ನನ್ನೂರಿಗೆ ಪಯಣ

on Sunday, January 23, 2011

ನನ್ನೂರಿಗೆ ಪಯಣ


ಗೃಹವಿರಹದ ದುಗುಡವು ಕಾಡಿದೆ ಎನಗೆ
ಮಾತೃವಾತ್ಸಲ್ಯದ ಕೂಗು ತಲುಪಿದೆ ಕಿವಿಗೆ

ಊರಿನ ದಾರಿ ಕೈಚಾಚಿ ಕರೆಯುತಿದೆ ಇಂದು
ಹಬ್ಬದ ನೆಪ ಮಾಡಿ ಮನೆಗೊರಡುವ ಎಂದು

ಮುಂಜಾವಿನ ನಸುಕಿನಲೇ ನಾ ಹತ್ತಿದೆ ರೈಲು
ಕಾಯಲಾರೆ ನಾ ಮನೆಯವರನು ನೋಡಲು

ಬೆಳಗಿನ ಆಹ್ಲಾದದಲಿ ಬೆಚ್ಚನೆ ರೈಲಿನ ಪಯಣ
ಬಿಡಿಸಿಕೊಳ್ಳಲು ಆಗುವುದೇ ನಮ್ಮೂರಿನ ಋಣ

ಪಯಣದ ಹಾದಿಯಲಿ ಸಿಗುವ ಎಲ್ಲಾ ಊರುಗಳು
ಕ್ರಮೇಣವಾಗಿ ಇಳಿಸುವವು ವಿರಹದ ಭಾರಗಳ

ಊರು ಸಮೀಪಿಸಿದಾಗ ಕರೆಯಿತು ಎನ್ನ ಒಲುಮೆ
ಊರನು ತಲುಪಿದೊಡೆ ನಾ ಉತ್ಸಾಹದ ಚಿಲುಮೆ

ಕೈ-ಚೀಲವ ಹೊತ್ತು ನಾ ಹಾಕಿದೆ ಸರ ಸರ ಹೆಜ್ಜೆ
ನನಗೂ ಇಹುವುದು ಕೇವಲ ಎರಡು ದಿನಗಳ ರಜೆ

ಮನೆಯಲಿ ಕಾದಿಹರು ಮನೆಯವರೆಲ್ಲ ನನಗಾಗಿ
ನಾ ಬಂದು ಒತ್ತುವ ಆ ಕರೆಘಂಟೆಯ ಸದ್ದಿಗಾಗಿ

- ತೇಜಸ್ವಿ .ಎ .ಸಿ

ಸ್ವ-ವಿಮರ್ಶೆ

on Sunday, January 16, 2011

ಸ್ವ-ವಿಮರ್ಶೆ

ಹಲವು ಕಾರ್ಯಗಳ ಸಾಧಿಸದೆ ವಿಧಿಯಿಲ್ಲ
ಮಹತ್ವದ ಕಾರ್ಯಗಳಲಿ ಗೆಲ್ಲದೆ ಬದುಕಿಲ್ಲ

ಪ್ರಮುಖ ಕೆಲಸಗಳೂ ತೋರುವುದು ಸೋಲು
ನಮ್ಮೆಲ್ಲ ಶ್ರಮಗಳ ಅವು ಮಾಡುವವು ಪೋಲು

ಒಮ್ಮೆ ಸೋತರೆ ಆಗುವುದು ಚಿಕ್ಕ ಪರಿಣಾಮ
ಪುನರಾವರ್ತಿತ ತಪ್ಪು ಬೀರುವುದು ದುಷ್ಪರಿಣಾಮ

ಅದಕ್ಕೆ ನಾವು ಆರಂಭಿಸಬೇಕು ಹೊಸ ಪ್ರಕ್ರಿಯೆಯ
ಅಪಜಯವ ವಿಮರ್ಶಿಸುವ ಉತ್ತಮ ಪದ್ದತಿಯ

ಮಾಡಿದರೆ ವಸ್ತುನಿಷ್ಠ, ಕ್ರಮಬದ್ದ ವಿಮರ್ಶೆಯ
ತಿಳಿವುದು ಸೋಲಿಗೆ ಕಾರಣವಾದ ಅಂಶಗಳ

ಇದರಿಂದ ತಿಳಿವುದು ಕಾರ್ಯದಲಿ ಆದ ತಪ್ಪುಗಳು
ಹಾಗೆಯೇ ಅವ ಸರಿಪಡಿಸಲು ಬೇಕಾದ ದಾರಿಗಳು

ರೂಪಿಸೋಣ ಎಲ್ಲಾ ಸರಿಪಡಿಸಲು ಕಾರ್ಯಕ್ರಮಗಳ
ಕಾರ್ಯಶೀಲನರಾಗಿ ಚುರುಕಾಗಿ ಮಾಡೋಣ ಕೆಲಸಗಳ

- ತೇಜಸ್ವಿ ಎ ಸಿ

ಕಾಲೇಜಿನ ಕೊನೆಯ ದಿನ

on Sunday, January 9, 2011

ಕಾಲೇಜಿನ ಕೊನೆಯ ದಿನ
ಮನದಲ್ಲಿ ಒಮ್ಮೆ ನೆನೆದರೆ ಮನ
ಹಗುರಾಗುವ ಸ್ವಾತಂತ್ರ್ಯದ ನಗು,
ಮತ್ತೊಮ್ಮೆ ಸ್ನೇಹಿತರ ನೋಡಿದೊಡೆ
ಮತ್ತೆ ಹೃದಯವಾಗುವುದು ಭಾರ,
ಕಣ್ಣಿನಂಚಿನಲಿ ಅರೆಯದೆ ಮಡುಗಟ್ಟುವ
ಉಪ್ಪಾದ ಹನಿಗಳ ಭಾಷೆ.

ಒಮ್ಮೆ ಯೌವನದ ಈ ಉತ್ಸಾಹದಲಿ
ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ಹಾರಿ,
ಪ್ರಪಂಚವೆಲ್ಲ ಜಯಸುವ ವಾಂಛೆ.
ಇನ್ನೊಂದೆಡೆ ಬೀಳ್ಕೊಡುತ ಹಳೆಯ
ಕಾಲೇಜಿನ ದಿನಗಳ ನೆನಪಿಸಿ,
ಭಾವಾನಾತ್ಮಕ ಮಾಡುವ ಗೆಳೆಯರು

ಕೈಯಲ್ಲಿ ಹಿಡಿದ ಆಟೋಗ್ರಾಫಲ್ಲಿ
ತುಂಬತೊಡಗಿದವು, ಸೆಳೆತದ
ಅದಮ್ಯ ಭಾವನೆಗಳ ಮಾತುಗಳು,
ಶುಭ ಹಾರೈಕೆಗಳ ವಿನಿಮಯ.
ಮುಂದೆ ಎಂದು ನಮಗೆ ಸಿಗುವರು
ಇವರೆಲ್ಲರೂ ಹಾಗು ಇವರ ಸ್ನೇಹ?

ಮುಂದೆ ನಿಂತಿದೆ ಸ್ವಾತಂತ್ರ್ಯದ
ನಗು ನನ್ನ ಕರೆಯುತ ಆ ಹುಚ್ಚು
ಕನಸುಗಳ ಸಾಧನೆಗೆ ಆಹ್ವಾನಿಸುತ,
ನಾ ಹೊರಟಿರುವೆ ನನ್ನೆಲ್ಲ ಆಸೆಗೆ
ವಾಸ್ತುಶಿಲ್ಪಿಯಾಗಿ. ಮುಂದೆ ಕಾಣುವ
ಕಾಮನಬಿಲ್ಲಿಗೆ ನನ್ನದೇ ಬಣ್ಣ ಹಚ್ಚಲು.

- ತೇಜಸ್ವಿ.ಎ.ಸಿ