ಕಾಲೇಜಿನ ಕೊನೆಯ ದಿನ

on Sunday, January 9, 2011

ಕಾಲೇಜಿನ ಕೊನೆಯ ದಿನ
ಮನದಲ್ಲಿ ಒಮ್ಮೆ ನೆನೆದರೆ ಮನ
ಹಗುರಾಗುವ ಸ್ವಾತಂತ್ರ್ಯದ ನಗು,
ಮತ್ತೊಮ್ಮೆ ಸ್ನೇಹಿತರ ನೋಡಿದೊಡೆ
ಮತ್ತೆ ಹೃದಯವಾಗುವುದು ಭಾರ,
ಕಣ್ಣಿನಂಚಿನಲಿ ಅರೆಯದೆ ಮಡುಗಟ್ಟುವ
ಉಪ್ಪಾದ ಹನಿಗಳ ಭಾಷೆ.

ಒಮ್ಮೆ ಯೌವನದ ಈ ಉತ್ಸಾಹದಲಿ
ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ಹಾರಿ,
ಪ್ರಪಂಚವೆಲ್ಲ ಜಯಸುವ ವಾಂಛೆ.
ಇನ್ನೊಂದೆಡೆ ಬೀಳ್ಕೊಡುತ ಹಳೆಯ
ಕಾಲೇಜಿನ ದಿನಗಳ ನೆನಪಿಸಿ,
ಭಾವಾನಾತ್ಮಕ ಮಾಡುವ ಗೆಳೆಯರು

ಕೈಯಲ್ಲಿ ಹಿಡಿದ ಆಟೋಗ್ರಾಫಲ್ಲಿ
ತುಂಬತೊಡಗಿದವು, ಸೆಳೆತದ
ಅದಮ್ಯ ಭಾವನೆಗಳ ಮಾತುಗಳು,
ಶುಭ ಹಾರೈಕೆಗಳ ವಿನಿಮಯ.
ಮುಂದೆ ಎಂದು ನಮಗೆ ಸಿಗುವರು
ಇವರೆಲ್ಲರೂ ಹಾಗು ಇವರ ಸ್ನೇಹ?

ಮುಂದೆ ನಿಂತಿದೆ ಸ್ವಾತಂತ್ರ್ಯದ
ನಗು ನನ್ನ ಕರೆಯುತ ಆ ಹುಚ್ಚು
ಕನಸುಗಳ ಸಾಧನೆಗೆ ಆಹ್ವಾನಿಸುತ,
ನಾ ಹೊರಟಿರುವೆ ನನ್ನೆಲ್ಲ ಆಸೆಗೆ
ವಾಸ್ತುಶಿಲ್ಪಿಯಾಗಿ. ಮುಂದೆ ಕಾಣುವ
ಕಾಮನಬಿಲ್ಲಿಗೆ ನನ್ನದೇ ಬಣ್ಣ ಹಚ್ಚಲು.

- ತೇಜಸ್ವಿ.ಎ.ಸಿ

0 comments:

Post a Comment