Thursday, February 1, 2024

ಹಣಕ್ಕೆ ಪ್ರತಿಯಾಗಿ ಸಿಗುವ ಮೌಲ್ಯ

 ಹಣಕ್ಕೆ ಪ್ರತಿಯಾಗಿ ಸಿಗುವ  ಮೌಲ್ಯ :


                                
ಹಣವೇ  ಮುಖ್ಯಾನಾ ? ಈ ಪ್ರಶ್ನೆಗೆ  ಸಿಗುವ  ಸರಳವಾದ ಉತ್ತರವೆಂದರೆ   'ಇಲ್ಲ'.   ಹಾಗಿದ್ದರೆ ಹಣ ಯಾಕೆ ಮುಖ್ಯವಲ್ಲ?   ಏಕೆಂದರೆ  ನಮಗೆ ಬೇಕಾದದ್ದು  ಹಣವಲ್ಲ  ಬದಲಾಗಿ  ಹಣವೆಂಬ ವಿನಿಮಯ ಮಾಧ್ಯಮದಿಂದ  ವಿನಿಮಯದಲ್ಲಿ ಸಿಗುವ  ಮೌಲ್ಯ  ಅಂದರೆ  ಉತ್ಪನ್ನಗಳು  ಹಾಗೂ ಸೇವೆಗಳು   ಹಾಗೂ ಅದರ ಮೂಲಕ  ನಮ್ಮ ಅವಶ್ಯಕತೆ  ಹಾಗೂ  ಆಸೆಗಳ  ಈಡೇರಿಕೆ. 


                                          ಚಿತ್ರ ಕೃಪೆ:  ಅಂತರ್ಜಾಲ

ಮೌಲ್ಯಗಳೆಂದರೆ ಯಾವುದು?   ಉತ್ತಮವಾದ ಆರೋಗ್ಯ,  ಆರ್ಥಿಕ ಮತ್ತು ಸಾಮಾಜಿಕ ಭದ್ರತೆ,   ಸುಸಜ್ಜಿತವಾದ ಮನೆ, ಪ್ರಯಾಣಕ್ಕೆ ವಾಹನದಂತಹ ಮೂಲ ಸೌಕರ್ಯ, ಆರೋಗ್ಯಕರ ಮನೋರಂಜನೆ,  ಸ್ನೇಹಿತರೊಡನೆ, ಕುಟುಂಬದೊಡನೆ  ಉಲ್ಲಾಸ ಗೊಳಿಸುವ ಪ್ರವಾಸ, ಆಸೆಗಳ ಈಡೇರಿಕೆ,  ಸ್ವಚ್ಛತೆ,  ಶಾಂತಿ-ನೆಮ್ಮದಿ, ಗುರಿಗಳ ಸಾಧನೆ ಹಾಗೂ  ಅಭಿವೃದ್ಧಿ, ಉತ್ತಮರ ಒಡನಾಟ,   ಮಕ್ಕಳ  ಶ್ರೇಯೋಭಿವೃದ್ಧಿ  ಹಾಗೂ  ಬೌದ್ಧಿಕ ವಿಕಾಸ,  ಸೃಜನಶೀಲತೆ ಹೆಚ್ಚಿಸುವ ಚಟುವಟಿಕೆ,  ಆರೋಗ್ಯಕರ ಕ್ರೀಡೆಗಳು, ಉತ್ತಮ ಹವ್ಯಾಸಗಳು ಇತ್ಯಾದಿ  

   ಮೇಲೆ ತಿಳಿಸಿದ  ಮೌಲ್ಯಗಳನ್ನು  ತಲುಪಲು  ಮಾಧ್ಯಮಗಳು ಬೇಕು ಅದಕ್ಕೆ ಉತ್ತಮವಾದ ಸೇವೆ  ಹಾಗೂ  ಉತ್ಪನ್ನಗಳ ಪಾತ್ರ ಮಹತ್ವದ್ದು. ಅದರಲ್ಲೂ ಉತ್ಪನ್ನಗಳು  ಹೆಚ್ಚು    ಲಾಭದಾಯಕವಾಗಿರುತ್ತದೆ ಅವು ಏಕೆ ಮಹತ್ವದ್ದು ಎಂದರೆ ಒಂದು ಉತ್ಪನ್ನವು ಕೂಡ ಸೇವೆಯನ್ನೇ ಒದಗಿಸುತ್ತದೆ, ಅವುಗಳಿಗೆ  ಒಮ್ಮೆ ಹಣ ಪಾವತಿ ಮಾಡಿಕೊಂಡು ಕೊಂಡರೆ ಅವು ನಮ್ಮ ಮಾಲೀಕತ್ವದಲ್ಲಿ  ಇರುವುದರಿಂದ   ಸೇವೆಗಳನ್ನು  ಪುನರತ್ಮಾಕವಾಗಿ  ಬಳಸಿಕೊಳ್ಳಬಹುದು.  ನಮ್ಮ ಬಳಿ ಇರುವ  ಕುಕ್ಕರ್ ,  ಗಣಕಯಂತ್ರ,   ವಾಹನ ,   ಮೊಬೈಲ್ ಫೋನ್  ಅಥವಾ  ಯಾವುದಾದರೂ ಸಲಕರಣೆಗಳು ಅಂದರೆ ಮನೆಯ ಪಾತ್ರೆಗಳು,  ಸೌಟು, ಚಮಚ ,  ಏಣಿ,  ಕುರ್ಚಿ, ಮೇಜು  ಇವುಗಳನ್ನು ಸಹ ಪುನರ್  ಬಳಕೆ ಮಾಡಿ    ಅವು ಕೊಡುವ  ಸೇವೆಗಳನ್ನು  ಪುನರತ್ಮಾಕವಾಗಿ   ಬಳಸಬಹುದು. ಅಂದರೆ  ಉತ್ಪನ್ನಗಳು  ತಮ್ಮ ಸೇವೆಗಳನ್ನು ಹೆಚ್ಚುವರಿ ಶುಲ್ಕವಿಲ್ಲದೆ  ಸತತವಾಗಿ  ಕೊಡುತ್ತವೆ. 

  ಅದೇ ರೀತಿಯಲ್ಲಿ ಹಣ ಪಾವತಿಸಿ  ಒಮ್ಮೆಲೆ  ಮಾತ್ರ  ಬಳಸಬಹುದಂತ  ಹೋಟೆಲ್  ಆಹಾರ,  ಬಾಡಿಗೆ ವಾಹನ,  ದಿನಸಿ,  ತರಕಾರಿ,  ಇಂಧನ,  ಬ್ಯೂಟಿ ಪಾರ್ಲರ್ ಸೇವೆ,  ಸಮಾರಂಭದ ಖರ್ಚು  ಇತ್ಯಾದಿ  ಸೇವೆಗಳು  ಪಾವತಿಸಿದ ಹಣಕ್ಕೆ ಒಮ್ಮೆ ಮಾತ್ರ ಬಳಸಬಹುದು.  ಇವುಗಳನ್ನು  ಉಪಭೋಗ್ಯ (consumables) ವಸ್ತುಗಳನ್ನಾಗಿ  ಗುರುತಿಸಬಹುದು. ಹೀಗೆ  ಉತ್ಪನ್ನಗಳು ಆಗಿರಲಿ,  ಸಲಕರಣೆಗಳಾಗಿರಲಿ  ಅಥವಾ ಸೇವೆಗಳಾಗಿರಲಿ  ನಮ್ಮ ಜೀವನದಲ್ಲಿ  ಬೇಕಿದ್ದ ಮೌಲ್ಯಗಳನ್ನು ಸೃಷ್ಟಿ ಮಾಡುವುದು.   ಆದುದರಿಂದ  ನಮಗೆ ಬೇಕಿರುವ  ಮೌಲ್ಯಗಳು  ಅಥವಾ ಸೇವೆಗಳ  ಕಡೆಗೆ ಗಮನವಿರಬೇಕೆ ಹೊರತು ಅದರ ಬೆಲೆಗಲ್ಲ ಅಥವಾ ಬರಿ ಹಣದ ಸಂಗ್ರಹಣೆಗಲ್ಲ.

 ಹಣ ಗಳಿಸುತ್ತಾ ಹೋದರೆ  ಅದಕ್ಕೆ ಮಿತಿ ಇರುವುದಿಲ್ಲ ಆದರೆ  ನೀವು ನಿಮ್ಮ ಅವಶ್ಯಕ  ವಸ್ತುಗಳನ್ನು  ಅಥವಾ  ನಿಮ್ಮ ಆಸೆಗಳನ್ನು  ಈಡೇರಿಸಲು ಹೊರಟರೆ ಜೊತೆಗೆ ಅದು ನಿಮ್ಮ ಜೀವನಕ್ಕೆ ಕೊಡುವ  ಮೌಲ್ಯಗಳಿಗೆ ಗಮನಹರಿಸಿದರೆ  ಅದಕ್ಕೊಂದು ಮಿತಿ ಇರುತ್ತದೆ  ಹಾಗೆಯೇ  ತೃಪ್ತಿಯ  ಕೊನೆ ಇರುತ್ತದೆ.   ಆದುದರಿಂದ  ನಿಮಗೇನು ಬೇಕು  ಎಂಬುದು ಸ್ಪಷ್ಟವಾಗಿ   ತಿಳಿದಿರಲಿ  ಆಗ  ನಿಮ್ಮ ಜೀವನದಲ್ಲಿ ಮೌಲ್ಯದ ಕಡೆಗೆ ಗಮನ ಹರಿಸಬಹುದು  ಹಾಗೂ  ಸಂತೃಪ್ತಿಗೆ ಒತ್ತು ಕೊಡಬಹುದು. 


ಒಂದು ವೇಳೆ ಜಗತ್ತನ್ನು  ಮೆಚ್ಚಿಸಬೇಕು  ಎಂಬ ಉದ್ದೇಶದಿಂದ  ಹೊರಟರೆ, ನೀವು ಅನಗತ್ಯವಾದಂತಹ   ಅದ್ದೂರಿ  ಮತ್ತು ಆಡಂಬರದ ವಸ್ತುಗಳನ್ನು,  ನಿಮ್ಮ ಬಳಿ ಇಲ್ಲದ ದುಡ್ಡಿನಿಂದ  (ಸಾಲದ  ಹಣದಿಂದ)  ಖರೀದಿಸಲು ಹೊರಟರೆ, ಆ ಜಗಮೆಚ್ಚುಗೆ ಎಂಬ ಕಾರ್ಯ ಯಾವುದೇ ಮೌಲ್ಯ   ಸೃಷ್ಟಿಸುವುದಿಲ್ಲ.  ನಿಮಗೆ ಹೊರೆಯಾಗಿ ಮಾನಸಿಕ ಹಿಂಸೆಯಾಗಿ  ಪರಿಣಮಿಸುತ್ತದೆ.   ಹಾಗಾಗಿ ಪೊಳ್ಳು ಪ್ರತಿಷ್ಠೆಯನ್ನು ಬಿಟ್ಟು  ಸರಿಯಾದ ಮೌಲ್ಯಗಳನ್ನು ಅರ್ಥೈಸಿಕೊಳ್ಳಿ  ಹಾಗೂ ಅದರ ಈಡೇರಿಕೆಯೊಂದಿಗೆ ತೃಪ್ತಿಯ ಜೀವನ ನಡೆಸಿ.


No comments:

Post a Comment