Monday, January 29, 2024

ಪಾರ್ಕಿನ್ ಸನ್ಸ್ ನಿಯಮ

  ಪಾರ್ಕಿನ್ ಸನ್ಸ್ ನಿಯಮ :


              ಮನೆ ಹಾಗೂ ಹಣವನ್ನು ನಿರ್ವಹಣೆ ಮಾಡುವ  ಯಜಮಾನ  ಪಾರ್ಕಿನ್ ಸನ್ಸ್ ನಿಯಮವನ್ನು ತಿಳಿಯುವುದು ಅತಿ ಮುಖ್ಯ.  ಇಲ್ಲದೆ ಹೋದರೆ  ಮುಂದೊಂದು ದಿವಸ  ಎಷ್ಟೇ ಹಣ ಸಂಪಾದಿಸಿದರು  ಯಾಕೆ ಅದು ಉಳಿಯುವುದಿಲ್ಲ ಎಂಬ  ಪ್ರಶ್ನೆ ಮೂಡುವುದು ಸಹಜ.   ಹಣ ಉಳಿಯದೆ ಇರುವುದಕ್ಕೆ  ಹಲವಾರು ಕಾರಣಗಳಿರುತ್ತವೆ, ಅದರಲ್ಲಿ ಒಂದು ಕಾರಣವನ್ನು  ಪಾರ್ಕಿನ್ ಸನ್ಸ್ ತಮ್ಮ ನಿಯಮದ  ಮೂಲಕ ಹೇಳುತ್ತಾರೆ. ಸಿರಿಲ್  ನಾರ್ತ್ ಕೋಟ್ ಪಾರ್ಕಿನ್ ಸನ್  ಒಬ್ಬ ಬ್ರಿಟಿಷ್  ಮೂಲದ ನೌಕೆಗಳ ಇತಿಹಾಸಗಾರ.  ಇವರು 1958ರಲ್ಲಿ The Parkinson's Law: The Pursuit of progress  ಎನ್ನುವ ಪುಸ್ತಕವನ್ನು  ಪ್ರಕಟಿಸಿದರು.  ಈ ಪುಸ್ತಕದಲ್ಲಿ ಅವರು  ಸಮಯದ ಬಗ್ಗೆ ಒಂದು ನಿಯಮವನ್ನು ಬರೆದಿದ್ದಾರೆ.  ಅದು ಕೆಳಕಂಡಂತೆ ಇದೆ.


                                 ಚಿತ್ರ ಕೃಪೆ:  ಅಂತರ್ಜಾಲ

"ಕೆಲಸವು ಅದರ ಪೂರ್ಣಗೊಳಿಸುವಿಕೆಗೆ ನಿಗದಿಪಡಿಸಿದ ಸಮಯವನ್ನು ತುಂಬಲು ವಿಸ್ತರಿಸುತ್ತದೆ"

ಅಂದರೆ  ನಿಮಗೆ ಕೊಟ್ಟಂತಹ ಸಮಯದ ಗಡುವಿಗೆ ತಕ್ಕಂತೆ  ನಿಮ್ಮ  ಕೆಲಸವು  ವಿಸ್ತರಿಸುತ್ತದೆ.    ಉದಾಹರಣೆಗೆ  ವಿದ್ಯಾರ್ಥಿಗಳು  ವಾರ್ಷಿಕ ಪರೀಕ್ಷೆಯು ಮಾರ್ಚ್ ನಲ್ಲಿ ಇರುವುದರಿಂದ ಇನ್ನೂ ಬೇಕಾದಷ್ಟು ಸಮಯವಿದೆ ಎಂದು ಉದಾಸೀನತೆ ಮಾಡಿ, ಜನವರಿಯಲ್ಲಿ ಗಂಭೀರವಾಗಿ ಓದಲು ಪ್ರಾರಂಭಿಸಬಹುದು  ಅಂದರೆ  ಇನ್ನೂ ಬೇಕಾದಷ್ಟು ಸಮಯವಿದೆ  ಎಂಬ ತಾತ್ಸಾರ  ಕಾಲಹರಣ ಮಾಡುವಂತೆ ಮಾಡುತ್ತದೆ. ಓದುವ ಕಾರ್ಯವನ್ನು ಕೊನೆಯ ತನಕ ಮಾಡುವಂತೆ  ವಿಸ್ತರಿಸುತ್ತದೆ.   

ಇದೇ ರೀತಿ  ಆರ್ಥಿಕತೆ ಬಗ್ಗೆ ಇರುವ ನಿಯಮವೆಂದರೆ

"ಜನರು ಎಷ್ಟೇ ಹಣವನ್ನು ಸಂಪಾದಿಸಿದರೂ,  ಅವರ ಖರ್ಚುಗಳು  ಗಳಿಸಿದ ಆದಾಯಕ್ಕೆ ತಕ್ಕಂತೆ ವಿಸ್ತರಿಸುತ್ತದೆ"

 ಈ ನಿಯಮದ ಮೂಲಕ  ಅವರು ಹೇಳಬಯಸುವುದು ಜನರು  ತಮ್ಮ ವೃತ್ತಿ ಜೀವನದ ಆರಂಭದ ಆದಾಯಕ್ಕಿಂತ (ವೇತನ/ವ್ಯಾಪಾರ/ಉದ್ಯಮದ ಲಾಭ)  ಭವಿಷ್ಯದಲ್ಲಿ ಎಷ್ಟೇ ಪಟ್ಟು ಹಣವನ್ನು ಸಂಪಾದಿಸಿದರು  ಅವರ ಖರ್ಚುಗಳು  ಅವರ ಜೀವನ ಶೈಲಿಯ ತಕ್ಕಂತೆ  ಸಂಪಾದನೆಯ ಸಮಕ್ಕೆ ವಿಸ್ತರಿಸುತ್ತದೆ. 

 ಉದಾಹರಣೆಗೆ ಜನರು  ಒಂದು ದರ್ಶಿನಿ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದವರು   ಹಣ ಸಂಪಾದನೆ ಹೆಚ್ಚಾದಂತೆ   ಒಂದು ದುಬಾರಿ ರೆಸ್ಟೋರೆಂಟ್ ನಲ್ಲಿ  ಊಟ ಮಾಡುತ್ತಾರೆ,  ಹಾಗೆಯೆ  ಒಂದು ಸಾಧಾರಣ ಮನೆಯಲ್ಲಿ ವಾಸ ಮಾಡುವವರು  ಹಣ ಗಳಿಸಿದಂತೆ  ದೊಡ್ಡ ಬಂಗಲೆಯಲ್ಲಿ ವಾಸ ಮಾಡಲು ಮುಂದಾಗುತ್ತಾರೆ. ಒಂದು ದ್ವಿಚಕ್ರ ವಾಹನದಲ್ಲಿ ಓಡಾಡುವವರು ಒಂದು ದೊಡ್ಡ ಕಾರನ್ನು  ಹಾಗೆಯೇ ಮುಂದೆ  ಐಷಾರಾಮಿ ಕಾರನ್ನು ಕೊಂಡುಕೊಳ್ಳಲು ಮುಂದಾಗುವರು. ಇದೇ ರೀತಿಯಲ್ಲಿ  ಇಂದು  ಹಲವು ಬಗೆಯ ವಿದ್ಯುನ್ಮಾನ ಉಪಕರಣಗಳು, ಉತ್ಪನ್ನಗಳು  ಲಭ್ಯವಿದೆ.  ಹೀಗೆ ನಾವು  ಹತ್ತು ಹಲವಾರು  ಉತ್ಪನ್ನಗಳ ಬಳಕೆ ಮಾಡುತ್ತೇವೆ ಹಾಗೆಯೇ ವಿವಿಧ ಸೇವೆಗಳನ್ನು  ಬಳಸಿಕೊಳ್ಳುತ್ತೇವೆ .  ಒಂದೊಂದೇ ಇತರ ವೆಚ್ಚಗಳನ್ನು  ಸೇರಿಸುತ್ತಾ ಹೋದರೆ  ಇವುಗಳ ಒಟ್ಟು ಸಮಗ್ರ  ವೆಚ್ಚವು ಜನರ ಆದಾಯದ ಸಮಕ್ಕೆ ಅಥವಾ ಆದಾಯವನ್ನು ಮೀರಿ  ಬೆಳೆಯುತ್ತದೆ. 
                                                                                                                                                                      ಮಾರುಕಟ್ಟೆಯಲ್ಲಿ ಒಂದು ಉತ್ಪನ್ನ ಕಡಿಮೆ ಬೆಲೆಯ ಬ್ರಾಂಡ್ ನಿಂದ  ಹಿಡಿದು  ಕೈಗೆಟುಕಲಾರದ  ಐಶಾರಾಮಿ ಬ್ರಾಂಡ್ ಗಳ ತನಕ ಎಲ್ಲಾ ವಿವಿಧ  ಬೆಲೆಗಳಲ್ಲಿ ಲಭ್ಯವಿದೆ. ಸಾಮಾನ್ಯವಾಗಿ  ಜನರ ಅವಶ್ಯಕತೆಗಳಿಗೆ ಮಿತಿ ಇರುತ್ತದೆ  ಆದರೆ ಆಸೆಗಳಿಗೆ ಮಿತಿ ಇರುವುದಿಲ್ಲ. ಹೀಗಾಗಿ ಜನರು ಎಷ್ಟೇ ಸಂಪಾದನೆ ಮಾಡಿದರು  ಜೀವನ ಶೈಲಿಗೋಸ್ಕರ  ಹಾಗೂ ಪರರ ಮೆಚ್ಚುಗೆಗೋಸ್ಕರ  ತಮ್ಮ ಜೀವನ ಶೈಲಿಯನ್ನು ಮೇಲ್ದರ್ಜೆಗೆ ಏರಿಸಿ ಹಣವನ್ನು ಅಧಿಕವಾಗಿ ಖರ್ಚು ಮಾಡುತ್ತಾರೆ. ಪರಿಣಾಮವಾಗಿ ಹಣದ ಕೊರತೆಯಿಂದ, ಅಭದ್ರತೆಯಿಂದ, ಭವಿಷ್ಯದ  ಅನಿಶ್ಚಿತತೆಗಳಿಂದ  ಕೊರಗುತ್ತಾರೆ. ಹೀಗಾಗಿ  ಭವಿಷ್ಯದಲ್ಲಿ ಬರುವ  ಉದ್ಯೋಗ ಮುಂಬಡ್ತಿ ಮತ್ತು ವೇತನ ಪರಿಷ್ಕರಣೆ  ನಮ್ಮ ಈಗಿನ  ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ  ಎಂದು  ಹೇಳಲಾಗದು. ಆದರೆ  ನಮ್ಮ ಈ ತಿಳುವಳಿಕೆಯಿಂದ,  ನಾವು  ಪ್ರಜ್ಞಾಪೂರ್ವಕವಾಗಿ  ಪ್ರಯತ್ನಿಸಿದಲ್ಲಿ   ಖರ್ಚುಗಳನ್ನು  ಮಿತಿಗೊಳಿಸಿ   ಒಂದಷ್ಟರ ಮಟ್ಟಿಗೆ  ನಿಯಂತ್ರಣ ಸಾಧಿಸಿ  ಜೀವನವನ್ನು  ಸುಗಮಗೊಳಿಸಬಹುದು.

ಉಳಿದ ಕಾರಣಗಳು ಯಾವುವು    

ಕೇವಲ ಪಾರ್ಕಿನ್ ಸನ್ಸ್ ನಿಯಮ ಕೊಟ್ಟ ಕಾರಣ ಮಾತ್ರವಲ್ಲ, ಹಣದ ಕೊರತೆಗೆ ಇನ್ನೂ ಹಲವಾರು ಕಾರಣಗಳಿವೆ.  ಕೆಲವು ನಮ್ಮ ನಿಯಂತ್ರಣದಲ್ಲಿರುತ್ತದೆ,  ಇನ್ನುಳಿದವು ನಮ್ಮ ನಿಯಂತ್ರಣಕ್ಕೆ ಬಾರದು. ಅವುಗಳು ಈ ಕೆಳಕಂಡಂತಿವೆ

ತೆರಿಗೆಗಳು:

 ಭಾರತದಲ್ಲಿ  ಹಲವು ವಿಧದ ತೆರಿಗೆಗಳಿವೆ  ಅವುಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು.   ಅವುಗಳೆಂದರೆ ನೇರ ತೆರಿಗೆ (Direct Tax)  ಹಾಗೂ  ಪರೋಕ್ಷ ತೆರಿಗೆ (Indirect Tax).    ವೇತನದಾರರಿಗೆ    ಮಾಸಿಕ ವೇತನ ಬರುವುದೇ ತೆರಿಗೆಗಳು ಕಡಿತಗೊಳಿಸಿದ ನಂತರ.  ಇದರಲ್ಲಿ  ವೇತನದಾರನು  ಶೇ. 5ರಿಂದ ಶೇ. 30 ತನಕ ಮಾಸಿಕ ವೇತನವನ್ನು  ಆದಾಯ ತೆರಿಗೆ(Income Tax) ರೂಪದಲ್ಲಿ  ಸರಕಾರಕ್ಕೆ  ಕೊಡಬೇಕಾಗುತ್ತದೆ.   ಇದು ನೇರ  ತೆರಿಗೆ  ಆದರೆ  ತೆರಿಗೆ ಇಲ್ಲಿಗೆ ನಿಲ್ಲುವುದಿಲ್ಲ  ಕೈಗೆ ಬಂದ ಬಾಕಿ ಉಳಿದ ಶೇ. 70ರಷ್ಟು ವೇತನದಲ್ಲಿ ಖರ್ಚು ಮಾಡುವಾಗ ಪರೋಕ್ಷ ತೆರಿಗೆಯನ್ನು ಕಟ್ಟಬೇಕಾಗುತ್ತದೆ.  ಇದರ ಅಡಿಯಲ್ಲಿ  ಪ್ರಮುಖವಾಗಿ  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ - GST),   ಮೌಲ್ಯವರ್ಧಿತ ತೆರಿಗೆ (ವಿಎಟಿ-VAT),  ಮಾರಾಟ ತೆರಿಗೆ(Sales Tax),  ಸೇವಾ ತೆರಿಗೆಗಳಿವೆ (Service tax).  ಇವುಗಳಲ್ಲಿ  ಹಲವು ಮಟ್ಟದ ಶೇಕಡವಾರು ತೆರಿಗೆಗಳಿವೆ (5%, 12%, 18% ಹಾಗೂ 28%). 


ಇದಷ್ಟೇ ಅಲ್ಲದೆ  ಬಂಡವಾಳ ಹೂಡಿಕೆದಾರರಿಗೆ  ಬಂಡವಾಳ ಲಾಭ ತೆರಿಗೆ (Capital Gains Tax),  ಸ್ವಂತ ಮನೆ ಹೊಂದಿದ್ದರೆ ವಾರ್ಷಿಕ ಆಸ್ತಿ ತೆರಿಗೆ(Property Tax),  ವಾಹನ ಕೊಂಡುಕೊಂಡರೆ ಜೀವಿತಾವಧಿ ರಸ್ತೆ ತೆರಿಗೆ (Lifetime Road Tax),  ನೋಂದಣಿ ಶುಲ್ಕ(Registration fee), ರಸ್ತೆ ಸುಂಕ(Toll Tax),  ಹೆಚ್ಚುವರಿ ಶುಲ್ಕ (Surcharge),  ಸೆಸ್ (cess)  ಹೀಗೆ  ಹಲವು ರೀತಿಯ  ನೇರ, ಪರೋಕ್ಷ ಹಾಗೂ  ಇತರೆ  ತೆರಿಗೆಗಳನ್ನು ನಾಗರಿಕರು  ಸರ್ಕಾರಕ್ಕೆ  ಕಟ್ಟಬೇಕಾಗುತ್ತದೆ.  

     ಒಟ್ಟಾರೆಯಾಗಿ  ಭಾರತದ ನಾಗರಿಕರು  ಸಾಮಾನ್ಯವಾಗಿ   ತಮ್ಮ ಆದಾಯದ  ಶೇ.42 ರಿಂದ  ಶೇ. 50ರವರೆಗೆ   ಆದಾಯವನ್ನು  ತೆರಿಗೆಯ ರೂಪದಲ್ಲಿ  ಸರ್ಕಾರಕ್ಕೆ ಕಟ್ಟುತ್ತಾರೆ.   ಅಂದರೆ  ತಾವು ದುಡಿದ  ಐದರಿಂದ ಆರು ತಿಂಗಳ  ಆದಾಯವನ್ನು  ತೆರಿಗೆ ರೂಪದಲ್ಲಿ  ಸರ್ಕಾರಕ್ಕೆ ಕಟ್ಟುತ್ತಾರೆ.  ಇದು ಸಹ  ಹಣದ ಅಭಾವಕ್ಕೆ  ಕೊಡುಗೆಯನ್ನು ನೀಡುತ್ತದೆ. ಆದರೆ  ತೆರಿಗೆಗಳ ಮೇಲೆ  ಹೆಚ್ಚಿನ ಸಂಶೋಧನೆ ನಡೆಸಿ  ತೆರಿಗೆ ಕಾನೂನು ನಿಯಮಗಳ ತಿಳುವಳಿಕೆಯನ್ನು ಹೆಚ್ಚಿಸಿಕೊಂಡು  ಸರ್ಕಾರ  ಒದಗಿಸಿರುವ  ಅವಕಾಶಗಳ ಸರಿಯಾದ ಬಳಕೆಯಿಂದ  ಅನಗತ್ಯ  ತೆರಿಗೆಯನ್ನು  ಕಟ್ಟದೆ ಒಂದು ಮಟ್ಟಿಗೆ ಹಣವನ್ನು ಉಳಿಸಬಹುದು.    

ಹಣದುಬ್ಬರ:

ಹಣದುಬ್ಬರವೆಂದರೆ  ಸರಕು ಮತ್ತು ಸೇವೆಗಳಲ್ಲಿ ಬೆಲೆಗಳ   ಹೆಚ್ಚಳ.  ಪ್ರತಿ  ವರ್ಷವೂ  ದೇಶದಲ್ಲಿ ಹಣದುಬ್ಬರ ಇದ್ದೇ ಇರುತ್ತದೆ  ಅದರ ಶೇಖಡಾವಾರು ಪ್ರಮಾಣ ವರ್ಷದಿಂದ ವರ್ಷಕ್ಕೆ  ಬದಲಾಗುತ್ತಿರುತ್ತದೆ.  ಹಣದುಬ್ಬರದ ಪ್ರಮಾಣ ಕಡಿಮೆ ಇದ್ದಷ್ಟು  ಬೆಲೆಗಳು ಕಡಿಮೆ ಇರುತ್ತದೆ  ಅದು ಹೆಚ್ಚಿದಷ್ಟು  ವಸ್ತುಗಳು ಮತ್ತು ಸೇವೆಗಳ ಬೆಲೆ  ಹೆಚ್ಚಾಗಿರುತ್ತದೆ.    ಹಣದುಬ್ಬರದಿಂದ ರೂಪಾಯಿಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ.  ಉದಾಹರಣೆಗೆ  ಇಂದು ಹಣದುಬ್ಬರ ಶೇ. 7 ಇದೆ ಎಂದು ತಿಳಿಯೋಣ,  ಈ ವರ್ಷ ಒಂದು ವಸ್ತು  ರೂ.100 ಕ್ಕೆ   ಸಿಕ್ಕರೆ  ಅದೇ ವಸ್ತುವಿನ  ಬೆಲೆ  ಮುಂದಿನ ವರ್ಷಕ್ಕೆ ರೂ.107 ಆಗಿರುತ್ತದೆ.  
           ವೇತನದಾರರ ವಾರ್ಷಿಕ ವೇತನದಲ್ಲಿ ಪರಿಷ್ಕರಣೆಯು  ಹಣದುಬ್ಬರಕ್ಕಿಂತ ಹೆಚ್ಚಿದ್ದರೆ  ಅದು ವೇತನದಲ್ಲಿ ಹೆಚ್ಚಳವಾದಂತೆ,  ಇಲ್ಲದೆ ಹೋದರೆ  ಆ ಪರಿಷ್ಕರಣೆ ಕೇವಲ  ಹಣದುಬ್ಬರಕ್ಕೆ ಹೊಂದಾಣಿಕೆ ಆಗುತ್ತದೆ ಅಥವಾ ವೇತನದ ಮೌಲ್ಯ ಕುಸಿಯುತ್ತದೆ ಹೊರತಾಗಿ  ನಿಮ್ಮ ಆದಾಯದಲ್ಲಿ ಏರಿಕೆಯಾಗುವುದಿಲ್ಲ.  ಹೀಗೆ  ನಾವು ದುಡಿದ ಹಣದ  ಮೌಲ್ಯವು  ಕುಸಿಯುತ್ತಿರುತ್ತದೆ.   ಹೀಗಾಗಿ ಹಣದುಬ್ಬರ ಸಹ  ಹಣದ ಅಭಾವಕ್ಕೆ ದೊಡ್ಡ ಕೊಡುಗೆಯನ್ನು  ಕೊಡುತ್ತದೆ.    


ಹೆಚ್ಚಾಗುವ ಜವಾಬ್ದಾರಿಗಳು:

ಸಾಮಾನ್ಯ ಜೀವನ ನೋಡಿದಾಗ  ವಿದ್ಯಾಭ್ಯಾಸ ಮುಗಿಸಿದ ನಂತರ  ತರುಣ ತರುಣಿಯರು ಸಂಪಾದಿಸಲು  ಆರಂಭಿಸುತ್ತಾರೆ.   ಆ  ಅವಿವಾಹಿತ ಜೀವನದ ಹಂತದಲ್ಲಿ  ಅವರಲ್ಲಿ ಹಣವು ಹೆಚ್ಚಾಗಿರುತ್ತದೆ  ಆದರೆ  ಖರ್ಚುಗಳು ಕಡಿಮೆ ಇರುತ್ತದೆ. ಆಗ ಹಣದ ಕೊರತೆಯು ಕಾಣುವುದಿಲ್ಲ.   

ನಂತರದ ಹಂತಗಳಲ್ಲಿ  ವಿವಾಹಿತರಾಗಿ  ಇನ್ನೊಬ್ಬ ವ್ಯಕ್ತಿಯ ಜವಾಬ್ದಾರಿ ಹೊರುತ್ತಾರೆ. ಸಂಗಾತಿಯ  ಮೂಲಭೂತ ಅವಶ್ಯಕತೆಗಳು  ಹಾಗೂ ಕನಿಷ್ಠ ಆಸೆಗಳು  ಹಣದ ಬೇಡಿಕೆಯನ್ನು  ಹೆಚ್ಚು ಮಾಡುತ್ತದೆ. ಉದ್ಯೋಗಕ್ಕಾಗಿ  ನಗರಕ್ಕೆ ವಲಸೆ ಬಂದವರಾದರೆ  ಸಂಗಾತಿ ಹಾಗೂ ಸಂಸಾರಕ್ಕಾಗಿ  ಹೊಸ ಮನೆಯನ್ನು  ಮಾಡಬೇಕಾಗುತ್ತದೆ.  ಮನೆಗೆ ಅಗತ್ಯ ವಸ್ತುಗಳು  ಹಾಗೂ  ಸೌಕರ್ಯಗಳನ್ನು  ಒದಗಿಸಬೇಕಾಗುತ್ತದೆ. ನಂತರ  ಒಂದು ಅಥವಾ ಎರಡು ಮಕ್ಕಳಾಗುತ್ತಾರೆ ಹಾಗೆಯೇ  ಅವರ  ಅವಶ್ಯಕತೆಗಳು  ಮತ್ತು ಆಸೆಗಳು   ಖರ್ಚುಗಳನ್ನು ಹೆಚ್ಚು ಮಾಡುತ್ತಾ  ಹೋಗುತ್ತದೆ. ಪರಿವಾರಕ್ಕಾಗಿ  ಒಂದು ಕಾರನ್ನು  ಕೊಂಡುಕೊಳ್ಳ ಬೇಕಾಗುತ್ತದೆ.  ಕುಟುಂಬದ ಗಾತ್ರಕ್ಕೆ ತಕ್ಕಂತೆ  ಸ್ವಂತ ನಿವೇಶನ ಕೊಂಡು ನಂತರ ಸುಸಜ್ಜಿತವಾದ ಮನೆಯನ್ನು ಕಟ್ಟಬೇಕಾಗುತ್ತದೆ.  

ಕುಟುಂಬದ ಎಲ್ಲಾ ಸದಸ್ಯರಿಗೆ ಸೌಲಭ್ಯಗಳ ಪೂರೈಸ ಬೇಕಾಗುತ್ತದೆ, ಎಲ್ಲರ ರಕ್ಷಣೆ ಮಾಡಬೇಕು ಹಾಗೂ ಸಣ್ಣಪುಟ್ಟ ಆಸೆಗಳನ್ನು  ಈಡೇರಿಸಬೇಕಾಗುತ್ತದೆ .    ಹೀಗೆಯೇ ಪ್ರಮುಖ ಹಂತಗಳಾದ ಮಕ್ಕಳ ವಿದ್ಯಾಭ್ಯಾಸ,   ವಿವಾಹ  ಹಾಗೂ  ನಿವೃತ್ತಿಯ ಪಿಂಚಣಿಯಂತಹ   ಅನೇಕ ಬೇಡಿಕೆಗಳು ಕಾಲ ಕಾಲಕ್ಕೆ ಉದ್ಭವವಾಗುತ್ತದೆ.  ಈ ಹೊಸ ಬೇಡಿಕೆಗಳು  ಖರ್ಚುಗಳನ್ನು ನಿಮ್ಮ ಆದಾಯದ  ಮಟ್ಟಕ್ಕೆ ತಲುಪಿಸುತ್ತವೆ,   ಎಷ್ಟೋ ಬಾರಿ ಆದಾಯವನ್ನು ಮೀರಿ ಬೇಡಿಕೆಗಳು ಬೆಳೆಯುತ್ತವೆ.   ಹೀಗೆ ಹಂತ ಹಂತವಾಗಿ ಹೆಚ್ಚಾಗುವ ಹಣದ ಬೇಡಿಕೆಗಳು  ಎಷ್ಟೇ ದುಡಿದರು  ಹಣ ಸಾಕಾಗುವುದಿಲ್ಲ ಎಂಬ ಭಾವನೆಯನ್ನು  ತರಿಸುತ್ತದೆ. ಆದರೆ  ನಮ್ಮ ಈ ತಿಳುವಳಿಕೆಯಿಂದ,  ನಾವು  ಪ್ರಜ್ಞಾಪೂರ್ವಕವಾಗಿ  ಸಂಗಾತಿಯೊಡನೆ ಕುಳಿತು  ಪ್ರತಿ ತಿಂಗಳ  ಆಯ- ವ್ಯಯಗಳ ಯೋಜನೆ ಹಾಕಿ  ಸಂಸಾರವನ್ನು  ಬುದ್ಧಿವಂತಿಕೆಯಿಂದ ನಿಭಾಯಿಸದಲ್ಲಿ  ಜೀವನದ ದೋಣಿಯನ್ನು  ಸರಾಗವಾಗಿ ಸಾಗಿಸಬಹುದು.       

 ಸಾರಾಂಶ:

 ಸಾಮಾನ್ಯವಾಗಿ  ಜನರು  ತಾವು  ಗಳಿಸಿದ  ಹಣ  ಎಲ್ಲಾ ಖರ್ಚಾಗಿ  ನಮಗೇನು ಉಳಿಯುವುದಿಲ್ಲ  ಎಂದು  ಚಿಂತಿಸುತ್ತಾರೆ.   ನಮ್ಮ ಹಣದ  ಕೊರತೆಯಲ್ಲಿ  ನಮ್ಮ ಅವಶ್ಯಕತೆ , ಆಸೆಗಳಿಗೆ ಮಾಡುವ ಖರ್ಚುಗಳ         ಹೊರತಾಗಿ   ನಮ್ಮ ನಿಯಂತ್ರಣಕ್ಕೆ  ಬಾರದ  ಹಲವಾರು ಅಂಶಗಳು  ಒಳಗೊಂಡಿರುತ್ತದೆ  ಹೀಗಾಗಿ  ನಮ್ಮ ಖರ್ಚುಗಳ ಹತೋಟಿ  ಸಂಪೂರ್ಣವಾಗಿ ನಮ್ಮಲ್ಲಿ ಇರುವುದಿಲ್ಲ  ಅದಕ್ಕೆ  ಇರುವ   ಕಾರಣಗಳು  ಈ ಕೆಳಕಂಡಂತೆ  ಇವೆ.

ಪಾರ್ಕಿನ್ ಸನ್ಸ್  ನಿಯಮ :   ಆದಾಯಕ್ಕೆ ತಕ್ಕಂತೆ  ಜನರು  ತಮ್ಮ ಜೀವನ ಶೈಲಿಯನ್ನು   ಮೇಲ್ದರ್ಜೆಗೆ ಏರಿಸುತ್ತಾ  ದುಬಾರಿ   ಹಾಗೂ  ಐಷಾರಾಮಿ  ಉತ್ಪನ್ನಗಳು ಹಾಗೂ   ಸೇವೆಗಳನ್ನು ಪಡೆಯುತ್ತಾರೆ. ಇದು  ಹಣದ ಕೊರತೆಗೆ ಕಾರಣವಾಗುತ್ತದೆ.
ಸರ್ಕಾರದ  ತೆರಿಗೆ ಪದ್ಧತಿ:   ನಮ್ಮ  ಆದಾಯದ ಹಣದಲ್ಲಿ  ತೆರಿಗೆ ಮೂಲಕ ದೊಡ್ಡ ಪಾಲು ಮೊತ್ತವನ್ನು ಸರ್ಕಾರಕ್ಕೆ ಕೊಡಲೇಬೇಕಾದಂತ ಅನಿವಾರ್ಯತೆ. ಇದು ಸಹ ನಮ್ಮ  ಹಣದ ಕೊರತೆಗೆ  ಕೊಡುಗೆಯಾಗುತ್ತದೆ 
ಹಣದುಬ್ಬರ:  ಪ್ರತಿ ವರ್ಷ ಇರುವ ಹಣದುಬ್ಬರ  ರೂಪಾಯಿಯ ಮೌಲ್ಯವನ್ನು  ಕುಸಿತಗೊಳಿಸಿ  ನಮ್ಮ ದುಡಿಮೆಯ ಮೌಲ್ಯವನ್ನು ಕಡಿಮೆ ಮಾಡುತ್ತದೆ.
ಕಾಲ ಕಾಲಕ್ಕೆ ಹೆಚ್ಚಾಗುವ ಜವಾಬ್ದಾರಿ: ಮನುಷ್ಯನ  ಜೀವನದಲ್ಲಿ ಹಂತ ಹಂತವಾಗಿ ಬರುವ     ಸಂಗಾತಿ, ಮಕ್ಕಳು,  ಮನೆ,  ವಾಹನ, ನಿವೃತ್ತಿ ಅನೇಕ ಜವಾಬ್ದಾರಿಗಳು ಕೂಡ  ಹಣದ ಕೊರತೆಗೆ  ಕಾರಣವಾಗುತ್ತದೆ.

Thursday, January 25, 2024

ಪರಿವಿಡಿ

ಪರಿವಿಡಿ  

 ವೈಯಕ್ತಿಕ ಹಣಕಾಸು:

        ಪಾರ್ಕಿನ್ ಸನ್ಸ್ ನಿಯಮ

        ಹಣಕ್ಕೆ ಪ್ರತಿಯಾಗಿ ಸಿಗುವ  ಮೌಲ್ಯ 

        ಒಬ್ಬರೇ  ನಿರ್ವಹಿಸುವುದು  ಅಸಾಧ್ಯ

        ಹಣದ ಜಾಡು ಹಿಡಿಯುವುದು    

        ವೈಯಕ್ತಿಕ ಹಣಕಾಸು ಯೋಜನೆ

        ಹಣದ ಗಳಿಕೆ 

        ಉದ್ದೇಶಕ್ಕಾಗಿ ಕೂಡಿಡುವುದು

        ಹಣದ ಉಳಿತಾಯ

        ರಕ್ಷಣೆ

        ಹೂಡಿಕೆ

 ನಡವಳಿಕೆ:

         ಗಣ್ಯ ನಗಣ್ಯ

         ತಡೆಗಟ್ಟುವಿಕೆ / ರಕ್ಷಣೆ  

         ಪರಿಸರ ಅತ್ಯಂತ ಶಕ್ತಿಶಾಲಿ 

         ನಮ್ಮ ನಿಯಂತ್ರಣದಲ್ಲಿ ಇರುವುದರ ಕಡೆಗೆ ಗಮನ 

         ಸ್ಪಷ್ಟವಾಗಿ ಯೋಚಿಸುವುದು

         ಪುಸ್ತಕ ಓದುವ ಅಭ್ಯಾಸ

          ಸಂವಹನದ ಉದ್ದೇಶ

         ಪ್ರತಿ ಗುರಿಗೂ ಅಳತೆ ಇರಬೇಕು  

          ದಿನಚರಿ
        
ಕಾರ್ಪೊರೇಟ್ ಸಂಸ್ಥೆಗಳ ಕಾರ್ಯವೈಕರಿ:


             ಮಾಡಬೇಕಾದ ಕಾರ್ಯಗಳ ಪಟ್ಟಿ    

             ಮೂಲ ಕಾರಣದ ವಿಶ್ಲೇಷಣೆ

             ಕೆಲಸ  ವಿಂಗಡಣೆಯ ಕ್ರಮ

             ಏನು  ತಡೆಯುತ್ತಿದೆ

             ಮೂಲಸೌಕರ್ಯ, ಪರಿಸರ, ಉಪಕರಣಗಳು,  ಪ್ರಕ್ರಿಯೆ

            ನಿರಂತರ ಕಲಿಕೆ

             ಅಡೆತಡೆಗಳು,  ಅಪಾಯ