ಪರಿಪೂರ್ಣತೆಯ ಹುಚ್ಚು

on Sunday, December 12, 2010

ಪರಿಪೂರ್ಣತೆಯ ಹುಚ್ಚು

ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು
ಸರಳ ತೃಪ್ತಿಗಾಗಿ ಹೋರಾಡುವುದು ತರವೇ?
ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ
ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?
ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ ಅತ್ಯುನ್ನತ
ಸಾಧಿಸಲು ಮನದ ನೆಮ್ಮದಿಯ ಮರೆವುದು ತರವೇ?
ಬಾಹ್ಯ ಸಮಾಜದ ಕಣ್ಣ ಮೆಚ್ಚುಗೆಯ ಉದ್ದೇಶಕಾಗಿ
ಬಲವಂತದ ಗುರಿಯ ಹೊರುವುದು ತರವೇ?

ಮನದ ಸಹಜ ಸಂತೋಷವನು ಮಿತಿ ಇಲ್ಲದ
ಈ ಆಸೆಗಳ ಹತೋಟಿಗೆ ಬಿಟ್ಟು ಕೊಡಲಾರೆ
ನವಿರಾದ ಭಾವನೆಗಳ ಕೋಮಲ ಹೃದಯವನು
ಸಾಮರ್ಥ್ಯ ಅಳೆವ ಹುಚ್ಚು ಜೂಜಿಗೆ ಬಿಡಲಾರೆ
ಕೈಯಲ್ಲೇ ಇರುವ ನನ್ನ ಸುಂದರ ಜೀವನವನ್ನು
ದಿಕ್ಕು ಕೊನೆಯಿಲ್ಲದ ಸ್ಪರ್ಧೆಗಳಿಗೆ ತಳ್ಳಲಾರೆ
ನನಗಿತ್ತುರುವ ಶಕ್ತಿ ಸಾಮರ್ಥ್ಯವನು ವಿರಳವಾದ
ಪರಿಪೂರ್ಣತೆಯೆಂಬ ಅತೃಪ್ತಿಗೆ ಒಪ್ಪಿಸಲಾರೆ

ಚಿಕ್ಕ ವಿಷಯಗಳಲ್ಲೂ ತೃಪ್ತಿ ಪಡೋಣ ನಾವು
ಆಗದಿರಲಿ ಪರಿಪೂರ್ಣತೆ ಎಂಬುದು ನೋವು
-ತೇಜಸ್ವಿ.ಎ.ಸಿ

0 comments:

Post a Comment