Saturday, September 25, 2010

ಮರಳಿ ಬಾ ವರ್ಷಧಾರೆ

  ಮರಳಿ ಬಾ ವರ್ಷಧಾರೆ


  ನೋಡಲು ನಾ ನಿಂತಿದ್ದೆ ಬೀಳುವ ವರ್ಷಧಾರೆಯ
  ಆಗಸದಿಂದ ಸುರಿಯುತ್ತಿದ್ದ ಬಿಳಿಯ ಶುಭ್ರ ಹನಿಯ

  ಸುತ್ತಲು ಕಣ್ಣಾಡಿಸದಲ್ಲೆಲ್ಲಾ ಕಾಣುತ್ತಿತ್ತು ಜಲಧಾರೆ
  ಸುರಿಯುತ ಮಜ್ಜನ ಮಾಡಿಸಿ ಶುಭ್ರಗೊಂಡಿತು ಧರೆ

  ಅಲ್ಲಲ್ಲಿ ಸಣ್ಣದಾಗಿ ಹರಿಯಲಾರಂಭಿಸಿತು ಝರಿಗಳು
  ಝರಿಗಳಲ್ಲಿ ದೋಣಿ ಬಿಡಲು ಕಾಯುತ್ತಿದ್ದರು ಮಕ್ಕಳು

  ಮಳೆಗಾಳಿಗೆ ಬಾಗಿ ಕರೆಯುತ್ತಿದ್ದವು ಮರದ ರೆಂಬೆಗಳು
  ಅದು ಕೊಡುವ ಆಶ್ರಯಕೆ ಓಡುತ್ತಿದ್ದವು ಹಸು-ಕರುಗಳು

  ಆಕಾಶದೆಡೆಗೆ ನೋಡಿದೆ ಕಪ್ಪು ಕಾರ್ಮೋಡದ ಛಾಯೆ
  ತಾ ಸರಿಯುವುದ ಸೂಚಿಸಿತು ಮುಗಿಸುತ ತನ್ನ ಮಾಯೆ

  ನಿಧಾನವಾಗಿ ನಿಲ್ಲಲಾರಂಭಿಸಿತು ಸುಂದರ ವರ್ಷಧಾರೆ
  ತನ್ನ ವೈಭವಕೆ ನಿಧಾನವಾಗಿ ಎಳೆಯತೊಡಗಿತು ತೆರೆ

  ಮಳೆಯು ನಿಂತಾಗ ಕಾಣುತಿತ್ತು ಶುಭ್ರ ವಾತಾವರಣ
  ತನ್ನೆಲ್ಲಾ ಆರ್ಭಟವ ಮುಗಿಸಿ ಶಾಂತವಾಗಿದ್ದ ವರುಣ

  ಗಿಡ ಮರಗಳ ಎಲೆಗಳೆಲ್ಲ ತೊಯ್ದಾಗಿತ್ತು ಹಚ್ಚ ಹಸಿರು
  ಎಲ್ಲಾ ಜೀವಿಗಳಿಗೆ ಸಿಕ್ಕಿತ್ತು ಆಡಲು ಉಲ್ಲಾಸದ ಉಸಿರು

  ನೀ ಬಂದು ಜೀವಗಳಿಗೆ ಹೊಸ ಜೀವವ ಇತ್ತೆ ವರ್ಷಧಾರೆ
  ಹೊರಟೆ ಎನಬೇಡ ಹಾಗೆ ನಮ್ಮ ಭೇಟಿಗಾಗಿ ಮರಳಿ ಬಾರೆ

  - ತೇಜಸ್ವಿ.ಎ.ಸಿ

Sunday, September 19, 2010

ಸುಮ್ಮನಿರಬಾರದೇ ನೀನೊಮ್ಮೆ

ಸುಮ್ಮನಿರಬಾರದೇ ನೀನೊಮ್ಮೆ

ಸುಮ್ಮನಿರು ಎಂದು ಹೇಳಿದರೂ ಕೇಳದು ಮನ,
ವಟ-ವಟನೆ ಸದಾ ಮಾತಾಡುವ ಚಂಚಲ ಮನ
ನಿನ್ನ ಈ ಸ್ವಭಾವದಿಂದ ಬೇಸರಸಿದ್ದಾರೆ ಜನ

ಇರದ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಂಡು,
ನಡೆಯದ ಘಟನೆಗಳ ತನ್ನ ಕಲ್ಪನೆಯಲಿ ಕಟ್ಟಿ
ಕಲ್ಪನೆಯಲ್ಲೇ ಪ್ರಪಂಚ ಕಾಣುವ ಮೊದ್ದು ಮನ

ತನ್ನ ಪಂಚೇಂದ್ರಿಯಗಳ ಮೂಲಕ ನೇರವಾದ
ವಾಸ್ತವವ ಗ್ರಹಿಸದೆ, ಕೂತಲ್ಲೇ ಎಲ್ಲಾ ಕಲ್ಪಿಸಿ
ಸರಳ ವಾಸ್ತವದಿಂದ ದೂರವಿರುವ ಪೆದ್ದು ಮನ

ಬೇಡದ ಸಂದರ್ಭದಲ್ಲೂ ಮಾತನಾಡುವ, ಸ್ವಲ್ಪ
ಸುಮ್ಮನಿರದೇ ಕಿರಿಕಿರಿ ಮಾಡುವ ತುಂಟ ಮನ,
ಈ ತುಂಟನಿಗೊಂದು ಕೊಡಬಾರದೇ ರಜಾ ದಿನ

ನನಗೆ ಗೊತ್ತು ನಿನ್ನದು ಎಂದೂ ಬತ್ತದ ಉತ್ಸಾಹ
ನಾ ಅರ್ಥೈಸಿರುವೆ ನೀ ಚೈತನ್ಯದ ಚಿಲುಮೆ ಎಂದು
ಆದರೂ ಕೆಲವು ಸಂದರ್ಭದಲಿ ತೆಗೆದುಕೋ ಬಿಡುವು

ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡಲು ಒರಗಿದರು
ನಿನ್ನ ಮಾತಾಡುವ ಬಾಯನು ನಿಲ್ಲಿಸ ಯತ್ನಿಸಿದರು
ನಿದ್ದೆಯಲಿ ಕನಸಾಗಿ ಬಂದು ತೊಂದರೆಯ ಕೊಡುವೆ

ನನಗೆ ಗೊತ್ತು ಸುಟ್ಟರೂ ಬಿಡದು ಈ ನಿನ್ನ ಬುದ್ದಿ
ನಾನೂ ನಿನ್ನ ಕೇಳಿ ಸಮಯ ವ್ಯರ್ಥ ಮಾಡುತ್ತಿರುವೆ
ಏಕೆ ಹೇಳು? ಏಕೆಂದರೆ ಹೇಳುತ್ತಿರುವವನು ನೀನೆನೇ.

- ತೇಜಸ್ವಿ.ಎ.ಸಿ

Wednesday, September 8, 2010

ನನಗೊಮ್ಮೆ ಅವಕಾಶ ಕೊಡು

ನನಗೊಮ್ಮೆ ಅವಕಾಶ ಕೊಡು


ನಾ ತಿದ್ದಬೇಕು ನನ್ನ ಹಿಂದಿನ ಜೀವನವನು
ನನ್ನ ಎಳೆಯ ಬುದ್ದಿ ಚಿಗುರಿ ದೊಡ್ಡದಾಗಿದೆ
ನಾ ತಿಳಿಯದೆ ಸೋತ ಕಾರಣ ಗೊತ್ತಾಗಿದೆ
ನನಗಿಂದು ಜೀವನವ ಸರಿ ಪಡಿಸಬೇಕಾಗಿದೆ

ನಾ ಹೋಗಬೇಕು ನನ್ನ ಭೂತಕಾಲಕೆ, ನನಗೆ
ಮತ್ತೆ ಅವಕಾಶ ಬೇಕು ಜೀವನವ ಸರಿಪಡಿಸಲು
ನಾ ಮತ್ತೊಮ್ಮೆ ಚಿಕ್ಕವನಾಗಿ ನನ್ನ ಜೀವನದ
ನ್ಯೂನ್ಯತೆಯ ಸರಿ ಪಡಿಸಿಕೊಂಡು ಬೆಳೆಯುವೆ

ಕಾಲ ಮೀರಿದೆ ಎಂದು ಗೊತ್ತು, ಕಾಲದೊಡನೆ
ವಯಸ್ಸು, ಅವಕಾಶ ಎಲ್ಲಾ ಮೀರಿದೆ ಎಂಬುದು
ಗೊತ್ತು, ಆದರೂ ನನಗೆ ಬೇಕು ನನ್ನ ಬಾಲ್ಯಕೆ
ಮರಳುವ ಅವಕಾಶ, ಸರಿ ಪಡಿಸುವೆ ಜೀವನವ

ನನ್ನ ಈಗಿರುವ ಅಭ್ಯಾಸವ ಅಲ್ಲಿಗೆ ಒಯ್ಯುವೆ
ನನಗೀಗಿರುವ ತಿಳುವಳಿಕೆಯನು ನನ್ನ ಬಾಲ್ಯಕೆ
ಹೊತ್ತೊಯ್ಯುವೆ, ಬಾಗಿಲು ತಗಿ ಭೂತಕಾಲವೆ
ನಾ ಬೇಡಿ ಬಂದಿರುವೆ, ನನಗೆ ನೀಡು ಅವಕಾಶವ

ನಾ ಭೂತಕಾಲಕ್ಕೆ ಮರಳಿ ಪ್ರಭುದ್ಧತೆಯ ಬಳಸಿ
ಮಾಡುವೆನು ಇಂದನು ಸುಂದರವಾಗಿ, ಸಂರಕ್ಷಿಸಿ
ನನ್ನೆಲ್ಲಾ ಆಸೆಗಳಿಗೆ ವಾಸ್ತವದ ರೆಕ್ಕೆ ನೀಡುವೆನು
ನನಗೊಮ್ಮೆ ಮರಳಿಸು ನನ್ನ ಹಿಂದಿನ ದಿನಗಳನು

- ತೇಜಸ್ವಿ.ಎ.ಸಿ