ಕಾರು ಬಾರು

on Friday, May 28, 2010

  ಕಾರು ಬಾರು

  ಸಂಚಾರ ದಟ್ಟಣೆಯಿಂದ ಸಾಕೆನಿಸಿತ್ತು ಬೆಂಗಳೂರು
  ಸ್ವಲ್ಪ ನೆಮ್ಮದಿಗೆ ಕೊಳ್ಳಬೇಕೆನಿಸಿತು ಒಂದು ಕಾರು

  ಕಾರು ಕೊಳ್ಳಲು ಹೋದರೆ ಕಂಡಿತು ಹಲವು ಬಗೆ
  ಎ ಸಿ ಕಾರು ಕೊಳ್ಳಲು ಪ್ರೇರೇಪಿಸಿತು ಬಿಸಿಲ ಧಗೆ

  ವಿಧ ವಿಧ ಸಲಹೆಗಳನಿತ್ತರು ಅನುಭವಿ ಸ್ನೇಹಿತರು
  ವಿವಿಧ ಸಲಹೆಗಳ ಹೇಳಿ ದ್ವಂದ್ವದಲಿ ಸಿಲುಕಿಸಿದರು

  ಮನೆಯಿಂದ ಬರಿತ್ತಿತ್ತು ಐಶಾರಮಿ ಕಾರಿನ ಬೇಡಿಕೆ
  ಆಗಲು ಒಲ್ಲದೆಂದು ಹೇಳಿತು ಕಾಸು ಕೂಡಿಟ್ಟ ಮಡಿಕೆ

  ಸಾಲವನ್ನು ಕೊಡಲು ಸಾಲಾಗಿ ನಿಂತಿದ್ದವು ಬ್ಯಾಂಕುಗಳು
  ಅದಕ್ಕೆ ಅನುಮತಿಯ ಕೊಡಲಿಲ್ಲ ಭವಿಷ್ಯದ ಯೋಜನೆಗಳು

  ನನ್ನ ಜೇಬಿಗಿಡಿಸುವ ಪುಟ್ಟ ಕಾರು ಕೊಳ್ಳಬೇಕೆನಿಸಿತು ಒಮ್ಮೆ
  ಇರೋದು ಒಂದು ಜೀವನ ರಾಜಿ ಏಕೆ ಎಂದಿತು ಮತ್ತೊಮ್ಮೆ

  ನಾನು ಆಯ್ಕೆಗಳ ಬಗ್ಗೆ ಯೋಚಿಸಿ ಕೊನೆಗೆ ಸಿಲಿಕ್ಕಿದ್ದೆ ಪೇಚಿಗೆ
  ಹೇಗಾದರೂ ಒಂದು ಉತ್ತರ ಕಂಡು ಬರ ಬೇಕೆಂದಿದ್ದೆ ಆಚೆಗೆ

  ಇನ್ನೂ ಕೊಂಚ ಹಣ ಕೂಡಿಸೋಣ ಎಂದೇಳಿತು ಯೋಚನೆ
  ಕೊನೆಗೆ ಸ್ವಲ್ಪ ಮುಂದೆ ಹಾಕಿದೆ ಕಾರು ಕೊಳ್ಳುವ ಯೋಜನೆ

  - ತೇಜಸ್ವಿ . ಎ. ಸಿ

ಕಾಲೇಜಿನಿಂದ ಕಚೇರಿವರೆಗೆ

on Friday, May 21, 2010

ಕಾಲೇಜಿನಿಂದ ಕಚೇರಿವರೆಗೆ

ಹುಡುಗರು ಓದಿ ಮುಗಿಸಿದರು ಕಾಲೇಜು ಶಿಕ್ಷಣ
ಕೆಲಸಕ್ಕೆ ಹೊರಡಲು ಒತ್ತಡ ಬಿದ್ದಿತ್ತು ಮರುಕ್ಷಣ

ಗೆಳೆಯರು ಸೇರಿ ಸಭೆ ನಡೆಸಿದರು ಈ ಬಾರಿ
ಕೆಲಸಕ್ಕಾಗಿ ಎಲ್ಲರು ಹಿಡಿದರು ನಗರದ ದಾರಿ

ಒಟ್ಟಿಗೆ ಸೇರಿದರು ಕೊಂಡು ರೈಲಿನ ಟಿಕೇಟು
ನಡೆದರು ಹೊತ್ತು ತಮ್ಮ ಬ್ಯಾಗು, ಸರ್ಟಿಫಿಕೇಟು

ಹುಡುಗರು ಸೇರಿ ಪಡೆದರು ಒಂದು ಕೋಣೆಯ ಮನೆ
ಅವಿವಾಹಿತರ ಮನೆಯ ಹುಡು’ಕಾಟಕ್ಕೆ’ ಸಿಕ್ಕಿತು ಕೊನೆ

ಹುಡುಗರು ಗಳಿಸಿದ್ದರು ಒಬ್ಬಬ್ಬರೂ ಒಂದೊಂದು ಅಂಕ
ಕಷ್ಟಪಟ್ಟು ಕೆಲಸ ಗಿಟ್ಟಿಸಲೇಬೇಕೆಂದು ಕಟ್ಟಿದ್ದರು ಟೊಂಕ

ಒಳ್ಳೆಯ ತಿಂಡಿ ಊಟವ ಪಡೆಯುವುದು ಆಗಿತ್ತು ದುಸ್ತರ
ಅಮ್ಮ ಮಾಡಿದ ಅಡುಗೆಯ ಬೆಲೆ ಗೊತ್ತಾಗಿತ್ತು ಈ ತರಹ

ವೃತ್ತಿ ಕೌಶಲ ಕಲಿಯಲು ಸೇರಿದರು ವಿವಿಧ ಕೋರ್ಸುಗಳು
ಕೋರ್ಸುಗಳ ಮಾಡುತ ಕೊಟ್ಟರು ಹಲವು ಸಂದರ್ಶನಗಳು

ಕೊನೆಗೂ ಸಿಗುತ ಬಂತು ನಮ್ಮ ಹುಡುಗರಿಗೆ ಕೆಲಸದ ಕರೆ
ಮಕ್ಕಳು ಯಶಸ್ಸು ಕಂಡು ಪೋಷಕರ ಕನಸಾಯಿತು ಖರೆ

- ತೇಜಸ್ವಿ.ಎ.ಸಿ

ಉತ್ತಮ ಅಭ್ಯಾಸ

on Saturday, May 15, 2010

ಉತ್ತಮ ಅಭ್ಯಾಸ

ನನ್ನ ಆಸೆಗಳಲ್ಲಿ ನಾ ಗಳಿಸ ಬೇಕೆಂದಿದ್ದೆ ಯಶಸ್ಸು
ಅದಕ್ಕೆ ನಾ ಮಾಡಿದೆ ಅದನ್ನು ಗಳಿಸುವ ಮನಸ್ಸು

ಹೊಸದರಲ್ಲಿ ಇರುತಿತ್ತು ಅದನ್ನು ಸಾಧಿಸುವ ಧ್ರುಡತೆ
ಕಾಲಕ್ರಮೇಣ ಮನಸು ಜಾರಿ ಕಾಡುತ್ತಿತ್ತು ಚಂಚಲತೆ

ಚಾಂಚಲ್ಯದ ಪರಿಣಾಮವಾಗಿ ಆಗುತ್ತಿತ್ತು ಮನ ಚಾಲೂ
ಸದಾ ಹರಿಯುವ ಮನದಿಂದಾಗಿ ಆಗುತ್ತಿತ್ತು ಬರಿ ಸೋಲು

ಏಕೆ ಮನವೆ ನೀನು ಹೀಗೆ ಹರಿಯುವ ನೀರಾಗುವೆ
ನಿನ್ನ ನಂಬಿದ ಆಸೆಗಳಿಗೆ ನೀ ಏಕೆ ಕೈ ಕೊಡುವೆ?

ನಾ ಹೀಗಿರಲು ನೀ ಮೈಗೂಡಿಸಿದ ಅಭ್ಯಾಸಗಳೇ ಕಾರಣ
ಅನುತ್ಪಾದಕ ಅಭ್ಯಾಸಗಳಿಂದ ಆಗಿದೆ ಆಸೆಗಳ ಮರಣ

ಅಭ್ಯಾಸಗಳು ಮಾಡುವವು ನಡವಳಿಕೆಯನ್ನು ಸ್ವಯಂಚಾಲಿತ
ಆಸೆಗಳಲ್ಲಿ ಗೆಲ್ಲಲು ಬೇಕು ಈ ನಡವಳಿಕೆಯ ಮೇಲಿನ ಹಿಡಿತ

ಅದಕ್ಕೆ ನೀ ಯೋಚಿಸಿ ಆರಿಸು ಬೆಳೆಸಬೇಕಾದ ಅಭ್ಯಾಸಗಳನ್ನ
ದಿನ ನಿತ್ಯವು ಆಚರಣೆಗೆ ತರು ರೂಡಿಸುತ ಆ ನಡುವಳಿಕೆಗಳನ್ನ

ಉತ್ತಮ ಉತ್ಪಾದಕ ಅಭ್ಯಾಸಗಳು ಆದರೆ ಜೀವನದ ಭಾಗ
ಪಡೆದುಕೊಳ್ಳುವುದು ನಿನ್ನೆಲ್ಲಾ ಆಸೆಗಳ ಈಡೇರಿಕೆಯು ವೇಗ

- ತೇಜಸ್ವಿ .ಎ.ಸಿ

ಗುರಿ ಮುಟ್ಟು ಮನುಜ

on Friday, May 7, 2010

  ಗುರಿ ಮುಟ್ಟು ಮನುಜ

  ಗುರಿಯಿಲ್ಲದ ಜೀವನ ಬದುಕಿನುತ್ಸಾಹಕ್ಕೆ ಮಂಕು
  ಈ ಸುಧೀರ್ಘ ಜೀವನಕ್ಕೊಂದು ಗುರಿ ಬೇಕೇ ಬೇಕು

  ನಾವಿಡುವ ಗುರಿ ವಾಸ್ತವದ ಆವರಣದಲ್ಲಿ ಇರಬೇಕು
  ಗುರಿ ಮುಟ್ಟುವ ಹಾದಿಯನು ಅಳಿಯುವಂತಿರ ಬೇಕು

  ನಿಗದಿ ಪಡಿಸುವ ಗುರಿ ನಮಗೆ ಸ್ಪಷ್ಟವಾಗಿರಲಿ
  ಆ ಸ್ಪಷ್ಟ ಗುರಿಗೊಂದು ಸಮಯದ ಅಂಕುಶವಿರಲಿ

 ಸೋಲದಿದ್ದರೆ ಸಾಕು ಎಂದರೆ ಗುರಿ ಮುಟ್ಟುವುದಿಲ್ಲ
 ಗೆಲ್ಲಲೇ ಬೇಕೆಂಬ ಛಲ ಮುಟ್ಟಿಸದೆ ಬಿಡುವುದಿಲ್ಲ

  ನಿನ್ನ ದುರ್ಬಲ ಆಸೆ ಎಂದೂ ಗುರಿ ಮುಟ್ಟಿಸುವುದಿಲ್ಲ
  ಧೈರ್ಯದಿ ಹಟ ಕಟ್ಟಿ ನಿಂತವರು ನುಗ್ಗುತಿರುವರೆಲ್ಲ

  ಗುರಿಯ ಹಾದಿಯಲ್ಲಿ ಸೋಲುಗಳು ಎದೆ ಕುಗ್ಗುಸಿವುದು
  ಈ ಸೋಲು ಸವಾಲುಗಳೇ ನಿನ್ನ ಪ್ರಭುದ್ದವಾಗಿಸುವುದು

  ಮಡಿಕೆಯೊಳ ಕುಂಬಳದಂತೆ ಮಿತಿಯೊಳಗೆ ನಿಲ್ಲ ಬೇಡ
  ನಿನ್ನ ಆತ್ಮ ಗೌರವವನು ನೀನೆಂದೂ ಮೊಟಕು ಗೊಳಿಸಬೇಡ

  ತಾಳ್ಮೆ , ಬುದ್ದಿ, ಧ್ರುಡತೆ ಗುರಿಗೆ ನಿನ್ನ ಅಸ್ತ್ರವಾಗಿರಲಿ
  ಎಲ್ಲಾ ಗುರಿ ಸಾಧಿಸುತ್ತ ಆತ್ಮ ವಿಶ್ವಾಸ ತುಂಬುತಿರಲಿ

  - ತೇಜಸ್ವಿ. ಎ.ಸಿ