ನಾ ಭಾರತೀಯ.

on Friday, August 16, 2013

          ನಾ ಭಾರತೀಯ 

ಮನದೊಳು ಪ್ರಾಂತೀಯತೆಯ ಧ್ವಜ ನೆಟ್ಟಿ
ನಮ್ಮ ಭಾಷಿಗರೆಂಬ ಸ್ವಂತ ಕೋಟೆಯ ಕಟ್ಟಿ
ಕೈಯಲ್ಲಿ ಮಾತ್ರ ತ್ರಿವರ್ಣವ ಹಿಡಿದಿಹ ಭಾರತೀಯ

ರಾಷ್ಟ್ರೀಯ ಭಾವೈಕ್ಯತೆಯ ಹುಡುಕ ಹೊರಟು ಸಿಕ್ಕಾರು
ಉತ್ತರ ಭಾರತೀಯ, ದಕ್ಷಿಣ ಭಾರತೀಯ
ಪೂರ್ವ ಭಾರತೀಯ, ಪಶ್ಚಿಮ ಭಾರತೀಯ
ಸಿಕ್ಕಾರೆ ಎಂದಾದರು ಎದೆ ತಟ್ಟಿ ಹೇಳುವ ನಾ ಭಾರತೀಯ

ಸಾವಿರ ಭಾಷೆಯ ದೇಶದಲಿ, ಸಾವಿರ ಸಂಸ್ಕೃತಿಯ
ನಾಡಿನಲ್ಲಿ, ಪರರ ಸಂಸ್ಕಾರಕೆ ಗೌರವವನಿತ್ತು   
ಭಾರತದ ಗಣತಂತ್ರತೆಯ ಬೆಸುಗೆಯ ಬೆಸೆದು
ಎದೆ ತಟ್ಟಿ ನಾವ್ ಹೇಳೋಣ ನಾ ಭಾರತೀಯ

ಸಣ್ಣ ತನಗಳ ಕಟ್ಟಿಟ್ಟು, ವಿಶಾಲ ಹೃದಯವ ಬಿಚ್ಚಿಟ್ಟು
ನಮ್ಮ ದೇಶಿಗರ ಎಲ್ಲಾ ಸಾಧನೆಗೆ ಹೆಮ್ಮೆ ಪಟ್ಟು
ದೇಶದ ಭವಿಷ್ಯ ಜೀವನದ ಮೇಲೆ ಕಣ್ಣಿಟ್ಟು
ನಾವೆಲ್ಲ ಎದೆ ತಟ್ಟಿ ಹೇಳೋಣ ನಾ ಭಾರತೀಯ.

- ತೇಜಸ್ವಿ. ಎ. ಸಿ

ಒಗ್ಗಟ್ಟು

on Saturday, July 27, 2013

             ಒಗ್ಗಟ್ಟು
 
      ನನ್ನ ಮನದೊಳು ಮೂಡಿದ ಆಶ್ಚರ್ಯವಿದು
      ನಮ್ಮವರೇ ಕೊಡುವ ಲಘು ಆಘಾತವಿದು

      ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ
      ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ

      ನನ್ನ ಕನ್ನಡಾಭಿಮಾನವೇ ಅಸಹಜ ಹಾಗೂ
      ಅಪರೂಪದ್ದೇ ಎಂದೆನಿಸುವಷ್ಟು ಅನುಮಾನ

      ಒಗ್ಗಟ್ಟು ಮೂಡಿಸಲು ಕೊಡರು ಪ್ರೋತ್ಸಾಹ
      ಆಸಕ್ತರಿಗೂ ಹರಡುವರು ತಮ್ಮ ನಿರುತ್ಸಾಹ

       ಸರಳ ಕನ್ನಡದ ಸುಖ ಬೇಡವೇ ನಿಮಗೆ
       ಸಹಜತೆಯಲ್ಲೇ ಸಂತಸವಲ್ಲವೇ ನಮಗೆ

      ಕನ್ನಡವ ಬಳಸಲು ಪಡಬೇಡಿ ಕೀಳರಿಮೆ
      ನಮ್ಮಲ್ಲೇ ಪರರ ಮೆಚ್ಚಿಸಿ ಪಡದಿರಿ ಗರಿಮೆ

      ಕನ್ನಡದ ಮೇಲೆ ಸದಾ ಇರಲಿ ಅಭಿಮಾನ
      ಕನ್ನಡದಲ್ಲೇ ಅಡಗಿದೆ ನಮ್ಮ ಸ್ವಾಭಿಮಾನ

      ಮುಂದೆ ಬಾರದಿರಲು ನಮ್ಮಲ್ಲಿ ಮುಗ್ಗಟ್ಟು
      ಕನ್ನಡಿಗರ ಹೃದಯದಲಿ ಮೂಡಲಿ ಒಗ್ಗಟ್ಟು

       - ತೇಜಸ್ವಿ. ಎ. ಸಿ

ನಸು ನಗು

on Monday, July 8, 2013

 ನಸು ನಗು

  ಕಿಸಕ್ಕನೆ ಸುಖಾಸುಮ್ಮನೆ ನಗುವ ನನ್ನ ನೋಡಿ
  ನನ್ನವಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ
  ನನ್ನ ಮನದೊಳ ಹರಿವ ಅಸಂಖ್ಯಾತ ಲೋಕಗಳ
  ವಿವರವ ನೀಡಲು, ಅವು ಅತಿ ಖಾಸಗಿಯಾಗಿ  
  ಮತ್ತೊಮ್ಮೆ ಅವಳ ಮುಖ ನೋಡಿ ನಸು ನಕ್ಕೆ.

  ಕ್ಷಣ ಕ್ಷಣಕೂ ಬದಲಾಗುವ ನನ್ನೊಳಗಿನ ಲೋಕ
  ಗಾಳಿಯಂತೆ ಬಂದು ಹರಿದಾಡಿ, ಅನುಭವವಿತ್ತು
  ಹೇಳ ಹೆಸರಿಲ್ಲದೆ ಹೊರಟು ಹೋಗುವ ಆಗುಂತಕ
  ಅದರ ಜಾಡು ಹಿಡಿದು ನಾನೆಂದೂ ಹಿಂಬಾಲಿಸಲಿಲ್ಲ
  ನಿನ್ನ ಪರಿಚಯವೇನೆಂದು ಅವುಗಳ ಪ್ರಶ್ನಿಸಲಿಲ್ಲ

  ಮುಂದೊಮ್ಮೆ ನಾ ಈ ರೀತಿ ನಸುನಕ್ಕರೆ ನೀನೂ
  ಹಿಂದಿರುಗಿ ನೋಡಿ ಓಮ್ಮೆ ನಕ್ಕುಬಿಡು ಮನದೊಡತಿ
  ಏಕೆಂದರೆ ನೀ ಕೇಳುವ ಪ್ರೆಶ್ನೆಗಳಿಗೆ ಉತ್ತರಿಸಬೇಕಾದ
  ನನ್ನೀ ಮನದ ಮರ್ಮ ಸ್ವತಃ ನಾನೂ ಅರಿಯೆ

  - ತೇಜಸ್ವಿ .ಎ.ಸಿ

ಅಣಿಗೊಳಿಸು

on Saturday, June 15, 2013

 ಅಣಿಗೊಳಿಸು 

 ಖಾಲಿ ಮನಸಿನ ಒಳ ಹೊಕ್ಕು 
 ಸುಂದರ ರೇಖೆಯ ಚಿತ್ರವ ಬಿಡಿಸಿ 
 ವಿಧ ವಿಧ ಬಗೆಯ ಬಣ್ಣವ ಮೂಡಿಸಿ
 ರಮ್ಯ ಪ್ರಕೃತಿ ಹಿನ್ನಲೆಯಿರಿಸಿ   
 ಅದ್ಭುತ ಘಟನೆಗಳ ಸರಣಿ ಪೋಣಿಸಿ   
 ವಿವಿಧ ಭಾವಗಳ ಭಾವನೆ ತೋರಿಸಿ  
 ಹೊಸ ಅನುಭವದ ರಸದೌತಣ ಬಡಿಸಿ 
 ಮನಕೆ ಆಹ್ಲಾದತೆಯ ಸಂತಸ ಕೊಡಿಸಿ      
 ನಿಧಾನವಾಗಿ ಸಿದ್ದ ಪಡೆಸುವೇ ನನ್ನನು
 ಹೊಸ ಕವನ ಬರೆಯಲು ಅಣಿಗೊಳಿಸಿ 
 
 - ತೇಜಸ್ವಿ..ಸಿ 

ಸರತಿ ಸಾಲು

on Tuesday, January 1, 2013


  ಸರತಿ ಸಾಲು

  ನನ್ನ ಬದುಕಿನ ನಡು ಯೌವನದಿ
  ಬದುಕಿನ ಗುರಿಗಳ ಪಟ್ಟಿಯ ಹಿಡಿದು,
  ಜಾಣ ಯೋಜನೆಗಳನ್ನೆಲ್ಲ ರೂಪಿಸಿ
  ಕಾರ್ಯಶೀಲನಾಗಿ ಅವಕೆ ದುಡಿದು

  ಸಂಭ್ರಮಿಸಿದ್ದೆ ನಾನಂದು, ಕೆಲಸ
  ಕಾರ್ಯಗಳೆಲ್ಲಾ ಮುಗಿದಿದೆ ಎಂದು,
  ಮರು ದಿನದಲೂ ಕಾಣತೊಡಗಿತು
  ಕೆಲಸ ಕಾರ್ಯಗಳು ಒಂದೊಂದೇ

  ಹಳೆಯ ಅಭ್ಯಾಸದಂತೆ ಮಾಡಿದೆ
  ಅವುಗಳೆಲ್ಲದರ ಹೊಸ ಪಟ್ಟಿಯನು,
  ಕೊಡುತ ನಾ ಸಾಗಿದೆ ಎಲ್ಲ ಕಾರ್ಯಕೆ
  ಆದ್ಯತೆಯ ಮೇರೆಗೆ  ಸಂಖ್ಯೆಯನು

  ಮತ್ತೊಮ್ಮೆ ಎಲ್ಲಾ ಮುಗಿಸಿ ಆಶಿಸಿದೆ,
  ಬರೀ ವಿನೋದ ವಿರಾಮದ ದಿನಗಳ
  ಮರು ದಿನವು ಕಂಡೆ ನಾ ಕೆಲಸಗಳ,
  ತಿಳಿಯಿತಂದು ಜೀವನದ ಹೊಸ ಅರ್ಥ

  ಜೀವನವಿದು ಕೆಲಸಗಳ ಸರತಿಸಾಲು
  ಮುಗಿಯದು ಬದುಕಿನ ಕಾರ್ಯಗಳು
  ಜೀವನ ನಿರ್ವಹಣೆಯೇ ನಿತ್ಯದ ಕಾರ್ಯ
  ಕೆಲಸದ ಸಾಲಿದು ನಮಗನಿವಾರ್ಯ

  - ತೇಜಸ್ವಿ.ಎ.ಸಿ