ಕಾಲಾಯ ತಸ್ಮೈ ನಮಃ

on Tuesday, July 27, 2010

ಕಾಲಾಯ ತಸ್ಮೈ ನಮಃ

ಭಾರ ಹೊತ್ತು ನಡೆದಿರುವೆ ನಾನಿಂದು ಹಾದಿಯಲಿ
ದೇಹದ ಅವಿಭಾಜ್ಯ ಅಂಗವೇ ಭಾರವಾಗಿ ಹೋಯಿತೇ
ಈ ಹೊರೆಯ ಇಳಿಸಲಾರೆ, ಬಿಡಿಸಿಕೊಳ್ಳಲಾರೆ
ನನ್ನ ಚೇತನವೇ ಎದೆಗುಂದಿ ಮುದುಡಿ ಹೋಯಿತೇ

ಹೋರಾಟಕೆ ಫಲವಿಲ್ಲ, ಪರಿಶ್ರಮಕೆ ಸಾರ್ಥಕತೆಯಿಲ್ಲ
ಶ್ರಮದಲ್ಲಿದ್ದ ಭರವಸೆಯು ಇಳಿದು ಬದುಕು ಕತ್ತಲಾಯಿತೆ
ಹಾದಿಯಲಿ ಕಂಡ ಎಳೆಯ ಕಿರಣಗಳ ಅನುಸರಸಿ
ಬದುಕಿನ ಸ್ಥಿರತೆಗಾಗಿ ನಾ ಪಟ್ಟ ಶ್ರಮವು ನೀರಾಯಿತೇ

ನನ್ನ ಜೀವನದ ಮೇಲೆ ತನ್ನ ಹತೋಟಿಯ ಮೆರೆಸುತ
ತನ್ನ ಪ್ರಭುತ್ವವನು ಸಾರಿ ಹೇಳುತಿಹನೆ ಭಗವಂತ?
ನನ್ನೆಲ್ಲಾ ಶಕ್ತಿಗಳು ತೃಣಕೆ ಸಮಾನವೆಂದು ಚುಚ್ಚಿ
ನುಡಿಯುತಿಹನೆ ನನ್ನ ಮೇಲಿನ ಹಿಡಿತವ ತೋರುತ

ಶಕ್ತಿ ಇಟ್ಟವ ನೀನು, ಬಯಕೆ ಕೊಟ್ಟವ ನೀನು, ಮರೆತೆಯಾ
ನೀ ಕೊಟ್ಟ ಬದುಕಿನಲಿ ಹಿಂದಿರುಗಿ ಬರುವ ವಿಶ್ವಾಸವನು
ಕಾಲವೇ ನನ್ನ ಶಕ್ತಿಯಾಗಿ, ಹೊಸ ಭರವಸೆಯಾಗಿ ತಿರುಗಿ
ತರುವುದು ನನ್ನೆಲ್ಲಾ ಜೀವನದ ಸವಾಲಿಗೆ ಉತ್ತರವನು

- ತೇಜಸ್ವಿ.ಎ.ಸಿ

ತಪ್ಪಿಸಿಕೊಂಡ ಪುಟ್ಟ

on Saturday, July 17, 2010

ತಪ್ಪಿಸಿಕೊಂಡ ಪುಟ್ಟ


ಶನಿವಾರ ಶಾಲೆಗೆ ಬಂದ ಪುಟ್ಟ
ಸ್ನೇಹಿತರನ್ನು ಕರೆದ ಆಡಲು ಆಟ

ಅಷ್ಟರಲ್ಲೇ ಕೇಳಿತು ಘಂಟೆಯ ಸದ್ದು
ಕೊಠಡಿಗೆ ನಡೆದರು ಎಲ್ಲರೂ ಎದ್ದು

ಪಾಠವ ಮುಗಿಸಿದರು ಲೆಕ್ಕದ ಮೇಷ್ಟ್ರು
ಮನೆಯಲಿ ಮಾಡಲು ಲೆಕ್ಕಗಳ ಕೊಟ್ರು

ಹುಡುಗರೆಲ್ಲ ಸೇರಿದರು ಆಡಲು ಆಟ
ಆಟದೊಂದಿಗೆ ಶನಿವಾರ ಕಳೆದ ಪುಟ್ಟ

ಭಾನುವಾರ ಪೇಟೆಗೆ ಹೊರಟ ಪುಟ್ಟ
ಸರ್ಕಸ್ಸು ತೋರಿಸಲು ಬೇಡಿಕೆ ಇಟ್ಟ

ಸರ್ಕಸ್ಸು ನೋಡಿ ಕುಣಿದು ಕುಪ್ಪಳಿಸಿದ
ಅಪ್ಪನೊಂದಿಗೆ ಸಂಜೆ ಮನೆಗೆ ನಡೆದ

ರಾತ್ರಿಯಿತ್ತು ಅಮ್ಮನ ವಿಶೇಷ ಭೋಜನ
ಭಾನುವಾರ ಪೂರ್ತಿ ಮಾಡಿದ ಮಜಾನ

ಸೋಮವಾರ ಬೆಳಿಗ್ಗೆ ಶಾಲೆಗೆ ಹೋದ
ಮೇಷ್ಟರು ಕೊಟ್ಟಿದ್ದ ಲೆಕ್ಕಗಳ ಮರೆತ್ತಿದ್ದ

ಒಬ್ಬಬ್ಬರಿಗೆ ಲೆಕ್ಕವ ಕೇಳುತ ಬಂದರು
ಕೈಯಲ್ಲೇ ಬೆತ್ತವನ್ನು ಹಿಡಿದು ತಂದರು

ಅಷ್ಟರಲ್ಲೇ ಬಂದಿತು ನೋಟಿಸು ಕೊಠಡಿಗೆ
ರಜೆ ಸಿಕ್ಕಿತು ಗಣ್ಯರ ಸಾವಿನಿಂದ ಶಾಲೆಗೆ

ಪುಟ್ಟ ತಪ್ಪಿಸಿಕೊಂಡ ಲೆಕ್ಕದ ಮೇಷ್ಟರ ಏಟ
ರಜೆ ಘೋಷಿಸುತ್ತಲೇ ಮನೆಗೆ ಓಡಿದ ಓಟ

- ತೇಜಸ್ವಿ.ಎ.ಸಿ

ಸೃಷ್ಟಿ ವೈಚಿತ್ರ್ಯ

ಸೃಷ್ಟಿ ವೈಚಿತ್ರ್ಯ


ಭಗವಂತ, ನೀನೇ ಸೃಷ್ಟಿಸಿ ಜೀವಿಗಳು ಬಾಳಬೇಕಾದ ಜಗವು ಇದು
ಸೃಷ್ಟಿಕರ್ತನೆ, ನಿನ್ನ ಜಗದಲೇ ಜೀವಗಳೊಡನೆ ಚಿನ್ನಾಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ

ನಿನ್ನ ಸುಂದರ ಸೃಷ್ಟಿಗೆ ಪ್ರಾಣವನಿತ್ತೆ, ಬಾಳಲು ದೇಹಕೆ ಜೀವನವಿತ್ತೆ
ಹೊಸ ಜೀವನಕೆ ಲೋಕವನಿತ್ತೆ, ಪ್ರಾಣದ ಜೊತೆಗೆ ಆಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ

ಜಿಂಕೆಯ ಬದುಕು ನಿನ್ನದೇ ಸೃಷ್ಟಿ, ಜೀವಕೆರಗುವ ಹುಲಿಯು ನಿನ್ನದೇ ಸೃಷ್ಟಿ
ನಿನ್ನ ಸೃಷ್ಟಿಯ ಬದುಕಿಗೆ ಏಕೀ ಅನ್ಯಾಯ? ಜೀವದ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ಜನಗಳ ಹಸಿವು ನಿನ್ನದೇ ಸೃಷ್ಟಿ, ಜನಗಳ ಆಹಾರವು ನಿನ್ನದೇ ಸೃಷ್ಟಿ
ನಿನ್ನೀ ಸೃಷ್ಟಿಯ ಜೀವಗಳ ಹೊಟ್ಟೆಯ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ಸೂರ್ಯನ ಬಿಸಿಲು ನಿನ್ನದೇ ಸೃಷ್ಟಿ, ತಲೆ ಮೇಲಿನ ಸೂರು ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ನೆಲೆಯ ಜೊತೆ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ಜನಗಳಿಗೆ ಕೊಟ್ಟ ಬಾಳೂ ನಿನ್ನ ಸೃಷ್ಟಿ, ಬಾಳಿನ ಭವಿಷ್ಯವೂ ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ಭವಿಷ್ಯದ ಜೊತೆಗಿನ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ನಮಗೆ ಕೊಟ್ಟ ಬದುಕು ನಿನ್ನದೇ ಸೃಷ್ಟಿ, ಬಾಳಿನ ಅಗತ್ಯಗಳೂ ನಿನ್ನದೇ ಸೃಷ್ಟಿ
ಎಲ್ಲವೂ ನಿನ್ನದೇ ಇರುವಾಗ ಮಾಡು ಎಲ್ಲವ ಸರಿಯ
ನಿನ್ನೀ ಸೃಷ್ಟಿಗೆ ಧರ್ಮವನೆರೆಯೆ

- ತೇಜಸ್ವಿ.ಎ.ಸಿ

ಕಣ್ಣಾ ಮುಚ್ಚಾಲೆ

on Thursday, July 8, 2010

ಕಣ್ಣಾ ಮುಚ್ಚಾಲೆ

ಹಗಲಿರುಳು ಸಾಲಾಗಿ ಬರುವ ಸುಂದರ ಕನಸುಗಳು
ಜೀವನಕೆ ತೋರುವವು ಬಣ್ಣ ಬಣ್ಣದ ಹೊಸ ಆಸೆಗಳ

ಕನಸಿನ ಲೋಕದಿ ಪಯಣ ನೀಡುವುವು ಹೊಸ ಭರವಸೆ
ಈ ಹೊಸ ಭರವಸೆಗಳಿತ್ತವು ಬಾಳಿಗೆ ಒಂದು ದಿಸೆ

ನಾವ್ ತೋರಿದೆವು ಈ ದಿಸೆಯಲ್ಲಿ ಮುನ್ನುಗುವ ತುಡಿತ
ಆಸೆಗಳ ಈಡೇರಿಕೆಗೆ ನಾವು ಶ್ರಮ ವಹಿಸಿದೆವು ಸತತ

ಚಿಕ್ಕ ಪುಟ್ಟ ಆಸೆಗಳ ಈಡೇರಿಕೆಗಳು ಅನ್ನಿಸಲಿಲ್ಲ ಬಲು ಕಷ್ಟ
ಮೂಲಭೂತ ಆಸೆಗಳ ತಡವರಿಕೆ ಮಾಡಿವೆ ಜೀವನವನ್ನೇ ನಷ್ಟ

ಬದುಕಿನ ಅಗತ್ಯಗಳ ಈಡೇರಿಕೆ ಜೀವನದ ಉದ್ದೇಶವಲ್ಲ
ಕನಸುಗಳ ಈಡೇರಿಕೆಯೇ ಜೀವನಕೆ ತೃಪ್ತಿ ಕೊಡುವುದಲ್ಲ

ಬೇಡದ ಕನಸುಗಳು ನಿತ್ಯ ಬಂದು ಮೂಡಿಸುವವು ಬರಿ ಆಸೆ
ಈಡೇರದ ಈ ಆಸೆಗಳ ಹೊರೆ ಆಗಿವೆ ಜೀವಕ್ಕೊಂದು ಶಿಕ್ಷೆ

ಕನಸು ಆಸೆಗಳ ಉದ್ದೇಶ ಸೃಷ್ಟಿಸಿವೆ ಹಲವು ಅನುಮಾನಗಳ
ಇವು ಬರುವುದು ಸ್ಪೂರ್ತಿಗೋ ಅಥವಾ ನೀಡಲು ಹತಾಶೆಗಳ?

ಈ ಎಲ್ಲಾ ಆಟ ದ್ವಂದ್ವಕೆ ಎಡೆಮಾಡಿದೆ ಜೀವನದ ದೋಣಿಯ
ಆಸೆಗಳು ದಿನ ಬಂದು ತೋರುತ್ತಿವೆಯೇ ನಮಗೆ ಬರಿ ಭ್ರಮೆಯ?

- ತೇಜಸ್ವಿ .ಎ.ಸಿ

ಅರ್ಥವಾಗದ ಭಾವನೆಗಳು

on Thursday, July 1, 2010

 ಅರ್ಥವಾಗದ ಭಾವನೆಗಳು

 
ನಾನೆಷ್ಟೇ ಕೋಪ ಮಾಡಿಕೊಂಡರು
ಅದು ಅರೆ ಕ್ಷಣ ಮಾತ್ರ
ಅದು ನಿನ್ನ ನೋಡಿದ ಕೆಲ ಕ್ಷಣ ಮಾತ್ರ .

ನನಗೆ ನಿನ್ನ ಮೇಲಿರುವ ಅಸಮಧಾನ
ನಿಜವಾದುದೆ ಎಂದು ನನಗೆಯೇ ಅನುಮಾನ
ಏಕೆಂದರೆ ಅದು ಕೇವಲ ಕ್ಷಣಿಕ ಮಾತ್ರ

ನನ್ನೀ ಚುಚ್ಚು ನಡವಳಿಕೆಯನು ನೋಡಿ
ಮನ ನೊಂದಿದೆಯೇ?
ನಿನಗೂ ಇದೆಯೇ ಮತಾಡಿಸಬೇಕೆಂದು ನನ್ನ ಹತ್ತಿರ?

ನಾನು ನನ್ನೀ ಭಾವನೆಗಳ ಅರ್ಥೈಸುವ
ಪ್ರಯತ್ನದಲ್ಲಿರುವೆ.
ನನ್ನೀ ತಾಕಲಾಟಕ್ಕೆ ಹುಡುಕಲೆತ್ನಿಸುವೆ ಉತ್ತರ.

ನನ್ನ ಮನದೊಳ ದ್ವಂದ್ವ ವನು ಬಿಡಿಸಿ
ಅರ್ಥೈಸಿದೆನಿಸಿದರೂ
ನಿನ್ನ ಮನದಾಳ ಅರಿಯಲು ಬೇಕು ನಿನ್ನ ಪಾತ್ರ.

- ತೇಜಸ್ವಿ.ಎ.ಸಿ