ಕಣ್ಣಾ ಮುಚ್ಚಾಲೆ

on Thursday, July 8, 2010

ಕಣ್ಣಾ ಮುಚ್ಚಾಲೆ

ಹಗಲಿರುಳು ಸಾಲಾಗಿ ಬರುವ ಸುಂದರ ಕನಸುಗಳು
ಜೀವನಕೆ ತೋರುವವು ಬಣ್ಣ ಬಣ್ಣದ ಹೊಸ ಆಸೆಗಳ

ಕನಸಿನ ಲೋಕದಿ ಪಯಣ ನೀಡುವುವು ಹೊಸ ಭರವಸೆ
ಈ ಹೊಸ ಭರವಸೆಗಳಿತ್ತವು ಬಾಳಿಗೆ ಒಂದು ದಿಸೆ

ನಾವ್ ತೋರಿದೆವು ಈ ದಿಸೆಯಲ್ಲಿ ಮುನ್ನುಗುವ ತುಡಿತ
ಆಸೆಗಳ ಈಡೇರಿಕೆಗೆ ನಾವು ಶ್ರಮ ವಹಿಸಿದೆವು ಸತತ

ಚಿಕ್ಕ ಪುಟ್ಟ ಆಸೆಗಳ ಈಡೇರಿಕೆಗಳು ಅನ್ನಿಸಲಿಲ್ಲ ಬಲು ಕಷ್ಟ
ಮೂಲಭೂತ ಆಸೆಗಳ ತಡವರಿಕೆ ಮಾಡಿವೆ ಜೀವನವನ್ನೇ ನಷ್ಟ

ಬದುಕಿನ ಅಗತ್ಯಗಳ ಈಡೇರಿಕೆ ಜೀವನದ ಉದ್ದೇಶವಲ್ಲ
ಕನಸುಗಳ ಈಡೇರಿಕೆಯೇ ಜೀವನಕೆ ತೃಪ್ತಿ ಕೊಡುವುದಲ್ಲ

ಬೇಡದ ಕನಸುಗಳು ನಿತ್ಯ ಬಂದು ಮೂಡಿಸುವವು ಬರಿ ಆಸೆ
ಈಡೇರದ ಈ ಆಸೆಗಳ ಹೊರೆ ಆಗಿವೆ ಜೀವಕ್ಕೊಂದು ಶಿಕ್ಷೆ

ಕನಸು ಆಸೆಗಳ ಉದ್ದೇಶ ಸೃಷ್ಟಿಸಿವೆ ಹಲವು ಅನುಮಾನಗಳ
ಇವು ಬರುವುದು ಸ್ಪೂರ್ತಿಗೋ ಅಥವಾ ನೀಡಲು ಹತಾಶೆಗಳ?

ಈ ಎಲ್ಲಾ ಆಟ ದ್ವಂದ್ವಕೆ ಎಡೆಮಾಡಿದೆ ಜೀವನದ ದೋಣಿಯ
ಆಸೆಗಳು ದಿನ ಬಂದು ತೋರುತ್ತಿವೆಯೇ ನಮಗೆ ಬರಿ ಭ್ರಮೆಯ?

- ತೇಜಸ್ವಿ .ಎ.ಸಿ

0 comments:

Post a Comment