ಪ್ರೀತಿಯಿಂದ

on Monday, December 10, 2012

   ಪ್ರೀತಿಯಿಂದ  

   ಕವಿಮನದ ಸಹಜ ಆಸೆ ಬಿಟ್ಟು 
   ಬದುಕ ಕಟ್ಟುವ ಕಾರ್ಯ ಹೊತ್ತು
   ದುಡಿಯುತಿರುವೆ ಬದುಕಿಗಾಗಿ 
   ಅನ್ಯರ ಸಂಸ್ಥೆಗೆ ಹೆಗಲ ಕೊಟ್ಟು

   ನನ್ನೊಳಗಿನ ಕವಿಯು ರಾಜಿ ಮಾಡಿ
   ಅನ್ಯರ ವ್ಯವಹಾರಕೆ ಹಾದಿ ಮಾಡಿ 
   ದುಡಿಯುತಿರುವೆ ಆಸೆಗಳ ಮುಂದೂಡಿ    
   ಬದುಕ ಕಟ್ಟುವನೆಂಬ ಗುರಿಯ ಇಟ್ಟು

   ವಾರದ ದಿನಗಳ ಕಚೇರಿ ಕೆಲಸ
   ವಾರಾಂತ್ಯದ ಸಂಸಾರದ ಕೆಲಸ 
   ಕಾರ್ಯಗಳಲೇ ಮುಳುಗುತಿರುವೆ  
   ಸಾಹಿತ್ಯ ಕೃಷಿಯ ಆಸೆಯ ಬಿಟ್ಟು 

   ಬದುಕ ಕಟ್ಟುವ ಕಾರ್ಯವೂ ಇರಲಿ
   ಸಂಸಾರ ನೊಗದ ಭಾರವೂ ಇರಲಿ
   ಹೊಂದಿಕೊಂಡೇ ಸಾಗಿಸುವೆ ನನ್ನೀ  
   ಹವ್ಯಾಸವ, ಕೊಂಚ ಹೊತ್ತ ಮೀಸಲಿಟ್ಟು

   ಹವ್ಯಾಸಕುಂಟು ಬತ್ತದ ಉತ್ಸಾಹ
   ಎಲ್ಲ ಕಾಲದಲ್ಲುಂಟು ಸ್ವಪ್ರೋತ್ಸಾಹ
   ಅಂತಾರಾಳದ ಸಹಜ ಮಾತುಗಳಿವು
   ಕವನ ರಚಿಸುವೆ ನಾ ಪ್ರೀತಿಯಿಟ್ಟು

   - ತೇಜಸ್ವಿ.ಎ .ಸಿ

ಧರೆಗಿಳಿದ ಕಂದ

on Monday, October 8, 2012

  ಧರೆಗಿಳಿದ ಕಂದ

  ಧರೆಗಿಳಿದು ಬಂದ ನನ್ನಯ ಕಂದ
  ಅಂದಾಯಿತು ಎನಗೆ ಮಹದಾನಂದ

  ವೈದ್ಯರಿತ್ತರು ಮಗನನು ಅಪ್ಪನ ಕೈಗೆ
  ಕಣ್ತುಂಬಿ ಬಂತಂದು ಸಂತಸ ಎನಗೆ

  ಬಟ್ಟಲು ಕಂಗಳಲಿ ನೋಡಿದ ಕಂದ
  ಮುದ್ದು ಮೊಗವು ನೋಡಲು ಚೆಂದ

  ಸಿಹಿ ಸುದ್ದಿಯನೆಲ್ಲೆಡೆ ಹಂಚಿದೆ ನಾನು
  ಮನೆಯವರ ಹರುಷಕೆ ಮಿತಿಯುನ್ಟೇನು

  ಜೀವನದ ದೃಷ್ಟಿಯೇ ಬದಲಾಯಿತೀಗ
  ಮುದ್ದು ಮಗನ ಆರೈಕೆಯೆ ಜೀವನವೀಗ

  ಕಂದನ ಮಡಿಲಲ್ಲೇ ಇರಿಸುವೆ ನಾನು
  ಮುದ್ದಿಸಿ ಆಡಿಸಿ ಮಲಗಿಸುವೆ ಅವನನ್ನು

  ನೀಡುವೆ ಉತ್ತಮವಾದ ಬದುಕಿನ ಪಾಠ
  ತೋರುವೆ ಸುಂದರ ಜೀವನದ ನೋಟ

  - ತೇಜಸ್ವಿ .ಎ.ಸಿ
    ಲಂಡನ್, ಯು.ಕೆ

ಬದಲಾವಣೆಯ ಗಾಳಿ

on Tuesday, September 11, 2012

 ಬದಲಾವಣೆಯ ಗಾಳಿ
 
 ಬದುಕ ತಿರುವುಗಳ ಹಿಂದೆ ಮರೆಮಾಚಿವೆ ಮುಖಗಳು             
 ನಾವು ಕಂಡಿರದ ಒಳಮುಖಗಳ ನಿಜ ದರುಶನವಿತ್ತು 
 ಸಂಬಂಧದ ಸಂಕೋಲೆಗಳ ಸಡಿಲತೆಯ ತಿಳಿಸುತ್ತ
 ನವವಾಸ್ತವವ ತೋರಿ, ಸಂಬಂಧದ ಸೂಕ್ಷ್ಮತೆಯನು 
 ದ್ವಂದ್ವದಲಿ ಸಿಲುಕಿಸಿ, ಮೃದು ಮನದೊಡು ಆಟವಾಡಿದೆ
   
 ಹೊಸ ಚಿಗುರು ಬೆಳೆಯುವ ಪ್ರಕೃತಿಯ ನಿಯಮದಂತೆ  
 ಮುಂದಿನ ತಿರುವಿನಲ್ಲಿ ಹೊಸ ಸಂಬಂಧಗಳು ಸೇರಿ
 ಜೀವನದಿ ಬತ್ತದ ಉತ್ಸಾಹವನ್ನಿತ್ತು, ಇರುವ ಚಿಲುಮೆಯ  
 ನವೀಕರಿಸುತ್ತ, ಬದುಕಿಗೆ ಹೊಸ ದಿಕ್ಕಿನಲ್ಲಿ ಗಮ್ಯವನಿತ್ತು
 ಹೊಸ ಬದಲಾವಣೆಯ ಗಾಳಿಯು ಬೀಸಿದೆ ಜೀವನದಲಿ.

 - ತೇಜಸ್ವಿ.ಎ.ಸಿ

ಮನದೊಡತಿ

on Friday, August 17, 2012

ಮನದೊಡತಿ

ಮನದೊಡತಿಯ ನೆನಪೇ ಎನ್ನ ಮನದ ಅಲಂಕಾರ
ನನ್ನಾಕೆಯ ಧ್ವನಿಯ ಗುಂಗೇ ಮನಕೆ ಮಾಧುರ್ಯ

ನನ್ನ ಕರುಳ ಕುಡಿಯ ಹೊತ್ತಿರುವಾಕೆಗೆ ವಿರಹದ
ನೋವು ಸೋಕದಿರಲಿ, ನಾ ಮರಳುವೆ ಮನದನ್ನೆ

ನೀನಾಡುವ ಎರಡು ಜೀವಗಳ ಉಸಿರಿನ ಬಿಸಿ
ಅನುದಿನವು ನನ್ನ ಸೋಕುವುದೆಂದು ಮರೆಯದಿರು

ನೀ ಆಡುವ ಪ್ರತಿ ಉಸಿರಿನಲು ನಿನ್ನ ಹೃದಯ
ಬಡಿತ ಕೇಳುವುದೆಂದು ಮರೆಯದಿರು ಮನದನ್ನೆ

ನಿನ್ನೀ ಮನದ ತಳಮಳ ನನ್ನ ಹೃದಯದ ಪ್ರತಿ
ಬಡಿತಕ್ಕು ಬಂದು ತಲುಪುದೆಂದು ನೀ ತಿಳಿದಿರು

ವಿರಹದ ಬೇನೆಯಲಿರುವ ನಿನ್ನ ಪ್ರೀತಿಗೆ ಕರಗಿ
ಕಾಲನೇ ನಿನ್ನ ನೋವನು ಬೇಗ ನಲಿವಾಗಿಸುವನು

ನಿನ್ನ ಮನದ ಕೂಗಿಗೆ ಸಪ್ತಸಾಗರದ ದೂರವನ್ನು
ಕ್ಷಣಿಕದಲಿ ದಾಟಿ ಬಂದು ಸೇರುವೆ ಮನದೊಡತಿ

ನೀನೆಂದು ಮರುಗಬೇಡ, ವಿರಹದಲಿ ಬೇಯಬೇಡ
ನಿನಗಾಗಿ ಮರಳಿ ಬರುವೆ, ಸಂತಸವ ಹೊತ್ತಿ ತರುವೆ

- ತೇಜಸ್ವಿ ಎ ಸಿ
  ಲಂಡನ್, ಯು.ಕೆ

ಮತ್ತೊಮ್ಮೆ ತಿರುಗಿ ನೋಡುವಾಸೆ

on Tuesday, March 27, 2012

ಮತ್ತೊಮ್ಮೆ ತಿರುಗಿ ನೋಡುವಾಸೆ

 ನಡೆಯಲು ಯತ್ನಿಸಿದರು ನಡೆಯಲಾಗದು ನನಗೆ
 ಓಮ್ಮೆ ತಿರುಗಿ ನೋಡಿ ಕಣ್ತುಂಬುವ ಆಸೆ ಎನಗೆ

 ಕೆಲ ಹೆಜ್ಜೆಗಳ ಕ್ರಮಿಸಿ ತಿರುಗಿ ನೋಡಿದೆ ನಾನು
 ಸೌಂದರ್ಯವ ಸವಿಯುತ ಹಾಗೆಯೇ ನಿಲ್ಲಲೇನು?

 ನನ್ನೀ ವರ್ತನೆಯ ಗಮನಿಸುವರೆಂಬ ಭಯವೆನಗೆ
 ಆದರೂ ಬಿಡಿಸಿಕೊಳ್ಳಲಾರೆ ಆಕರ್ಷಣೆಯ ಆ ಘಳಿಗೆ

 ಒಂದು ದಿನದಿ ನಿಂತು ನೋಡಿದರು ತೀರದು ದಾಹ
 ದಿನ ಕಳೆದಂತೆ ಗಾಡವಾಗುತ್ತಿದೆ ನನ್ನೀ ಮೋಹ

 ಕಚೇರಿಯ ಒಳಗಿದ್ದರೂ ಗಂಟೆಗೊಮ್ಮೆ ಅದೇ ಧ್ಯಾನ
 ಮಳಿಗೆಯೊಳು ಖರೀದಿಗೆ ನಿಂತರು ಅದರದೇ ಧ್ಯಾನ

 ಹೆಂಡತಿಯೊಡು ಬೈಸಿಕೊಂಡಿದ್ದು ಆಯಿತು ನಾನು
 ಹಾಗಂತ ನನ್ನ ಆಸೆಯ ಕೂಸನು ಬಿಡಲಾಯಿತೇನು

 ಶುರುವಾಗಿದೆ ನನಗೆ ನನ್ನ ಕಾರು ನೋಡುವ ಚಟ 
 ಖರೀದಿಸಿದ ಮೇಲೆ ನನ್ನ ಹೊಸ ಶೆವ್ರೋಲೆಟ್ ಬೀಟ್       

 - ತೇಜಸ್ವಿ.ಎ.ಸಿ

ಕಾವ್ಯಾನುರಕ್ತ

on Tuesday, March 13, 2012

ಕಾವ್ಯಾನುರಕ್ತ 

ಜೀವನದ ಸಣ್ಣ ಎಳೆಗಳರಸಿ ಕವನ ರಚಿಸುವಾಸೆ
ನಗಣ್ಯ ಪ್ರಸಂಗದೊಳು ಕಾವ್ಯವನು ಅರಸುವಾಸೆ 
ಜನರ ಮೊಗದ ಅಭಿವ್ಯಕ್ತಿಯ ಕಾವ್ಯದೊಳು ಮೀಯುವಾಸೆ
ತಂಗಾಳಿಯ ತಂಪೊಳಗಿನ ಕಾವ್ಯವ ಅನುಭವಿಸುವಾಸೆ
ಎಲೆ ಉದುರಿ ಬೋಡಾದ ಮರದೊಳು ಕಾವ್ಯ ಹುಡುಕುವಾಸೆ
ಹಣ್ಣಾದ ಮುಪ್ಪಿನ ಸುಕ್ಕಲೂ ಕಾವ್ಯವ ಕಾಣುವಾಸೆ
ಸಣ್ಣ ಹನಿಗಳ ಮಳೆಯ ಕಾವ್ಯದಲಿ ನೆನೆಯುವಾಸೆ
ಕೆರೆಯ ದಡದ ನೀರ ತೆರೆಯಲಿ ಕಾವ್ಯ ಕೇಳುವಾಸೆ
ಎಳೆಯ ಮೊಗದ ತುಟಿಯಲಿ ಕವನ ಅನುಭವಸಿವಾಸೆ
ಮೊದಲ ಮಳೆಯ ಘಮಿಸುವ ಮಣ್ಣಲೂ ಕವನ ರಚಿಸುವಾಸೆ

- ತೇಜಸ್ವಿ.ಎ.ಸಿ 

ಹುಸಿ ಮುನಿಸು

on Saturday, February 25, 2012

ಹುಸಿ ಮುನಿಸು

ಮನೆಯಲಿ ಜನರಿದ್ದೂ ಮನೆಯು ಬರಿದಾಗಿದೆ
ವಿನೋದಕೆ ಪರಿಕರವಿದ್ದೂ ಮನ ಶೂನ್ಯವಾಗಿದೆ
 
ನಿನ್ನ ನೆನಪು ಮನದಂಗಳಕೆ ಓಮ್ಮೆ ಇಣುಕಿದರು 
ತುಟಿಯರಳಿ ಸುಂದರ ಕಾಮನ ಬಿಲ್ಲಾಗುವುದು
 
ನಿನ್ನ ನಗುವಿನ ನೆನಪು ನನಗೆಂದೂ ನವೋಲ್ಲಾಸ  
ನಿನ್ನ ಮಾತುಗಳೆಂದೂ ಹೃದಯದಿ ನರ್ತನದ ಭಾಸ
 
ನಿನ್ನ ಮಾತುಗಳಲ್ಲಿನ ಹುಸಿ ಮುನಿಸು ತಿಳಿಯದೇ
ನನಗೆ, ಅದರ ಹಿಂದಿನ ನಗೆಯು ಕಾಣದೇ ಎನಗೆ   
 
ನನ್ನೊಳು ಕೋಪದಿ ಕಾಣುವ ನಿನ್ನ ಕೆಂಪಾದ ಕಣ್ಣು
ನಂತರದ ವಿರಹದಿ ಆಗುವವು ಬಾಡಿ ಬತ್ತಿದ ಹಣ್ಣು
 
ನಿನಗೂ ಗೊತ್ತು ನಿನ್ನ ವಿರಹ ವೇದನೆಯ ನನ್ನ
ತಿಳುವಳಿಕೆ,  ಅದರೂ ನಿನಗೆ ಹುಸಿಮುನಿಸು ಬೇಕೇ
 
ಇಬ್ಬರೂ ಇರುವೆವು ಭಾರವಾದ ಮನದ ವಿರಹದಿ
ಬಾ ಪ್ರಿಯೆ ಅರಸಿ ನೆಲೆಸೋಣ ಪ್ರೀತಿಯ ವಾಸ್ತವದಿ
 
- ತೇಜಸ್ವಿ.ಎ.ಸಿ