ಮೊಳಗಲಿ ಕನ್ನಡದ ಕೀರ್ತಿ

on Monday, August 30, 2010

  ಮೊಳಗಲಿ ಕನ್ನಡದ ಕೀರ್ತಿ
  
  ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ
  ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ

  ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ
  ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ

  ಕನ್ನಡ ಎನಗೆ ನನ್ನೆದೆಯಲ್ಲಿನ ಉಸಿರಿನಷ್ಟೇ ಸರಾಗ
  ಕನ್ನಡಕೆ ಹೃದಯ ಬಡಿತ ಪಡೆದುಕೊಳ್ಳುವುದು ವೇಗ

  ಕನ್ನಡ ನನ್ನ ನಾಡಿಗಳಲ್ಲಿ ಹರಿಯುವ ರಕ್ತದಷ್ಟೆ ಸಹಜ
  ಹೃದಯದಲಿ ಶಾಶ್ವತವಾಗಿ ನೆಟ್ಟಿಹೆನು ಕನ್ನಡ ಧ್ವಜ

  ಕನ್ನಡ ಅಕ್ಷರಗಳನ್ನು ಓದುವಾಗ ಸಿಗುವ ತಲ್ಲೀನತೆ
  ಹೆಚ್ಚಿಸುವುದು ಓದು ಹಾಗು ಕೆಲಸದಲ್ಲಿನ ಏಕಾಗ್ರತೆ

  ಕನ್ನಡಾಕ್ಷರಗಳಲ್ಲಿನ ಕೊಂಬು ಇಳೀ ದೀರ್ಘ ಒತ್ತು
  ಕನ್ನಡಿಗರಿಗೆಲ್ಲರಿಗೂ ಆಗಿದೆ ಹೆಮ್ಮೆಯ ಸಂಪತ್ತು

  ನಮ್ಮ ಭಾಷೆ ನಮ್ಮ ಹೆಮ್ಮೆ ಸ್ವಾಭಿಮಾನದ ಪ್ರತೀಕ
  ಆಗಿದೆ ನಮ್ಮ ನಾಡಿನ ಜನರೆಲ್ಲರ ಒಗ್ಗಟ್ಟಿಗೆ ಪ್ರೇರಕ

  ಎಲ್ಲರೂ ಸೇರಿ ತರೋಣ ಕನ್ನಡ ಬಳಸುವ ಆಚರಣೆ
  ಎಲ್ಲರ ಮನಕೆ ನೀಡೋಣ ಕನ್ನಡ ಬಳಸುವ ಪ್ರೇರಣೆ

  ಭಗವಂತನೇ ವರವಾಗಿ ನೀಡಿಹನು ನಾಡಿಗೆ ಶ್ರೀಗಂಧ
  ಜಗತ್ತಿನೆಲ್ಲೆಡೆ ಪಸರಿಸಲು ಕನ್ನಡ ಭಾಷೆಯ ಸುಗಂಧ

  ಕನ್ನಡ ನುಡಿಯ ಸಿಹಿಯಿಂದಲೇ ಹಂಚುವೆವು ಪ್ರೀತಿ
  ಜಗತ್ತಿನಾದ್ಯಂತ ಮೊಳಗಲಿ ಕಸ್ತೂರಿ ಕನ್ನಡದ ಕೀರ್ತಿ

  - ತೇಜಸ್ವಿ.ಎ.ಸಿ

ಬೆಳದಿಂಗಳ ಚಂದಿರ

on Friday, August 20, 2010

ಬೆಳದಿಂಗಳ ಚಂದಿರ

ಸೂರ್ಯ ಮುಳುಗುವ ಸಂಜೆ ಹೊತ್ತಿನಲಿ
ಮುಸ್ಸಂಜೆಯ ಮಬ್ಬಿನ ಬಾನಂಗಳದಲಿ
ತನ್ನ ಪಾಳಿಗಾಗಿ ಪೂರ್ಣಚಂದ್ರ ಬರುತ್ತಲಿದ್ದ

ನಸುಗೆಂಪ ಬಣ್ಣಕ್ಕೆ ತಿರುಗಿದ ನೇಸರ
ಆಗಸದ ಮೇಲೆಲ್ಲಾ ಕೆಂಪು ಬಣ್ಣವ ಚೆಲ್ಲಿ
ಬರುವ ಚಂದ್ರನಿಗೆ ಸ್ವಾಗತ ಕೋರುತ್ತಿದ್ದ

ನೇಸರನೆ ತಮ್ಮ ಯಜಮಾನನಂತೆ
ಆತ ಹೊರಡುತ್ತಲೇ ಅವನ ಹಿಂದೆಯೇ
ಹೊರಟವು ಹಕ್ಕಿಗಳು ಮರಳಿ ಗೂಡಿಗೆ

ಸಾಲು ಸಾಲಾಗಿ ಹೊರಟ ಹಕ್ಕಿಗಳು ಕೆಂಪು
ಆಗಸದಲಿ ತೋರಣವಾಗಿ, ಬರುವ ಚಂದಿರನ
ಸ್ವಾಗತಿಸಲು ಬಂದಂತೆ ತೋರುತ್ತೀತ್ತು

ನಿಧಾನವಾಗಿ ಕತ್ತಲೆಯು ಎಲ್ಲೆಡೆಯು ಆವರಿಸಿ
ಬೆಳದಿಂಗಳ ಚಂದಿರನು ಕತ್ತಲೆಯ ನಡುವೆ
ಆಗಸದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿತ್ತು

ನೋಡ ನೋಡುತ್ತಲೇ ತೆರೆಯಲಾರಂಭಿಸಿತು
ತನ್ನದೇ ಆದ ಇರುಳಿನ ಹೊಸ ಸುಂದರ ಜಗತ್ತು
ಆ ಬೆಳದಿಂಗಳ ರೂಪ ನನ್ನ ಬೆರಗುಗೊಳಿಸಿತ್ತು

- ತೇಜಸ್ವಿ.ಎ.ಸಿ

ಅಡೆ-ತಡೆ

on Thursday, August 12, 2010

ಅಡೆ-ತಡೆ

ನಾವೆಷ್ಟೇ ತಿಳಿದುಕೊಂಡರು ನಮ್ಮ ಬೇಕುಗಳನ್ನು ಗೆಲ್ಲಲಾರೆವೇಕೆ
ನಾವೆಷ್ಟೇ ಕೆಲಸವನ್ನು ಯೋಜಿಸಿದರು ಕೆಲಸದಲ್ಲಿ ಸೋಲುವುದೇಕೆ

ನಾವು ಮಾಡ ಬೇಕೆನಿಸುವ ಕಾರ್ಯಗಳನ್ನು ತಡೆಯುವುದು ಏನು
ತಡೆಯುವ ಅಂಶಗಳೆನೆಂದು ಗುರುತಿಸಿ ನೀ ತಿಳಿಸಿ ಹೇಳಿಯೇನು

ನಾವು ಮಾಡುವ ಕೆಲಸಗಳಿಗೆ ಅಡ್ಡಿ ತರುವ ವಿಷಯಗಳು ಹಲವಾರು
ಹಲವು ನಮ್ಮ ಹತೋಟಿಯಲ್ಲುಂಟು, ಬೇರೆಯದರ ಕೈಯಲ್ಲಿ ಕೆಲವಾರು

ಕಾಗದದ ಮೇಲೆ ಯೋಜನೆಗಳ ಹಾಕಿ, ಬುದ್ದಿ ಪ್ರದರ್ಶಿಸಿದರೆ ಸಾಲದು
ಕ್ರಿಯಾಶೀಲರಾಗಿ ದುಡಿದರೆ ಸೋಮಾರಿತನ ನಮ್ಮ ತಡೆಯಾಗಲಾರದು

ಹಲವು ಕೆಲಸಗಳಿಗೆ ಉಂಟು ಬೇರೆ ಜನಗಳ ಮೇಲೆ ಪರಾವಲಂಬನೆ
ಜನ ಬಳಕೆಯ ನಡವಳಿಕೆಯು ಸರಾಗ ಮಾಡುವುದು ಕಷ್ಟದ ಕೆಲಸವನೆ

ಹಲವು ಕೆಲಸಗಳಿಗೆ ನಮ್ಮ ಬಳಿಯಿರುವುದು ಯತೇಚ್ಚವಾದ ಸಮಯ
ಕೆಲಸಗಳ ಮುಂದೂಡಿಕೆಯೇ ತಡೆಯಾಗುವುದು ನಮ್ಮೆಲ್ಲರ ಕಾರ್ಯ

ಹಣವ ಉಳಿಸುವ ತಡೆ ಹಾಕಿ ಕುಳಿತರೆ ಸಾಗದು ನಮ್ಮ ಯೋಜನೆ
ಅಗತ್ಯ ಹಣವನ್ನು ಖರ್ಚು ಮಾಡಿ ಗಳಿಸಲು ಯಶಸ್ಸಿನ ಖಜಾನೆ

ಶುರು ಮಾಡುವ ಮುಂಚೆಯೇ ಮಾಡದಿರಿ ನಕಾರಾತ್ಮಕ ಚಿಂತನೆ
ಈ ನಕಾರಾತ್ಮಕತೆಯೇ ಆಗುವುದು ಕೆಲಸವ ತಡೆಯುವ ಭಾವನೆ

ನಿಮ್ಮ ರೂಪ, ವಿಧ್ಯೆ, ಸೋಲುಗಳಿಂದ ಬೆಳೆಸಬೇಡಿ ಹೊಸ ಕೀಳರಿಮೆ
ಇದು ನಿಮ್ಮ ತಡೆಯಾಗುವುದು, ತಿಳಿಯಿರಿ ಅದು ಕೇವಲ ಒಂದು ಭ್ರಮೆ

ಹೀಗೆ ನಿಮ್ಮ ತಡೆಯುವ ಅಂಶಗಳ ಮಾಡುತ ಹೋಗಿ ಪಟ್ಟಿಯ
ನಿಧಾನವಾಗಿ ಸಾಧಿಸುತ ಹೋಗಿ ಅವುಗಳ ಮೇಲೆ ಹತೋಟಿಯ

- ತೇಜಸ್ವಿ.ಎ.ಸಿ

ಮುಸಲಧಾರೆ

on Thursday, August 5, 2010

ಮುಸಲಧಾರೆ

ಮಧ್ಯಾಹ್ನದ ಸಮಯದಲಿ ಮುಸುಕ ಮಬ್ಬು ಇಣುಕುತಿರಲು
ಅನಿರೀಕ್ಷಿತ ತಂಗಾಳಿಯು ಎಲ್ಲಡೆಯೂ ತಂಪೆರಿಯುತಿರಲು
ಏನೀ ಬೆಳಕಿನಾಟವಿದೆಂದು ಕುತೂಹಲಕೆ ನಾ ಹೊರ ಬಂದೆ

ಕಪ್ಪು ಕಾರ್ಮೋಡವು ತಂಗಾಳಿಯ ಹೊತ್ತು ತನ್ನ ರಾಜ್ಯವನು
ವಿಸ್ತರಿಸುತ್ತ, ನಿಧಾನವಾಗಿ ತನ್ನ ಬಲಿಷ್ಠ ಬಾಹುಗಳ ಚಾಚಿ
ಸಿಡಿಲಬ್ಬರದಿ ಸದ್ದ ಮೊಳಗಿಸುತ ತನ್ನಾಗಮನವ ಸಾರುತ್ತಿತ್ತು

ಕಾರ್ಮೋಡದ ನಡುವೆ ಬೆಳ್ಳನೆಯ ಬೆಳ್ಳಿ ರೇಖೆ ಮಿಂಚುತಿರಲು
ರೈತನ ಮನದೊಳಗಿನ ಸಣ್ಣನೆಯ ನಗೆ ಮುಖವರಳುತಿರಲು
ಸುತ್ತಣದ ವಾತಾವರಣದಲಿ ಹೊಸ ಉಲ್ಲಾಸವ ಪಸರಿಸಿತ್ತು

ಎದುರಿನ ಬಯಲಲ್ಲಿ ಸಣ್ಣಗೆ ಎದ್ದ ಗಾಳಿಗೆ ಓಡುತ್ತಿರುವ ಕರು
ಅದನ್ನೇ ಹಿಂಬಾಲಿಸುವಂತೆ ಧರೆಗೆ ಬಿದ್ದ ಮುತ್ತಿನ ಹನಿಗಳು
ಧಣಿದ ಭೂಮಿಗೆ ಉಲ್ಲಾಸದ ಸಿಂಚನವ ಸಿಂಪಡಿಸುತ್ತಿತ್ತು

ಧರೆಗೆ ಬಿದ್ದ ಮುತ್ತಿನ ಹನಿಗಳ ತನ್ನ ಮೈಯೊಳಗೆ ಹೀರಿ
ಘಮ ಘಮಿಸುವ ಸುವಾಸನೆಯ ಎಲ್ಲೆಡೆಯಲಿ ಪಸರಿಸಲು
ಭೂಮಿ ಬಚ್ಚಿಟ್ಟ ಸುಂದರ ಸುಗಂಧವ ಹೊರಸೂಸುತಿತ್ತು

ಅಂಗಳೊಳ ಮಕ್ಕಳು ಮನದ ಗರಿ ಗೆದರಿ ಆಡಲನುವಾಗಿ
ಕಾಡಿನೊಳು ಗರಿ ಗೆದರಿ ನವಿಲುಗಳ ನರ್ತನದ ತೆರನಾಗಿ
ಸುತ್ತಲ ವಾತಾವರಣ ತಂಗಾಳಿಯಾಗಿ ಹರಿದಾಡುತ್ತಿತ್ತು

ಹನಿ ಹನಿಯಾಗಿ ಸುರಿಯಲಾರಂಭಿಸಿತು ಮುಸಲಧಾರೆಯು
ಸೃಷ್ಟಿಸುತ ಭುವಿ ಆಕಾಶವೊಂದು ಮಾಡುವ ಕಾಮನ ಬಿಲ್ಲನು
ನೋಡಲು ದಕ್ಕಿತ್ತು ಪ್ರಕೃತಿಯ ರಮ್ಯದೃಶ್ಯ ಕಣ್ಣಿಗೆ ಹಬ್ಬವಾಗಿ

- ತೇಜಸ್ವಿ.ಎ.ಸಿ

ಹಬ್ಬಗಳ ಸಂಭ್ರಮಿಸಿದ ಪುಟ್ಟ

on Sunday, August 1, 2010

  ಹಬ್ಬಗಳ ಸಂಭ್ರಮಿಸಿದ ಪುಟ್ಟ


  ಪುಟ್ಟ ಅನುಭವಿಸಿದ ದಸರ ರಜಾದ ಮಜಾನ
  ಹಬ್ಬಕ್ಕೆ ಹೋಗಿದ್ದ ತಿರುಗಲು ಅಜ್ಜಿಯ ಊರನ್ನ

  ಅಜ್ಜಿಯ ಮನೆಯಲ್ಲಿ ಕೂಡಿಸಿದ್ದರು ಬೊಂಬೆಗಳ
  ಬೊಂಬೆಯ ಕೂರಿಸಿ ಆಹ್ವಾನಿಸಿದ್ದರು ಜನಗಳ

  ಹಬ್ಬದಿ ಹೊಸ ಬಟ್ಟೆ ಧರಿಸಿ ಕುಣಿದ ಅಣ್ಣನೊಡನೆ
  ದೊಡ್ಡ ಬೊಂಬೆಗಾಗಿ ಜಗಳಕ್ಕಿಳಿದ ಎಲ್ಲರೊಡನೆ

  ಕೊನೆಗೆ ದಸರೆಯ ರಜವು ಮುಗಿಯುತ ಬಂದಿತು
  ಅಜ್ಜಿಗೆ ಪುಟ್ಟನ ತರಲೆಗಳಿಂದ ಬಿಡುಗಡೆ ಸಿಕ್ಕಿತು

  ಬಸ್ಸನು ಹತ್ತಲು ಗಂಟು ಮೂಟೆ ಕಟ್ಟಿದ ಪುಟ್ಟ
  ಅಜ್ಜಿಯು ಕೊಟ್ಟ ಉಂಡೆಗಳ ಹೊತ್ತು ಹೊರಟ

  ಶಾಲೆಯಲ್ಲಿ ಶುರುವಾದವು ಪಾಠ ಪ್ರವಚನ
  ಅಪ್ಪನೂ ಕೂರಿಸಿ ಹೇಳಿದರು ಓದುವ ಬುದ್ದಿನ

  ಕೇಳಬೇಕಲ್ಲ ತರಲೆ ಮಾಡುವ ಚಿಕ್ಕ ವಯಸ್ಸು
  ಹೇಳಿದಕ್ಕೆಲ್ಲ ತಲೆಯಾಡಿಸಿತು ಎಳೆಯ ಮನಸ್ಸು

  ಕೆಲವೇ ದಿನಗಳಲ್ಲಿ ದೀಪಾವಳಿ ಹತ್ತಿರ ಬಂದಿತು
  ಪಟಾಕಿಗಳ ಹೊಡೆಯಲು ಅವಕಾಶವ ತಂದಿತು

  ಪಟಾಕಿ ಕೊಡಿಸಲು ಪುಟ್ಟನು ಹತ್ತಿದ ಅಪ್ಪನ ಬೆನ್ನು
  ಪಟಾಕಿ ಹಚ್ಚಲು ಅಜ್ಜಿ ಮನೆಗೆ ಕಳಿಸಿದರು ಅವನನ್ನು

  ಸಿಕ್ಕಿತು ಅವಕಾಶ ಅಣ್ಣನೊಂದಿಗೆ ಹಚ್ಚಲು ಪಟಾಕಿ
  ಅಜ್ಜಿಗೆ ಮತ್ತೆ ಸಿಕ್ಕಿದ ತರಲೆಗಳ ಮಾಡುವ ಗಿರಾಕಿ

  ಸಂಭ್ರಮವಾಗಿದೆ ಪುಟ್ಟನಿಗೆ ಹಬ್ಬದ ರಜಾ ದಿನಗಳು
  ಹೀಗೆ ಸಾಗಿದೆ ತುಂಟ ಪುಟ್ಟನ ಬಾಲ್ಯದ ಆಟಗಳು

  - ತೇಜಸ್ವಿ.ಎ.ಸಿ