ಗೆ ಪ್ರೀತಿಯನು

ಈಗ ಜೀವನದಲಿ ನಾ ಹೊರುತಿರುವೆ ವಿವಿಧ ಜವಾಬ್ದಾರಿಗಳನು
ಈ ನನ್ನ ಹೊಸ ನಡುವಳಿಕೆ ತಂದಿದೆ ಜೀವನದಲ್ಲಿ ಆಸಕ್ತಿಯನು

- ತೇಜಸ್ವಿ .ಎ.ಸಿ

Thursday, June 3, 2010

ನಿದ್ದೆ

  ನಿದ್ದೆ

  ದೈವ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು
  ನೀನು ಕೊಡುವ ಉಲ್ಲಾಸಕ್ಕೆ ಸರಿಸಾಟಿ ಏನು
  ದಿನದ ದಣಿವಿಗೆ ಸುಖದ ಆರಾಮ ಕೊಡುವೆ
  ದಿನದ ಆತಂಕಕೆ ನಿಶ್ಚಿಂತ ನೆಮ್ಮದಿಯ ತರುವೆ

  ಇರುಳಷ್ಟೇ ಅಲ್ಲ ಹಗಲಲ್ಲೂ ಇರುವುದು ನಿನ್ನ ಸವಿ
  ಮಧ್ಯಾಹ್ನ ಊಟದ ನಂತರ ಎಳೆವಳು ನಿದ್ರಾದೇವಿ
  ನಿದ್ದೆಯ ಸವಿ ಸವಿಯಲು ಹೊತ್ತಿನ ಭೇದ ಭಾವವೇ
  ಕೆಲಸವಿಲ್ಲದಿದ್ದರೆ ಸಾಕು ತಾನೇ ನಿದ್ರೆಗೆ ಜಾರುವೆ

  ಕನಸುಗಳ ಸ್ವಪ್ನ ಲೋಕದಲಿ ಸುಂದರ ವಿಹಾರ
  ಸ್ವಪ್ನ ಲೋಕದ ಸುಖ ಇಳಿಸುವುದು ಮನಸಿನ ಭಾರ
  ಕನಸುಗಳು ಮಾಡುವವು ಬದುಕನ್ನು ವರ್ಣಮಯ
  ಕನಸುಗಳು ಮಾಡುವವು ನಿದ್ದೆಯನು ಸುಖಮಯ

  ಸುಖ ನಿದ್ದೆ ಕೆಡಿಸುವ ಹಲವು ವೃತ್ತಿಗಳಿವೆ ಜಗದಲಿ
  ದುರದೃಷ್ಟಕ್ಕೆ ಸೇವೆ ಗೈವರ ಪಾಲು ಹೆಚ್ಚು ಅದರಲಿ
  ಸ್ಥಿತಿ ಬದಲಾಗುವುದೆಂಬ ಆಶಯ ತಾಂತ್ರಿಕತೆಯಿಂದ
  ಎಲ್ಲಾ ರೀತಿಯ ಜನ ಸುಖ ನಿದ್ದೆ ಪಡೆಯಲಿ ಇದರಿಂದ

  ನಿದ್ದೆ ಗೆಟ್ಟೆಯೋ ಬುದ್ದಿ ಗೆಟ್ಟೆಯೋ ಎಂಬ ಹಳೆ ಗಾದೆ
  ತಿಳಿಸುವುದು ನಿದ್ದೆಗೆಟ್ಟರೆ ಆರೋಗ್ಯಕ್ಕಾಗುವ ಭಾದೆ
  ಪ್ರಕೃತಿ ಕೊಟ್ಟ ವರವಿದು ಜನರೆಲ್ಲರೂ ಸವಿಯಲಿ
  ನಿದ್ರೆಯಿಂದ ಸುಖ ಆರೋಗ್ಯವನ್ನು ಜನರೆಲ್ಲಾ ಗಳಿಸಲಿ

  - ತೇಜಸ್ವಿ. ಎ.ಸಿ